ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರೆಪೊ ದರಗಳನ್ನು 40 ಬೇಸಿಸ್ ಪಾಯಿಂಟ್ಗಳಷ್ಟು ಹೆಚ್ಚಿಸಿದ್ದು, 4.40%ಗೆ ಏರಿದೆ.
ಹಣದುಬ್ಬರ ತಡೆಯಲು ರೆಪೊ ದರಗಳನ್ನು ಏರಿಸಿರುವುದಾಗಿ ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ತಿಳಿಸಿದ್ದಾರೆ. ಜಾಗತಿಕ ಒತ್ತಡಗಳು ಕಚ್ಚಾ ತೈಲ ಬೆಲೆಯಲ್ಲಿ ಏರಿಕೆಯಾಗುವಂತೆ ಮಾಡಿವೆ. ಕಚ್ಚಾ ತೈಲ ಬೆಲೆ ಬ್ಯಾರೆಲ್ಗೆ 100 ಡಾಲರ್ಗೂ ದಾಟಿ ಏರಿದೆ. ಆಹಾರ ತೈಲದ ಬೆಲೆ ಕೂಡ ಏರಿದೆ. ಮಧ್ಯಮ ಅವಧಿಯ ವಾಣಿಜ್ಯ ಪ್ರಗತಿಯ ದೃಷ್ಟಿಯಿಂದ ಬಡ್ಡಿ ದರಗಳ ಏರಿಕೆ ಮಾಡಲಾಗಿದೆ ಎಂದು ದಾಸ್ ತಿಳಿಸಿದ್ದಾರೆ.
ಎರಡು ವರ್ಷಗಳ ಬಳಿಕ ಇಂಥದೊಂದು ಬದಲಾವಣೆ ಮಾಡಲಾಗುತ್ತಿದೆ. ಕಳೆದ ಬಾರಿ 2020ರ ಮೇ ತಿಂಗಳಲ್ಲಿ ರೆಪೊ ದರಗಳನ್ನು 4%ಕ್ಕೆ ಇಳಿಸಲಾಗಿತ್ತು. ಸುದೀರ್ಘ 24 ತಿಂಗಳ ಕಾಲ ಆರ್ಬಿಐ ಬಡ್ಡಿದರದಲ್ಲಿ ಏನೂ ಬದಲಾವಣೆ ಮಾಡಿಲ್ಲ.
ಸೆನ್ಸೆಕ್ಸ್ ಕುಸಿತ
ಆರ್ಬಿಐ ಪ್ರಕಟಣೆಯ ಹಿನ್ನೆಲೆಯಲ್ಲಿ ಷೇರು ಪೇಟೆ ವಹಿವಾಟಿನಲ್ಲಿ ಕುಸಿತ ಕಂಡಿದೆ. ಸೆನ್ಸೆಕ್ಸ್ ಸೂಚ್ಯಂಕ 953.83 ಪಾಯಿಂಟ್ಗಳಷ್ಟು (1.67%) ಇಳಿದಿದೆ. ನಿಫ್ಟಿ ಸೂಚ್ಯಂಕ 287.65 ಪಾಯಿಂಟ್ (1.69%) ಕುಸಿದಿದೆ. ರೆಪೊ ದರಗಳ ಏರಿಕೆ ತೀರಾ ಅನಿರೀಕ್ಷಿತವೇನೂ ಆಗಿರಲಿಲ್ಲ. ಆದರೂ ಷೇರು ಪೇಟೆ ವಹಿವಾಟುದಾರರಲ್ಲಿ ಅದು ಹಿನ್ನಡೆಗೆ ಕಾರಣವಾಗಿದೆ.
ಯಾಕೆ ರೆಪೊ ದರ ಏರಿಕೆ?
ಇತರ ಬ್ಯಾಂಕ್ಗಳು ತನ್ನಿಂದ ಪಡೆಯುವ ಸಾಲದ ಹಣಕ್ಕೆ ಆರ್ಬಿಐ ವಿಧಿಸುವ ಬಡ್ಡಿ ದರಕ್ಕೆ ರೆಪೊ ದರ ಎಂದು ಹೆಸರು. ಹಾಗೇ ವಾಣಿಜ್ಯ ಬ್ಯಾಂಕ್ಗಳು ತನ್ನಲ್ಲಿ ಇಡುವ ಹಣಕ್ಕೆ ಆರ್ಬಿಐ ನೀಡುವ ಬಡ್ಡಿದರಕ್ಕೆ ರಿವರ್ಸ್ ರೆಪೊ ದರ ಎನ್ನುತ್ತಾರೆ. ಯಾವಾಗಲೂ ರಿವರ್ಸ್ ರೆಪೊಗಿಂತ ರೆಪೊ ದರಗಳು ಹೆಚ್ಚು ಇರುತ್ತವೆ. ರೆಪೊ ದರಗಳನ್ನು ಏರಿಸಲಾಗಿದೆ ಎಂದರೆ, ಹೆಚ್ಚುತ್ತಿರುವ ಹಣದುಬ್ಬರಕ್ಕೆ ತಡೆ ಹಾಕಲು ಆರ್ಬಿಐ ಬಯಸಿದೆ ಎಂದರ್ಥ. ರೆಪೊ ದರಗಳ ಏರಿಕೆಯಿಂದ ಬಡ್ಡಿ ದರಗಳು ಏರಲಿವೆ. ಮಾರುಕಟ್ಟೆಯಲ್ಲಿ ಸಾಮಗ್ರಿಗಳಿಗೆ ಬೇಡಿಕೆ ಕಡಿಮೆಯಾಗಿ, ಹಣದುಬ್ಬರ ನಿಯಂತ್ರಣಕ್ಕೆ ಬರಲಿದೆ ಎಂಬ ನಿರೀಕ್ಷೆ.
ನಿಮ್ಮ ಮೇಲೆ ಪರಿಣಾಮವೇನು?
- ನೀವು ಕಟ್ಟಬೇಕಾದ ಮನೆ ಸಾಲ, ವಾಹನ ಸಾಲದ ಮೇಲಿನ ಬಡ್ಡಿ ದರ ಹೆಚ್ಚಲಿದ್ದು, ಹೆಚ್ಚು ಇಎಂಐ ಕಟ್ಟಬೇಕಾಗಬಹುದು ಅಥವಾ ಅಸಲಿಗಿಂತ ಹೆಚ್ಚು ಹಣ ಬಡ್ಡಿಗೆ ಹೋಗಬಹುದು.
- ಉಳಿತಾಯ ಖಾತೆ, ಸ್ಥಿರ ಠೇವಣಿಗಳ ಮೇಲಿನ ಬಡ್ಡಿ ದರ ತುಸು ಮಟ್ಟಿಗೆ ಏರಬಹುದು.
ಇದನ್ನೂ ಓದಿ: Explainer: ಉಳಿತಾಯ ಯಥಾಸ್ಥಿತಿ, ಖರ್ಚು ಏರಿಕೆಗಿಲ್ಲ ಬ್ರೇಕ್: ಹಣಕಾಸು ನೀತಿ ಹೇಳಿದ್ದೇನು?