ನವದೆಹಲಿ: ವ್ಯಾಪಾರಿಗಳು, ಕೈಗಾರಿಕೋದ್ಯಮಿಗಳು, ಬ್ಯಾಂಕುಗಳು, ಕಂಪನಿಗಳು ಅಷ್ಟೇ ಯಾಕೆ ದೇಶಗಳು ದಿವಾಳಿಯಾಗುವುದನ್ನು (Bankrupt) ಕೇಳಿದ್ದೇವೆ. ಆದರೆ, ನಗರವೊಂದು ದಿವಾಳಿ ಆಗುವುದು ಕೇಳಿದ್ದೀರಾ? ಇಲ್ಲ ಅಲ್ಲ… ಹಾಗಿದ್ದರೆ, ಈ ಸುದ್ದಿ ಓದಿ. ಬ್ರಿಟನ್‌ನ (Britain) ಎರಡನೇ ಅತಿ ದೊಡ್ಡ ನಗರ ಎಂಬ ಖ್ಯಾತಿ ಗಳಿಸಿರುವ ಬರ್ಮಿಂಗ್‌ಹ್ಯಾಮ್ (Birmingham City) ತಾನು ದಿವಾಳಿಯಾಗಿರುವುದಾಗಿ (City Bankrupt) ಮಂಗಳವಾರ ಘೋಷಿಸಿಕೊಂಡಿದೆ. ಒಟ್ಟು 954 ಮಿಲಿಯನ್ ಡಾಲರ್‌ವರೆಗೆ ಸಮಾನ ವೇತನ ಪಾವತಿಗೆ ಒಪ್ಪಿಗೆ ನೀಡಿದ ನಂತರ ಎಲ್ಲಾ ಅನಿವಾರ್ಯವಲ್ಲದ ಖರ್ಚುಗಳನ್ನು ನಿಲ್ಲಿಸಿದೆ. ಬರ್ಮಿಂಗ್‌ಹ್ಯಾಮ್ ಸಿಟಿ ಕೌನ್ಸಿಲ್ (Birmingham City Council) ಮಂಗಳವಾರ ಸೆಕ್ಷನ್ 114 ಸೂಚನೆಯನ್ನು ಸಲ್ಲಿಸಿ, ಅಗತ್ಯ ಸೇವೆಗಳನ್ನು ಹೊರತುಪಡಿಸಿ ಎಲ್ಲಾ ಖರ್ಚುಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ. ಇದರ ಅರ್ಥ, ಬರ್ಮಿಂಗ್‌ಹ್ಯಾಮ್ ಸ್ಥಳೀಯ ಆಡಳಿತದ ಬಳಿ, ಅಗತ್ಯ ಕಾರ್ಯಗಳಿಗೆ ಹಣ ಹೊರತುಪಡಿಸಿ, ಉಳಿದ ಯಾವುದೇ ವೆಚ್ಚಕ್ಕೆ ಹಣ ಹೊಂದಿಸಲು ಸಾಧ್ಯವಿಲ್ಲ. ಹಾಗಾಗಿ, ತಾನು ದಿವಾಳಿಯಾಗಿರುವುದಾಗಿ ಘೋಷಿಸಿಕೊಂಡಿದೆ.
ಸಮಾನ ವೇತನ ಪಾವತಿ ಕ್ಲೇಮ್‌ಗಳಿಂದಾಗಿ ಬರ್ಮಿಂಗ್‌ಹ್ಯಾಮ್ ಪ್ರಸ್ತುತ ಋಣಾತ್ಮಕ ಸಾಮಾನ್ಯ ನಿಧಿಯ ಸ್ಥಾನದಲ್ಲಿದೆ. ಕೌನ್ಸಿಲ್‌ಗೆ ಲಭ್ಯವಿರುವ ಹಣಕಾಸಿನ ಸಂಪನ್ಮೂಲಗಳನ್ನು ಈ ಸಮಾನ ಪಾವತಿಯು ಮೀರಿಸುತ್ತದೆ. ಅಂದರೆ, ಲಭ್ಯವಿರುವ ಹಣಕಾಗಿಂತಲೂ ವೆಚ್ಚವೇ ಹೆಚ್ಚಾಗಿದೆ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.
ಹೊಸ ಸಮಾನ ವೇತನದ ಹಕ್ಕುಗಳ ಸಂಭಾವ್ಯ ವೆಚ್ಚವು 650 ಮಿಲಿಯನ್ ಪೌಂಡ್ (ಸುಮಾರು 816 ಮಿಲಿಯನ್ ಡಾಲರ್) ಮತ್ತು 760 ಮಿಲಿಯನ್ ಪೌಂಡ್(ಸುಮಾರು 954 ಮಿಲಿಯನ್ ಡಾಲರ್) ನಡುವೆ ಇರುತ್ತದೆ. ಈ ಸಂಭಾವ್ಯ ಹೆಚ್ಚಿನ ವೆಚ್ಚವನ್ನು ಸರಿದೂಗಿಸಲು ಕೌನ್ಸಿಲ್ ಬಳಿ ಸಾಕಷ್ಟು ಸಂಪನ್ಮೂಲಗಳಿಲ್ಲ. ಸದ್ಯ ಅಥವಾ ಹಿಂದಿನ ಹಣಕಾಸು ವರ್ಷಗಳಲ್ಲಿ ಕೌನ್ಸಿಲ್ ಈ ಹೊಣೆಗಾರಿಕೆಯನ್ನು ಗುರುತಿಸಬೇಕಾಗಬಹುದು, ಇದು ಋಣಾತ್ಮಕ ಸಾಮಾನ್ಯ ನಿಧಿಯ ಸಮತೋಲನಕ್ಕೆ ಕಾರಣವಾಗುತ್ತದೆ ಎಂದು ಕೌನ್ಸಿಲ್ ತನ್ನ ನೋಟಿಸ್‌ನಲ್ಲಿ ತಿಳಿಸಿದೆ.
ಈ ಸುದ್ದಿಯನ್ನೂ ಓದಿ: CWG- 2022 | ಬರ್ಮಿಂಗ್ಹಮ್ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಅಥ್ಲೀಟ್‌ಗಳ ಸಾಧನೆಗಳೇನು?
ಈ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಕೌನ್ಸಿಲ್ ಯಾವುದೇ ಹೊಸ ವೆಚ್ಚದ ಜವಾಬ್ದಾರಿಯನ್ನು ಹೊರಲು ಮುಂದಾಗುತ್ತಿಲ್ಲ. ಹಾಗಾಗಿ, ಅಗತ್ಯ ವೆಚ್ಚಗಳನ್ನು ಹೊರತುಪಡಿಸಿ ಉಳಿದ ಯಾವುದೇ ವೆಚ್ಚಗಳಿಗೆ ತನ್ನ ಬಳಿ ಹಣ ಇಲ್ಲ ಎಂದು ಹೇಳಿಕೊಂಡಿದೆ.
ಬ್ರಿಟನ್‌ನ ಎರಡನೇ ಅತಿ ದೊಡ್ಡ ನಗರ ಎನಿಸಿಕೊಂಡಿರುವ ಬರ್ಮಿಂಗ್‌ಹ್ಯಾಮ್ ಸುಮಾರು 10 ಲಕ್ಷಕ್ಕೂ ಅಧಿಕ ಜನರಿಗೆ ಮೂಲಭೂತ ಸೇವೆಗಳನ್ನು ಒದಗಿಸುತ್ತದೆ. ಕಳೆದ ವರ್ಷ ಕಾಮನ್ವೆಲ್ತ್ ಗೇಮ್ಸ್ ಆತಿಥ್ಯ ನೀಡಿದ್ದ ಬರ್ಮಿಂಗ್‌ಹ್ಯಾಮ್, ಅತಿದೊಡ್ಡ ಬಹಸಂಸ್ಕೃತಿಯ ನಗರವಾಗಿದೆ.
ವಿದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.