ನವ ದೆಹಲಿ: ಬ್ರಿಟನ್‌ನ ನೂತನ ಪ್ರಧಾನಿಯಾಗಿ ಆಯ್ಕೆಯಾಗಿರುವ ರಿಷಿ ಸುನಕ್ (Rishi Sunak) ಅವರು ಭಾರತ ಮತ್ತು ಬ್ರಿಟನ್ ನಡುವಣ ಮುಕ್ತ ವ್ಯಾಪಾರ ಒಪ್ಪಂದವನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ನಿರ್ಣಾಯಕ ಪಾತ್ರ ವಹಿಸುವ ನಿರೀಕ್ಷೆ ಇದೆ.
ತಜ್ಞರ ಪ್ರಕಾರ ಬ್ರಿಟನ್‌ನಲ್ಲಿ ರಾಜಕೀಯ ಸ್ಥಿರತೆಯ ಪರಿಣಾಮ ಉಭಯ ದೇಶಗಳ ನಡುವಣ ಮುಕ್ತ ವ್ಯಾಪಾರ ಒಪ್ಪಂದ ಸುಗಮವಾಗಲಿದೆ. ರಿಷಿ ಸುನಕ್ ಅವರು ಪ್ರಧಾನಿ ಆಗಿರುವುದರಿಂದ ರಾಜಕೀಯ ಸ್ಥಿರತೆ ಉಂಟಾಗಲಿದೆ.
ಮುಕ್ತ ವ್ಯಾಪಾರ ಒಪ್ಪಂದ ಕುರಿತ ಮಾತುಕತೆ ಈಗ ನಡೆಯುತ್ತಿದೆ. ಬ್ರಿಟನ್ನಲ್ಲಿನ ರಾಜಕೀಯ ಪಲ್ಲಟಗಳಿಂದಾಗಿ ಮಾತುಕತೆ ನನೆಗುದಿಯಲ್ಲಿತ್ತು. ಇದೀಗ ರಾಜಕೀಯ ಸ್ಥಿರತೆ ಸಾಧ್ಯತೆ ಇರುವುದರಿಂದ ಮಾತುಕತೆಯೂ ಮುಂದುವರಿಯಬಹುದು ಎನ್ನುತ್ತಾರೆ ತಜ್ಞರು. ಕಳೆದ ಜನವರಿಯಲ್ಲಿ ಎಫ್‌ಟಿಎ ಕುರಿತ ಮಾತುಕತೆ ಆರಂಭವಾಗಿತ್ತು.
ಭಾರತವು ಬ್ರಿಟನ್‌ಗೆ ಸಿದ್ಧ ಉಡುಪು, ಜವಳಿ, ಜ್ಯುವೆಲ್ಲರಿ, ಎಂಜಿನಿಯರಿಂಗ್ ಸರಕು, ರಾಸಾಯನಿಕ, ಸಾರಿಗೆ, ಲೋಹ, ಸಂಬಾರ ಉತ್ಪನ್ನಗಳನ್ನು ರಫ್ತು ಮಾಡುತ್ತದೆ.