ಮುಂಬಯಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಕುಸಿದ ಪರಿಣಾಮ ಡಾಲರ್ ಎದುರು ರೂಪಾಯಿ ಮೌಲ್ಯ ಗುರುವಾರ ದಾಖಲೆಯ ಇಳಿಕೆ ಕಂಡಿತು. ರೂಪಾಯಿ 77.79 ರೂ.ಗೆ ಕುಸಿತಕ್ಕೀಡಾಗಿದ್ದು, ಹಣದುಬ್ಬರವನ್ನು ಮತ್ತಷ್ಟು ಹೆಚ್ಚಿಸುವ ಆತಂಕ ಉಂಟಾಗಿದೆ. ಕೆಲ ದಿನಗಳಲ್ಲಿ 81 ರೂ.ಗೆ ಪತನವಾಗುವ ಸಾಧ್ಯತೆ ಇದೆ ಎನ್ನುತ್ತಿವೆ ವರದಿಗಳು.
ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತದಿಂದ ಆಮದು ದುಬಾರಿಯಾಗುತ್ತದೆ. ವ್ಯಾಪಾರ ಕೊರತೆ, ವಿತ್ತೀಯ ಕೊರತೆಗೂ ಕಾರಣವಾಗುತ್ತದೆ. ಚೀನಾದಲ್ಲಿ ರಫ್ತು ಚಟುವಟಿಕೆಗಳ ಚೇತರಿಕೆ ಹಿನ್ನೆಲೆಯಲ್ಲಿ ತೈಲೋತ್ಪಾದಕ ರಾಷ್ಟ್ರಗಳು ಕಚ್ಚಾ ತೈಲ ದರವನ್ನು ಮತ್ತಷ್ಟು ಹೆಚ್ಚಿಸಿವೆ. ಕಚ್ಚಾ ತೈಲ ದರ ಪ್ರತಿ ಬ್ಯಾರೆಲ್‌ಗೆ 123 ಡಾಲರ್‌ಗೆ ಏರಿಕೆಯಾಗಿದೆ.
ಒಂದು ಕಡೆ ಕಚ್ಚಾ ತೈಲ ದರ ಹೆಚ್ಚಳವಾದರೆ, ಮತ್ತೊಂದು ಕಡೆ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ವ್ಯಾಪಕವಾಗಿ ಹೂಡಿಕೆ ಹಿಂತೆಗೆದುಕೊಳ್ಳುತ್ತಿರುವುದು ಕೂಡ ಡಾಲರ್ ಎದುರು ರೂಪಾಯಿ ದುರ್ಬಲವಾಗಲು ಕಾರಣವಾಗಿದೆ.
ಡಾಲರ್ ಪ್ರಾಬಲ್ಯ
ಡಾಲರ್ ಅಂತಾರಾಷ್ಟ್ರೀಯ ಕರೆನ್ಸಿ. ಜಾಗತಿಕ ಮಾರುಕಟ್ಟೆಯಲ್ಲಿ ಡಾಲರ್ ಮತ್ತು ಯೂರೊ ಜನಪ್ರಿಯವಾಗಿವೆ. ಅಂತಾರಾಷ್ಟ್ರೀಯ ಬ್ಯಾಂಕ್‌ಗಳಲ್ಲಿ ಡಾಲರ್‌ನ ಪಾಲು 64% ಇದೆ. ಯೂರೊ 20% ಇದೆ. ಡಾಲರ್ ಅಮೆರಿಕದ ಆರ್ಥಿಕತೆಯ ಪ್ರಾಬಲ್ಯವನ್ನು ಬಿಂಬಿಸುತ್ತದೆ.
ಕಚ್ಚಾ ತೈಲ ಸೇರಿದಂತೆ 85% ಅಂತಾರಾಷ್ಟ್ರೀಯ ವ್ಯಾಪಾರದಲ್ಲಿ ಡಾಲರ್ ಮೂಲಕ ಕೊಡು-ಕೊಳ್ಳುವಿಕೆ ನಡೆಯುತ್ತದೆ. ಜಾಗತಿಕ ಸಾಲ ವಿತರಣೆಯ 40% ಡಾಲರ್ ರೂಪದಲ್ಲಿ ನಡೆಯುತ್ತದೆ. ಇತರ 180 ಕರೆನ್ಸಿಗಳು ಅವುಗಳ ರಾಷ್ಟ್ರದಲ್ಲಿ ಮಾತ್ರ ಹೆಚ್ಚು ಬಳಕೆಯಲ್ಲಿವೆ.
ಸಾಧಕ-ಬಾಧಕಗಳೇನು?
- ರೂಪಾಯಿ ಮೌಲ್ಯ ಕುಸಿತದ ಪರಿಣಾಮ ಕಚ್ಚಾ ತೈಲ, ಚಿನ್ನ, ಎಲೆಕ್ಟ್ರಾನಿಕ್ಸ್ , ರಸಗೊಬ್ಬರ ಸೇರಿದಂತೆ ಎಲ್ಲ ಆಮದುಗಳ ವೆಚ್ಚ ದುಬಾರಿಯಾಗುತ್ತದೆ.
- ಹಣದುಬ್ಬರ ಅಥವಾ ಬೆಲೆ ಏರಿಕೆ ವೃದ್ಧಿಸುತ್ತದೆ.
- ಷೇರು ಮಾರುಕಟ್ಟೆಗಳಲ್ಲಿ ಸೂಚ್ಯಂಕದ ಮಂದಗತಿ
- ವಿದೇಶ ಪ್ರವಾಸ, ವಿದೇಶಗಳಲ್ಲಿ ಶಿಕ್ಷಣ ದುಬಾರಿಯಾಗುತ್ತದೆ.
- ಹೀಗಿದ್ದರೂ ರಫ್ತುದಾರರಿಗೆ ಡಾಲರ್ ಆದಾಯವನ್ನು ರೂಪಾಯಿಗೆ ಪರಿವರ್ತಿಸಿದಾಗ ಹೆಚ್ಚು ರೂಪಾಯಿ ಸಿಗುತ್ತದೆ.
- ಐಟಿ ಕಂಪನಿಗಳ ಲಾಭ ಹೆಚ್ಚುತ್ತದೆ.
- ಅನಿವಾಸಿ ಭಾರತೀಯರು ತವರಿಗೆ ಕಳಿಸುವ ಹಣದ ಮೌಲ್ಯ ವೃದ್ಧಿಸುತ್ತದೆ.