Site icon Vistara News

ವಿಸ್ತಾರ ಸಂಪಾದಕೀಯ: ರೆಪೊ ದರ ಯಥಾಸ್ಥಿತಿ; ಆರ್‌ಬಿಐ ನಿರ್ಧಾರ ಸ್ವಾಗತಾರ್ಹ

Repo Rate Status; RBI's decision is welcome

#image_title

ಈ ಬಾರಿಯ ಹಣಕಾಸು ನೀತಿ ಸಮಿತಿ ಸಭೆಯ ಬಳಿಕ, ಸದ್ಯಕ್ಕೆ ರೆಪೊ ದರವನ್ನು ಯಥಾಸ್ಥಿತಿಯಲ್ಲಿಡುವ (ಶೇ.6.50) ನಿರ್ಧಾರವನ್ನು ಆರ್‌ಬಿಐ ಪ್ರಕಟಿಸಿದೆ. ಈ ಮೂಲಕ ಆರ್‌ಬಿಐ ಸಾಲಗಾರರ ಆತಂಕವನ್ನು ದೂರ ಮಾಡಿದೆ. ಸತತ ಆರು ಬಾರಿಯಿಂದ ಆರ್‌ಬಿಐ ರೆಪೊ ದರ ಏರಿಸುತ್ತಲೇ ಬಂದಿದೆ. 2022ರ ಮೇ ತಿಂಗಳಿನಿಂದ ರೆಪೊ ದರ ಏರಿಕೆ ಆರಂಭವಾಗಿತ್ತು. ಇದರಿಂದಾಗಿ ಬಡ್ಡಿ ದರ ಏರಿಕೆಗೂ ಕಾರಣವಾಗಿತ್ತು. ಹೀಗಾಗಿ ಮುಖ್ಯವಾಗಿ ಗೃಹ ಸಾಲ, ವಾಹನ ಸಾಲಗಾರರ ಮೇಲೆ ಭಾರಿ ಬಡ್ಡಿ ಹೊರೆ ಬೀಳುವಂತಾಗಿತ್ತು. ಈ ಬಾರಿಯೂ ರೆಪೊ ದರ ಏರಬಹುದು ಎಂಬ ಆತಂಕ ಜನಸಾಮಾನ್ಯರಲ್ಲಿತ್ತು. ಆದರೆ ಆರ್‌ಬಿಐ ನಿರ್ಧಾರದಿಂದಾಗಿ ಜನ ತುಸು ನಿರಾಳವಾಗುವಂತಾಗಿದೆ.

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ದೇಶದ ವಾಣಿಜ್ಯ ಬ್ಯಾಂಕುಗಳಿಗೆ ಕೊಡುವ ಸಾಲದ ಮೇಲಿನ ಬಡ್ಡಿ ದರವೇ ರೆಪೋ ರೇಟ್. ವಾಣಿಜ್ಯ ಬ್ಯಾಂಕುಗಳು ತಮ್ಮಲ್ಲಿ ಹಣದ ಕೊರತೆಯಾದಾಗ ಆರ್‌ಬಿಐನಿಂದ ಹಣ ಪಡೆಯುತ್ತವೆ. ಈ ಹಣಕ್ಕೆ ಬಡ್ಡಿ ನೀಡುವ ದರ ಇದಾಗಿದೆ. ಬ್ಯಾಂಕ್‌ಗಳಿಗೆ ಹಣದ ಹರಿವು ಹೆಚ್ಚಿಸಲು ಆರ್‌ಬಿಐ ಬಯಸಿದರೆ ರೆಪೊ ದರ ಇಳಿಸುತ್ತದೆ; ಹಣದ ಹರಿವು ಕಡಿತಗೊಳಿಸಲು ಇಚ್ಛಿಸಿದರೆ ರೆಪೊ ದರ ಏರುತ್ತದೆ. ಅಂದರೆ ದೇಶದ ಒಟ್ಟಾರೆ ಬ್ಯಾಂಕಿಂಗ್ ಕ್ಷೇತ್ರದ ಹೃದಯದ ಬಡಿತವು ರೆಪೊ ದರದ ಜೊತೆ ಮಿಡಿಯುತ್ತದೆ. ಸದ್ಯ ಯಥಾಸ್ಥಿತಿ ಕಾಪಾಡಿಕೊಂಡಿರುವುದರಿಂದ ದೇಶದ ಬ್ಯಾಂಕಿಂಗ್‌ ವ್ಯವಸ್ಥೆ ಸಮಾಧಾನಕರವಾಗಿ ಮುನ್ನಡೆಯುತ್ತಿದೆ ಎಂದರ್ಥ.

ಸದ್ಯ ಅಮೆರಿಕ, ಯುರೋಪ್‌ ಮೊದಲಾದೆಡೆಗಳಲ್ಲಿ ಸೆಂಟ್ರಲ್‌ ಬ್ಯಾಂಕ್‌ಗಳ ಬಡ್ಡಿ ದರ ಏರಿಸಿದ್ದವು. ಈ ಹಿನ್ನೆಲೆಯಲ್ಲಿ ಆರ್‌ಬಿಐ ಕೂಡ ಏರಿಸಬಹುದು ಎಂದು ನಂಬಲಾಗಿತ್ತು. ಆದರೆ ಹಾಗಾಗಿಲ್ಲ. ದೇಶದ ಹಣಕಾಸು ಸ್ಥಿತಿ ಸದ್ಯಕ್ಕೆ ಸುಸ್ಥಿರವಾಗಿದೆ ಎಂದು ಆರ್‌ಬಿಐ ಗವರ್ನರ್‌ ಘೋಷಿಸಿದ್ದಾರೆ. 2023 ಆಶಾದಾಯಕವಾಗಿ ಆರಂಭವಾಗಿದೆ. ಆರ್ಥಿಕ ಮಾರುಕಟ್ಟೆಗಳಲ್ಲಿ ವಹಿವಾಟು ಚೇತೋಹಾರಿಯಾಗಿದೆ. ಅಭಿವೃದ್ಧಿ ಹೊಂದಿರುವ ಎಕಾನಮಿಗಳಲ್ಲಿ ಬ್ಯಾಂಕಿಂಗ್‌ ವಲಯಗಳಲ್ಲಿ ಬಿಕ್ಕಟ್ಟು ತಲೆದೋರಿದ್ದರೂ, ಭಾರತದ ಜಿಡಿಪಿ 2023-24ರಲ್ಲಿ 6.5%ಕ್ಕೆ ಏರಿಕೆಯಾಗಲಿದೆ ಎಂದು ಆರ್‌ಬಿಐ ಅಂದಾಜಿಸಿದೆ. ಈ ನಡುವೆ ಹಣದುಬ್ಬರದ ಮುನ್ನೋಟವನ್ನು 5.3%ದಿಂದ 5.2%ಕ್ಕೆ ಕಡಿತಗೊಳಿಸಲಾಗಿದೆ. ಇದರ ಫಲಿತಾಂಶ ಷೇರು ಮಾರುಕಟ್ಟೆಯಲ್ಲೂ ಪ್ರತಿಫಲಿಸಿದೆ. ಆದರೆ ಆರ್‌ಬಿಐ ಈ ವರ್ಷ ಭಾರತದಲ್ಲಿ ಸುಸ್ಥಿರ ಬೆಳವಣಿಗೆಯನ್ನು ನಿರೀಕ್ಷಿಸಿದೆ ಎಂದರೆ ಆಮದು- ರಫ್ತು ಹಾಗೂ ರಿಟೇಲ್‌ ಮಾರುಕಟ್ಟೆಗಳು ಅಷ್ಟೊಂದು ಗಟ್ಟಿಯಾಗಿವೆ ಎಂದರ್ಥ.

ಆರ್‌ಬಿಐನ ಈ ನಿರ್ಧಾರವನ್ನು ಅನುಸರಿಸಿದ ಬ್ಯಾಂಕ್‌ಗಳು ಬಡ್ಡಿ ದರಗಳ ಏರಿಳಿಕೆ ಮಾಡುತ್ತವೆ. ಪ್ರಸ್ತುತ ಸಾಲದ ಬಡ್ಡಿದರಗಳು ಹಾಗೇ ಮುಂದುವರಿಯಲಿವೆ. ಉಳಿತಾಯದ ಖಾತೆಗಳ ಬಡ್ಡಿದರವೂ ಬದಲಾಗುವುದಿಲ್ಲ ಎಂಬುದೂ ನಿಜ. ಸದ್ಯಕ್ಕೆ ಬಡ್ಡಿದರ ಯಥಾಸ್ಥಿತಿ ಕಾಪಾಡಿಕೊಂಡಿರುವುದರ ಪರಿಣಾಮ ಹಣದುಬ್ಬರ ನಿಯಂತ್ರಣದಲ್ಲಿರಬಹುದು. ಸದ್ಯ ಶ್ರೀಸಾಮಾನ್ಯರ ದೊಡ್ಡ ತಲೆನೋವು ಎಂದು ಎಲ್ಲ ಕಡೆಯೂ ತುಟ್ಟಿಯಾಗಿರುವ ಬೆಲೆಗಳು. ಪ್ರಸ್ತುತ ಇವು ಇನ್ನಷ್ಟು ಏರಲಾರವು ಎಂದು ಸಮಾಧಾನಪಡಬಹುದು.

ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಕರಗುತ್ತಿದೆ ಹಿಮಾಲಯ, ಭವಿಷ್ಯದಲ್ಲಿ ಕಾದಿದೆ ಅಪಾಯ

ವಿಶ್ವದ ಬಲಾಢ್ಯ ದೇಶಗಳು ಬ್ಯಾಂಕುಗಳ ದಿವಾಳಿಯಿಂದ ಕಂಗೆಟ್ಟಿದ್ದು, ಆರ್ಥಿಕ ಸಂಕಟ ಎದುರಿಸುತ್ತಿವೆ. ಅಮೆರಿಕದಂಥ ಶಕ್ತ ದೇಶಗಳೂ ಆರ್ಥಿಕ ಹಿಂಜರಿತದ ಭೀತಿ ಎದುರಿಸುತ್ತಿವೆ. ಜಗತ್ತಿನಾದ್ಯಂತ ಉದ್ಯೋಗ ನಷ್ಟದ ವೈರಸ್ ವ್ಯಾಪಿಸುತ್ತಿದೆ. ಸೆನ್ಸೆಕ್ಸ್ ಏರಿಳಿತ ಹೆಚ್ಚುತ್ತಿದೆ. ಭಾರತಕ್ಕೂ ಈ ನಡುವೆ ಜಾಗತಿಕ ಆರ್ಥಿಕ ಅತಂತ್ರತೆಯ ಬಿಸಿ ತಟ್ಟುವ ಸಾಧ್ಯತೆ ಕಾಣಿಸುತ್ತಿದೆ. ಯಾಕೆಂದರೆ ದೊಡ್ಡ ದೇಶವೊಂದರ ಒಂದು ಬ್ಯಾಂಕ್‌ ಮುಳುಗಿದರೆ ಅದರ ಪಶ್ಚಾತ್‌ ಕಂಪನಗಳು ಜಗತ್ತಿನ ಎಲ್ಲೆಡೆ ಕಾಣಿಸಿಕೊಳ್ಳದೇ ಇರುವುದಿಲ್ಲ. ಆಧುನಿಕ ಮಾರುಕಟ್ಟೆಗಳು ಒಂದನ್ನೊಂದು ಅವಲಂಬಿಸಿವೆ. ಈ ಹಿನ್ನೆಲೆಯಲ್ಲಿ ಆರ್‌ಬಿಐ ಪಾತ್ರ, ಅದರ ನೀತಿ ನಿರ್ಧಾರಗಳು ನಿರ್ಣಾಯಕವಾಗಿವೆ.

Exit mobile version