ಮುಂಬೈ: ಭಾರತದ ಟೆಲಿಕಾಂ ದೈತ್ಯ ರಿಲಯನ್ಸ್ ಜಿಯೊ (Reliance Jio) ಡಾಟಾ ಟ್ರಾಫಿಕ್ (Data traffic)ಯ ವಿಚಾರದಲ್ಲಿ ಚೀನಾ ಮೊಬೈಲ್ ಅನ್ನು ಹಿಂದಿಕ್ಕಿ ವಿಶ್ವದ ಅತಿದೊಡ್ಡ ಮೊಬೈಲ್ ಆಪರೇಟರ್ ಆಗಿ ಹೊರಹೊಮ್ಮಿದೆ. ಜಿಯೋ ತನ್ನ ತ್ರೈಮಾಸಿಕ ಫಲಿತಾಂಶಗಳನ್ನು ಬಹಿರಂಗಪಡಿಸುತ್ತಿದ್ದಂತೆ ಈ ವಿಚಾರ ಬಹಿರಂಗಗೊಂಡಿದೆ.
2024ರ ಮಾರ್ಚ್ ವೇಳೆಗೆ ಜಿಯೊ 481.8 ಮಿಲಿಯನ್ (48,18,00000) ಚಂದಾದಾರರನ್ನು ಹೊಂದಿದೆ. ಅದರಲ್ಲಿ 108 ಮಿಲಿಯನ್ (10,80,00000) ಚಂದಾದಾರರು ಜಿಯೋದ ಟ್ರೂ 5 ಜಿ ಸ್ವತಂತ್ರ ನೆಟ್‌ವರ್ಕ್ ಬಳಸುತ್ತಿದ್ದಾರೆ. ಈ ಸಂಖ್ಯೆಯು ಭಾರತೀಯ ಟೆಲಿಕಾಂ ಮಾರುಕಟ್ಟೆಯಲ್ಲಿ ಜಿಯೋ ಯಾವ ರೀತಿಯ ಪ್ರಭಾವ ಬೀರಿದೆ ಎನ್ನುವುದನ್ನು ಸಾಬೀತುಪಡಿಸುತ್ತದೆ ಎಂದು ಮೂಲಗಳು ತಿಳಿಸಿವೆ. ಜಿಯೊ ನೆಟ್‌ವರ್ಕ್‌ನಲ್ಲಿ ಟ್ರಾಫಿಕ್ 40.9 ಎಕ್ಸಾಬೈಟ್ (Exabytes)ಗೆ ತಲುಪಿದೆ. ಇದು ವರ್ಷದಿಂದ ವರ್ಷಕ್ಕೆ ಶೇ. 35.2ರಷ್ಟು ಹೆಚ್ಚಳವನ್ನು ಸೂಚಿಸುತ್ತದೆ.
Reliance Jio emerges as World's largest mobile operator in data traffic, surpassing China mobile
— ANI Digital (@ani_digital) April 23, 2024
Read @ANI Story | https://t.co/aG2cri5lew#RelianceIndustries #Jio #MukeshAmbani #WorldLargestMobileOperator pic.twitter.com/IlvcXpTPvj
ಶೇ. 28ರಷ್ಟು ಟ್ರಾಫಿಕ್ 5 ಜಿ ಚಂದಾದಾರರಿಂದ ಕಂಡು ಬಂದಿದೆ. ಹೆಚ್ಚುವರಿಯಾಗಿ ಜಿಯೊ ಫಿಕ್ಸೆಡ್ ವೈರ್‌ಲೆಸ್ ಆಕ್ಸೆಸ್ (Fixed Wireless Access) ಸೇವೆಗಳು ಡಾಟಾ ಟ್ರಾಫಿಕ್‌ಗೆ ಗಮನಾರ್ಹ ಕೊಡುಗೆ ನೀಡಿವೆ ಎನ್ನುವುದನ್ನು ಅಂಕಿ-ಅಂಶಗಳು ತಿಳಿಸಿವೆ. ಕೋವಿಡ್ -19 ಸಾಂಕ್ರಾಮಿಕ ರೋಗ ಕಾಣಿಸಿಕೊಂಡ ಬಳಿಕ ವಾರ್ಷಿಕ ಡಾಟಾ ಟ್ರಾಫಿಕ್‌ನಲ್ಲಿ 2.4 ಪಟ್ಟು ಹೆಚ್ಚಳ ಕಂಡು ಬಂದಿದೆ. ಮಾಸಿಕ ಡಾಟಾ ಬಳಕೆಯು ಮೂರು ವರ್ಷಗಳ ಹಿಂದೆ ಕೇವಲ 13.3 ಜಿಬಿ ಇತ್ತು. ಇದು 28.7 ಜಿಬಿಗೆ ಏರಿಕೆಯಾಗಿದೆ. ಈ ಅಂಕಿ-ಅಂಶ ಭಾರತದಲ್ಲಿ ಡಿಜಿಟಲ್ ಸಂಪರ್ಕದ ಮೇಲೆ ಹೆಚ್ಚುತ್ತಿರುವ ಅವಲಂಬನೆಯನ್ನು ಸೂಚಿಸುತ್ತದೆ ಎಂದು ವರದಿಗಳು ತಿಳಿಸಿವೆ.
ಫಲಿತಾಂಶಗಳ ಬಗ್ಗೆ ಪ್ರತಿಕ್ರಿಯಿಸಿದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ, ʼʼಕಂಪೆನಿಯ ಕಾರ್ಯಕ್ಷಮತೆ ಮತ್ತು ಭಾರತೀಯ ಆರ್ಥಿಕತೆಗೆ ಅದರ ಕೊಡುಗೆಯ ಬಗ್ಗೆ ತೃಪ್ತಿ ಇದೆʼʼ ಎಂದು ಹೇಳಿದ್ದಾರೆ.
“ರಿಲಯನ್ಸ್ ಇಂಡಸ್ಟ್ರೀಸ್‌ನ ಉಪಕ್ರಮಗಳು ಭಾರತೀಯ ಆರ್ಥಿಕತೆಯ ವಿವಿಧ ಕ್ಷೇತ್ರಗಳ ಬೆಳವಣಿಗೆಯನ್ನು ಉತ್ತೇಜಿಸುವಲ್ಲಿ ಗಮನಾರ್ಹ ಕೊಡುಗೆ ನೀಡಿವೆ. ರಾಷ್ಟ್ರೀಯ ಆರ್ಥಿಕತೆಯನ್ನು ಬಲಪಡಿಸುವುದರ ಜತೆಗೆ ಕಂಪೆನಿಯ ಎಲ್ಲ ವಿಭಾಗಗಳು ದೃಢವಾದ ಹಣಕಾಸು ಮತ್ತು ಕಾರ್ಯಾಚರಣೆಯ ಕಾರ್ಯಕ್ಷಮತೆಯನ್ನು ದಾಖಲಿಸಿವೆ. ಇದು ಕಂಪೆನಿಯು ಅನೇಕ ಮೈಲಿಗಲ್ಲುಗಳನ್ನು ಸಾಧಿಸಲು ಸಹಾಯ ಮಾಡಿದೆ. ಈ ವರ್ಷ ತೆರಿಗೆ ಪೂರ್ವ ಲಾಭದಲ್ಲಿ 100,000 ಕೋಟಿ ರೂ.ಗಳ ಮಿತಿಯನ್ನು ದಾಟಿದ ಮೊದಲ ಭಾರತೀಯ ಕಂಪೆನಿ ರಿಲಯನ್ಸ್ ಎನ್ನುವುದು ಹೆಮ್ಮೆಯ ಸಂಗತಿʼʼ ಎಂದು ಅವರು ಸಂತಸ ವ್ಯಕಪಡಿಸಿದ್ದಾರೆ.
ಇದನ್ನೂ ಓದಿ: Reliance Jio Q4 Results: ರಿಲಯನ್ಸ್ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ
“108,000,000ಕ್ಕೂ ಹೆಚ್ಚು ಟ್ರೂ 5 ಜಿ ಗ್ರಾಹಕರೊಂದಿಗೆ ಜಿಯೊ ಭಾರತದಲ್ಲಿ 5 ಜಿ ನೆಟ್‌ವರ್ಕ್ ವಿಚಾರದಲ್ಲಿ ಮುಂಚೂಣಿಯಲ್ಲಿದೆ. ಜಿಯೋ ದೇಶದ ಡಿಜಿಟಲ್ ಮೂಲ ಸೌಕರ್ಯವನ್ನು ಬಲಪಡಿಸುವಲ್ಲಿ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದೆ. ಕಂಪೆನಿಯ ಚಿಲ್ಲರೆ ವಿಭಾಗವಾದ ರಿಲಯನ್ಸ್ ರೀಟೇಲ್ ಕೂಡ ದೃಢವಾದ ಬೆಳವಣಿಗೆಯನ್ನು ದಾಖಲಿಸಿದೆ. ಗ್ರಾಹಕರ ಸಂಖ್ಯೆಯಲ್ಲಿ ಶೇ. 36ರಷ್ಟು ಹೆಚ್ಚಳವಾಗಿದೆʼʼ ಎಂದು ಅವರು ತಿಳಿಸಿದ್ದಾರೆ.