ರಿಯಾದ್: ಸೌದಿ ಅರೇಬಿಯಾದ ರಿಯಾದ್ ಏರ್‌ಪೋರ್ಟ್ ಪ್ರಾಧಿಕಾರವು ( Riyadh Airport Authority-RAA) ಹಳೆಯ ಬಾಕಿಯನ್ನು ಪಾವತಿಸದ ಪಾಕಿಸ್ತಾನ ಇಂಟರ್‌ನ್ಯಾಶನಲ್ ಏರ್‌ಲೈನ್ಸ್‌ಗೆ (Pakistan International Airlines) ಕೊನೆಯ ಬಾರಿಗೆ ಎಚ್ಚರಿಕೆ ನೀಡಿದೆ. (Pakistan Airlines) ರಿಯಾದ್ ಏರ್ ಪೋರ್ಟ್ ಪ್ರಾಧಿಕಾರವು ಜುಲೈ 15ರೊಳಗೆ ಬಾಕಿಯನ್ನು ತೀರಿಸುವಂತೆ ಪಾಕ್ ಏರ್‌ಲೈನ್ಸ್‌ಗೆ ಪತ್ರದ ಮೂಲಕ ತಿಳಿಸಿದೆ.
ಒಂದು ವೇಳೆ ಪಾಕಿಸ್ತಾನದ ಏರ್‌ಲೈನ್ಸ್ ಹಳೆ ಬಾಕಿಯನ್ನು ಪಾವತಿಸದಿದ್ದರೆ ಮುಂಬರುವ ಚಳಿಗಾಲದಲ್ಲಿ ಸಂಚಾರಕ್ಕೆ ತೀವ್ರ ಸಮಸ್ಯೆ ಎದುರಿಸಲಿದೆ. ಜೆಡ್ಡಾ ಏರ್‌ಪೋರ್ಟ್ ಕೂಡ ಹಳೆಯ ಬಾಕಿಯನ್ನು ಪಾವತಿಸುವಂತೆ ಪಾಕಿಸ್ತಾನ ಇಂಟರ್‌ನ್ಯಾಶನಲ್ ಏರ್‌ಲೈನ್ಸ್‌ಗೆ ಸೂಚಿಸಿದೆ.
ಈ ಹಿನ್ನೆಲೆಯಲ್ಲಿ ಪಾಕಿಸ್ತಾನದ ಪ್ರಧಾನಿ ಶೆಹಬ್ಬಾಜ್ ಷರೀಫ್ ಅವರು ಉನ್ನತ ಮಟ್ಟದ ಸಭೆ ನಡೆಸಿದ್ದು, ಪರಿಸ್ಥಿತಿ ಪರಿಶೀಲಿಸಿದ್ದಾರೆ. ಪಿಐಎಗೆ ಕಾಯಕಲ್ಪ ನೀಡುವುದು ಇದರ ಉದ್ದೇಶ. ಪಾಕಿಸ್ತಾನ ಇಂಟರ್‌ನ್ಯಾಶನಲ್ ಏರ್‌ಲೈನ್ಸ್ ರಿಯಾದ್ ಏರ್‌ಪೋರ್ಟ್ ಪ್ರಾಧಿಕಾರಕ್ಕೆ 82 ಲಕ್ಷ ಸೌದಿ ರಿಯಾಲ್‌ಗಳನ್ನು ನೀಡಬೇಕಿದೆ. ಕಳೆದ ಮೇ 30ರಂದು ಮಲೇಷ್ಯಾದಲ್ಲಿ ಪಾಕಿಸ್ತಾನ ಏರ್‌ಲೈನ್ಸ್ ನ ಬೋಯಿಂಗ್ 777 ವಿಮಾನವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು. ಇದನ್ನು ಪಾಕಿಸ್ತಾನ ಇಂಟರ್‌ನ್ಯಾಶನಲ್ ಏರ್‌ಲೈನ್ಸ್, ಮಲೇಷ್ಯಾದಿಂದ ಲೀಸ್‌ಗೆ ಪಡೆದಿತ್ತು. ಆದರೆ ಕೊಡಬೇಕಿದ್ದ ಬಾಕಿ ಕೊಟ್ಟಿರಲಿಲ್ಲ.
ಸೌದಿ ಅರೇಬಿಯಾ ಇತ್ತೀಚೆಗೆ ಸಂಕಷ್ಟದಲ್ಲಿರುವ ಪಾಕಿಸ್ತಾನಕ್ಕೆ 200 ಕೋಟಿ ಡಾಲರ್ ಸಾಲವನ್ನು ಕೊಟ್ಟಿದೆ. (16,400 ಕೋಟಿ ರೂ.) ಪಾಕಿಸ್ತಾನವು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯಿಂದ ಕೂಡ 3 ಶತಕೋಟಿ ಡಾಲರ್ ಸಾಲ ಪಡೆಯುವಲ್ಲಿ ಕೊನೆಗೂ ಯಶಸ್ವಿಯಾಗಿದೆ.
ಇದನ್ನೂ ಓದಿ: Guinness World Record: ಗಿನ್ನೆಸ್ ರೆಕಾರ್ಡ್ ಬುಕ್ ಸೇರಿದ 9 ಜನರ ಪಾಕಿಸ್ತಾನ ಕುಟುಂಬ, ಏನಿದರ ವಿಶೇಷ!?
ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿರುವ ಪಾಕಿಸ್ತಾನದಲ್ಲಿ ಹಣದುಬ್ಬರ 38% ಕ್ಕೆ ಏರಿಕೆಯಾಗಿದೆ. ಇದರೊಂದಿಗೆ ಶ್ರೀಲಂಕಾವನ್ನೂ ಹಿಂದಿಕ್ಕಿದೆ. ಶ್ರೀಲಂಕಾದಲ್ಲಿ ಹಣದುಬ್ಬರ 25.2%ಕ್ಕೆ ಇಳಿಕೆಯಾಗಿದೆ. (Pakistan inflation) ಈಗ ಏಷ್ಯಾದಲ್ಲಿಯೇ ಅತಿ ಹೆಚ್ಚು ಹಣದುಬ್ಬರ ಪಾಕಿಸ್ತಾನದಲ್ಲಿದೆ. ಭಾರತದಲ್ಲಿ ಹಣದುಬ್ಬರ 4.7% ಇದೆ. ಪಾಕಿಸ್ತಾನವು ಐಎಂಎಫ್‌ನ ಕಠಿಣ ಷರತ್ತುಗಳನ್ನು ಪೂರೈಸಲು ಹಿಂದೇಟು ಹಾಕುತ್ತಿದೆ. 1957ರಿಂದೀಚೆಗಿನ ಅವಧಿಯಲ್ಲಿಯೇ ಗರಿಷ್ಠ ಹಣದುಬ್ಬರವನ್ನು ಪಾಕಿಸ್ತಾನ ದಾಖಲಿಸಿದೆ.