ಮುಂಬಯಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಒಂದೇ ತಿಂಗಳೊಳಗೆ ಮಾರುಕಟ್ಟೆಯಿಂದ 64,800 ಕೋಟಿ ರೂ. ಬಾಂಡ್‌ಗಳನ್ನು ಖರೀದಿಸಿದೆ. ಅಂದರೆ ಡಾಲರ್ ಲೆಕ್ಕದಲ್ಲಿ ಎಂಟು ಶತಕೋಟಿ ಡಾಲರ್.
ಇದರ ಉದ್ದೇಶ ವ್ಯವಸ್ಥೆಯಲ್ಲಿ ನಗದು ಲಭ್ಯತೆಗೆ ಪುಷ್ಟಿ ನೀಡುವುದು, ವಿದೇಶಿ ವಿನಿಮಯ ಸಂಗ್ರಹವನ್ನು ಉತ್ತೇಜಿಸುವುದು. ದೀಪಾವಳಿಯ ವಾರದಿಂದೀಚೆಗೆ ಒಟ್ಟು 67,000 ಕೋಟಿ ರೂ. ನಗದು ವ್ಯವಸ್ಥೆಗೆ ಲಭಿಸಿದೆ.
ಭಾರತದ ವಿದೇಶಿ ವಿನಿಮಯ ಸಂಗ್ರಹ ಈ ವರ್ಷ ಫೆಬ್ರವರಿಯಲ್ಲಿ ಸುಮಾರು 100 ಶತಕೋಟಿ ಡಾಲರ್ (8.2 ಲಕ್ಷ ಕೋಟಿ ರೂ.) ಇಳಿದಿತ್ತು. ಆದರೆ ಕಳೆದ ಕೆಲವು ವಾರಗಳಿಂದ ತ್ವರಿತವಾಗಿ ಚೇತರಿಸುತ್ತಿದೆ. ಕಳೆದ 18 ತಿಂಗಳಿನಲ್ಲೇ ವೇಗವಾಗಿ ವಿದೇಶಿ ವಿನಿಮಯ ಸಂಗ್ರಹ ಚುರುಕಾಗಿ ಏರಿಕೆಯಾಗಿದೆ.
ಏನಿದು ಒಪನ್ ಮಾರ್ಕೆಟ್ ಆಪರೇಷನ್ (Open Market Operations-OMO)?
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಾರುಕಟ್ಟೆಯಿಂದ ತನ್ನ ಓಪನ್ ಮಾರ್ಕೆಟ್ ಆಪರೇಷನ್ಸ್ ಮೂಲಕ ಜಿ-ಸೆಕ್ಯುರಿಟೀಸ್ (ಸರ್ಕಾರಿ ಸಾಲಪತ್ರಗಳು ಅಥವಾ ಬಾಂಡ್) ಅನ್ನು ಖರೀದಿಸುತ್ತದೆ. ಮಾರುಕಟ್ಟೆಯಲ್ಲಿ ರೂಪಾಯಿ ನಗದು ಲಭ್ಯತೆಯ ಪರಿಸ್ಥಿತಿಯನ್ನು, ಬೇಕಾದಂತೆ ಹೊಂದಾಣಿಕೆ ಮಾಡುವುದು ಇದರ ಉದ್ದೇಶ. ಉದಾಹರಣೆಗೆ ಮಾರುಕಟ್ಟೆಯಲ್ಲಿ ಅಗತ್ಯಕ್ಕಿಂತ ಹೆಚ್ಚು ನಗದು ಇದೆ ಎಂದು ಆರ್‌ಬಿಐಗೆ ಅನ್ನಿಸಿದರೆ, ಜಿ-ಸೆಕ್ಯುರಿಟೀಸ್‌ಗಳನ್ನು ಮಾರಾಟ ಮಾಡಿ ನಗದನ್ನು ಹೀರಿಕೊಳ್ಳುತ್ತದೆ. ಮಾರುಕಟ್ಟೆಯಲ್ಲಿ ನಗದು ಕೊರತೆ ಇದೆ ಎಂದು ಅನ್ನಿಸಿದರೆ, ಜಿ-ಸೆಕ್ಯುರಿಟೀಸ್‌ಗಳನ್ನು ಖರೀದಿಸಿ, ನಗದನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಬಹುದು. ಹೀಗಾಗಿ ಇತ್ತೀಚೆಗೆ ಆರ್‌ಬಿಐ ಬಾಂಡ್‌ಗಳನ್ನು ಖರೀದಿಸಿ ನಗದನ್ನು ಬಿಡುಗಡೆಗೊಳಿಸಿದೆ.