Site icon Vistara News

ವಿಸ್ತಾರ Explainer | ಬೆಲೆ ಏರಿಕೆಯ ನಡುವೆ ಅಕ್ಕಿ, ಗೋಧಿ, ಮೊಸರು, ಮಜ್ಜಿಗೆಗೂ ಟ್ಯಾಕ್ಸ್‌ ಬೇಕಿತ್ತೇ?

gst on food

ಬೆಂಗಳೂರು: ಈ ಪ್ರಶ್ನೆ ಇಂದು ದಿನವಿಡೀ ರಾಜಕೀಯ, ಸಾಮಾಜಿಕ ವಲಯದಲ್ಲಿ ಚರ್ಚೆಯಾಯಿತು. ” ಅನ್ನಕ್ಕೆ ಕೂಡ ಜಿಎಸ್‌ಟಿ ಹಾಕಿದ್ದೇಕೆ?ʼʼ ಎಂದು ಪ್ರತಿಪಕ್ಷಗಳು ಕಟುವಾಗಿ ಪ್ರಶ್ನಿಸಿವೆ. ಬಿಜೆಪಿಯ ಬಹುತೇಕ ನಾಯಕರು ಗಪ್‌ಚುಪ್‌ ಆಗಿದ್ದಾರೆ. ಬಡವನೇ ಇರಲಿ, ಶ್ರೀಮಂತನೇ ಇರಲಿ, ಅನ್ನ, ಮೊಸರು, ಮಜ್ಜಿಗೆ ನಿತ್ಯ ಬೇಕು. ಹೀಗಾಗಿ ಇದರ ಮೇಲೆ ತೆರಿಗೆ ಹಾಕುತ್ತೀರಾ ಎಂದು ಪ್ರಶ್ನಿಸಿದರೆ, ಅರಗಿಸಿಕೊಳ್ಳುವುದು ಭಾವನಾತ್ಮಕವಾಗಿ ಸುಲಭವಲ್ಲ. ಮಾತ್ರವಲ್ಲದೆ ಈಗ ಹಣದುಬ್ಬರ ಜಿಗಿದಿದೆ. ಎಲ್ಲ ಕಡೆಯೂ ಬೆಲೆ ಏರಿಕೆಗೆ ಜನ ತತ್ತರಿಸಿದ್ದಾರೆ. ಇಂಥ ಸಂಕಷ್ಟದ ಕಾಲದಲ್ಲಿ ಜಿಎಸ್‌ಟಿ ವಿನಾಯಿತಿ ರದ್ದುಪಡಿಸಿದ್ದು ಎಷ್ಟು ಸರಿ, ಹಣದುಬ್ಬರ ಇಳಿಯುವ ತನಕ ಕಾಯಬಹುದಿತ್ತಲ್ಲವೇ ಎಂಬ ವಸ್ತುನಿಷ್ಠ ಪ್ರಶ್ನೆ ಈಗ ಉಂಟಾಗಿದೆ.

ಒಂದು ಕಡೆ ಪ್ರಧಾನಿ ನರೇಂದ್ರ ಮೋದಿಯವರನ್ನೇ ಗುರಿಯಾಗಿಸಿ ಪ್ರತಿಪಕ್ಷಗಳು ವಾಗ್ದಾಳಿ ನಡೆಸಿದ್ದರೆ, ಮತ್ತೊಂದು ಕಡೆ ಕೇಂದ್ರ ಸರ್ಕಾರ ಕೆಲವು ಸ್ಪಷ್ಟನೆಗಳನ್ನು ಕೊಟ್ಟಿದೆ. ಅವುಗಳಲ್ಲಿ ಮುಖ್ಯವಾಗಿ, ಮಾರಾಟಕ್ಕೆ ಮುನ್ನ ಪ್ಯಾಕೇಟ್‌ಗಳಲ್ಲಿ ಸಿದ್ಧಪಡಿಸಿದ ಹಾಗೂ ನೋಂದಾಯಿತ ಬ್ರ್ಯಾಂಡ್‌ ಅಲ್ಲದಿರುವ, ೨೫ ಕೆ.ಜಿಗಿಂತ ಹೆಚ್ಚಿನ ತೂಕ ಇರುವ ಆಹಾರ ಧಾನ್ಯ, ಹಿಟ್ಟುಗಳಿಗೆ ೫% ಜಿಎಸ್‌ಟಿ ಅನ್ವಯಿಸುವುದಿಲ್ಲ ಎಂದು ತಿಳಿಸಿದೆ. ಆದ್ದರಿಂದ ಗೋಣಿಚೀಲಗಳಲ್ಲಿ ಕ್ವಿಂಟಾಲ್‌ಗಟ್ಟಲೆ ಖರೀದಿಸುವ ವರ್ತಕರಿಗೆ ೫% ಜಿಎಸ್‌ಟಿ ಬರುವುದಿಲ್ಲ. ಅವರು ಅದನ್ನು ಲೂಸ್‌ ಆಗಿ ಜಿಎಸ್‌ಟಿ ಇಲ್ಲದೆ ಮಾರಾಟ ಮಾಡಬಹುದು. ಆದ್ದರಿಂದ ಪ್ರಿ-ಪ್ಯಾಕೇಜ್ಡ್‌ ಎಂದರೆ ಯಾವುದು ಎಂದು ತಿಳಿದುಕೊಳ್ಳುವುದು ಇಲ್ಲಿ ನಿರ್ಣಾಯಕ.

ಜಿಎಸ್‌ಟಿ ಪರಿಷ್ಕರಣೆಗೆ ಕಾಲ ಅಪಕ್ವ? ಜಿಎಸ್‌ಟಿ ದರ ಪರಿಷ್ಕರಣೆಗೆ ಕಾಲ ಪಕ್ವವಾಗಿಲ್ಲ. ಈಗ ಹಣದುಬ್ಬರ ಉನ್ನತ ಮಟ್ಟದಲ್ಲಿದೆ. ಮಾರುಕಟ್ಟೆಯಲ್ಲಿ ಅನಿಶ್ಚಿತತೆ ಮುಂದುವರಿದಿದೆ. ಜನತೆ ಸಂಕಷ್ಟದಲ್ಲಿರುವುದರಿಂದ ಜಿಎಸ್‌ಟಿ ದರವನ್ನು ಹೆಚ್ಚಿಸಲು ಸೂಕ್ತ ಸಂದರ್ಭವಲ್ಲ ಎನ್ನುತ್ತಾರೆ ತೆರಿಗೆ ತಜ್ಞರು.

ತೆರಿಗೆ ನೆಲೆ ವಿಸ್ತರಣೆಗೆ ವಿನಾಯಿತಿ ರದ್ದು?

ಹಾಲು, ಮೊಸರು, ಅಕ್ಕಿ, ಗೋಧಿ, ರಾಗಿ ಇತ್ಯಾದಿ ಆಹಾರ ವಸ್ತುಗಳ ಬಳಕೆ ಸಹಜವಾಗಿ ವ್ಯಾಪಕ ಮತ್ತು ಅದು ಜೀವನಕ್ಕೆ ಅವಶ್ಯಕ. ಇದೇ ಕಾರಣಕ್ಕಾಗಿ ಅವುಗಳಿಗೆ ತೆರಿಗೆಯಲ್ಲಿ ವಿನಾಯಿತಿ ನೀಡಲಾಗಿತ್ತು. ಆದರೆ ತೆರಿಗೆ ತಜ್ಞರ ಪ್ರಕಾರ ತೆರಿಗೆ ವಿನಾಯಿತಿ ನೀಡುವ ಪಟ್ಟಿ ದೊಡ್ಡದಿದ್ದರೆ, ತೆರಿಗೆಯ ನೆಲೆ ವಿಸ್ತರಣೆ ಆಗುವುದಿಲ್ಲ. ತೆರಿಗೆಯ ನೆಲೆ ವಿಸ್ತರಣೆ ಆಗದಿದ್ದರೆ ತೆರಿಗೆ ಸಂಗ್ರಹ ಸೊರಗುತ್ತದೆ. ಸರ್ಕಾರಕ್ಕೆ ಜನ ಕಲ್ಯಾಣ ಯೋಜನೆಗಳು, ಮೂಲಸೌಕರ್ಯ ಅಭಿವೃದ್ಧಿಗೆ ಸಂಪನ್ಮೂಲದ ಕೊರತೆಯಾಗುತ್ತದೆ. ದೇಶ ಅಭಿವೃದ್ಧಿಯಲ್ಲಿ ಹಿಂದುಳಿಯುತ್ತದೆ. ಆದ್ದರಿಂದ ತೆರಿಗೆ ನೆಲೆ ವಿಸ್ತರಣೆ ಆಗಬೇಕು ಮತ್ತು ವಿನಾಯಿತಿಯನ್ನು ಕಡಿಮೆ ಮಾಡುತ್ತಾ ಹೋಗಬೇಕು ಎಂಬುದು ತಾಂತ್ರಿಕ ದೃಷ್ಟಿಯಿಂದ ಸರಿ ಎನ್ನುತ್ತಾರೆ ತೆರಿಗೆ ಕಾನೂನುಗಳನ್ನು ಬಲ್ಲವರು. ಮತ್ತೊಂದು ಅಂಶವೇನೆಂದರೆ, ತೆರಿಗೆ ನೆಲೆ ವಿಸ್ತರಣೆಯಾಗಿ ಸಂಗ್ರಹ ಹೆಚ್ಚಿದರೆ, ಜಿಎಸ್‌ಟಿಯ ಶ್ರೇಣಿಗಳನ್ನು ತಗ್ಗಿಸಬಹುದು. ಅದರಿಂದ ಎಲ್ಲರಿಗೂ ತೆರಿಗೆ ಹೊರೆ ಇಳಿಸಲು ಅವಕಾಶ ಉಂಟಾಗುತ್ತದೆ. ಕಳೆದ ಕೆಲ ವರ್ಷಗಳಲ್ಲಿ ಹಲವಾರು ಉತ್ಪನ್ನ ಮತ್ತು ಸೇವೆಗಳ ತೆರಿಗೆ ಇಳಿಕೆಯಾಗಿತ್ತು. ಆದರೆ ಈಗ ಬೇರೆ ಬೇರೆ ಕಾರಣಗಳಿಂದಾಗಿ ಹಣದುಬ್ಬರ ಹೆಚ್ಚಳವಾಗಿದೆ. ಹೀಗಾಗಿ ದರ ಪರಿಷ್ಕರಣೆಗೆ ಕಾಲ ಪಕ್ವವಾದಂತೆ ಕಾಣಿಸುತ್ತಿಲ್ಲ ಎನ್ನುತ್ತಾರೆ ವಾಣಿಜ್ಯ ತೆರಿಗೆ ಹಾಗೂ ಜಿಎಸ್‌ಟಿ ತಜ್ಞರಾದ ಎಸ್. ಎಂ ಹೆಗಡೆ ಅವರು.

ಜಿಎಸ್‌ಟಿ ಮಂಡಳಿಯೇ ಹಿಂತೆಗೆದುಕೊಳ್ಳಬೇಕು

ಜಿಎಸ್‌ಟಿ ಮಂಡಳಿಯಲ್ಲಿ ತೆರಿಗೆ ದರಗಳು ಪರಿಷ್ಕರಣೆಯಾಗಿವೆ. ಅದನ್ನು ಮತ್ತೆ ಮರುಪರಿಶೀಲನೆ ಅಥವಾ ರಾಷ್ಟ್ರಾದ್ಯಂತ ಹಿಂತೆಗೆದುಕೊಳ್ಳುವ ನಿರ್ಧಾರವನ್ನು ಕೂಡ ಜಿಎಸ್‌ಟಿ ಮಂಡಳಿಯೇ ಕೈಗೊಳ್ಳಬೇಕು. ಕೇಂದ್ರ ಸರ್ಕಾರ ಅದನ್ನು ಬದಲಿಸಲು ಸಾಧ್ಯವಾಗುವುದಿಲ್ಲ. ಜಿಎಸ್‌ಟಿ ಮಂಡಳಿಯಲ್ಲಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳ ಪ್ರಾತಿನಿಧ್ಯ ಇರುತ್ತದೆ. ಎರಡೂ ಕಡೆಗಳ ಒಮ್ಮತದ ಬಳಿಕ ನಿರ್ಣಯಗಳನ್ನು ಅಂಗೀಕರಿಸಲಾಗುತ್ತದೆ.

ಅಕ್ಕಿಗೆ ಜಿಎಸ್‌ಟಿ ಇಳಿಸಬಹುದೇ?: ಜಿಎಸ್‌ಟಿಯಲ್ಲಿ 5%, 12%, 18%,28% ಎಂಬ ನಾಲ್ಕು ಮುಖ್ಯವಾದ ಶ್ರೇಣಿಗಳಿವೆ. ಜತೆಗೆ ಜ್ಯುವೆಲ್ಲರಿಗೆ ೩% ಜಿಎಸ್‌ಟಿ ಇದೆ. ಅಂದರೆ ಒಂದು ಉಂಗುರವನ್ನು ನೀವು ಖರೀದಿಸಿದರೂ, ಅದಕ್ಕೆ ೩% ಜಿಎಸ್‌ಟಿ ತಗಲುತ್ತದೆ. ವಜ್ರಕ್ಕೆ ೧.೫% ಜಿಎಸ್‌ಟಿ ಇದೆ. ಹಾಗಾದರೆ ಅಕ್ಕಿಗೆ ೫% ಜಿಎಸ್‌ಟಿ ಬೇಕೆ? ೩%ಕ್ಕೆ ಇಳಿಸಬಹುದಲ್ಲವೇ ಎಂಬ ಪ್ರಶ್ನೆ ಇದೆ. ಜಿಎಸ್‌ಟಿ ಮಂಡಳಿ ನಿರ್ಧರಿಸಿದರೆ ಮಾಡಬಹುದು. ಆದರೆ ಅಂಥ ಸಾಧ್ಯತೆ ಕ್ಷೀಣಿಸಿದೆ. ಏಕೆಂದರೆ ಜಿಎಸ್‌ಟಿಯಲ್ಲಿ ಈಗಾಗಲೇ ೬ ಶ್ರೇಣಿಗಳಿವೆ. ವಾಸ್ತವವಾಗಿ ಜಿಎಸ್‌ಟಿಯ ಯಶಸ್ಸಿಗೆ ಶ್ರೇಣಿಗಳನ್ನು ಕಡಿಮೆ ಮಾಡುತ್ತಾ ಹೋಗಬೇಕು. ಅದರ ಬದಲಿಗೆ ಹೆಚ್ಚಿಸಿದರೆ ಮತ್ತೆ ಹಳೆಯ ಪದ್ಧತಿಗೆ ಮರಳಿದಂತಾಗಲಿದೆ ಎನ್ನುತ್ತಾರೆ ತೆರಿಗೆ ತಜ್ಞರು.

5% ಜಿಎಸ್‌ಟಿಯ ಪರಿಣಾಮಗಳೇನು?

ಪ್ರಿ-ಪ್ಯಾಕೇಜ್ಡ್‌ ಆಹಾರ ಧಾನ್ಯ, ಬೇಳೆಕಾಳುಗಳಿಗೆ, ಹಿಟ್ಟುಗಳಿಗೆ ೫% ಜಿಎಸ್‌ಟಿಯನ್ನು ವಿಧಿಸುವುದರಿಂದ ಉಂಟಾಗುವ ಪರಿಣಾಮಗಳು ಭಿನ್ನವಾಗಿರುತ್ತವೆ. ಎಲ್ಲರಿಗೂ ಒಂದೇ ರೀತಿ ಇರುವುದಿಲ್ಲ. ಈಗ ಶಾಪಿಂಗ್‌ ಮಾಲ್‌ನಲ್ಲೂ ಪ್ಯಾಕೇಟ್‌ ರಹಿತವಾಗಿ, ಲೂಸ್‌ ಆಗಿ ಆಹಾರ ಧಾನ್ಯಗಳು ಮಾರಾಟವಾಗುತ್ತವೆ. ಅವುಗಳಿಗೆ ಜಿಎಸ್‌ಟಿ ಅನ್ವಯವಾಗುವುದಿಲ್ಲ. ಆದರೆ ಪ್ಯಾಕೇಟ್‌ಗಳಲ್ಲಿ ಮಾರಾಟವಾಗುವ ಧಾನ್ಯಗಳನ್ನು ಎಲ್ಲರೂ ಕೊಳ್ಳುವುದಿಲ್ಲ. ಅವುಗಳು ದುಬಾರಿಯಾಗಲಿದೆ. ಆದರೆ ಹಾಲು, ಮಜ್ಜಿಗೆ, ಮೊಸರಿನ ಮೇಲಿನ ಜಿಎಸ್‌ಟಿಯಿಂದ ಹೆಚ್ಚು ಮಂದಿಗೆ ದರ ಏರಿಕೆಯ ಬಿಸಿ ತಟ್ಟಬಹುದು. ಗ್ರಾಮೀಣ ಪ್ರದೇಶಗಳಲ್ಲಿ ಈಗಲೂ ಪ್ಯಾಕೇಟ್‌ ರಹಿತ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟ ಚಾಲ್ತಿಯಲ್ಲಿರುವುದರಿಂದ ಗ್ರಾಮಾಂತರ ಪ್ರದೇಶಗಳಲ್ಲಿ ದರ ಏರಿಕೆಯಾಗದು ಎನ್ನುತ್ತಾರೆ ತೆರಿಗೆ ತಜ್ಞರು.

ಪ್ಯಾಕೇಜ್ಡ್‌ ಅಂದರೆ ಗೋಣಿ ಚೀಲದಲ್ಲಿ ತರುವ ಬೇಳೆ ಕಾಳಲ್ಲ

ಈಗ ೫% ಜಿಎಸ್‌ಟಿ ಅನ್ವಯವಾಗಿರುವುದು ಪ್ಯಾಕೇಜ್ಡ್‌ ಆಹಾರ ಧಾನ್ಯಗಳಿಗೆ ಮಾತ್ರ. ಅಂದರೆ ಗೋಣಿ ಚೀಲಗಳಲ್ಲಿ ಮಾರಾಟವಾಗುವ, ೨೫ ಕೆ.ಜಿಗಿಂತ ಹೆಚ್ಚಿನ ಧಾನ್ಯಗಳಿಗೆ ಅಲ್ಲ. ಸಮಸ್ಯೆ ಏನೆಂದರೆ ಮಾರಾಟಗಾರರು ಎಲ್ಲ ದರಗಳನ್ನು ಒಂದೇ ರೀತಿಯಲ್ಲಿ ನಿಗದಿಪಡಿಸಿ ಮಾರಾಟ ಮಾಡುತ್ತಾರೆ. ಗುಣಮಟ್ಟದ ಹೆಸರಿನಲ್ಲೂ ದರವನ್ನು ಹೆಚ್ಚಿಸುವ ಸಾಧ್ಯತೆ ಇರುತ್ತದೆ. ಹೀಗಾಗಿ ದರಗಳನ್ನು ನಿಯಂತ್ರಿಸುವುದು ಅಷ್ಟು ಸುಲಭವಲ್ಲ ಎನ್ನುತ್ತಾರೆ ವಾಣಿಜ್ಯ ತೆರಿಗೆ ತಜ್ಞರು. 25 ಕೆ.ಜಿ ಅಥವಾ ೨೫ ಲೀಟರ್‌ಗಿಂತ ಕಡಿಮೆ ಇರುವ ಹಾಗೂ ಪ್ಯಾಕೇಟ್‌ಗಳಲ್ಲಿ ಮಾರಾಟ ಮಾಡುವ ಆಹಾರ ಧಾನ್ಯಗಳು, ಹಿಟ್ಟುಗಳಿಗೆ ೫% ಜಿಎಸ್‌ಟಿ ಅನ್ವಯವಾಗಲಿದೆ.

ಜಿಎಸ್‌ಟಿ ಸಂಗ್ರಹ ಹೆಚ್ಚಳವಾಗಬಹುದೇ?: ದಿನ ಬಳಕೆಯ ಪ್ರಿ-ಪ್ಯಾಕೇಜ್ಡ್ ಆಹಾರ ವಸ್ತುಗಳ ಮೇಲಿನ ಜಿಎಸ್‌ಟಿ ವಿನಾಯಿತಿ ರದ್ದು ಹಾಗೂ ೫% ತೆರಿಗೆಯ ಪರಿಣಾಮ ಮುಂಬರುವ ತಿಂಗಳುಗಳಲ್ಲಿ ಜಿಎಸ್‌ಟಿ ಸಂಗ್ರಹದಲ್ಲಿ ಏರಿಕೆಯಾಗುವುದು ಖಚಿತ. ಆದರೆ ಇಷ್ಟೇ ಹೆಚ್ಚಳವಾಗಬಹುದು ಎಂದು ಹೇಳಲು ಸೂಕ್ತ ಅಂಕಿ ಅಂಶಗಳು ಇಲ್ಲ ಎನ್ನುತ್ತಾರೆ ತಜ್ಞರು.

Exit mobile version