ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ (Reserve Bank of India) ವೈಯಕ್ತಿಕ ಸಾಲಗಳು (Personal loans) ಮತ್ತು ಕ್ರೆಡಿಟ್ ಕಾರ್ಡ್ಸ್‌ಗೆ (Credit Cards) ಸಂಬಂಧಿಸಿದ ನಿಯಮಗಳನ್ನು ಮತ್ತಷ್ಟು ಕಠಿಣಗೊಳಿಸಿದೆ. ಪರಿಣಾಮ ಗುರುವಾರದ ಷೇರುಪೇಟೆ ಮೇಲೆ ಭಾರೀ ಪ್ರಭಾವ ಬೀರಿದ್ದು, ಬ್ಯಾಂಕುಗಳು, ಎನ್‌ಪಿಎಫ್‌ಸಿಗಳು ಷೇರುಗಳು ಕುಸಿತವನ್ನು ದಾಖಲಿಸಿವೆ. ಆರ್‌ಬಿಐ ರಿಸ್ಕ್ ವೇಯ್ಟ್ (risk weights) ಪ್ರಮಾಣ ಹೆಚ್ಚಿಸಿದ್ದರಿಂದ ಗ್ರಾಹಕರಿಗೆ ವೈಯಕ್ತಿಕ ಸಾಲ ಹಾಗೂ ಕ್ರೆಡಿಟ್ ಕಾರ್ಡ್ ಸಾಲ ಪಡೆಯುವುದು ಮತ್ತಷ್ಟು ಕಷ್ಟವಾಗಲಿದೆ.
ಬುಧವಾರ ಸಂಜೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ), ಬ್ಯಾಂಕ್‌ಗಳು ಮತ್ತು ಬ್ಯಾಂಕೇತರ ಹಣಕಾಸು ಕಂಪನಿಗಳಿಗೆ (ಎನ್‌ಬಿಎಫ್‌ಸಿ) ರಿಸ್ಕ್ ವೇಯ್ಟ್ ಪ್ರಮಾಣವನ್ನು ಶೇ.25ರಿಂದ 125ವರೆಗೂ ಹೆಚ್ಚಿಸುವ ನಿರ್ಧಾರ ಕೈಗೊಂಡಿದೆ. ಅಂದರೆ, ಸಾಲ ನೀಡುವಾಗ ಬ್ಯಾಂಕುಗಳು ಸಾಲ ನೀಡುವ ಪ್ರಮಾಣಕ್ಕೆ ರಿಸ್ಕ್ ವೇಯ್ಟ್ ಆಗಿ ಒಂದಿಷ್ಟು ಮೊತ್ತವನ್ನು ಮೀಸಲಿಡಬೇಕಾಗುತ್ತದೆ. ಈಗ ಆರ್‌ಬಿಐ ಈ ಮೀಸಲು ಮೊತ್ತದ ಪ್ರಮಾಣವನ್ನು ಹೆಚ್ಚಿಸಿದ್ದರಿಂದ ಬ್ಯಾಂಕುಗಳು ವೈಯಕ್ತಿಕ ಸಾಲ ಹಾಗೂ ಕ್ರೆಡಿಟ್ ಕಾರ್ಡ್ ಸಾಲು ನೀಡುವುದು ಕಷ್ಟಕರವಾಗಲಿದೆ. ಸಾಲ ನೀಡುವ ಅನುಪಾತಕ್ಕೆ ಮೀಸಲಿಡುವ ಮೊತ್ತವನ್ನೇ ರಿಸ್ಕ್ ವೇಯ್ಟೇಡ್ ಅಸೆಟ್ಸ್(RWA) ಎಂದು ಕರೆಯಲಾಗುತ್ತದೆ.
ಬ್ಯಾಂಕುಗಳು ಬೇಕಾಬಿಟ್ಟಿಯಾಗಿ ಸಾಲ ನೀಡುವುದನ್ನು ತಪ್ಪಿಸಲು ಅಥವಾ ದಿವಾಳಿಯಾಗುವುದನ್ನು ತಡೆಯಲು ಆರ್‌ಬಿಐ ನಿಯಮವನ್ನು ಜಾರಿಗೆ ತಂದಿದೆ. ಜತೆಗೆ, ಬ್ಯಾಂಕ್ ಠೇವಣಿದಾರರು ಮತ್ತು ಹೂಡಿಕೆದಾರರನ್ನು ರಕ್ಷಿಸಲು ಹೊಂದಿರಬೇಕಾದ ಕನಿಷ್ಠ ಪ್ರಮಾಣದ ಬಂಡವಾಳವನ್ನು ಗುರುತಿಸಲು ಬಳಸಲಾಗುವ ಆಸ್ತಿ ವರ್ಗೀಕರಣ ವ್ಯವಸ್ಥೆಯನ್ನು ಇದು ಸೂಚಿಸುತ್ತದೆ.
ಆರ್‌ಬಿಐ ರಿಸ್ಕ್ ವೇಯ್ಟ್ಸ್ ನಿಯಮ ಬಿಗಿ ಮಾಡಿದ ಸಾರಾಂಶ ಎಂದರೆ, ಸಾಲು ನೀಡಲು ಬ್ಯಾಂಕುಗಳು ಹೆಚ್ಚಿನ ಪ್ರಮಾಣದ ಬಂಡವಾಳವನ್ನು ತೊಡಗಿಸಬೇಕಾಗುತ್ತದೆ. ಅದರರ್ಥ, ಗ್ರಾಹಕರಿಗೆ ಸಾಲಗಳು ಮತ್ತಷ್ಟು ತುಟ್ಟಿಯಾಗಲಿವೆ.
ನಿಯಮವನ್ನು ಮತ್ತಷ್ಟು ಕಠಿಣ ಮಾಡಿದ್ದೇಕೆ?
ರಿಸ್ಕ್ ವೇಯ್ಟ್ಸ್ ಹೆಚ್ಚಿಸಿದ ಪರಿಣಾಮ ಬ್ಯಾಂಕುಗಳು ಮತ್ತು ಎನ್‌ಬಿಎಫ್‌ಸಿಗಳಿಗೆ ತಮ್ಮ ಲಾಭವನ್ನು ಸಮತೋಲನಗೊಳಿಸಲು ಹೆಚ್ಚಿನ ಪ್ರಮಾಣದ ಬಂಡವಾಳ ಬೇಕಾಗುತ್ತದೆ. ಅಲ್ಲದೇ ಇದು ರಿಟರ್ನ್ ಆನ್ ಈಕ್ವಿಟಿ ಮೇಲೂ ಪರಿಣಾಮವನ್ನು ಬೀರುತ್ತದೆ.
ಷೇರು ಪೇಟೆ ತಲ್ಲಣ
ರಿಸ್ಟ್ ವೇಯ್ಟ್ಸ್ ಪ್ರಮಾಣನ್ನು ಹೆಚ್ಚಿಸಿದ್ದರಿಂದ ಷೇರುಪೇಟೆ ತಲ್ಲಣಗೊಂಡಿದೆ. ವಿಶೇಷ ಬ್ಯಾಂಕಿಂಗ್ ವಲಯದ ಷೇರುಗಳು ಭಾರೀ ಕುಸಿತವನ್ನು ದಾಖಲಿಸಿವೆ. ಎಸ್‌ಬಿಐ ಕಾರ್ಡ್ಸ್ ಹೆಚ್ಚು ನಷ್ಟವನ್ನು ಅನುಭವಿಸಿದೆ. ಎಸ್‌ಬಿಐ ಕಾರ್ಡ್ಸ್ ಷೇರುಗಳು ಶೇ.5ರಷ್ಟು ಕುಸಿತ ಕಂಡಿವೆ. ನಂತರದ ಸ್ಥಾನದಲ್ಲಿ ಚೋಲಮಂಡಲಂ ಇನ್‌ವೆಸ್ಟ್‌ಮೆಂಟ್ ಆ್ಯಂಡ್ ಫೈನಾನ್ಸ್ ಕಂಪನಿ ಶೇ.3, ಎಸ್‌ಬಿಐ ಮತ್ತು ಆ್ಯಕ್ಸಿಸ್ ಬ್ಯಾಂಕುಗಳು ಶೇ. 2, ಬಜಾಜ್ ಫೈನಾನ್ಸ್ ಮತ್ತು ಶ್ರೀರಾಮ್ ಫೈನಾನ್ಸ್ ಶೇ.1ರಷ್ಟು ಕುಸಿತ ದಾಖಲಿಸಿವೆ. ಇನ್ನು ಎಚ್‌ಡಿಎಫ್‌ಸಿ ಬ್ಯಾಂಕು, ಐಸಿಐಸಿಐ ಬ್ಯಾಂಕ್, ಬಜಾಬ್ ಫಿನ್‌ಸರ್ವ್, ಕೋಟಕ್ ಮಹೀಂದ್ರಾ ಬ್ಯಾಂಕ್ ಷೇರುಗಳು ಶೇ.0.06ನಿಂದ 0.08ರವರೆಗೆ ಕುಸಿತ ಕಂಡಿವೆ.
ಈ ಸುದ್ದಿಯನ್ನೂ ಓದಿ: ವಿಸ್ತಾರ ಸಂಪಾದಕೀಯ: ಡಿಜಿಟಲ್ ಪಾವತಿಯಲ್ಲಿ ಭಾರತ ನಂ.1, ಭಾರತೀಯರ ಪ್ರೌಢಿಮೆಗೆ ಇದು ಸಾಕ್ಷಿ