Site icon Vistara News

Salary Hike : ಭಾರತದಲ್ಲೇ ಬೆಂಗಳೂರಿನಲ್ಲಿ ಅತ್ಯಧಿಕ ಸಂಬಳ ಸಿಗಲು ಕಾರಣವೇನು? ಈ ವರ್ಷ ಎಷ್ಟು ಹೆಚ್ಚಳ?

cash

ಬೆಂಗಳೂರು: ಭಾರತದ ನಗರಗಳ ಪೈಕಿ ಬೆಂಗಳೂರಿನಲ್ಲಿಯೇ ಅತಿ ಹೆಚ್ಚು ಸಂಬಳದ ಉದ್ಯೋಗಗಳು ದೊರೆಯುತ್ತದೆ (Highest Paying City) ಎಂದು ಟೀಮ್‌ಲೀಸ್‌ ವರದಿ ತಿಳಿಸಿದೆ. ಉದ್ಯೋಗ ನೇಮಕಾತಿ ವಲಯದ ಟೀಮ್‌ಲೀಸ್‌ ಸರ್ವೀಸ್‌ (TeamLease Services) ಉದ್ಯೋಗ ಮತ್ತು ವೇತನ-2022-2023 ಕುರಿತ ವರದಿಯನ್ನು ಬಿಡುಗಡೆಗೊಳಿಸಿದೆ. ಇದು ಹಲವು ಕುತೂಹಲಕರ ಅಂಶಗಳನ್ನು ಒಳಗೊಂಡಿದೆ.

ಭಾರತದ ಸಿಲಿಕಾನ್‌ ವ್ಯಾಲಿ ಖ್ಯಾತಿಯ ಬೆಂಗಳೂರಿನಲ್ಲಿ ಅನೇಕ ಮಾಹಿತಿ ತಂತ್ರಜ್ಞಾನ ಕಂಪನಿಗಳು, ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳು ಇವೆ. ಹೀಗಾಗಿ ಹೆಚ್ಚು ಸಂಬಳದ ಉದ್ಯೋಗಗಳು ಇಲ್ಲಿ ಸೃಷ್ಟಿಯಾಗಿವೆ. ಬೆಂಗಳೂರು, ಮುಂಬಯಿ, ಚೆನ್ನೈ, ದಿಲ್ಲಿ ಮತ್ತು ಹೈದರಾಬಾದ್‌ ನಗರಗಳು ಹೆಚ್ಚು ವೇತನ ನೀಡುವ ನಗರಗಳ ಪಟ್ಟಿಯಲ್ಲಿದೆ ಎಂದು ವರದಿ ತಿಳಿಸಿದೆ.

ಈ ವರ್ಷ ಬೆಂಗಳೂರಿನಲ್ಲಿ 7.79% ವೇತನ ಏರಿಕೆ ಸಂಭವ:

ಟೀಮ್‌ ಲೀಸ್‌ ವರದಿಯ ಪ್ರಕಾರ ಈ ವರ್ಷ ನಾನಾ ಕ್ಷೇತ್ರಗಳಲ್ಲಿ 3.20%ರಿಂದ 10.19% ತನಕ ವೇತನ ಏರಿಕೆಯನ್ನು ನಿರೀಕ್ಷಿಸಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಇದು ಕಡಿಮೆ. ಆದರೆ ಬೆಂಗಳೂರಿನಲ್ಲಿ ಈ ವರ್ಷ 7.79% ವೇತನ ಏರಿಕೆ ನಿರೀಕ್ಷಿಸಲಾಗಿದೆ. ಜತೆಗೆ ಬೆಂಗಳೂರಿನಲ್ಲಿ ಬಿಎಫ್‌ಎಸ್‌ಐ ಸೆಕ್ಟರ್‌ ಹೆಚ್ಚು ವೇತನದ ಉದ್ಯೋಗಗಳನ್ನು ನೀಡಿವೆ. ಅಂದರೆ ಬ್ಯಾಂಕಿಂಗ್‌, ಹಣಕಾಸು ಸೇವೆ, ವಿಮೆ ವಲಯದಲ್ಲಿ ಉತ್ತಮ ವೇತನದ ಉದ್ಯೋಗಗಳು ಇಲ್ಲಿವೆ ಎಂದು ವರದಿ ತಿಳಿಸಿದೆ.

ಟೆಲಿಕಾಂ ಇಂಡಸ್ಟ್ರಿಯಲ್ಲಿ ಸರಾಸರಿ ವೇತನದಲ್ಲಿ ಇಳಿಕೆಯಾಗಿದ್ದರೂ, ಈ ವಲಯದಲ್ಲಿ ರಿಲೇಶನ್‌ಶಿಪ್‌ ಮ್ಯಾನೇಜರ್‌ಗೆ 10.19% ವೇತನ ಏರಿಕೆ ಆಗಿದೆ. ಮೀಡಿಯಾ & ಎಂಟರ್‌ಟೈನ್‌ಮೆಂಟ್‌ ವಲಯದಲ್ಲಿ 9.30% ಏರಿಕೆ ನಿರೀಕ್ಷಿಸಲಾಗಿದೆ. ಬೆಂಗಳೂರಿನಲ್ಲಿ ಗೇಮ್‌ ಡೆವಲಪರ್‌ಗಳಿಗೂ 9.30% ವೇತನ ಏರಿಕೆ ನಿರೀಕ್ಷಿಸಲಾಗಿದೆ.

ಉತ್ಪಾದನೆ ಮತ್ತು ಸಂಬಂಧಿತ ವಲಯದಲ್ಲಿ ಉತ್ತಮ ಉದ್ಯೋಗಾವಕಾಶಗಳ ಸೃಷ್ಟಿಯಾಗಿದೆ. ನಿರ್ಮಾಣ ಮತ್ತು ರಿಯಲ್‌ ಎಸ್ಟೇಟ್‌ ವಲಯದಲ್ಲಿ ವೇತನ ಏರಿಕೆ ಕೋವಿಡ್‌ ಪೂರ್ವ ಮಟ್ಟಕ್ಕಿಂತಲೂ ಕಡಿಮೆ ಇದೆ. ಬ್ಲೂ ಕಲರ್‌ ಜಾಬ್‌ಗಳ ಪೈಕಿ ಸೇಲ್ಸ್‌ ಎಕ್ಸಿಕ್ಯುಟಿವ್‌, ಎಲೆಕ್ಟ್ರೀಶಿಯನ್‌, ಎಸಿ ಟೆಕ್ನೀಶಿಯನ್‌, ಆಪರೇಟರ್‌ ಹುದ್ದೆಗಳು 2023ರಲ್ಲಿ ಜನಪ್ರಿಯವಾಗಿವೆ ಎಂದು ವರದಿ ತಿಳಿಸಿದೆ.

ರಿಶಾದ್‌ ಪ್ರೇಮ್‌ ಜೀ ವೇತನ 50% ಕಡಿತ:

ವಿಪ್ರೊ ಕಂಪನಿಯ ಎಕ್ಸಿಕ್ಯುಟಿವ್‌ ಚೇರ್ಮನ್‌ ರಿಶಾದ್‌ ಪ್ರೇಮ್‌ಜೀ ಅವರು ಸ್ವಯಂಪ್ರೇರಣೆಯಿಂದ ತಮ್ಮ ವೇತನದಲ್ಲಿ 50% ಕಡಿತಗೊಳಿಸಿದ್ದಾರೆ. ಯುಎಸ್‌ ಸೆಕ್ಯುರಿಟೀಸ್‌ & ಎಕ್ಸ್‌ಚೇಂಜ್‌ಗೆ ಸಲ್ಲಿಸಿದ ವಿವರದಲ್ಲಿ ಕಂಪನಿ ಇದನ್ನು ತಿಳಿಸಿದೆ. ಅದರ ಪ್ರಕಾರ ರಿಶಾದ್‌ ಅವರು 2022-23 ಸಾಲಿಗೆ 8,67,669 ಡಾಲರ್‌ ವೇತನ ಗಳಿಸಿದ್ದಾರೆ. ಅಂದರೆ 2021-22ಕ್ಕೆ ಹೋಲಿಸಿದರೆ ಅರ್ಧದಷ್ಟು ಕಡಿಮೆ ಆಗಿದೆ. 2007ರಲ್ಲಿ ಅವರು ವಿಪ್ರೊಗೆ ಸೇರ್ಪಡೆಯಾಗಿದ್ದರು. 2019ರಲ್ಲಿ ಎಕ್ಸಿಕ್ಯುಟಿವ್‌ ಚೇರ್ಮನ್‌ ಆದರು.

ಇದನ್ನೂ ಓದಿ: Job offers : 10ನೇ ಕ್ಲಾಸ್‌ನಲ್ಲಿ ಕೇವಲ 75% ಅಂಕ ಗಳಿಸಿದ್ದ ವಿದ್ಯಾರ್ಥಿಗೆ ಈಗ 88 ಲಕ್ಷ ರೂ. ಸಂಬಳ

Exit mobile version