ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮುಂಬರುವ ಅಕ್ಟೋಬರ್ 1 ರಿಂದ ಕಾರ್ಡ್ ಟೋಕನೈಸೇಶನ್ ವ್ಯವಸ್ಥೆಯನ್ನು ಜಾರಿಗೆ ತರಲಿದೆ. ಇದರಿಂದ ನಿಮ್ಮ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್‌ಗಳು ದುರ್ಬಳಕೆಯಾಗದಂತೆ ನೋಡಿಕೊಳ್ಳಬಹುದು. ಆರ್‌ಬಿಐ ಪ್ರಕಾರ 2022 ರ ಅಕ್ಟೋಬರ್ 1 ರಿಂದ ಇದು ಕಡ್ಡಾಯವಾಗಲಿದೆ.
ಅನೇಕ ಮಂದಿ ಕಳೆದ ಕೆಲ ವರ್ಷಗಳಿಂದ ಸೈಬರ್ ವಂಚನೆಗೆ ಗುರಿಯಾಗಿದ್ದಾರೆ. ಹಣ ಕಳೆದುಕೊಂಡಿದ್ದಾರೆ. ಏಕೆಂದರೆ ಅವರ ಡೆಬಿಟ್, ಕ್ರೆಡಿಟ್ ಕಾರ್ಡ್‌ನಲ್ಲಿದ್ದ ಅವರ ಕಾರ್ಡ್ ಡೇಟಾಗಳು ಸೋರಿಕೆಯಾಗಿವೆ. ಹಾಗಾದರೆ ಏನಿದು ಟೋಕನೈಸೇಶನ್ ಹಾಗೂ ಇದರಿಂದ ಡೆಬಿಡ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ಸುರಕ್ಷತೆ ಹೇಗೆ ವೃದ್ಧಿಸುತ್ತದೆ? ಇಲ್ಲಿದೆ ವಿವರ.
ಏನಿದು ಟೋಕನೈಶೇನ್? ಈ ಹಿಂದೆ ನಿಮ್ಮ ಡೆಬಿಟ್, ಕ್ರೆಡಿಟ್ ಕಾರ್ಡ್‌ಗಳಲ್ಲಿದ್ದ 16 ಅಂಕಿಗಳು, ಹೆಸರು, ಕಾರ್ಡ್‌ನ ಅವಧಿ ಮತ್ತು ಕೋಡ್‌ಗಳ ವಿವರಗಳ ಬದಲಿಗೆ ಬಳಕೆಯಾಗುವ ಟೋಕನ್ ವ್ಯವಸ್ಥೆಯೇ ಟೋಕನೈಸೇಶನ್. ಈ ಕೋಡ್‌ಗೆ ಟೋಕನ್ ಎಂದು ಕರೆಯಲಾಗುತ್ತದೆ. ಈ ಟೋಕನ್ ಅನ್ನು ಆನ್‌ಲೈನ್ ವರ್ಗಾವಣೆಗಳಲ್ಲಿ, ಮೊಬೈಲ್ ಪಾಯಿಂಟ್ ಆಫ್ ಸೇಲ್ ವರ್ಗಾವಣೆಗಳು, ಮೊಬೈಲ್ ಅಪ್ಲಿಕೇಶನ್‌ಗಳಲ್ಲಿ ಬಳಸಬಹುದು.
ಟೋಕನ್‌ನಿಂದ ಏನು ಪ್ರಯೋಜನ?
ಕಾರ್ಡ್‌ಗಳ ಮೂಲಕ ನಡೆಸುವ ಹಣಕಾಸು ವರ್ಗಾವಣೆಗಿಂತ ಇದು ಹೆಚ್ಚು ಸುರಕ್ಷಿತ. ಇದರದಲ್ಲಿ ನಿಮ್ಮ ಡೆಬಿಟ್, ಕ್ರೆಡಿಟ್ ಕಾರ್ಡ್ ವಿವರಗಳು ವರ್ಗಾವಣೆ ವೇಳೆ ಮರ್ಚೆಂಟ್ ವೆಬ್‌ಸೈಟ್ ಅಥವಾ ಅಪ್ಲಿಕೇಶನ್‌ಗೆ ವರ್ಗಾವಣೆಯಾಗುವುದಿಲ್ಲ. ಈ ಸೇವೆ ಪಡೆಯಲು ಗ್ರಾಹಕರು ಯಾವುದೇ ಶುಲ್ಕ ನೀಡಬೇಕಿಲ್ಲ. ಪ್ರಸ್ತುತ ವರ್ಗಾವಣೆಯ ವೇಳೆ ಕಾರ್ಡ್ ವಿವರಗಳು ಮರ್ಚೆಂಟ್ ವೆಬ್‌ಸೈಟ್‌ನಲ್ಲಿ ಸಂಗ್ರಹವಾಗುತ್ತದೆ. ಅದು ಹ್ಯಾಕ್ ಆದರೆ ಗ್ರಾಹಕರ ವಿವರಗಳು ಸೋರಿಕೆಯಾಗುವ ಅಪಾಯ ಇರುತ್ತದೆ. ಕಾರ್ಡ್ ಟೋಕನೈಸೇಶನ್ ಬಳಿಕ ಗ್ರಾಹಕರ ಎಲ್ಲ ಡೇಟಾಗಳು ಬ್ಯಾಂಕ್ ಜತೆ ಇರುತ್ತದೆ. ಮರ್ಚೆಂಟ್ ವೆಬ್‌ಸೈಟ್‌ಗೆ ವರ್ಗಾವಣೆ ಆಗದಿರುವುದರಿಂದ ಕಾರ್ಡ್ ವರ್ಗಾವಣೆ ಸುರಕ್ಷಿತವಾಗಿರುತ್ತದೆ. ಮರ್ಚೆಂಟ್ ವೆಬ್‌ಸೈಟ್, ಮೊಬೈಲ್ ಅಪ್ಲಿಕೇಶನ್‌ಗಳಲ್ಲಿ ನಿಮ್ಮ ಕಾರ್ಡ್ ವಿವರಗಳ ಬದಲು ಟೋಕನ್ ಸ್ಟೋರ್ ಆಗಿರುತ್ತದೆ. ಹೀಗಾಗಿ ಇದು ನಿಮ್ಮ ಕಾರ್ಡ್‌ನ ಸುರಕ್ಷತೆಯನ್ನು ಹೆಚ್ಚಿಸುತ್ತದೆ.
ಕಾರ್ಡ್ ಟೋಕನೈಸೇಶನ್ ಹೇಗೆ?
ಬಳಕೆದಾರರು ತಮ್ಮ ಡೆಬಿಟ್, ಕ್ರೆಡಿಟ್ ಕಾರ್ಡ್ ಅನ್ನು ಕೆಳಕಂಡಂತೆ ಟೋಕನೈಸೇಶನ್ ಮಾಡಿಕೊಳ್ಳಬಹುದು.
- ನಿಮ್ಮ ನೆಚ್ಚಿನ ಆನ್‌ಲೈನ್ ಅಪ್ಲಿಕೇಶನ್/ವೆಬ್‌ಸೈಟ್‌ಗೆ ಲಾಗಿನ್ ಆಗಿ. ದಿನಸಿ ವಸ್ತುಗಳನ್ನು ಖರೀದಿಸಿ, ಅಥವಾ ಆನ್‌ಲೈನ್ ಮೂಲಕ ಆಹಾರ ವಸ್ತು ಕೊಳ್ಳಿರಿ.
- ಚೆಕ್ ಔಟ್ ಪೇಜ್ನಲ್ಲಿ ಕ್ರೆಡಿಟ್/ಡೆಬಿಟ್ ಕಾರ್ಡ್ ಆಯ್ಕೆ ಮಾಡಿರಿ. ಸಿವಿವಿ ನಮೂದಿಸಿ.
- ಚೆಕ್ ಬಾಕ್ಸ್ನಲ್ಲಿ ” Secure your card” ಅಥವಾ ” save card as per RBI guidelines’ ಆಯ್ಕೆಯನ್ನು ಟಿಕ್ ಮಾರ್ಕ್ ಮಾಡಿಕೊಳ್ಳಿ.
- ನಿಮ್ಮ ನೋಂದಾಯಿತ ಮೊಬೈಲ್ನಲ್ಲಿ ಪಡೆದ ಒಟಿಪಿಯನ್ನು ನಮೂದಿಸಿ.
- ನಿಮ್ಮ ಕಾರ್ಡ್ ವಿವರಗಳು ಈಗ ಸುರಕ್ಷಿತ.
ಟೋಕನೈಸೇಶನ್ ಮಾಡಿಕೊಳ್ಳದಿದ್ದರೆ ಏನಾಗುತ್ತದೆ? : 2022ರ ಅಕ್ಟೋಬರ್ 1ರಿಂದ ಕಾರ್ಡ್ ಟೋಕನೈಸೇಶನ್ ಆಗದಿದ್ದರೆ, ಪ್ರತಿ ವರ್ಗಾವಣೆಯ ಸಂದರ್ಭ ನಿಮ್ಮ ಕಾರ್ಡ್ ಸಂಖ್ಯೆ, ಅವಧಿ, ಸಿವಿವಿ ಸಂಖ್ಯೆಯನ್ನು ನೀಡಬೇಕಾಗುತ್ತದೆ.
ಇದನ್ನೂ ಓದಿ: ವಿಸ್ತಾರ Money Guide | 25 ವರ್ಷದ ಗೃಹಸಾಲವನ್ನು 12 ವರ್ಷದಲ್ಲೇ ಸುಲಭವಾಗಿ ತೀರಿಸುವುದು ಹೇಗೆ?