ನವ ದೆಹಲಿ: ಭಾರತದಲ್ಲಿ ೨೦೨೩ರ ಏಪ್ರಿಲ್‌ನಿಂದ ೨೦% ಎಥೆನಾಲ್ ಮಿಶ್ರಿತ ಪೆಟ್ರೋಲ್ (Ethanol) ಮಾರಾಟ ಆರಂಭವಾಗಲಿದೆ. ಇದರಿಂದ ಕಚ್ಚಾ ತೈಲದ ಮೇಲಿನ ಅವಲಂಬನೆ ತಗ್ಗಲಿದೆ ಎಂದು ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ.
ದೇಶದಲ್ಲಿ ೨೦೨೩ರ ಏಪ್ರಿಲ್ ವೇಳೆಗೆ ಕೆಲ ಭಾಗಗಳಲ್ಲಿ E೨೦ ಪೆಟ್ರೋಲ್ (೨೦% ಎಥೆನಾಲ್ ಮಿಶ್ರಿತ ಪೆಟ್ರೋಲ್) ಮಾರಾಟ ಆರಂಭವಾಗಲಿದೆ. ೨೦೨೫ರ ವೇಳೆಗೆ ದೇಶವ್ಯಾಪಿಯಾಗಿ ಸಿಗಲಿದೆ ಎಂದು ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ.
ಭಾರತ ಪೆಟ್ರೋಲ್‌ಗೆ ೧೦% ಎಥೆನಾಲ್ ಮಿಶ್ರಣ ಮಾಡುವ ಗುರಿಯನ್ನು ನಿಗದಿತ ಅವಧಿಗೆ ಮುನ್ನವೇ ಈ ವರ್ಷ ಜೂನ್‌ನಲ್ಲಿ ಸಾಧಿಸಿತ್ತು. ೨೦೨೨ರ ನವೆಂಬರ್ ತನಕ ಗಡುವು ಇತ್ತು. ಇದಿಗ ೨೦% ಮಿಶ್ರಣ ಮಾಡಲು ಮುಂದಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ೨G ಎಥೆನಾಲ್ ಘಟಕವನ್ನು ಬುಧವಾರ ಲೋಕಾರ್ಪಣೆ ಮಾಡಿದ್ದರು. ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOC) ೯೦೦ ಕೋಟಿ ರೂ. ವೆಚ್ಚದಲ್ಲಿ ಹರಿಯಾಣದ ಪಾನಿಪತ್‌ನಲ್ಲಿ ಈ ಎಥೆನಾಲ್ ಘಟಕವನ್ನು ನಿರ್ಮಿಸಿದೆ. ಎಥೆನಾಲ್ ಉತ್ಪಾದನೆಯಲ್ಲಿ ಪ್ರಮುಖವಾಗಿ ಕಬ್ಬಿನ ತ್ಯಾಜ್ಯವನ್ನು ಬಳಸುವುದರಿಂದ ಕಬ್ಬು ಬೆಳೆಗಾರರಿಗೆ ಅನುಕೂಲವಾಗಲಿದೆ.