Site icon Vistara News

Right to repair : ರಿಪೇರಿ ಈಗ ನಿಮ್ಮ ಹಕ್ಕು, ಪಾರ್ಟ್‌ ಸಿಗದಿದ್ದರೆ ಕಂಪನಿಯಿಂದಲೇ ಸಿಗಲಿದೆ ಹೊಸ ಪ್ರಾಡಕ್ಟ್‌

Right to repair Repair is now your right if the part is not available the company should give you a new product

#image_title

ಬೆಂಗಳೂರು: ನಿಮ್ಮ ಹೊಸ ಮೊಬೈಲ್‌ ಕೆಳಗೆ ಬಿದ್ದು ಸ್ಕ್ರೀನ್‌ ಮುರಿದಿದೆಯೇ? ಅಥವಾ ಬ್ಯಾಟರಿಯನ್ನು ಬದಲಿಸಬೇಕೇ, ಮೊಬೈಲ್‌ನ ಅಧಿಕೃತ ಸರ್ವೀಸ್‌ ಸೆಂಟರ್‌ನಲ್ಲಿ ಇದಕ್ಕೆ ಸಾವಿರಾರು ರೂಪಾಯಿ ಖರ್ಚು ಆದೀತು. ಇದಕ್ಕೆ ಪರಿಹಾರ ಏನು? ಸ್ಥಳೀಯ ಸ್ಟೋರ್‌ನಲ್ಲಿ ರಿಪೇರಿ ಮಾಡಬಹುದು. ಥರ್ಡ್‌ ಪಾರ್ಟಿಗಳು ಬ್ರಾಂಡ್‌ಗಿಂತ 10% ಕಡಿಮೆ ದರದಲ್ಲಿ ರಿಪೇರಿ ಮಾಡಿಕೊಡಬಹುದು. ಆದರೆ ಇನ್ನೂ ವಾರಂಟಿ ಇರುವುದರಿಂದ ಹೇಗೆ ಸಾಧ್ಯ ಎನ್ನುತ್ತೀರಾ?

ಅದೂ ಈಗ ಸಾಧ್ಯವಿದೆ! ನಿಮ್ಮ ಮೊಬೈಲ್‌, ಲ್ಯಾಪ್‌ ಟಾಪ್‌, ಡೆಸ್ಕ್‌ ಟಾಪ್‌, ಫ್ರಿಜ್‌, ಬೈಕ್‌, ಸ್ಕೂಟರ್‌, ಕಾರನ್ನು ಯಾವಾಗ ಬೇಕಾದರೂ, ನಿಮ್ಮ ಆಯ್ಕೆಯ ಕಡೆಗಳಲ್ಲಿ ರಿಪೇರಿ ಮಾಡುವ ಹಕ್ಕು ನಿಮಗಿದೆ. ಅದಕ್ಕಾಗಿ ಕಂಪನಿ ನಿರಾರಿಸುವಂತಿಲ್ಲ! ವಾರಂಟಿ ಅವಧಿಯಲ್ಲಿ ನಿಮಗೆ ಹತ್ತಿರದ ಅಂಗಡಿಯಲ್ಲಿ ರಿಪೇರಿ ಮಾಡಬಹುದು. ಥರ್ಡ್‌ ಪಾರ್ಟಿ ಮೂಲಕ ದುರಸ್ತಿ ಮಾಡಬಾರದು ಎಂದು ಕಂಪನಿ ತಡೆಯುವಂತಿಲ್ಲ. ನೀವು ಎಲ್ಲಿಯೇ ಯಾವುದೇ ಸಾಧನವನ್ನು ಖರೀದಿಸಿರಬಹುದು. ವಾರಂಟಿ ಅವಧಿಯಲ್ಲೂ ನಿಮಗೆ ಇಷ್ಟ ಬಂದ ಕಡೆ ದುರಸ್ತಿಪಡಿಸಬಹುದು. (Right to repair) ಅದು ನಿಮ್ಮ ಹಕ್ಕು. ಎರಡನೆಯದಾಗಿ, ಒಂದು ವೇಳೆ ನಿಮ್ಮ ಮೊಬೈಲ್‌, ಬೈಕ್‌, ಸ್ಕೂಟರ್‌, ಕಾರು ಇರಬಹುದು. ರಿಪೇರಿಗೆ ಬಿಡಿ ಭಾಗ ಸಿಗುವುದಿಲ್ಲ ಎಂದಿದ್ದರೆ, ಕಂಪನಿಯೇ ವಿಶೇಷ ಆರ್ಡರ್‌ ಮಾಡಿ ಪೂರೈಸಬೇಕು. ಅದು ಸಾಧ್ಯವಿಲ್ಲ ಎಂದಿದ್ದರೆ, ಕಂಪನಿಯೇ ಉತ್ಪನ್ನವನ್ನು ಬದಲಿಸಿ ಕೊಡಬೇಕು. ನಿರಾಕರಿಸುವಂತಿಲ್ಲ!

ಇಂಥ ಪ್ರಬಲ ಹಕ್ಕು ಭಾರತದಲ್ಲಿ ಇತ್ತೀಚೆಗೆ ಜಾರಿಗೆ ಬಂದಿದೆ. ಬಳಕೆದಾರರು, ಮುಖ್ಯವಾಗಿ ಮಧ್ಯಮ ವರ್ಗದ ಜನ ಸಾಮಾನ್ಯರ ಹಿತದೃಷ್ಟಿಯಿಂದ ಬಂದಿರುವ ಈ ಹಕ್ಕಿಗೆ ಸಂಬಂಧಿಸಿ ವಿವರಗಳನ್ನು ನೀಡಲು ಗ್ರಾಹಕ ವ್ಯವಹಾರಗಳ ಇಲಾಖೆ ಪ್ರತ್ಯೇಕ ವೆಬ್‌ ಪೋರ್ಟಲ್‌ ಅನ್ನೂ ಆರಂಭಿಸಿದೆ. ವೆಬ್‌ ಐಡಿ -( https://righttorepairindia.gov.in/index.php) ಇದರಲ್ಲಿ ಉಪಯುಕ್ತ ವಿವರಗಳು ಇವೆ. ಜತೆಗೆ ಯಾವೆಲ್ಲ ಕ್ಷೇತ್ರಗಳು ರಿಪೇರಿ ಹಕ್ಕು ಅಡಿಯಲ್ಲಿ ಬರುತ್ತವೆ ಹಾಗೂ ಈ ಕಾನೂನು ಅಡಿಯಲ್ಲಿ ನೋಂದಾಯಿತ ಬ್ರಾಂಡ್‌ಗಳ ವಿವರಗಳನ್ನೂ ಪಡೆಯಬಹುದು. ಈ ಕುರಿತ ಉಪಯುಕ್ತ ಮಾಹಿತಿ ಇಲ್ಲಿದೆ.

ರಿಪೇರಿ ಹಕ್ಕು ಅಡಿಯಲ್ಲಿ ಬರುವ ಕ್ಷೇತ್ರಗಳು (sectors covered for right to repair)

ಕೃಷಿ ಉಪಕರಣಗಳು (Farming Equipment) : ಇದರಲ್ಲಿ ಟ್ರ್ಯಾಕ್ಟರ್‌ಗಳು, ಕಂಬೈನ್‌ ಹಾವೆಸ್ಟರ್ಸ್‌, ಸ್ಪ್ರೇಯರ್‌, ಡಿಗ್ಗರ್‌, ಕಳೆ ಕೀಳುವ ಯಂತ್ರಗಳು, ಬಿತ್ತನೆ ಯಂತ್ರಗಳು ಸೇರಿಕೊಂಡಿವೆ.

ಮೊಬೈಲ್‌, ಎಲೆಕ್ಟ್ರಾನಿಕ್ಸ್‌ ಡಿಸ್‌ ಪ್ಲೇಸ್‌ ಡೇಟಾ ಸ್ಟೋರೇಜ್‌ ಕಂಪೊನ್ಮೆಂಟ್‌ (Mobiles/Electronics Displays data storage components) : ಇದರಲ್ಲಿ ಸ್ಮಾರ್ಟ್‌ ಫೋನ್‌, ಇಯರ್‌ಫೋನ್‌, ಸ್ಮಾರ್ಟ್‌ ವಾಚ್‌, ಟಾಬ್ಲೆಟ್‌, ಪೋರ್ಟೆಬಲ್‌ ಮ್ಯೂಸಿಕ್‌ ಪ್ಲೇಯರ್‌, ಯುಎಸ್‌ಬಿ ಡ್ರೈವ್‌, ಕ್ಯಾಮೆರಾ, ಗೇಮಿಂಗ್‌ ಸಾಧನಗಳು ಬರುತ್ತವೆ.

ಗ್ರಾಹಕ ಬೆಲೆಬಾಳುವ ವಸ್ತುಗಳು (Consumer Durables) : ಇದರಲ್ಲಿ ವಾಷಿಂಗ್‌ ಮೆಷೀನ್‌, ಫ್ಯಾನ್‌, ಡಿಶ್‌ ವಾಶರ್‌, ಏರ್‌ ಕಂಡೀಶನರ್‌, ಫ್ರಿಜ್‌, ಮೈಕ್ರೊವೇವ್‌, ವಾಕ್ಯೂಮ್‌ ಕ್ಲೀನರ್‌, ಕೆಟ್ಲರ್ಸ್‌, ಟೋಸ್ಟರ್ಸ್‌ , ಕುಕ್ಕರ್‌, ಸ್ಟೌವ್‌ ಬರುತ್ತವೆ.

ಆಟೊಮೊಬೈಲ್ಸ್‌ ಸಾಧನಗಳು (Automobiles Equipments) : ಇದರಲ್ಲಿ ನಾಲ್ಕು ಚಕ್ರ ವಾಹನಗಳು, ದ್ವಿ ಚಕ್ರ-ತ್ರಿ ಚಕ್ರ ವಾಹನಗಳು, ಮೆಟಲ್ಸ್‌, ಸಾಲ್ವೆಂಟ್ಸ್‌, ಗ್ಲಾಸ್‌, ಪ್ಲಾಸ್ಟಿಕ್‌ ಪಾರ್ಟ್‌, ಬ್ಯಾಟರಿ, ರಬ್ಬರ್‌ ಟೈರ್ಗಳು ಬರುತ್ತವೆ.

ಕಂಪನಿಗಳು ಅಥವಾ ಬ್ರಾಂಡ್‌ಗಳು ಏಕೆ ಈ ರಿಪೇರಿ ಹಕ್ಕು ಅಡಿ ನೋಂದಣಿ ಮಾಡುತ್ತವೆ?

ಇದರಿಂದ ವಾರಂಟಿ ಮತ್ತು ಪೋಸ್ಟ್‌ ಸೇಲ್ಸ್‌ ಸರ್ವೀಸ್‌ ವಿವರಗಳಿಗೆ ಪಾರದರ್ಶಕತೆ ಬರುತ್ತದೆ. ಕಂಪನಿ ಮತ್ತು ಗ್ರಾಹಕರ ನಡುವೆ ವಿಶ್ವಾಸ ವೃದ್ಧಿಸುತ್ತದೆ.

ರಿಪೇರಿ ಹಕ್ಕು ಅಡಿ ನೋಂದಾಯಿತ ಬ್ರಾಂಡ್‌ಗಳು:

ಆ್ಯಪಲ್‌, ಕೆಂಟ್‌ ಹೆಲ್ತ್‌ಕೇರ್‌ ಪ್ರಾಡಕ್ಟ್ಸ್‌, ಸ್ಯಾಮ್‌ಸಂಗ್‌, ಹೋಂಡಾ, ಹೀರೊ, ಬೋಟ್‌, ಹವೆಲ್ಸ್‌, ಎಚ್‌ಪಿ, ಮೈಕ್ರೊಟೆಕ್ಸ್‌, ಎಲ್‌ಜಿ, ಒಪ್ಪೊ ಕೇರ್‌, ಆರ್‌ಡಿಪಿ, ಪ್ಯಾನಸಾನಿಕ್‌, ಎಸ್‌ಎಸ್‌ಪಿ ಕಂಪ್ಯೂಟರ್ಸ್‌, ಲ್ಯುಮಿನೋಸ್‌.

ಏನಿದು ರಿಪೇರಿ ಹಕ್ಕು? ಗ್ರಾಹಕರಿಗೆ ಇದರಿಂದ ಪ್ರಯೋಜನವೇನು?

ಗ್ರಾಹಕ ವ್ಯವಹಾರ ಸಚಿವಾಲಯವು (Ministry of Consumer Affairs -MCA) ರಿಪೇರಿ ಹಕ್ಕುಗಳನ್ನು ಬಲಪಡಿಸಲು ಸಮಗ್ರ ಚೌಕಟ್ಟನ್ನು ರೂಪಿಸಲು ಕಳೆದ ವರ್ಷ ಜುಲೈನಲ್ಲಿ ಸಮಿತಿಯನ್ನು ರಚಿಸಿತ್ತು. ಈ ಚೌಕಟ್ಟು (framework) ಮಹತ್ವಪೂರ್ಣ. ಇದು ಗ್ರಾಹಕರಿಗೆ ಅವರು ಖರೀದಿಸಿದ ಉತ್ಪನ್ನಗಳನ್ನು ಯುಕ್ತ ದರದಲ್ಲಿ ರಿಪೇರಿ ಮಾಡಲು ಅವಕಾಶ ನೀಡುತ್ತದೆ. ಇದರಿಂದ ಅವರಿಗೆ ಹೊಸ ಉತ್ಪನ್ನ ಖರೀದಿಸುವ ವೆಚ್ಚ ತಪ್ಪುತ್ತದೆ ಮತ್ತು ಆರ್ಥಿಕವಾಗಿಯೂ ಅನುಕೂಲವಾಗುತ್ತದೆ. ಈ ಚೌಕಟ್ಟು ಕೃಷಿ ಸಾಧನಗಳು, ಕನ್‌ಸ್ಯೂಮರ್‌ ಡ್ಯೂರೆಬಲ್‌ ಅಂದ್ರೆ ರೆಫ್ರಿಜರೇಟರ್‌, ವಾಷಿಂಗ್‌ ಮೆಷೀನ್‌ ಇತ್ಯಾದಿಗಳು, ಆಟೊಮೊಬೈಲ್ಸ್‌ ಮತ್ತು ಆಟೊಮೊಬೈಲ್‌ ಬಿಡಿಭಾಗಗಳು ವಲಯವನ್ನು ಸದ್ಯ ಒಳಗೊಂಡಿದೆ.

ರಿಪೇರಿ ಹಕ್ಕು ಯಾವೆಲ್ಲ ದೇಶಗಳಲ್ಲಿ ಇದೆ?

ಭಾರತ ಈಗ ರಿಪೇರಿ ಹಕ್ಕುಗಳ ಮೂಲಕ ಜನ ಸಾಮಾನ್ಯರಿಗೆ ರಿಲೀಫ್‌ ನೀಡಲು ಹೊರಟಿದೆ. ವಾಸ್ತವವಾಗಿ ಜಗತ್ತಿನ ನಾನಾ ಭಾಗಗಳಲ್ಲಿ ಬೆಲೆ ಬಾಳುವ ವಸ್ತುಗಳ ದುರಸ್ತಿ ಎಂದರೆ ಜನ ಸಾಮಾನ್ಯರಿಗೆ ತ್ರಾಸದಾಯಕವೇ ಸರಿ. ಹೀಗಾಗಿ ಈಗ ಪುನರ್ಬಳಕೆ, (reuse, recylce, repair) ಮತ್ತು ದುರಸ್ತಿಗೆ ಒತ್ತು ಸಿಗುತ್ತಿದೆ. ಈ ಬಗ್ಗೆ ಗ್ರಾಹಕ ಜಾಗೃತಿ ಮೂಡಿಸಲಾಗುತ್ತಿದೆ. ಗ್ರಾಹಕ ವ್ಯವಹಾರಗಳ ಸಚಿವಾಲಯವು 23 ಪ್ರಮುಖ ಕನ್‌ಸ್ಯೂಮರ್‌ ಡ್ಯೂರೆಬಲ್‌ ಉತ್ಪಾದಕರಿಗೆ ರಿಪೇರಿ ಸೆಂಟರ್‌ಗಳು, ದುರಸ್ತಿ ದರ ಮತ್ತು ಬಿಡಿಭಾಗಗಳ ಲಭ್ಯತೆ ಬಗ್ಗೆ ವಿವರ ತಿಳಿಸುವಂತೆ ಸೂಚಿಸಿದೆ.

ಅಮೆರಿಕ, ಬ್ರಿಟನ್‌ ಮತ್ತಯ ಐರೋಪ್ಯ ದೇಶಗಳಲ್ಲಿ ರಿಪೇರಿ ಹಕ್ಕು ಇದೆ. ಆಸ್ಟ್ರೇಲಿಯಾದಲ್ಲಿ ರಿಪೇರಿ ಕೆಫೆಗಳು ಇವೆ. ರಿಪೇರಿಗೆ ಸಂಬಂಧಿಸಿ ಕಂಪನಿಗಳ ಏಕಸ್ವಾಮ್ಯ ಇದ್ದಾಗ ಗ್ರಾಹಕರಿಗೆ ವಂಚನೆಯಾಗುತ್ತದೆ. ಉದಾಹರಣೆಗೆ ವಾರಂಟಿ ಅವಧಿಯಲ್ಲಿ ಬೇರೆ ಕಡೆ ದುರಸ್ತಿ ಮಾಡಲೇಕೂಡದು, ಬಿಡಿ ಭಾಗಗಳು ಸಿಗದಿದ್ದಾಗ ದುರಸ್ತಿ ಮತ್ತು ಪರ್ಯಾಯ ವ್ಯವಸ್ಥೆ ಇಲ್ಲದಿರುವುದು ಗ್ರಾಹಕರಿಗೆ ಅನ್ಯಾಯವಾಗಲು ಕಾರಂವಾಗುತ್ತದೆ. ಈ ಹಿನ್ನೆಲೆಯಲ್ಲಿ ರಿಪೇರಿ ಹಕ್ಕು ಗ್ರಾಹಕ ಸ್ನೇಹಿಯಾಗಿದೆ. ಇದು ದುರಸ್ತಿಯ ವಿಚಾರದಲ್ಲಿ ಕಂಪನಿಗಳ ಏಕಸ್ವಾಮ್ಯದಿಂದ ಉಂಟಾಗುವ ಸಮಸ್ಯೆಗಳನ್ನು ಬಗೆಹರಿಸುತ್ತದೆ. ಗ್ರಾಹಕರಿಗೆ ಆರ್ಥಿಕವಾಗಿಯೂ ಉಳಿತಾಯ ಮಾಡುತ್ತದೆ. ಹೀಗಾಗಿ ಅವಶ್ಯಕವಾಗಿದೆ ಎನ್ನುತ್ತಾರೆ ಮಾರುಕಟ್ಟೆ ತಜ್ಞರು.

ರಿಪೇರಿ ಹಕ್ಕಿಗೆ ಕಾನೂನಿನ ಬಲ ಅಗತ್ಯ:

ರಿಪೇರಿ ಹಕ್ಕಿಗೆ ಕಾನೂನಿನ ಬಲ ಇದ್ದರೆ ಮಾತ್ರ ಹೆಚ್ಚು ಪರಿಣಾಮಕಾರಿಯಾಗಲಿದೆ. ಈ ನಿಟ್ಟಿನಲ್ಲಿ ಸರ್ಕಾರ ಕಾರ್ಯಪ್ರವೃತ್ತವಾಗಬೇಕು ಎಂಬ ವಾದವೂ ಇದೆ.

ಒಂದು ಹಳೆಯ ಟೂತ್‌ ಬ್ರಶ್‌ ಹಲವು ವಿಧಗಳಲ್ಲಿ ಉಪಯೋಗಕಕೆ ಬರುತ್ತದೆ. ಅದನ್ನು ನಿಮ್ಮ ಶೂ ಕ್ಲೀನ್‌ ಮಾಡಲು ಬಳಸಬಹುದು. ಹೇರ್‌ ಡೈ ಹಚ್ಚಲೂ ಉಪಯೋಗಿಸಬಹುದು. ಅದೇ ರೀತಿ ಅಡುಗೆ ಕೋಣೆಯ ತ್ಯಾಜ್ಯಗಳನ್ನು ಕಾಂಪೋಸ್ಟ್‌ ಗೊಬ್ಬರವಾಗಿ ಮನೆಯ ಹೂತೋಟಕ್ಕೆ ಬಳಸಬಹುದು. ಇದೇ ರೀತಿ ಬೆಲೆ ಬಾಳುವ ಎಲೆಕ್ಟ್ರಿಕಲ್‌, ಎಲೆಕ್ಟ್ರಾನಿಕ್‌ ಸಲಕರಣೆಗಳನ್ನು ಪುನರ್ಬಳಕೆ ಮಾಡಬಹುದು. ದುರಸ್ತಿಪಡಿಸಬಹುದು. ಆದರೆ ಇವತ್ತು ದುರಸ್ತಿಗೆ ಪೂರಕವಾದ ವಾತಾವರಣವನ್ನು ಸೃಷ್ಟಿಸಬೇಕಾಗಿದೆ. ಭಾರತದಲ್ಲಿ 2021-22ರಲ್ಲಿ 16 ಲಕ್ಷ ಟನ್‌ ಇ-ವೇಸ್ಟ್‌ ಉತ್ಪತ್ತಿಯಾಗಿದೆ. ಆದರೆ ಸಂಗ್ರಹಿಸಿರುವುದು ಕೇವಲ 5.27 ಲಕ್ಷ ಟನ್‌ ಮಾತ್ರ. 67% ಇ-ವೇಸ್ಟೇಜ್‌ ವಿಲೇವಾರಿಯೇ ಆಗುವುದಿಲ್ಲ. ಇದು ರಾಜ್ಯಸಭೆಯಲ್ಲಿಯೇ ತಿಳಿಸಿರುವ ಅಂಕಿ ಅಂಶ. ಚೀನಾ ಮತ್ತು ಅಮೆರಿಕದ ಬಳಿಕ ಅತಿ ಹೆಚ್ಚು ಇ-ವೇಸ್ಟೇಜ್‌ ಭಾರತದಲ್ಲಿ ಆಗುತ್ತಿದೆ.

ಇಂಥ ಹಿನ್ನೆಲೆಯಲ್ಲಿ ರಿಪೇರಿ ಹಕ್ಕು ಇ-ವೇಸ್ಟೇಜ್‌ ಅನ್ನು ಕಡಿಮೆ ಮಾಡುವುದು ಹಾಗೂ ಪುನರ್ಬಳಕೆ ನಿಟ್ಟಿನಲ್ಲಿ ನಿರ್ಣಾಯಕವಾಗಬಲ್ಲುದು. ಆದರೆ ಈ ನಿಟ್ಟಿನಲ್ಲಿ ಗ್ರಾಹಕ ಹಿತ ರಕ್ಷಣಾ ಕಾಯಿದೆಗೆ ತಿದ್ದುಪಡಿ ಆಗಬೇಕು. ಹಾಗೂ ರಿಪೇರಿ ಹಕ್ಕು ಉಲ್ಲಂಘಿಸುವ ಕಂಪನಿಗಳಿಗೆ ದಂಡ ಮತ್ತು ಕಾನೂನು ಕ್ರಮಗಳ ಬಗ್ಗೆ ಅಂತಿಮವಾಗಬೇಕು. ಜತೆಗೆ ಉತ್ಪಾದಕರನ್ನೂ ಪರಿಗಣಿಸಿ ಚೌಕಟ್ಟು ರೂಪಿಸಬೇಕಾಗಿದೆ. ಆದರೆ ಈಗ ತೆಗೆದುಕೊಂಡಿರುವ ಕ್ರಮ ಸರಿಯಾಗಿದೆ ಎನ್ನುತ್ತಾರೆ ತಜ್ಞರು.

ಉತ್ಪಾದಕ ಕಂಪನಿಗಳ ಪಾತ್ರವೇನು?

ಗ್ರಾಹಕ ವ್ಯವಹಾರಗಳ ಸಚಿವಾಲಯವು ರಿಪೇರಿ ಹಕ್ಕು ಸಲುವಾಗಿ ವೆಬ್‌ ಪೋರ್ಟಲ್‌ ಆರಂಭಿಸಿದೆ. ಏಪ್ರಿಲ್‌ 26ರ ಪ್ರಕಾರ ಅದರಲ್ಲಿ 15 ಕಂಪನಿಗಳು ನೋಂದಣಿಯಾಗಿವೆ. ಅವುಗಳಲ್ಲಿ ಪ್ರಮುಖ ಬ್ರಾಂಡ್‌ಗಳು ಇರುವುದು ಗಮನಾರ್ಹ. ಅಂದರೆ ಉತ್ಪಾದಕರಿಂದ ಈ ಹಕ್ಕಿಗೆ ತಕರಾರು ಇಲ್ಲ. ಆದರೆ ಸಮಗ್ರ ಭಾಗವಾಗಿ ಅವರು ಮಹತ್ವದ ಪಾತ್ರ ವಹಿಸಬೇಕಾಗಿದೆ.

ಕಂಪನಿಗಳು ಉತ್ಪಾದನೆ ಮತ್ತು ಡಿಸೈನ್‌ನಲ್ಲಿ ಹೊಸ ದರ್ಜೆಯನ್ನು ಸ್ವೀಕರಿಸಬೇಕು. ರಿಪೇರಿ ಕುರಿತ ಮಾಹಿತಿಯನ್ನು ಗ್ರಾಹಕರು ಮತ್ತು ಥರ್ಡ್‌ ಪಾರ್ಟಿ ದುರಸ್ತಿಗಾರರಿಗೆ ತಿಳಿಸಬೇಕು. ರಿಪೇರಿಗೆ ಅನುಕೂಲವಾಗುವಂತೆ ತನಮ್ಮ ಉತ್ಪನ್ನಗಳ ವಿನ್ಯಾಸವನ್ನು ಮಾರ್ಪಡಿಸಬೇಕು.

ಜಾಗತಿಕ ಮಟ್ಟದಲ್ಲಿ ಉತ್ಪಾದಕರ ಕಳವಳವೇನು?

ಜಾಗತಿಕವಾಗಿ ಉತ್ಪಾದಕರಲ್ಲಿ ರಿಪೇರಿ ಹಕ್ಕುಗಳ ವಿಚಾರದಲ್ಲಿ ಕೆಲವು ಕಳವಳುಗಳು ಇಲ್ಲದಿಲ್ಲ. ಉದಾಹರಣೆಗೆ ಭದ್ರತೆ (safty) ಮತ್ತು ಬೌದ್ಧಿಕ ಆಸ್ತಿ ರಕ್ಷಣೆಗೆ ಸಂಬಂಧಿಸಿದ್ದು (Intellectual property) ಅನಧಿಕೃತ ಥರ್ಡ್‌ ಪಾರ್ಟಿ ದುರಸ್ತಿ ವಲಯದಿಂದ ಈ ಎರಡು ವಿಚಾರಗಳಿಗೆ ಸಂಬಂಧಿಸಿ ಕಳವಳವನ್ನು ಜಾಗತಿಕ ಮಟ್ಟದ ಉತ್ಪಾದಕರು ವ್ಯಕ್ತಪಡಿಸಿದ್ದಿದೆ. ಕಂಪ್ಯೂಟರ್‌, ಟಾಬ್ಲೆಟ್‌, ಡಿವೈಸ್‌ಗಳ ಸೂಕ್ಷ್ಮ ಡಯಾಗ್ನಾಸ್ಟಿಕ್‌ ಮಾಹಿತಿ, ಸಾಫ್ಟ್‌ವೇರ್‌, ಟೂಲ್ಸ್‌ ಬಗ್ಗೆ ಥರ್ಡ್‌ ಪಾರ್ಟಿಗೆ ತಿಳಿಸಿದರೆ ಡೇಟಾ ಸೋರಿಕೆ ಸೇರಿ ಸಮಸ್ಯೆಯಾಗಬಹುದು ಎಂಬ ಕಳವಳಗಳೂ ಇವೆ. ಇವುಗಳನ್ನು ಬಗೆಹರಿಸಬೇಕಾಗುತ್ತದೆ ಎನ್ನುತ್ತಾರೆ ತಜ್ಞರು.

Exit mobile version