ನವ ದೆಹಲಿ: ಆರ್ಥಿಕವಾಗಿ ತೀವ್ರ ಸಂಕಷ್ಟದಲ್ಲಿರುವ ನೆರೆಯ ದ್ವೀಪ ರಾಷ್ಟ್ರ ಶ್ರೀಲಂಕಾಕ್ಕೆ, ತುರ್ತಾಗಿ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಪ್ರತ್ಯೇಕ ಹಡಗುಗಳಲ್ಲಿ ರವಾನಿಸಲು ಭಾರತ ನಿರ್ಧರಿಸಿದೆ.
ತೈಲವನ್ನು ಹೊತ್ತ ಒಂದು ಹಡಗು ಜುಲೈ ೧೩ ಮತ್ತು ೧೫ರೊಳಗೆ ತಲುಪುವ ನಿರೀಕ್ಷೆ ಇದೆ. ಮತ್ತೊಂದು ಹಡಗು ಜುಲೈ ೨೯-೩೧ರ ನಡುವೆ ತಲುಪಲಿದೆ. ಕೊನೆಯದಾಗಿ ಆಗಸ್ಟ್ ೧೦ ಮತ್ತು ೧೫ರ ನಡುವೆ ಮತ್ತೊಂದು ಹಡಗು ತಲುಪುವ ಸಾಧ್ಯತೆ ಇದೆ.
ಶ್ರೀಲಂಕಾದ ರಾಯಭಾರಿ ಮಿಲಿಂದಾ ಮೊರಗೊಡಾ ಅವರು ಇತ್ತೀಚೆಗೆ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಜತೆ ಮಾತುಕತೆ ನಡೆಸಿ ತೈಲ ಪೂರೈಕೆಗೆ ಮನವಿ ಮಾಡಿದ್ದರು.
ಭಾರತದಿಂದ ದೀರ್ಘಕಾಲೀನವಾಗಿ ಪೆಟ್ರೋಲಿಯಂ ಉತ್ಪನ್ನಗಳನ್ನು ತರಿಸಿಕೊಳ್ಳಲು ಶ್ರೀಲಂಕಾ ಉತ್ಸುಕವಾಗಿದೆ. ಪ್ರಸ್ತುತ ಬಿಕ್ಕಟ್ಟನ್ನು ಎದುರಿಸಲು ಭಾರತದ ನೆರವನ್ನು ಕೋರಿದೆ. ಪ್ರಸ್ತುತ ಲಂಕಾದಲ್ಲಿ ಇರುವ ಡೀಸೆಲ್ ದಾಸ್ತಾನನ್ನು ತೀರಾ ಅಗತ್ಯ ಬಳಕೆಗೆ ಮಾತ್ರ ಖರ್ಚು ಮಾಡಲಾಗುತ್ತಿದೆ. ಲಂಕಾಕ್ಕೆ ಜುಲೈನಲ್ಲಿ ೩೩,೦೦೦ ಟನ್ ಅನಿಲ ಲಭಿಸುವ ನಿರೀಕ್ಷೆ ಇದೆ. ಜತೆಗೆ ಮುಂದಿನ ೪ ತಿಂಗಳಿಗೆ ೧ ಲಕ್ಷ ಟನ್ ಅನಿಲ ಖರೀದಿಗೂ ನಿರ್ಧರಿಸಿದೆ.
೧೯೪೮ರಲ್ಲಿ ಸ್ವಾತಂತ್ರ್ಯ ಗಳಿಸಿದ ಬಳಿಕ ಇದುವರೆಗಿನ ಅತಿ ದೊಡ್ಡ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಶ್ರೀಲಂಕಾದಲ್ಲಿ ಆಹಾರ, ಔಷಧ, ಪೆಟ್ರೋಲ್-ಡೀಸೆಲ್, ಅಡುಗೆ ಅನಿಲಕ್ಕೆ ಹಾಹಾಕಾರ ಏರ್ಪಟ್ಟಿದೆ.
ಶಾಲೆಗಳೇ ಬಂದ್
ಇಂಧನ ಕೊರತೆ ಹಿನ್ನೆಲೆಯಲ್ಲಿ ಜುಲೈ ೪ರಿಂದ ೧ ವಾರಗಳ ಕಾಲ ಶ್ರೀಲಂಕಾದಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಶಿಕ್ಷಕರು ಮತ್ತು ಮಕ್ಕಳನ್ನು ಶಾಲೆಗೆ ಕರೆತರಲು ಸಾರಿಗೆ ವ್ಯವಸ್ಥೆಗೆ ಬೇಕಾದ ಇಂಧನ ಕೊರತೆ ಉಂಟಾಗಿದೆ ಎಂದು ಸರ್ಕಾರ ತಿಳಿಸಿದೆ. ಪೆಟ್ರೋಲ್ ಬಂಕ್‌ಗಳಲ್ಲಿ ಕಿಲೋಮೀಟರ್ ಉದ್ದದ ಸರದಿ ನಿರ್ಮಾಣವಾಗಿದೆ. ತೈಲ ದಾಸ್ತಾನು ಕೇವಲ ೪,೦೦೦ ಟನ್‌ಗೆ ಕುಸಿದಿದೆ. ಇದು ಲಂಕಾದ ಒಂದು ದಿನದ ಖರ್ಚಿನ ಅಗತ್ಯಕ್ಕಿಂತಲೂ ಕಡಿಮೆಯಾಗಿದೆ ಎಂದು ಇಂಧನ ಸಚಿವ ಕಾಂಚನ ವಿಜೆಶೇಖರ ತಿಳಿಸಿದ್ದಾರೆ.