Site icon Vistara News

SEBI: ಅದಾನಿ ವರದಿ: ಹಿಂಡನ್‌ಬರ್ಗ್‌ಗೆ ಸೆಬಿಯಿಂದ ಶೋಕಾಸ್ ನೋಟಿಸ್

SEBI

SEBI

ಮುಂಬೈ: ಅಮೆರಿಕ ಮೂಲದ ಹಿಂಡನ್‌ಬರ್ಗ್‌ ರಿಸರ್ಚ್ (Hindenburg research) ಸಂಸ್ಥೆಯ ಅದಾನಿ ವರದಿಗೆ ಸಂಬಂಧಿಸಿದಂತೆ ಭಾರತದ ಷೇರು ಮಾರುಕಟ್ಟೆ ನಿಯಂತ್ರಕ ಸಂಸ್ಥೆ ಸೆಬಿ(SEBI) ಶೋಕಾಸ್ ನೋಟಿಸ್ ನೀಡಿದೆ. 46 ಪುಟಗಳ ಶೋಕಾಸ್ ನೋಟಿಸ್ ಅನ್ನು ಜೂನ್ 27ರಂದು ನೀಡಲಾಗಿದೆ ಎಂದು ಹಿಂಡನ್‌ಬರ್ಗ್‌ನ ಮೂಲಗಳು ತಿಳಿಸಿವೆ.

ಇದಕ್ಕೆ ಪ್ರತಿಕ್ರಿಯಿಸಿದ ಹಿಂಡನ್‌ಬರ್ಗ್‌, “ಪೂರ್ವ ನಿರ್ದೇಶಿತ ಉದ್ದೇಶವನ್ನು ಪೂರೈಸಲು ರೂಪಿಸಿರುವ ಈ ಶೋಕಾಸ್‌ ನೋಟಿಸ್‌ ಅನ್ನು ನಾವು ಅಸಂಬದ್ಧ ಎಂದು ಭಾವಿಸುತ್ತೇವೆ. ಭ್ರಷ್ಟಾಚಾರವನ್ನು ಬಯಲಿಗೆಳೆಯುವವರನ್ನು ಬೆದರಿಸಿ ಮೌನಗೊಳಿಸುವ ಪ್ರಯತ್ನ ಇದಾಗಿದೆ. ಭಾರತದ ಅತ್ಯಂತ ಪ್ರಬಲ ಸಂಸ್ಥೆಯೊಂದು ವಂಚನೆ ಎಸಗಿದೆ” ಎಂದು ಎಂದು ಆರೋಪಿಸಿದೆ.

ʼʼಭಾರತದಲ್ಲಿನ ಅತ್ಯಂತ ಶಕ್ತಿಶಾಲಿ ವ್ಯಕ್ತಿಗಳು ನಡೆಸುವ ಭ್ರಷ್ಟಾಚಾರ ಮತ್ತು ವಂಚನೆಯನ್ನು ಬಹಿರಂಗಪಡಿಸುವವರ ಬಾಯಿ ಮುಚ್ಚಿಸುವ ಪ್ರಯತ್ನ ಇದಾಗಿದೆ. ಸೆಬಿ ಕಳುಹಿಸಿದ ನೋಟಿಸ್‌ನಲ್ಲಿ ಕೆ-ಇಂಡಿಯಾ ಆಪೋರ್ಚೂನಿಟೀಸ್ ಫಂಡ್ ಹೆಸರನ್ನು ಪ್ರಸ್ತಾಪಿಸಿದೆ. ಆದರೆ ಅದು ಕೋಟಕ್ ಮಹೀಂದ್ರ ಬ್ಯಾಂಕ್ ಎಂದು ಸ್ಪಷ್ಟವಾಗಿ ಹೇಳಿಲ್ಲ ಯಾಕೆ? ಮತ್ತೊಬ್ಬ ಪ್ರಭಾವಶಾಲಿ ವ್ಯಕ್ತಿಯನ್ನು ರಕ್ಷಿಸುವ ಕೆಲಸ ಇದುʼʼ ಎಂದು ಹಿಂಡನ್‌ಬರ್ಗ್‌ ರಿಸರ್ಚ್ ಸಂಸ್ಥೆ ಖಾರವಾಗಿ ಪ್ರತಿಕ್ರಿಯಿಸಿದೆ.

ಕೆ ಇಂಡಿಯಾ ಆಪೋರ್ಚುನಿಟೀಸ್ ಫಂಡ್ ಅನ್ನು ಕೋಟಕ್ ಮಹೀಂದ್ರ ಇನ್ವೆಸ್ಟ್​ಮೆಂಟ್ ಲಿ ಸಂಸ್ಥೆ ನಿರ್ವಹಿಸುತ್ತದೆ. ಇದು ಉದಯ್ ಕೋಟಕ್ ಅವರ ಕೋಟಕ್ ಮಹೀಂದ್ರ ಬ್ಯಾಂಕ್ ಅಧೀನದಲ್ಲಿರುವ ಸಂಸ್ಥೆಯಾಗಿದೆ. ಕುತೂಹಲ ಎಂದರೆ ಉದಯ್ ಕೋಟಕ್ ಅವರು 2017ರಲ್ಲಿ ಸೆಬಿಯ ಕಾರ್ಪೊರೇಟ್ ಗವರ್ನೆನ್ಸ್ ಕಮಿಟಿಯ ನೇತೃತ್ವ ವಹಿಸಿದ್ದರು. ಇನ್ನು ತನ್ನ ವಿವಿಧ ನೆಟ್‌ವರ್ಕ್‌ಗಳನ್ನು ಬಳಸಿ ಅದಾನಿ ಸ್ಟಾಕ್​ಗಳನ್ನು ಶಾರ್ಟ್ ಮಾಡಿದ್ದೇವೆ ಎಂದು ಸೆಬಿ ಮಾಡಿರುವ ಆರೋಪವನ್ನು ಹಿಂಡನ್‌ಬರ್ಗ್‌ ನಿರಾಕರಿಸಿದೆ.

ಏನಿದು ಹಿಂಡನ್‌ಬರ್ಗ್‌ ವರದಿ ಕೇಸ್?‌

ಗೌತಮ್‌ ಅದಾನಿ ನೇತೃತ್ವದ ಅದಾನಿ ಗ್ರೂಪ್‌ ಅಕ್ರಮ ಎಸಗಿದೆ ಎಂದು ಅಮೆರಿಕದ ಹಿಂಡನ್‌ಬರ್ಗ್‌ ಸಂಸ್ಥೆಯು 2023ರ ಜನವರಿಯಲ್ಲಿ ಪ್ರಕಟಿಸಿದ ವರದಿಯು ದೇಶದಲ್ಲಿ ಸಂಚಲನ ಮೂಡಿಸಿತ್ತು. “ಹೂಡಿಕೆದಾರರಿಗೆ ಅದಾನಿ ಗ್ರೂಪ್‌ ವಂಚನೆ ಮಾಡದೆ. ಷೇರು ಮಾರುಕಟ್ಟೆಯಲ್ಲಿ ಅದಾನಿ ಗ್ರೂಪ್‌ ಷೇರು ಮೌಲ್ಯಗಳನ್ನು ಹೆಚ್ಚು ತೋರಿಸಿರುವುದು ವಂಚನೆಯಾಗಿದೆ” ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಇದಾದ ಬಳಿಕ ಅದಾನಿ ಗ್ರೂಪ್‌ ಷೇರು ಮೌಲ್ಯವು ದಿಢೀರನೆ ಕುಸಿದು ಭಾರಿ ನಷ್ಟವಾಗಿತ್ತು. ಅಲ್ಲದೆ, ಅದಾನಿ ಗ್ರೂಪ್‌ ದಿವಾಳಿಯಾಗುತ್ತದೆ ಎಂಬ ಮಾತುಗಳು ಕೇಳಿಬಂದಿದ್ದವು.

ಇದನ್ನೂ ಓದಿ: ಹಿಂಡನ್‌ಬರ್ಗ್‌ ಕೇಸ್; ಅದಾನಿಗೆ ಬಿಗ್‌ ರಿಲೀಫ್, ಸೆಬಿ ತನಿಖೆಯಲ್ಲಿ ಹಸ್ತಕ್ಷೇಪ ಇಲ್ಲ ಎಂದ ಸುಪ್ರೀಂ

Exit mobile version