Site icon Vistara News

RBI Public Tech Platform : ಕೆಲವೇ ನಿಮಿಷಗಳಲ್ಲೇ ಸಾಲ, ಆರ್‌ಬಿಐನಿಂದ ಹೊಸ ವ್ಯವಸ್ಥೆ

Cash

ನೀವು ಹೋಮ್‌ ಲೋನ್‌, ಪರ್ಸನಲ್‌ ಲೋನ್‌, ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಲೋನ್‌, ಡೇರಿ ಲೋನ್‌, ಎಂಎಸ್‌ಎಂಇ ಲೋನ್‌, ಇತ್ಯಾದಿಗಳನ್ನು ಪಡೆಯಲು ಬ್ಯಾಂಕ್‌ಗಳಿಗೆ ದಿನಗಟ್ಟಲೆ ಅಲೆದಿದ್ದೀರಾ, ತಿಂಗಳಾನುಗಟ್ಟಲೆ ಕಾದು ನಿರಾಶರಾಗಿದ್ದೀರಾ, ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಹೊಸತೊಂದು (RBI Public Tech Platform) ಪಬ್ಲಿಕ್‌ ಟೆಕ್‌ ಪ್ಲಾಟ್‌ ಫಾರ್ಮ್‌ ಅನ್ನು ಪ್ರಾಯೋಗಿಕವಾಗಿ ಬಿಡುಗಡೆಗೊಳಿಸಿದೆ. ಇದರಿಂದಾಗಿ ಜನರಿಗೆ ಸುಲಭವಾಗಿ ಹಾಗೂ ಕೆಲವೇ ನಿಮಿಷಗಳಲ್ಲಿ ಸಾಲ ಮಂಜೂರಾಗಲಿದೆ. ಅರೆ ಇದು ಹೇಗೆ ಎನ್ನುತ್ತೀರಾ, ಈಗ ವಿವರಗಳನ್ನು ನೋಡೋಣ.

ಆರ್‌ಬಿಐ ಪಬ್ಲಿಕ್‌ ಟೆಕ್‌ ಪ್ಲಾಟ್‌ಫಾರ್ಮ್ ಅನ್ನು ಆಗಸ್ಟ್‌ 17ರಂದು ಪ್ರಾಯೋಗಿಕವಾಗಿ ಕರ್ನಾಟಕ ಸೇರಿದಂತೆ ಒಟ್ಟು 5 ರಾಜ್ಯಗಳಲ್ಲಿ ಆಯ್ದ ಜಿಲ್ಲೆಗಳಲ್ಲಿ ಬಿಡುಗಡೆಗೊಳಿಸಿದೆ. ಕರ್ನಾಟಕ ಹೊರತುಪಡಿಸಿ ಮಧ್ಯಪ್ರದೇಶ, ತಮಿಳುನಾಡು, ಉತ್ತರಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಬಿಡುಗಡೆಯಾಗಿದೆ. ಯೋಜನೆ ಯಶಸ್ವಿಯಾದರೆ ಉಳಿದ ರಾಜ್ಯಗಳಿಗೆ ವಿಸ್ತರಣೆಯಾಗಬಹುದು.

ಈ ಪಬ್ಲಿಕ್‌ ಟೆಕ್‌ ಪ್ಲಾಟ್‌ಫಾರ್ಮ್‌ (Public Tech Platform) ಅಡೆತಡೆ ಇಲ್ಲದೆ ಸಾಲ ಮಂಜೂರಾತಿಯ ವ್ಯವಸ್ಥೆ ಮಾಡುವ ಡಿಜಿಟಲ್‌ ಪ್ಲಾಟ್‌ ಫಾರ್ಮ್‌ ಆಗಿದೆ. ಇದನ್ನು ಆರ್‌ಬಿಐನ ಅಧೀನ ಸಂಸ್ಥೆಯಾದ ರಿಸರ್ವ್‌ ಬ್ಯಾಂಕ್‌ ಇನ್ನೊವೇಶನ್‌ ಹಬ್‌ ಅಭಿವೃದ್ಧಿಪಡಿಸಿದೆ. (Reserve bank innovation hub) ಈ ಪ್ಲಾಟ್‌ ಫಾರ್ಮ್‌ ಓಪನ್‌ ಆರ್ಕಿಟೆಕ್ಚರ್‌ ಅನ್ನು ಹೊಂದಿದ್ದು, ಹಣಕಾಸು ವಲಯದ ಎಲ್ಲ ಬ್ಯಾಂಕ್‌ಗಳು ಹಾಗೂ ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಅಥವಾ ಎನ್‌ಬಿಎಫ್‌ಸಿಗಳು, ಫಿನ್‌ಟೆಕ್‌ ಕಂಪನಿಗಳು, ಸ್ಟಾರ್ಟಪ್‌ಗಳು ಭಾಗವಹಿಸಬಹುದು. ಗ್ರಾಹಕರಿಗೆ ಸಾಲ ವಿತರಿಸಬಹುದು. (fin tech) ಈ ಪಬ್ಲಿಕ್‌ ಟೆಕ್‌ ಪ್ಲಾಟ್‌ ಫಾರ್ಮ್‌ ಮೂಲಕ ಗ್ರಾಹಕರು ನಾನಾ ಬ್ಯಾಂಕ್‌ಗಳಿಂದ ಹೋಮ್‌ ಲೋನ್, ಪರ್ಸನ್‌ ಲೋನ್‌, ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಲೋನ್‌, ಎಂಎಸ್‌ಎಂಇ ಲೋನ್‌ ಇತ್ಯಾದಿಗಳನ್ನು ಕೆಲವೇ ನಿಮಿಷಗಳಲ್ಲಿ ಪಡೆಯಬಹುದು.

ಸಾಲ ಮಂಜೂರಾತಿಗೆ ಅವಶ್ಯವಿರುವ ಫೈನಾನ್ಷಿಯಲ್‌ ಡೇಟಾಗಳನ್ನು ಓಪನ್‌ ಅಪ್ಲಿಕೇಶನ್ ಪ್ರೋಗ್ರಾಮಿಂಗ್‌ ಇಂಟರ್‌ಫೇಸ್‌ ಅಥವಾ ಎಪಿಐಗಳ ಮೂಲಕ ಮಾಡುವುದರಿಂದ, ಇಡೀ ಪ್ರಕ್ರಿಯೆ ಸರಳವಾಗುತ್ತದೆ. ಈ ವ್ಯವಸ್ಥೆಯಿಂದ ಸಾಲ ವಿತರಣೆಗೆ ತಗಲುವ ಖರ್ಚು ಕಡಿಮೆಯಾಗಲಿದೆ ಹಾಗೂ ಜನತೆಗೂ ನಾನಾ ಬ್ಯಾಂಕ್‌ಗಳನ್ನು ಪ್ರತ್ಯೇಕವಾಗಿ ಸಂಪರ್ಕಿಸಿ ಮಾಹಿತಿ ಪಡೆಯಲು ಆಗುವ ಸಮಯ ಮತ್ತು ಹಣಕಾಸು ವೆಚ್ಚದಲ್ಲಿ ಉಳಿತಾಯವಾಗಲಿದೆ. ತಮಗೆ ಯಾವ ಬ್ಯಾಂಕ್‌ನಲ್ಲಿ ಕಡಿಮೆ ಬಡ್ಡಿಗೆ ಸಾಲ ಸಿಗುತ್ತದೆಯೇ, ಅಥವಾ ಯಾವ ಬ್ಯಾಂಕ್‌ ಅನುಕೂಲವಾಗುತ್ತದೆಯೋ ಅದನ್ನು ಆಯ್ಕೆ ಮಾಡಿಕೊಳ್ಳಬಹುದು.

ಹಾಗಾದರೆ ಸಾಲ ವಿತರಣೆಗೆ ಬೇಕಾಗುವ ದಾಖಲೆಗಳನ್ನು ಹೇಗೆ ಸಂಗ್ರಹಿಸಲಾಗುವುದು ಎನ್ನುತ್ತೀರಾ. ಈಗ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಸಂಸ್ಥೆಗಳು, ಬ್ಯಾಂಕ್‌ಗಳು, ಅಕೌಂಟ್‌ ಅಗ್ರಿಗೇಟರ್ಸ್‌, ಕ್ರೆಡಿಟ್‌ ಇನ್‌ಫಾರ್ಮಶನ್‌ ಬ್ಯೂರೊಗಳಿಂದ ದಾಖಲಾತಿಗಳನ್ನು ಪಡೆಯಲಾಗುತ್ತದೆ. ಇದಕ್ಕೆ ದಿನಗಟ್ಟಲೆ ಕಾಲಾವಕಾಶ ತಗಲುತ್ತದೆ. ಆದರೆ ಆರ್‌ಬಿಐನ ಪಬ್ಲಿಕ್‌ ಟೆಕ್‌ ಪ್ಲಾಟ್‌ ಫಾರ್ಮ್‌ನಲ್ಲಿ ಬ್ಯಾಂಕ್‌ಗಳು ಅಥವಾ ಲೆಂಡರ್ಸ್‌ ಡಿಜಿಟಲ್‌ ಡೇಟಾಗಳ ಮೂಲಕ ಮಾಹಿತಿ ಪಡೆಯುತ್ತಾರೆ. ಇದರಿಂದಾಗಿ ಸಾಲ ವಿತರಣೆ ಕೆಲವೇ ನಿಮಿಷಗಳಲ್ಲಿ ನಡೆಯುತ್ತದೆ.

ಈ ಪಬ್ಲಿಕ್‌ ಟೆಕ್‌ ಪ್ಲಾಟ್‌ ಫಾರ್ಮ್ ಆರಂಭದಲ್ಲಿ ಗೃಹ ಸಾಲ, ಡೇರಿ ಸಾಲ, ಅಡಮಾನ ರಹಿತ ಎಂಎಸ್‌ಎಂಇ ಸಾಲ, 1.6 ಲಕ್ಷ ರೂ. ತನಕ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಸಾಲ ವಿತರಣೆಗೆ ಆದ್ಯತೆ ನೀಡಲಿದೆ. ಡಿಜಿಟಲ್‌ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಮೂಲಕ ಕೆಲವೇ ನಿಮಿಷಗಳಲ್ಲಿ ಸಾಲ ಮಂಜೂರು ಮಾಡುವ ವ್ಯವಸ್ಥೆ ಚಾಲ್ತಿಯಲ್ಲಿದೆ. ಇದರಿಂದಾಗಿ ರೈತರು ಸಾಲ ಪಡೆಯಲು ಬ್ಯಾಂಕ್‌ ಶಾಖೆಗೆ ಹೋಗಬೇಕಿಲ್ಲ. ಸಂಪೂರ್ಣವಾಗಿ ಪೇಪರ್‌ ಲೆಸ್‌ ಆಗಿ ಇದು ನಡೆಯುತ್ತದೆ. ರಾಜ್ಯ ಸರ್ಕಾರಗಳಿಂದ ಭೂ ದಾಖಲೆಗಳ ಡಿಜಿಟಲೀಕರಣ, ಕ್ರೆಡಿಟ್‌ ಬ್ಯೂರೊ ಸ್ಕೋರ್‌ ಮತ್ತಿತರ ದಾಖಲಾತಿಗಳ ಡಿಜಿಟಲೀಕರಣದಿಂದ ಇದು ಸಾಧ್ಯವಾಗಿದೆ.

ಇದೇ ರೀತಿ ಡಿಜಿಟಲ್‌ ಡೇರಿ ಲೋನ್‌ ವ್ಯವಸ್ಥೆಯಲ್ಲಿ ಕೆಲವೇ ನಿಮಿಷಗಳಲ್ಲಿ ಸಾಲ ಪಡೆಯಬಹುದು. ಹಾಲಿನ ಸೊಸೈಟಿಗಳಿಂದ ಪಡೆಯುವ ಹಾಲು ಖರೀದಿ ಡೇಟಾಗಳ ಡಿಜಿಟಲೀಕರಣದಿಂದ ಇದು ಸಾಧ್ಯವಾಗಿದೆ ಎಂದು ಆರ್‌ಬಿಐ ವರದಿ ತಿಳಿಸಿದೆ. ಎಕ್ಸಿಸ್‌ ಬ್ಯಾಂಕ್‌ ಆರ್‌ಬಿಐನ ಪಬ್ಲಿಕ್‌ ಟೆಕ್‌ ಪ್ಲಾಟ್‌ ಫಾರ್ಮ್‌ ಮೂಲಕ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಮತ್ತು ಸಣ್ಣ ಬಿಸಿನೆಸ್‌ ನಡೆಸುವವರಿಗೆ ಅನ್‌ ಸೆಕ್ಯೂರ್ಡ್‌ ಎಂಎಸ್‌ಎಂಇ ಸಾಲ ನೀಡುವುದಾಗಿ ತಿಳಿಸಿದೆ. ಮಧ್ಯಪ್ರದೇಶದಲ್ಲಿ ಬ್ಯಾಂಕ್‌ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಲೋನ್‌ ಅನ್ನು ಆರಂಭದಲ್ಲಿ ನೀಡಲಿದ್ದು, 1.6 ಲಕ್ಷ ರೂ. ತನಕ ಸಾಲ ನೀಡಲಿದೆ. ಎಂಎಸ್‌ಎಂಇ ಅಥವಾ ಸಣ್ಣ ಉದ್ದಿಮೆ, ವ್ಯಾಪಾರಗಳಿಗೆ 10 ಲಕ್ಷ ರೂ. ತನಕ ಸಾಲ ಸಿಗಲಿದೆ ಎಂದು ಆರ್‌ಬಿಐ ತಿಳಿಸಿದೆ. ಪ್ಯಾನ್‌ ವ್ಯಾಲಿಡೇಶನ್‌, ಆಧಾರ್‌ ಇ-ಕೆವೈಸಿ, ಅಕೌಂಟ್‌ ಅಗ್ರಿಗೇಟರ್‌ ಡೇಟಾ, ಲ್ಯಾಂಡ್‌ ರೆಕಾರ್ಡ್‌ಗಳ ವೆರಿಫಿಕೇಶನ್‌ ಎಲ್ಲವೂ ಡಿಜಿಟಲೀಕರಣದಿಂದ ಸುಲಭವಾಗಲಿದೆ. ತ್ವರಿತವಾಗಿ ನಡೆಯಲಿದೆ.

ಇದನ್ನೂ ಓದಿ: ವಿಸ್ತಾರ Money Guide: ಹಣ ಗಳಿಕೆಯ ಮೇಲೆ ಪ್ರಭಾವ ಬೀರುವ ಮೂರು ಮನಸ್ಥಿತಿಗಳು ಯಾವುವು?

ಈ ಡಿಜಿಟಲ್‌ ಲೋನ್‌ ವಿತರಣೆ ದೇಶದಲ್ಲಿ ಸಾಲ ಮಂಜೂರಾತಿಯ ವಿಧಾನದಲ್ಲಿ ಕ್ರಾಂತಿಕಾರಕ ಪರಿವರ್ತನೆ ತರಲಿದೆ ಎಂದು ಆರ್‌ಬಿಐ ಗವರ್ನರ್‌ ಶಕ್ತಿಕಾಂತ್‌ ದಾಸ್‌ ಹೇಳಿದ್ದಾರೆ. ಭಾರತದಲ್ಲಿ ನಡೆಯುತ್ತಿರುವ ಡಿಜಿಟಲ್‌ ತಂತ್ರಜ್ಞಾನ ಆಧರಿತ ಬೆಳವಣಿಗೆ ಇವತ್ತು ಹಲವಾರು ವಿಶ್ವ ದಾಖಲೆಗಳನ್ನು ಸೃಷ್ಟಿಸಿದೆ. ಇಡೀ ಜಗತ್ತು ಬೆರಗಿನಿಂದ ನೋಡುತ್ತಿದೆ. ಡಿಜಿಟಲ್‌ ಟ್ರಾನ್ಸಕ್ಷನ್‌ಗಳ ವಿಷಯದಲ್ಲಿ ಭಾರತವು ಈಗ ಅಮೆರಿಕ, ಚೀನಾವನ್ನೂ ಹಿಂದಿಕ್ಕಿದೆ. ಅಮೆರಿಕ, ಚೀನಾ, ಯುರೋಪನ್ನು ಒಟ್ಟು ಸೇರಿಸಿದರೂ, ಭಾರತದಲ್ಲಿ ನಡೆಯುತ್ತಿರುವ ಡಿಜಿಟಲ್‌ ಟ್ರಾನ್ಸಕ್ಷನ್‌ಗಳನ್ನು ಸರಿಗಟ್ಟಲಾಗದು. ಅಂಥ ಸಾಧನೆಯನ್ನು ದೇಶ ಸಾಧಿಸಿರುವುದು ಗಮನಾರ್ಹ. ಫಿನ್‌ಟೆಕ್‌ ಸಂಶೋಧನೆಯಲ್ಲಿ ಪ್ರಪಂಚದಲ್ಲಿಯೇ ಮುಂಚೂಣಿಯಲ್ಲಿದೆ ಎನ್ನುತ್ತಾರೆ ಕೈಗಾರಿಕೆ ಮತ್ತು ವ್ಯಾಪಾರ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಅನುರಾಗ್‌ ಜೈನ್‌ ಹೇಳುತ್ತಾರೆ.

Exit mobile version