ನಿಮ್ಮದೇ ಬಿಸಿನೆಸ್ ಮಾಡುತ್ತಿದ್ದೀರಾ. ಆದರೆ ಮಾರ್ಕೆಟಿಂಗ್ ಮಾಡೋದು ಹೇಗೆ? ( Sales strategy ) ಬಿಸಿನೆಸ್ ಸಕ್ಸಸ್ ಮಾಡಲು ಕಾರ್ಯತಂತ್ರ ಏನು ಎಂಬ ಚಿಂತೆಯಲ್ಲಿದ್ದೀರಾ. ಹಾಗಾದರೆ ಮೊದಲಿಗೆ ಟೆನ್ಷನ್ ಬಿಡಿ. ಅತ್ಯಂತ ಪರಿಣಾಮಕಾರಿ ಸೇಲ್ಸ್ ಸ್ಟ್ರಾಟಜಿ ಯಾವುದು ಎಂಬುದನ್ನು ನೋಡೋಣ.
ನೀವು ಬೇಕಾದರೆ ಗಮನಿಸಿ- ಸೇಲ್ಸ್ ವಲಯದಲ್ಲಿ ಭಾರಿ ಮುಂದುವರಿದ ಮಂದಿ, ದೀರ್ಘಕಾಲೀನ ಅಥವಾ ಲಾಂಗ್ ಟರ್ಮ್ ಥಿಂಕಿಂಗ್ ಮಾಡುತ್ತಾರೆ. ಪ್ರತಿ ದಿನ ನಡೆಯುವ ಎಲ್ಲದಕ್ಕೂ ಅವರು ಪ್ರತಿಕ್ರಿಯಿಸುವುದಿಲ್ಲ. ಸ್ವಲ್ಪ ಸಮಯ ತೆಗೆದುಕೊಂಡು ಯುದ್ಧ ಭೂಮಿಯ ಮೇಲೆ ನಿಗಾ ವಹಿಸುವ ಸೇನಾನಿಯಂತೆ ನಿಂತು, ವಿಶಾಲ ದೃಷ್ಟಿಯಿಂದ ಅವರ ಮಾರುಕಟ್ಟೆಯನ್ನು ನೋಡುತ್ತಾರೆ. ಸೇಲ್ಸ್‌ನಲ್ಲಿ ಉನತ ಹುದ್ದೆಯಲ್ಲಿರುವವರಿಗೆ ತಮ್ಮ ಗ್ರಾಹಕರು ಯಾರು ಹಾಗೂ ಅವರು ಏನನ್ನು ಬಳಸುತ್ತಾರೆ ಎಂಬುದರ ಬಗ್ಗೆ ಖಚಿತವಾದ ಐಡಿಯಾ ಇರುತ್ತದೆ. ಅಂದಹಾಗೆ ಯಶಸ್ವಿ ಸೆಲ್ಲಿಂಗ್ ಸ್ಟ್ರಾಟಜಿಗೆ ನಾಲ್ಕು ಸೂತ್ರಗಳಿವೆ. ಬನ್ನಿ ಅವುಗಳನ್ನು ತಿಳಿಯೋಣ.
ಮೊದಲನೆಯದಾಗಿ ಸ್ಪೆಶಲೈಸೇಶನ್ ಅಥವಾ ವಿಶೇಷತೆ: ನೀವು ಹಲವಾರು ಸೈಜಿನ ಅನೇಕ ಉತ್ಪನ್ನಗಳನ್ನು ಮತ್ತು ಸೇವೆಗಳನ್ನು ನೀಡಬಹುದು. ಆದರೆ ನೀವು ಯಶಸ್ವಿಯಾಗಬೇಕಿದ್ದರೆ ಒಂದು ಅಥವಾ ಒಂದೆರಡು ಉತ್ಪನ್ನಗಳು ಅಥವಾ ಸೇವೆಯನ್ನು ನೀಡುವಲ್ಲಿ ಅತ್ಯಂತ ಸ್ಪೆಶಲಿಸ್ಟ್ ಆಗಿರಬೇಕು. ನೀವು ಪ್ರತಿಯೊಂದನ್ನೂ ಮಾರಾಟ ಮಾಡಲು ಆಗುವುದಿಲ್ಲ. ಆದ್ದರಿಂದ ಕೆಲವನ್ನು ಅದ್ಭುತವಾಗಿ ಮಾರುವ ಕಲೆ ನಿಮಗೆ ಕರಗತವಾಗಬೇಕು. ಹಾಗಾದರೆ ನೀವು ಯಾವ ಪ್ರಾಡಕ್ಟ್ ಅಥವಾ ಸರ್ವೀಸ್ ಅನ್ನು ಮಾರಾಟ ಮಾಡುತ್ತೀರಿ ಎಂದು ಗಂಭೀರವಾಗಿ ಆಲೋಚಿಸಿ.
ಜಗತ್ತಿನಲ್ಲಿ ಅನೇಕ ವಿಶೇಷತೆಗಳು ಇವೆ. ಆದರೆ ಅವೆಲ್ಲವೂ ನಿಮ್ಮದಾಗಿರದು. ಆದ್ದರಿಂದ ನಿಮ್ಮದೇ ಸ್ಪೆಶಲೈಸೇಶನ್ ಯಾವುದು ಎಂಬುದರ ಬಗ್ಗೆ ಹಾಗೂ ಯಾವ ಗ್ರಾಹಕರ ಬಳಿಗೆ ಹೋಗುತ್ತೀರಿ ಎಂಬುದನ್ನು ನೆನೆಪಿಟ್ಟುಕೊಳ್ಳಿ. ನಿಮ್ಮನ್ನು ಇಷ್ಟಪಡುವವರಿಗೆ ಏನನ್ನಾದರೂ ಮಾರಾಟ ಮಾಡುವುದು ಸುಲಭ. ಆದರೆ ಸಹಜವಾಗಿ ನಿಮ್ಮ ಬಳಿಗೆ ಬರುವ ಗ್ರಾಹಕರೇ, ನಿಮ್ಮ ಯಶಸ್ಸನ್ನು ನಿರ್ಧರಿಸುತ್ತದೆ.
ಇದನ್ನೂ ಓದಿ: ಸೈಬರ್ ಸೇಫ್ಟಿ ಅಂಕಣ: ಎಚ್ಚರಿಕೆ, ನಿಮ್ಮ ಹಣ ಸುರಕ್ಷಿತವಾಗಿಲ್ಲ!
ಎರಡನೆಯದಾಗಿ ಡಿಫರೆಂಟಿಯೇಶನ್ ಅಥವಾ ವ್ಯತ್ಯಾಸ: ನೀವು ಯಾವುದರಲ್ಲಿ ಸ್ಪೆಷಲಿಸ್ಟ್ ಆಗಿದ್ದೀರಿಯೊ, ಅದರಲ್ಲಿ ಬಿಸಿನೆಸ್ ಶುರು ಮಾಡಿದ ಬಳಿಕ, ನಿಮ್ಮ ಉತ್ಪನ್ನ ಅಥವಾ ಸೇವೆಯ ವ್ಯತ್ಯಾಸ ವಿಶೇಷವನ್ನು ನೀವೇ ನಿರ್ಧರಿಸಬೇಕು. ಉತ್ಪನ್ನದ ಗುಣಮಟ್ಟ, ಹೊಸತನ, ಮೌಲ್ಯವರ್ಧನೆಯಿಂದ ನಿಮ್ಮ ಪ್ರಾಡಕ್ಟ್ ಮಾರುಕಟ್ಟೆಯಲ್ಲಿ ಸಕ್ಸಸ್ ಆಗುತ್ತದೆ. ಬೆಂಗಳೂರಿನ ವಾಸವಿ ಕಾಂಡಿಮೆಂಟ್ಸ್‌ನ ಗೀತಾ ಶಿವ ಕುಮಾರ್ ಅವರು ಇಪ್ಪತ್ತಮೂರು ವರ್ಷಗಳ ಹಿಂದೆ ಕಾಂಡಿಮೆಂಟ್ಸ್ ಆರಂಭಿಸಿ ಈಗ ವರ್ಷಕ್ಕೆ ಎರಡು ಕೋಟಿ ರೂ. ವಹಿವಾಟು ನಡೆಸುತ್ತಾರೆ. ಎಲ್ಲರಂತೆ ಚಕ್ಕುಲಿ, ಕೋಡುಬಳೆ, ನಿಪ್ಪಟ್ಟು, ಹೋಳಿಗೆ ಮಾರುತ್ತಿದ್ದರೆ ಸಾಮಾನ್ಯ ವ್ಯಾಪಾರಿಯಾಗಿ ಉಳಿಯುತ್ತಿದ್ದರು. ಆದರೆ ಬೆಂಗಳೂರಿಗೇ ವಿಶೇಷ ಎನ್ನಿಸುವಂತೆ ಅವರೇ ಬೇಳೆ ಮೇಳವನ್ನು ಪರಿಚಯಿಸಿದರು. ಇದು ಅವರ ಕಾಂಡಿಮೆಂಟ್ಸ್ ಬಿಸಿನೆಸ್ ಚಹರೆಯನ್ನೇ ಬದಲಿಸಿತು. ಲಾಭವನ್ನೂ ತಂದುಕೊಟ್ಟಿತು.
ಮೂರನೆಯದಾಗಿ ಸೆಗ್ಮೆಂಟೈಸೇಶನ್ : ಅಂದರೆ ಯಾವ ಸೆಗ್ಮೆಂಟ್ ಅಥವಾ ಗ್ರೂಪ್‌ನ ಗ್ರಾಹಕರು ನಿಮ್ಮ ವ್ಯಾಪಾರದ ವಿಶೇಷತೆಗಳಿಂದ ಹೆಚ್ಚು ಲಾಭ ಪಡೆಯುತ್ತಾರೆ ಎಂಬುದನ್ನು ಗುರುತಿಸುವುದು ಮುಖ್ಯ. ನಿಮ್ಮ ಗ್ರಾಹಕರ ನೆಲೆಯ ಸಂಖ್ಯೆ, ವಯಸ್ಸು, ಹಿನ್ನೆಲೆಗಳ ಪರಿಚಯ ನಿಮಗಿರಲಿ. ಗ್ರಾಹಕರ ಮನಸ್ಥಿತಿಯ ಅರಿವು ಕೂಡಾ ಇಲ್ಲಿ ಮುಖ್ಯ. ಬಿಸಿನೆಸ್‌ನಲ್ಲಿ ಗ್ರಾಹಕರನ್ನು ಆಕರ್ಷಿಸುವುದು ಸವಾಲಿನ ಕೆಲಸ. ನಿಮ್ಮ ಉತ್ಪನ್ನ ಅಥವಾ ಸೇವೆಗಳನ್ನು ಖಂಡಿತವಾಗಿಯೂ ಖರೀದಿಸದ ಗ್ರಾಹಕರೊಡನೆ ಗಂಟೆಗಟ್ಟಲೆ ಮಾತನಾಡುತ್ತಾ ಸಮಯವನ್ನು ವ್ಯರ್ಥಗೊಳಿಸುವುದರಿಂದ ಯಾವುದೇ ಪ್ರಯೋಜನವಿಲ್ಲ. ಮಾತುಕತೆಯ ಆರಂಭದಲ್ಲಿಯೇ ಇದನ್ನು ಗಮನದಲ್ಲಿಟ್ಟುಕೊಳ್ಳಬೇಕು.
ನಾಲ್ಕನೆಯದಾಗಿ ಕಾನ್ಸಂಟ್ರೇಶನ್ ಅಥವಾ ಏಕಾಗ್ರತೆ. ನೀವು ಮಾರಾಟ ಮಾಡುತ್ತಿರುವ ಉತ್ಪನ್ನ ಅಥವಾ ಸೇವೆಯ ಬಗ್ಗೆ ಒಂದೇ ಮನಸ್ಸಿನ ಏಕಾಗ್ರತೆ ನಿಮ್ಮಲ್ಲಿರಬೇಕು. ಬಿಸಿನೆಸ್ ಬೆಳೆಯುತ್ತಾ ಹೋದಂತೆ ಒಂದು ಗೌರವಯುತ ಬ್ರಾಂಡ್ ಇಮೇಜ್ ಅಭಿವೃದ್ಧಿಯಾಗುವಂತೆ ನೋಡಿಕೊಳ್ಳಬೇಕು.
ಸ್ಪರ್ಧಾತ್ಮಕವಾಗಿಯೂ ನಿಮ್ಮ ಉತ್ಪನ್ನವು ಪ್ರತಿಸ್ಪರ್ಧಿಗಳದ್ದಕ್ಕಿಂತ ಮುಂಚೂಣಿಯಲ್ಲಿರಬೇಕು. ಬೆಸ್ಟ್ ಅನ್ನಿಸಬೇಕು. ನಿಮ್ಮ ಎಲ್ಲ ಮಾರ್ಕೆಟಿಂಗ್ ಮತ್ತು ಸೇಲ್ಸ್ ಕಾರ್ಯತಂತ್ರಗಳಲ್ಲಿ ಸ್ಪರ್ಧಾತ್ಮಕತೆ ಎಂದರೆ ಯಶಸ್ಸಿಗೆ ಕೀ ಇದ್ದಂತೆ. ಆದ್ದರಿಂದಲೇ ಮ್ಯಾನೇಜ್‌ಮೆಂಟ್ ಕನ್ಸಲ್ಟೆಂಟ್ ಪೀಟರ್ ಫರ್ಡಿನಾಂಡ್ ಹೀಗೆನ್ನುತ್ತಾರೆ-ನಿಮ್ಮಲ್ಲಿ ಸ್ಪರ್ಧಾತ್ಮಕತೆಯ ಅಡ್ವಾಂಟೇಜ್ ಇರದಿದ್ದರೆ, ಅದರಲ್ಲೊಂದನ್ನು ಅಭಿವೃದ್ಧಿಪಡಿಸಲು ಮುಂದಾಗಿ.
ಸಕಾರಾತ್ಮಕ ಮನೋಭಾವ, ಕ್ರಿಯಾಶೀಲತೆ, ಸೃಜನಶೀಲತೆಯನ್ನು ಮೈಗೂಡಿಸಿಕೊಂಡಿರುವ ಉತ್ತಮ ಸ್ನೇಹಿತರ ಬಳಗವನ್ನು ಹೊಂದಿ. ನಿಮ್ಮ ಕ್ಷೇತ್ರದಲ್ಲಿ ವೆರಿ ಬೆಸ್ಟ್ ಅನ್ನಿಸಲು ಪ್ರಯತ್ನಿಸಿ. ನಿಮ್ಮ ಬಗ್ಗೆ ಸಕಾರಾತ್ಮಕವಾಗಿ ಮಾತನಾಡಿ. ನಿಮ್ಮ ಭಾವನೆಗಳನ್ನು ಸಂಯಮದಲ್ಲಿಟ್ಟುಕೊಳ್ಳಿ. ನೆನಪಿಡಿ, ಇದುವರೆಗಿನ ಎಲ್ಲ ಅಂಶಗಳನ್ನು ಕಾರ್ಯಗತಗೊಳಿಸಲು ಹೊರಟ ಬಳಿಕ ನೀವು ಜನರಿಗೆ ಮತ್ತಷ್ಟು ಹತ್ತಿರವಾಗತ್ತೀರಿ. ಹೆಚ್ಚು ಸೇಲ್ಸ್ ನಡೆಯುತ್ತದೆ. ಸೇಲ್ಸ್ ಹೆಚ್ಚಾದಾಗ ಆದಾಯವೂ ಹೆಚ್ಚುತ್ತದೆ. ಆಗ ನೀವೇ ಹೆಚ್ಚು ಮಂದಿಗೆ ಪ್ರೇರಣೆಯಾಗುತ್ತೀರಿ. ಬಿಸಿನೆಸ್ ಸಕ್ಸಸ್ ನಿಮ್ಮದಾಗುತ್ತದೆ.