ಹಣಕಾಸು ಸಲಹೆಗಾರರು ಹೇಳುವುದು ಏನೆಂದರೆ ನಿಮ್ಮ ವಾರ್ಷಿಕ ಆದಾಯದ 20 ಪಟ್ಟು ಹಣ ನಿವೃತ್ತಿಯ ನಂತರದ ಬದುಕಿನ ಖರ್ಚು ವೆಚ್ಚಗಳಿಗೆ ಅವಶ್ಯಕ ಅಂತ. ಮತ್ತೆ ಕೆಲವರು 30 ಪಟ್ಟು ಅವಶ್ಯಕ ಎನ್ನುತ್ತಾರೆ. (Retirement Planning) ಅಂದರೆ ಹಣದುಬ್ಬರವನ್ನು ಲೆಕ್ಕಾಚಾರ ಹಾಕಿ ಈ ಮೊತ್ತ ಅಗತ್ಯ ಎನ್ನುತ್ತಾರೆ.
ಬದುಕಿಗೊಂದು ಗುರಿ ಇರುವಂತೆ ನಾವೆಲ್ಲರೂ ಹಣಕಾಸು ಗುರಿಗಳನ್ನು ಹೊಂದಬೇಕಾಗುತ್ತದೆ. ಅದು ನಿಮ್ಮ ಮಕ್ಕಳ ಶಿಕ್ಷಣ ಅಥವಾ ವಿವಾಹಕ್ಕೆ ಮಾಡುವ ಉಳಿತಾಯ, ಕಾರು ಅಥವಾ ಮನೆ ಖರೀದಿ, ರಜಾ ದಿನ ನಿವೃತ್ತಿಯ ಉಳಿತಾಯವೇ ಆಗಿರಬಹುದು. ಆದರೆ ಈ ಗುರಿಗಳಲ್ಲಿ ಅತ್ಯಂತ ಮಹತ್ವದ್ದು ನಿಮ್ಮದೇ ನಿವೃತ್ತಿಯ ಬದುಕಿಗೆ ಮಾಡುವ ಉಳಿತಾಯ. ಆದರೆ ದುರದೃಷ್ಟವಶಾತ್ ಬಹಳ ಮಂದಿ ಇದನ್ನು ಕಡೆಗಣಿಸುತ್ತಾರೆ.
ಸರ್ಕಾರಿ ಉದ್ಯೋಗಿಗಳು ತಮ್ಮ ನಿವೃತ್ತಿಯ ಬದುಕಿಗೆ (post retirement life) ಪಿಂಚಣಿಯನ್ನು (pension) ಅವಲಂಬಿಸಬಹುದು. ಇತರರು ತಮ್ಮದೇ ಹಣಕಾಸು ವ್ಯವಸ್ಥೆಯನ್ನು ಮಾಡಬಹುದು. ಖಾಸಗಿ ವಲಯದಲ್ಲಿ ಉದ್ಯೋಗಿಗಳ ಸಂಬಳದ ಒಂದು ಭಾಗ ಉದ್ಯೋಗಿಗಳ ಭವಿಷ್ಯನಿಧಿ (Employees provident fund) ಖಾತೆಗೆ ಹೋಗುತ್ತದೆ. ಆದರೆ ಇಪಿಎಫ್ ಒಂದೇ ಈಗ ಸಾಕಾಗುವುದಿಲ್ಲ.
ಹಾಗಾದರೆ ನೀವು ನಿಮ್ಮ ನಿವೃತ್ತಿ ಬದುಕಿಗೆ ಎಷ್ಟು ಉಳಿತಾಯ ಮಾಡಬೇಕು. ಇಲ್ಲಿ ಕೆಲವು ಆಯ್ಕೆಗಳನ್ನು ನೀಡಲಾಗಿದೆ.
ಇಪಿಎಫ್ ಮತ್ತು ಪಿಂಚಣಿ (EPF and pension) :
ಕಳೆದ 2004ರಲ್ಲಿ ಸರ್ಕಾರ 2004ರ ಜನವರಿ ಬಳಿಕ ಸೇರುವ ಎಲ್ಲ ಸರ್ಕಾರಿ ಉದ್ಯೋಗಿಗಳಿಗೆ ( ರಕ್ಷಣಾ ಸೇವೆಗಳನ್ನು ಹೊರತುಪಡಿಸಿ) ಡಿಫೈನ್ಡ್ ಬೆನಿಫಿಟ್‌ನಿಂದ (defined benefit-DB ) ಡಿಫೈನ್ಡ್ ಕಾಂಟ್ರಿಬ್ಯೂಷನ್‌ಗೆ (defined contribution-DC ) 2004ಕ್ಕೆ ಮೊದಲು ಸೇವೆಗೆ ಸೇರಿದವರು DB ಯಿಂದ ಪಿಂಚಣಿ ಪಡೆಯಬಹುದು. ಮಾತ್ರವಲ್ಲದೆ ಉದ್ಯೋಗಿಗಳು ನ್ಯಾಶನಲ್ ಪೆನ್ಷನ್ ಸಿಸ್ಟಮ್‌ಗೆ (NPS) ಕಡ್ಡಾಯವಾಗಿ ದೇಣಿಗೆ ನೀಡಬೇಕು.
ನ್ಯಾಶನಲ್ ಪೆನ್ಷನ್ ಸಿಸ್ಟಮ್ ಅಥವಾ ಎನ್‌ಪಿಎಸ್ ಸ್ವಯಂಪ್ರೇರಿತ ನಿವೃತ್ತಿ ಉಳಿತಾಯ ಯೋಜನೆಯಾಗಿದ್ದು, ಚಂದಾದಾರರಿಗೆ ವ್ಯವಸ್ಥಿತವಾಗಿ ಉಳಿತಾಯ ಮಾಡಲು ಸಹಕರಿಸುತ್ತದೆ. ಎನ್‌ಪಿಎಸ್‌ನಿಂದ ಎಕ್ಸಿಟ್ ಆಗುವ ಸಂದರ್ಭ ಪಿಂಚಣಿ ಪಡೆಯಲು ಪಿಎಫ್‌ಆರ್‌ಡಿಎ ನೆಟ್ ವರ್ಕ್‌ನಲ್ಲಿರುವ ಲೈಫ್ ಇನ್ಷೂರೆನ್ಸ್ ಕಂಪನಿಯಿಂದ ಲೈಫ್ ಆನ್ಯುಯಿಟಿ ಪ್ಲಾನ್ ಅನ್ನು ಖರೀದಿಸಬಹುದು. ಜತೆಗೆ ಪಿಂಚಣಿ ನಿಧಿಯ ಒಂದು ಭಾಗವನ್ನು ಲಂಪ್ಸಮ್ ಆಗಿ ಪಡೆಯಬಹುದು. ಎನ್‌ಪಿಎಸ್ ಬಗ್ಗೆ ನಿಗಾ ವಹಿಸಲು ಮತ್ತು ಜಾರಿಗೆ ತರಲು ಪಿಎಫ್‌ಆರ್‌ಡಿಎ ನೋಡಲ್ ಏಜೆನ್ಸಿಯಾಗಿದೆ.
ಖಾಸಗಿ ವಲಯದ ಉದ್ಯೋಗಿಗಳಿಗೆ ಎನ್‌ಪಿಎಸ್ ಐಚ್ಛಿಕ. ಎಂಪ್ಲಾಯೀಸ್ ಪ್ರಾವಿಡೆಂಟ್ ಫಂಡ್ (EPF) ಕಡ್ಡಾಯ. ವೇತನದಾರ ಉದ್ಯೋಗಿಗಳು ಎಂಪ್ಲಾಯೀಸ್ ಪ್ರಾವಿಡೆಂಟ್ ಫಂಡ್‌ಗೆ ತಮ್ಮ ಮೂಲ ವೇತನದ 12% ಪಾಲನ್ನು ಪ್ರತಿ ತಿಂಗಳು ದೇಣಿಗೆ ನೀಡಬೇಕಾಗುತ್ತದೆ. ಉದ್ಯೋಗದಾತರು ಅಥವಾ ಕಂಪನಿ ಕೂಡ ಅಷ್ಟೇ ಮೊತ್ತವನ್ನು ನೀಡಬೇಕು. ಆದರೆ ಉದ್ಯೋಗದಾತರು ನೀಡುವ 12% ಮೊತ್ತದಲ್ಲಿ ಕೇವಲ 3.67% ಮಾತ್ರ ಇಪಿಎಫ್‌ಗೆ ಹೋಗುತ್ತದೆ. ಉಳಿದ 8.33% ಮೊತ್ತವು ಉದ್ಯೋಗಿಗಳ ಪಿಂಚಣಿ ನಿಧಿಗೆ (EPS) ಹೋಗುತ್ತದೆ.
ಇಪಿಎಫ್ ಮೇಲಿನ ಬಡ್ಡಿ ದರವನ್ನು ಸರ್ಕಾರ ಪ್ರತಿ ವರ್ಷ ನಿರ್ಧರಿಸುತ್ತದೆ. ಸರ್ಕಾರಿ ಬಾಂಡ್‌ಗಳ ಉತ್ಪತ್ತಿಯನ್ನು ಇದು ಆಧರಿಸಿದೆ. ಮಾಸಿಕ ಆಧಾರದಲ್ಲಿ ಬಡ್ಡಿ ಲೆಕ್ಕಾಚಾರ ಹಾಕಿದರೂ ಆರ್ಥಿಕ ವರ್ಷದ ಕೊನೆಗೆ ಖಾತೆಗೆ ಜಮೆ ಮಾಡಲಾಗುತ್ತದೆ.
ಸ್ವಯಂ ಪ್ರೇರಿತ ಉಳಿತಾಯ (Voluntary savings): ನೀವು ನಿವೃತ್ತಿಯ ಕಾಲದ ಬದುಕಿಗೆ ಬೇಕಾದ ಹಣಕಾಸು ವ್ಯವಸ್ಥೆಯನ್ನು ನೀವಾಗಿಯೇ ಮಾಡಿಕೊಳ್ಳಲು ಈಗ ಹಲವು ಆಯ್ಕೆಗಳಿವೆ. ಅವುಗಳು ಯಾವುದು ಎಂದರೆ ಸಾರ್ವಜನಿಕ ಭವಿಷ್ಯ ನಿಧಿ ಅಥವಾ ಪಬ್ಲಿಕ್ ಪ್ರಾವಿಡೆಂಟ್ ಫಂಡ್ (Public provident fund -PPF ), NPS, ಅಟಲ್ ಪಿಂಚಣಿ ಯೋಜನೆ, ಮ್ಯೂಚುವಲ್ ಫಂಡ್‌ಗಳಲ್ಲಿ ಲಭ್ಯವಿರುವ ರಿಟೈರ್‌ಮೆಂಟ್ ಪ್ಲಾನ್, ಇನ್ಷೂರೆನ್ಸ್ ಕಂಪನಿಗಳ ಪಿಂಚಣಿ ನಿಧಿಗಳು, ಬ್ಯಾಂಕ್‌ಗಳ ಫಿಕ್ಸೆಡ್ ಡೆಪಾಸಿಟ್ ಇತ್ಯಾದಿ ಆಯ್ಕೆಗಳನ್ನು ಪರಿಗಣಿಸಬಹುದು. ನೀವು ಸ್ವಯಂ ಪ್ರೇರಿತರಾಗಿ ನಿವೃತ್ತಿಯ ಬದುಕಿಗೆ ಉಳಿತಾಯ ಮಾಡುವುದು ಮುಖ್ಯ. ಏಕೆಂದರೆ ಇಪಿಎಫ್, ಎನ್‌ಪಿಎಸ್ ಮೊತ್ತ ಸಾಲದೆ ಇರಬಹುದು.
ಇದನ್ನೂ ಓದಿ: Vistara Money Plus : ಮಕ್ಕಳಿಗೆ ಕ್ರೆಡಿಟ್ ಕಾರ್ಡ್ ಕೊಡುವಾಗ ಇರಲಿ ಎಚ್ಚರ, ವೀಕ್ಷಿಸಿ ವಿಸ್ತಾರ ಮನಿ ಪ್ಲಸ್ ವಿಡಿಯೊ
ಬಹುತೇಕ ಹಣಕಾಸು ಪ್ಲಾನರ್ಸ್ ಪ್ರಕಾರ ನಿಮ್ಮ ವಾರ್ಷಿಕ ಆದಾಯದ 20 ಪಟ್ಟು ಮೌಲ್ಯಕ್ಕೆ ಸಮವಾದ ನಿವೃತ್ತಿ ನಿಧಿಯನ್ನು ನೀವು ಹೊಂದಬೇಕು. ಇನ್ನು ಕೆಲವರ ಪ್ರಕಾರ 30 ಪಟ್ಟು ಬೇಕು. ಆದ್ದರಿಂದ ಪ್ರತಿ ತಿಂಗಳು ನಿಮ್ಮ ಖರ್ಚು ವೆಚ್ಚಗಳ ಜತೆಗೆ ನಿವೃತ್ತಿಯ ಕಾಲದ ಬದುಕಿಗೆ ಕೂಡ ಉಳಿತಾಯ ಮಾಡಿಕೊಳ್ಳಲು ಮರೆಯದಿರಿ.
ನಿವೃತ್ತಿಯ ಕಾಲಕ್ಕೆ ಉಳಿತಾಯ ಹೇಗೆ?: ಮೊದಲು ನಿಮ್ಮ ಮಾಸಿಕ ವೆಚ್ಚವನ್ನು ಲೆಕ್ಕ ಹಾಕಿ. ಬಳಿಕ 5% ಹಣದುಬ್ಬರವನ್ನು ಸೇರಿಸಿ.ನಿವೃತ್ತಿಗೆ ಉಳಿದಿರುವ ವರ್ಷವನ್ನು ಪರಿಗಣಿಸಿ ಕೂಡಿಸಿ. ಆಗ ನಿವೃತ್ತಿಯ ಕಾಲಕ್ಕೆ ನಿಮ್ಮ ವೆಚ್ಚ ಎಷ್ಟಿರುತ್ತದೆ ಎಂಬುದನ್ನು ತಿಳಿಸುತ್ತದೆ. ಬಳಿಕ ಉಳಿತಾಯವನ್ನು ಆರಂಭಿಸಿ.