Site icon Vistara News

Recession in 2023 | ಮುಂದಿನ ವರ್ಷ ಜಗತ್ತಿಗೆ ಆರ್ಥಿಕ ಹಿಂಜರಿತ: ವಿಶ್ವಬ್ಯಾಂಕ್‌ ಎಚ್ಚರಿಕೆ

world bank

ವಾಷಿಂಗ್ಟನ್:‌ ಜಗತ್ತಿನ ನಾನಾ ದೇಶಗಳಲ್ಲಿ ಹಣದುಬ್ಬರವನ್ನು ಹತ್ತಿಕ್ಕಲು ಸೆಂಟ್ರಲ್‌ ಬ್ಯಾಂಕ್‌ಗಳು ಬಡ್ಡಿ ದರವನ್ನು ಏರಿಸುತ್ತಿವೆ. ಇದರ ಪರಿಣಾಮವಾಗಿ 2023ರಲ್ಲಿ ಜಾಗತಿಕ ಆರ್ಥಿಕ ಹಿಂಜರಿತ (Recession in 2023) ಸಂಭವಿಸಬಹುದು ಎಂದು ವಿಶ್ವಬ್ಯಾಂಕ್ ವರದಿ ಎಚ್ಚರಿಸಿದೆ.

ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಇದರಿಂದ ಭಾರಿ ಸಮಸ್ಯೆಯಾಗಲಿದೆ ಎಂದು ವಿಶ್ವಬ್ಯಾಂಕ್‌ ಎಚ್ಚರಿಸಿದೆ. ವಿಶ್ವಾದ್ಯಂತ ಬಡ್ಡಿ ದರಗಳು ಏರಿಕೆಯಾಗುತ್ತಿವೆ. ಕಳೆದ ಐದು ದಶಕಗಳಲ್ಲಿ ಎಂದೂ ಇಂಥ ಪ್ರವೃತ್ತಿ ಕಂಡು ಬಂದಿಲ್ಲ. ಮುಂದಿನ ವರ್ಷ ಕೂಡ ಇದು ಮುಂದುವರಿಯಬಹುದು. ಆದರೆ ಹಣದುಬ್ಬರವನ್ನು ಕೋವಿಡ್‌ ಪೂರ್ವ ಮಟ್ಟಕ್ಕೆ ಇಳಿಸಲು ಈ ಕ್ರಮಗಳು ಬಹುಶಃ ಸಾಕಾಗಲಾರವು ಎಂದು ತಿಳಿಸಿದೆ. ಸೆಂಟ್ರಲ್‌ ಬ್ಯಾಂಕ್‌ಗಳು ಜಾಗತಿಕ ಹಣಕಾಸು ನೀತಿ ದರವನ್ನು ಸರಾಸರಿ 4%ಕ್ಕೆ ಏರಿಸುವ ನಿರೀಕ್ಷೆ ಇದೆ. ಅಂದರೆ 2021ರ 2% ಸರಾಸರಿಗೆ ಹೋಲಿಸಿದರೆ ಇಮ್ಮಡಿಯಾಗಲಿದೆ ಎಂದು ಹೂಡಿಕೆದಾರರು ಅಭಿಪ್ರಾಯಪಟ್ಟಿದ್ದಾರೆ. ರಷ್ಯಾ-ಉಕ್ರೇನ್‌ ಸಂಘರ್ಷ ಕೂಡ ಜಾಗತಿಕ ಆರ್ಥಿಕತೆಯ ಬೆಳವಣಿಗೆ ಮೇಲೆ ಪ್ರತಿಕೂಲ ಪ್ರಭಾವ ಬೀರಿದೆ. ಕಚ್ಚಾ ತೈಲ ದರ ಹೆಚ್ಚಳ, ಆಹಾರ ಹಣದುಬ್ಬರ ಸವಾಲಾಗಿ ಪರಿಣಮಿಸಿದೆ.

ಪೂರೈಕೆಯಲ್ಲಿ ಉಂಟಾಗಿರುವ ಕೊರತೆ ನೀಗದಿದ್ದರೆ ಹಾಗೂ ಕಾರ್ಮಿಕ ಮಾರುಕಟ್ಟೆಯ ಮೇಲಿನ ಒತ್ತಡ ಪರಿಹರಿಸದಿದ್ದರೆ, ಕೇವಲ ಬಡ್ಡಿ ದರ ಏರಿಕೆಯಿಂದ ಜಾಗತಿಕ ಹಣದುಬ್ಬರ ಮುಂದಿನ ವರ್ಷ ಸುಮಾರು ಸರಾಸರಿ 5%ರ ಮಟ್ಟದಲ್ಲಿ ಇರಬಹುದು. ಅಂದರೆ ಇದು ಕೋವಿಡ್‌ ಪೂರ್ವ ಮಟ್ಟಕ್ಕೆ ಹೋಲಿಸಿದರೆ ಎರಡು ಪಟ್ಟು ಹೆಚ್ಚು. ಹೀಗಾಗಿ ಸೆಂಟ್ರಲ್‌ ಬ್ಯಾಂಕ್‌ಗಳು ತಮ್ಮ ಟಾರ್ಗೆಟ್‌ ಪ್ರಕಾರ ಹಣದುಬ್ಬರ ಹತ್ತಿಕ್ಕಲು ಬಡ್ಡಿ ದರದಲ್ಲಿ ಹೆಚ್ಚುವರಿ 2% ಏರಿಕೆ ಮಾಡುವ ಸಾಧ್ಯತೆ ಇದೆ. ಆದರೆ ಇದರ ಪರಿಣಾಮ ಜಾಗತಿಕ ಆರ್ಥಿಕ ಹಿಂಜರಿತ ಸಂಭವಿಸಬಹುದು. ಅಮೆರಿಕ, ಚೀನಾ ಮತ್ತು ಯುರೋಪ್‌ನಲ್ಲಿ ಈಗಾಗಲೇ ಆರ್ಥಿಕತೆ ಮಂದಗತಿಯಲ್ಲಿದೆ ಎಂದು ತಿಳಿಸಿದೆ.

Exit mobile version