Site icon Vistara News

ವಿಸ್ತಾರ Explainer | Sensex | ಸೆನ್ಸೆಕ್ಸ್‌@ 63,000, ಷೇರು ಪೇಟೆಗೆ ಹೂಡಿಕೆಯ ಪ್ರವಾಹ! ಏಕೆ-ಹೇಗೆ?

sensex up

ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌, (Sensex) 15 ವರ್ಷಗಳ ಹಿಂದೆ ಮೊದಲ ಬಾರಿಗೆ 20,000 ಅಂಕಗಳ ಮೈಲುಗಲ್ಲು ದಾಟಿದಾಗ, ಅನೇಕ ಮಂದಿ ಮನಸ್ಪೂರ್ತಿಯಾಗಿ ಒಪ್ಪಿರಲಿಲ್ಲ. ಕೃತಕವಾಗಿ ಸೆನ್ಸೆಕ್ಸ್‌ ಈ ಮಟ್ಟಕ್ಕೆ ಏರಿದೆ. ಮಾರುಕಟ್ಟೆಯ ಮೂಲಭೂತ ಅಂಶಗಳಿಂದ ಸಹಜವಾಗಿ ಏರಿದ್ದಲ್ಲ, ಗಾಳಿ ತುಂಬಿರುವ ಬಲೂನಿನಂತೆ ಯಾವಾಗ ಬೇಕಾದರೂ ಒಡೆಯಬಹುದು ಎಂದೇ ಹಲವಾರು ಮಂದಿ ಭಾವಿಸಿದ್ದರು. ಸೆನ್ಸೆಕ್ಸ್‌ 50-60 ಸಾವಿರ ಅಂಕಗಳ ಮೈಲುಗಲ್ಲನ್ನೂ ದಾಟಲಿದೆ ಎಂಬುದು ಕನಸು ಮನಸಿನಲ್ಲೂ ಯೋಚಿಸುವುದು ಕಷ್ಟವಾಗಿತ್ತು. ಆದರೆ ಇಂದು ಅದು ನನಸಾಗಿದೆ! ಬಾಂಬೆ ಸ್ಟಾಕ್ಸ್‌ ಎಕ್ಸ್‌ಚೇಂಜ್‌ನಲ್ಲಿ (BSE) 2022ರ ಡಿಸೆಂಬರ್‌ 1 ರ ವೇಳೆಗೆ ನೋಂದಾಯಿತ ಹೂಡಿಕೆದಾರರ ಸಂಖ್ಯೆ 10 ಕೋಟಿಗೆ ಏರಿಕೆಯಾಗಿದೆ. ಭಾರತದ 139 ಕೋಟಿ ಜನಸಂಖ್ಯೆಗೆ ಹೋಲಿಸಿದರೆ ಇದು ಕಡಿಮೆಯೇ ಆಗಿದೆ. ಹೀಗಾಗಿ ಭಾರತೀಯ ಷೇರು ಪೇಟೆಯ ಭವಿಷ್ಯದ ಬೆಳವಣಿಗೆ ಸಾಧ್ಯತೆಯೂ ಅಗಾಧವಾಗಿದೆ.

ಬಾಂಬೆ ಸ್ಟಾಕ್‌ ಎಕ್ಸ್‌ಚೇಂಜ್‌ (ಬಿಎಸ್‌ಇ)

ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ( Sensex @63,000) ಮೊಟ್ಟ ಮೊದಲ ಬಾರಿಗೆ 63,೦೦೦ ಅಂಕಗಳ ದಾಖಲೆಯ ಉನ್ನತ ಮಟ್ಟಕ್ಕೆ ಏರಿಕೆಯಾಗಿದೆ. 2022 ರ ನವೆಂಬರ್‌ 30ರ ಬುಧವಾರ ಕ್ರಮಿಸಿದ ಈ ಮೈಲುಗಲ್ಲಿಗೆ ಹಲವು ಕಾರಣಗಳಿಂದಾಗಿ ವಿಶೇಷ ಮಹತ್ವ ಇದೆ. ಅಂದು ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್‌ 417 ಅಂಕ ಏರಿಕೆಯಾಗಿ 63,099ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿದರೆ, ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 140 ಅಂಕ ಗಳಿಸಿ 18,758ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿತ್ತು. ದಶಕದ ಹಿಂದೆ ಯಾರೂ ಇಂಥ ಷೇರು ಸಂಚಲನ ಸಂಭವಿಸಬಹುದು ಎಂದು ಊಹಿಸುವಂತೆಯೂ ಇದ್ದಿರಲಿಲ್ಲ.

ಭಾರತೀಯ ಷೇರು ಮಾರುಕಟ್ಟೆ ಸೂಚ್ಯಂಕಗಳು ಸಾರ್ವಕಾಲಿಕ ಎತ್ತರಕ್ಕೇರಿವೆ. ಜಾಗತಿಕ ಷೇರು ಮಾರುಕಟ್ಟೆಯ ಮಂದಗತಿಯ ಹೊರತಾಗಿಯೂ ಹೆಚ್ಚಳ ದಾಖಲಿಸಿವೆ. ನಿಫ್ಟಿ ಮಿಡ್‌ ಕ್ಯಾಪ್‌ ಮತ್ತು ಸ್ಮಾಲ್‌ ಕ್ಯಾಪ್‌ ಸೂಚ್ಯಂಕಗಳು ತಮ್ಮ ಸಾರ್ವಕಾಲಿಕ ಎತ್ತರಕ್ಕಿಂತ ಈಗಲೂ ಕೆಳಗಿದ್ದರೂ, ಭಾರತೀಯ ಷೇರು ಮಾರುಕಟ್ಟೆ ಸೂಚ್ಯಂಕಗಳು ಏರುಗತಿಯ ಟ್ರೆಂಡ್‌ನಲ್ಲಿ ಇವೆ ಎಂದು ಸ್ವಸ್ತಿಕಾ ಇನ್ವೆಸ್ಟ್‌ಮೆಂಟ್‌ನ ಆರ್ಥಿಕ ತಜ್ಞ ಸಂತೋಷ್‌ ಮೀನಾ ತಿಳಿಸಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಕೋವಿಡ್-‌19 ಬಿಕ್ಕಟ್ಟಿನ ಬಳಿಕ ಹಿಂದೆಂದೂ ಕಂಡರಿಯದಂತೆ ರಿಟೇಲ್‌ ಹೂಡಿಕೆದಾರರು ಹೆಚ್ಚಿನ ಸಂಖ್ಯೆಯಲ್ಲಿ ಷೇರು ಮಾರುಕಟ್ಟೆಯನ್ನು ಪ್ರವೇಶಿಸುತ್ತಿದ್ದಾರೆ! ರಿಸ್ಕ್‌ ತೆಗೆದುಕೊಂಡು ಹೂಡಿಕೆ ಮಾಡುತ್ತಿದ್ದಾರೆ!

ಭಾರತೀಯರು ಷೇರು ಪೇಟೆಯಲ್ಲಿ ಹೂಡಿಕೆ ಹೆಚ್ಚಿಸಲು ಕಾರಣ:

ಜಾಗತಿಕ ಆರ್ಥಿಕ ಹಿಂಜರಿತದ ಆತಂಕ ಇದ್ದರೂ, ಭಾರತದ ಯುವ ಜನತೆ ಷೇರು ಮಾರುಕಟ್ಟೆ ಯಲ್ಲಿ ಹೂಡಿಕೆಯನ್ನು ದಿನೇ ದಿನೆ ಹೆಚ್ಚಿಸುತ್ತಿದ್ದಾರೆ. ನೇರವಾಗಿ ಷೇರುಗಳಲ್ಲಿ ಹಾಗೂ ಮ್ಯೂಚುವಲ್ ಫಂಡ್ ಗಳ ಮೂಲಕ ಹೂಡಿಕೆ ಹೆಚ್ಚಳವಾಗುತ್ತಿದೆ. ಡಿಮ್ಯಾಟ್‌ ಖಾತೆಗಳ ಸಂಖ್ಯೆಗಳು ಕೂಡ ಇದನ್ನು ಬಿಂಬಿಸಿದೆ. ಇದಕ್ಕೆ ಕಾರಣಗಳಿವೆ.

ಸದ್ಯದ ಪರಿಸ್ಥಿತಿಯಲ್ಲಿ ಹಣದುಬ್ಬರವನ್ನು ಮೀರಿ ಹೆಚ್ಚಿನ ಆದಾಯ ನೀಡಬಲ್ಲ ಸಾಧನಗಳ ಪೈಕಿ ಷೇರು ಮಾರುಕಟ್ಟೆ ಆಕರ್ಷಕ ಆಯ್ಕೆಯಾಗಿ ಪರಿಣಮಿಸಿದೆ.

ಷೇರು ಮಾರುಕಟ್ಟೆಯಲ್ಲಿ ನೂರು ರೂಪಾಯಿಗಳ ಸಣ್ಣ ಮೌಲ್ಯದಿಂದಲೂ ಹೂಡಿಕೆ ಆರಂಭಿಸಬಹುದು. ಷೇರುಗಳ ಬಗ್ಗೆ ಯಾವುದೇ ಹೆಚ್ಚಿನ ಅಧ್ಯಯನ ಇರದಿದ್ದರೂ, ಮ್ಯೂಚುವಲ್‌ ಫಂಡ್‌ಗಳ ಮೂಲಕವೂ ಹೂಡಿಕೆ ಮಾಡಬಹುದು.

ಬಂಗಾರ, ರಿಯಲ್‌ ಎಸ್ಟೇಟ್‌ನಲ್ಲಿ ಹೂಡಿಕೆಗೆ ಅವುಗಳದ್ದೇ ಆದ ಮಿತಿಗಳಿವೆ. ಬಂಗಾರ ತಾನಾಗಿಯೇ ಆದಾಯ ಕೊಡುವುದಿಲ್ಲ. ಅದರ ಬೆಲೆ ಏರಿದರೆ ಮಾತ್ರ ಲಾಭದಾಯಕ. ಷೇರುಗಳ ನಗದೀಕರಣವೂ ಸುಲಭ.

ಬ್ಯಾಂಕ್‌ ಅಥವಾ ಅಂಚೆ ಕಚೇರಿಗಳ ಉಳಿತಾಯ ಯೋಜನೆಗಳಲ್ಲಿ ಸಿಗುವ ಅಲ್ಪ ಬಡ್ಡಿ ದರಗಳು ಹಣದುಬ್ಬರ ಎದುರು ನಿಷ್ಪ್ರಯೋಜಕ ಎನ್ನಿಸಿವೆ. ಹೀಗಾಗಿ ಉಳಿದಿರುವ ಆಯ್ಕೆಯಾಗಿ ಷೇರು ಪೇಟೆ ಆಕರ್ಷಿಸುತ್ತದೆ.

ಷೇರು ಮಾರುಕಟ್ಟೆಯ ಬಗ್ಗೆ ತಿಳುವಳಿಕೆ ಮೂಡಿಸುವ ಹಲವಾರು ಮೂಲಗಳು ಈಗ ಲಭ್ಯವಿದೆ. ಜನತೆ ಅದರ ಉಪಯೋಗವನ್ನೂ ಪಡೆಯಲು ಆರಂಭಿಸಿದ್ದಾರೆ.

ರಷ್ಯಾ- ಉಕ್ರೇನ್ ಸಂಘರ್ಷದ ಆರಂಭದಲ್ಲಿ ಹೂಡಿಕೆ ಹಿಂತೆಗೆದುಕೊಂಡಿದ್ದ ವಿದೇಶಿ ಸಾಂಸ್ಥಿಕ ಹೂಡಿಕೆದಾರರು, ಮತ್ತೆ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಹೂಡುತ್ತಿದ್ದಾರೆ.

ಹಣದುಬ್ಬರದ ಪ್ರಮಾಣ ಮುಂಬರುವ ದಿನಗಳಲ್ಲಿ ಕಡಿಮೆಯಾಗುವ ಹಾಗೂ ಬ್ಯಾಂಕುಗಳಲ್ಲಿ ಬಡ್ಡಿದರ ಏರಿಕೆಯ ಪ್ರಮಾಣ ಕಡಿಮೆಯಾಗಬಹುದು ಎಂಬ ನಿರೀಕ್ಷೆ ಉಂಟಾಗಿರುವುದು.

ಅಮೆರಿಕದಲ್ಲಿ ಫೆಡರಲ್ ರಿಸರ್ವ್ ಮುಂದಿನ ಹಂತದಲ್ಲಿ ಗಣನೀಯ ಬಡ್ಡಿದರ ಏರಿಕೆ ಮಾಡುವ ಸಾಧ್ಯತೆ ಕಡಿಮೆಯಾಗಿರುವುದು ಸಕಾರಾತ್ಮಕ ಪ್ರಭಾವ ಬೀರಿದೆ. ಫೆಡರಲ್ ರಿಸರ್ವ್ ಬಡ್ಡಿದರ ಹೆಚ್ಚಿಸಿದರೆ , ಭಾರತದಂಥ ಮಾರುಕಟ್ಟೆಯಿಂದ ವಿದೇಶಿ ಹೂಡಿಕೆಯ ಹೊರ ಹರಿವು ಹೆಚ್ಚಳವಾಗಿ ಷೇರು ಸೂಚ್ಯಂಕ ಕುಸಿಯುತ್ತದೆ. ಆದರೆ ಅಂಥ ಸಾಧ್ಯತೆ ಕ್ಷೀಣಿಸಿದೆ. ವಿದೇಶಿ ಹೂಡಿಕೆಯ ಒಳ ಹರಿವು ಹೆಚ್ಚಳವಾದರೆ ಸೆನ್ಸೆಕ್ಸ್‌, ನಿಫ್ಟಿ 2023ರಲ್ಲೂ ಹೊಸ ಎತ್ತರಗಳನ್ನು ದಾಖಲಿಸುವ ನಿರೀಕ್ಷೆ ಇದೆ.

ಜಾಗತಿಕ ಷೇರು ಮಾರುಕಟ್ಟೆ ಕೂಡ ಚೇತರಿಸಿದೆ. ಕಚ್ಚಾ ತೈಲ ದರಗಳು ಇಳಿಯುತ್ತಿರುವುದು ಸಕಾರಾತ್ಮಕ ಪ್ರಭಾವ ಬೀರಿದೆ.

=======

ಷೇರು ಮಾರುಕಟ್ಟೆಯಲ್ಲಿ ಪ್ರಮುಖ 10 ಕಂಪನಿಗಳ ಪೈಕಿ 9 ಕಂಪನಿಗಳ ಮಾರುಕಟ್ಟೆ ಬಂಡವಾಳ ಮೌಲ್ಯದಲ್ಲಿ ಇತ್ತೀಚೆಗೆ ಗಣನೀಯ (Market valuation) ಹೆಚ್ಚಳವಾಗಿದೆ.

ಷೇರು ಮಾರುಕಟ್ಟೆಯಲ್ಲಿ 2022ರ ನವೆಂಬರ್‌ 25ಕ್ಕೆ ಪ್ರಮುಖ ಕಂಪನಿಗಳ ಮಾರುಕಟ್ಟೆ ಬಂಡವಾಳ ಮೌಲ್ಯ:

ರಿಲಯನ್ಸ್‌ ಇಂಡಸ್ಟ್ರೀಸ್:‌ 17,70,532

ಟಿಸಿಎಸ್:‌ 12,39,997 ಕೋಟಿ ರೂ.

ಎಚ್‌ಡಿಎಫ್‌ಸಿ ಬ್ಯಾಂಕ್:‌ 9,01,523 ಕೋಟಿ ರೂ.

ಇನ್ಫೋಸಿಸ್:‌ 6,86,211 ಕೋಟಿ ರೂ.

ಐಸಿಐಸಿಐ ಬ್ಯಾಂಕ್:‌ 6,48,362 ಕೋಟಿ ರೂ.

ಹಿಂದುಸ್ತಾನ್‌ ಯುನಿಲಿವರ್:‌ 5,95,997 ಕೋಟಿ ರೂ.

ಎಸ್‌ಬಿಐ: 5,42,125 ಕೋಟಿ ರೂ.

ಎಚ್‌ಡಿಎಫ್‌ಸಿ: 4,87,908 ಕೋಟಿ ರೂ.

ಭಾರ್ತಿ ಏರ್‌ಟೆಲ್:‌ 4,71,094 ಕೋಟಿ ರೂ.

ಅದಾನಿ ಎಂಟರ್‌ಪ್ರೈಸಸ್:‌ 4,44,982 ಕೋಟಿ ರೂ.

============‌

ಬಿಎಸ್‌ಇ ಮತ್ತು ಸೆನ್ಸೆಕ್ಸ್ ಇತಿಹಾಸವೇನು?

ಮುಂಬಯಿ ಷೇರು ಮಾರುಕಟ್ಟೆ (Bombay stock exchange)‌ ಹಾಗೂ ಅದರ ಜನಪ್ರಿಯ ಸೂಚ್ಯಂಕ ಸೆನ್ಸೆಕ್ಸ್ ಇತಿಹಾಸ ನೋಡೋಣ.

ಮುಂಬಯಿ ಷೇರು ಷೇರು ಮಾರುಕಟ್ಟೆ ಅಥವಾ ಬಾಂಬೆ ಸ್ಟಾಕ್‌ ಎಕ್ಸ್‌ಚೇಂಜ್‌ ಏಷ್ಯಾದ ಮೊದಲ ಷೇರು ವಿನಿಮಯ ಕೇಂದ್ರವಾಗಿದೆ. 1875ರಲ್ಲಿ ಇದು ಸ್ಥಾಪನೆಯಾಗಿತ್ತು. 1986ರ ಜನವರಿ 1ರಂದು ಬಿಎಸ್‌ಇ ಸೂಚ್ಯಂಕಕ್ಕೆ ಸೆನ್ಸೆಕ್ಸ್‌ ಎಂದು ಹೆಸರಿಡಲಾಯಿತು. 30 ಪ್ರಬಲ ಕಂಪನಿಗಳು ಇಲ್ಲಿ ನೋಂದಣಿಯಾಗಿದ್ದು, ಅವುಗಳ ಷೇರು ದರ ಬಿಎಸ್‌ಇ ಸೂಚ್ಯಂಕದ ಚಲನವಲನಗಳ ಮೇಲೆ ಪ್ರಭಾವ ಬೀರುತ್ತವೆ. ಈ 30 ಕಂಪನಿಗಳನ್ನು ಬಿಎಸ್‌ಇನ Constituent ಎನ್ನುತ್ತಾರೆ. ಬಿಎಸ್‌ಇನಲ್ಲಿ ನೋಂದಣಿಯಾಗಿರುವ ಎಲ್ಲ ಕಂಪನಿಗಳ ಷೇರುಗಳ ಒಟ್ಟು ಮೌಲ್ಯ 276 ಲಕ್ಷ ಕೋಟಿ ರೂ.ಗಳಾಗಿದೆ.

2022ರ ಡಿಸೆಂಬರ್ ೧ ರ ವೇಳೆಗೆ ಒಟ್ಟು 5,2೯೫ ಕಂಪನಿಗಳು ಬಾಂಬೆ ಸ್ಟಾಕ್‌ ಎಕ್ಸ್‌ಚೇಂಜ್‌ನಲ್ಲಿ ನೋಂದಣಿಯಾಗಿವೆ.

ಸೆನ್ಸೆಕ್ಸ್‌ ಹೆಸರು ಸೂಚಿಸಿದವರು ಯಾರು?

ಐಐಟಿ ಕಾನ್ಪುರದಲ್ಲಿ ಎಂಜಿನಿಯರಿಂಗ್‌ ಪದವಿ ಗಳಿಸಿದ್ದ ದೀಪಕ್‌ ಮೊಹಾನಿ ಎಂಬ ಷೇರು ಮಾರುಕಟ್ಟೆ ತಜ್ಞರು ಬಿಎಸ್‌ಇ ಸೂಚ್ಯಂಕಕ್ಕೆ ಸೆನ್ಸೆಕ್ಸ್‌ ಎಂಬ ಹೆಸರನ್ನು ಸೂಚಿಸಿದವರು. ಭಾರತದಲ್ಲಿ ಷೇರುಗಳ ಟೆಕ್ನಿಕಲ್‌ ಅನಾಲಿಸಿಸ್‌ ಚಾರ್ಟ್‌ಗಳನ್ನು ಜನಪ್ರಿಯಗೊಳಿಸುವಲ್ಲಿ ಅವರ ಪಾತ್ರ ದೊಡ್ಡದು. ಐಐಎಂನಿಂದ ಮ್ಯಾನೇಜ್‌ಮೆಂಟ್‌ನಲ್ಲಿ ಪದವಿ ಗಳಿಸಿದ್ದ ದೀಪಕ್‌ ಮೊಹಾನಿ ಅವರು, ದೀರ್ಘಕಾಲೀನವಾಗಿ ಷೇರು ಹೂಡಿಕೆ ಲಾಭದಾಯಕ ಎನ್ನುತ್ತಾರೆ.

ಬಿಎಸ್‌ಇ 30 ಕಂಪನಿಗಳು ಇಂತಿವೆ:

ಏಷ್ಯನ್‌ ಪೇಂಟ್ಸ್‌, ಎಕ್ಸಿಸ್‌ ಬ್ಯಾಂಕ್‌, ಬಜಾಜ್‌ ಫೈನಾನ್ಸ್‌, ಬಜಾಜ್‌ ಫಿನ್‌ ಸರ್ವ್‌, ಭಾರ್ತಿ ಏರ್‌ಟೆಲ್‌, ಡಾ.ರೆಡ್ಡೀಸ್‌ ಲ್ಯಾಬ್‌, ಎಚ್‌ಸಿಎಲ್‌ ಟೆಕ್ನಾಲಜೀಸ್‌, ಎಚ್‌ಡಿಎಫ್‌ಸಿ, ಎಚ್‌ಡಿಎಫ್‌ಸಿ ಬ್ಯಾಂಕ್‌, ಎಚ್‌ಯುಎಲ್‌, ಐಸಿಐಸಿಐ ಬ್ಯಾಂಕ್‌, ಇಂಡಸ್‌ಇಂಡ್‌ ಬ್ಯಾಂಕ್‌, ಇನ್ಫೋಸಿಸ್‌, ಐಟಿಸಿ, ಕೋಟಕ್‌ ಮಹೀಂದ್ರಾ ಬ್ಯಾಂಕ್‌, ಎಲ್&ಟಿ, ಎಂ&ಎಂ, ಮಾರುತಿ ಸುಜುಕಿ, ನೆಸ್ಲೆ, ಎನ್‌ಟಿಪಿಸಿ, ಪವರ್‌ ಗ್ರಿಡ್‌, ರಿಲಯನ್ಸ್‌ ಇಂಡಸ್ಟ್ರೀಸ್‌, ಎಸ್‌ಬಿಐ, ಸನ್‌ ಫಾರ್ಮಾ, ಟಾಟಾ ಸ್ಟೀಲ್‌, ಟಿಸಿಎಸ್‌, ಟೆಕ್‌ ಮಹೀಂದ್ರಾ, ಟೈಟನ್‌, ಅಲ್ಟ್ರಾಟೆಕ್‌ ಸಿಮೆಂಟ್‌ ಮತ್ತು ವಿಪ್ರೊ. ಈ ಬಿಎಸ್‌ಇ 30 ಕಂಪನಿಗಳ ಒಟ್ಟು ಬಂಡವಾಳ ಮಾರುಕಟ್ಟೆ ಮೌಲ್‌ 120,506,278 ಕೋಟಿ ರೂ.ಗಳಾಗಿವೆ.

ಸೆನ್ಸೆಕ್ಸ್‌ ಸಾಧಿಸಿದ ಮೈಲುಗಲ್ಲುಗಳ ಹಿನ್ನೋಟ:

1000 ಅಂಕಗಳ ಸಾಧನೆ: 25 ಜುಲೈ 1990

5,000 : 11 ಅಕ್ಟೋಬರ್‌ 1999

10,000 : 7 ಫೆಬ್ರವರಿ 2006

20,000 : 11 ಡಿಸೆಂಬರ್‌ 2007

30,000 : 4 ಮಾರ್ಚ್‌ 2015

40,000: 23 ಮೇ 2019

50,000: 21 ಜನವರಿ 2021

60,000: 24 ಸೆಪ್ಟೆಂಬರ್‌ 2021

ನ್ಯಾಶನಲ್‌ ಸ್ಟಾಕ್‌ ಎಕ್ಸ್‌ಚೇಂಜ್‌ ಆಫ್‌ ಇಂಡಿಯಾ (National stock exchange of India)

ನ್ಯಾಶನಲ್‌ ಸ್ಟಾಕ್‌ ಎಕ್ಸ್‌ಚೇಂಜ್‌, ಮುಂಬಯಿ

ಬಾಂಬೆ ಸ್ಟಾಕ್ಸ್‌ ಎಕ್ಸ್‌ಚೇಂಜ್‌ (BSE) ಮಾದರಿಯಲ್ಲಿ ಮತ್ತೊಂದು ಪ್ರಮುಖ ಷೇರು ವಿನಿಮಯ ಕೇಂದ್ರವೇ ನ್ಯಾಶನಲ್‌ ಸ್ಟಾಕ್ಸ್‌ ಎಕ್ಸ್‌ಚೇಂಜ್‌ ಆಫ್‌ ಇಂಡಿಯಾ (NSE). ಬಿಎಸ್‌ಇ ಹಾಗೂ ಎನ್‌ಎಸ್‌ಇ ಎರಡೂ ಕೇಂದ್ರಗಳು ಮುಂಬಯಿನಲ್ಲಿವೆ.

ಮುಂಬಯಿನಲ್ಲಿ 30 ವರ್ಷಗಳ ಹಿಂದೆ, 1992ರಲ್ಲಿ ನ್ಯಾಶನಲ್‌ ಸ್ಟಾಕ್ಸ್‌ ಎಕ್ಸ್‌ಚೇಂಜ್‌ ಸ್ಥಾಪನೆಯಾಯಿತು. ನಾನಾ ದೇಶೀಯ ಮತ್ತು ಜಾಗತಿಕ ಹಣಕಾಸು ಸಂಸ್ಥೆಗಳು ಸೇರಿ ಎನ್‌ಎಸ್‌ಇಯನ್ನು ಸ್ಥಾಪಿಸಿವೆ. ಆಶೀಷ್‌ ಕುಮಾರ್‌ ಚೌಹಾಣ್‌ ಹಾಲಿ ಸಿಇಒ ಆಗಿದ್ದಾರೆ. 2,002 ಕಂಪನಿಗಳು ಎನ್‌ಎಸ್‌ಇನಲ್ಲಿ ನೋಂದಣಿಯಾಗಿವೆ.

ಡಿಮ್ಯಾಟ್‌ ಅಕೌಂಟ್‌ಗಳ ಹೆಚ್ಚಳ:

ಭಾರತದಲ್ಲಿ ಡಿಮ್ಯಾಟ್‌ ಅಕೌಂಟ್‌ಗಳ ಸಂಖ್ಯೆ 2022ರ ಆಗಸ್ಟ್‌ನಲ್ಲಿ ಮೊದಲ ಬಾರಿಗೆ 10 ಕೋಟಿಗೆ ಏರಿಕೆಯಾಯಿತು. ಕೋವಿಡ್-‌19 ಬರುವುದಕ್ಕೆ ಮುನ್ನ 4 ಕೋಟಿ ಇದ್ದ ಡಿಮ್ಯಾಟ್‌ ಖಾತೆಗಳ ಸಂಖ್ಯೆ ಈಗ 10 ಕೋಟಿ ದಾಟಿರುವುದು ಗಮನಾರ್ಹ. ಮೂರು ವರ್ಷಗಳಲ್ಲಿ ಡಿಮಾಟ್‌ ಖಾತೆಗಳ ಸಂಖ್ಯೆ ಮೂರು ಪಟ್ಟು ಹೆಚ್ಚಳವಾಗಿದೆ.

ಮ್ಯೂಚುವಲ್‌ ಫಂಡ್‌ ಸಿಪ್‌ ಮೂಲಕ 13,000 ಕೋಟಿ ರೂ. ಹೂಡಿಕೆ!

2022ರ ಅಕ್ಟೋಬರ್‌ನಲ್ಲಿ ಮ್ಯೂಚುವಲ್‌ ಫಂಡ್‌ ಸಿಪ್‌ ಮೂಲಕ ಷೇರು ಮಾರುಕಟ್ಟೆಯಲ್ಲಿ ಬರೋಬ್ಬರಿ 13,000 ಕೋಟಿ ರೂ. ಹೂಡಿಕೆಯಾಗಿತ್ತು. ಸೆಪ್ಟೆಂಬರ್‌ನಲ್ಲಿ 12,976 ಕೋಟಿ ರೂ. ಹೂಡಿಕೆ ಆಗಿತ್ತು. ಇದಲ್ಲದೆ ನೇರವಾಗಿ ಷೇರುಗಳಲ್ಲಿ ಹೂಡಿಕೆಯೂ ಗಣನೀಯ ಹೆಚ್ಚಳವಾಗಿದೆ.

2023ರಲ್ಲಿ 80,000 ಅಂಕಗಳಿಗೆ ಸೆನ್ಸೆಕ್ಸ್‌ ಜಿಗಿತ?

ಜಾಗತಿಕ ಬ್ರೋಕರೇಜ್‌ ಕಂಪನಿ ಮೋರ್ಗಾನ್‌ ಸ್ಟಾನ್ಲಿ ಸಂಸ್ಥೆಯ ಪ್ರಕಾರ, ಸೆನ್ಸೆಕ್ಸ್‌ 2023ರ ಡಿಸೆಂಬರ್‌ ವೇಳೆಗೆ 80,000 ಅಂಕಗಳ ಗಡಿ ದಾಟಲಿದೆ. ಹೀಗಿದ್ದರೂ, ಸೆನ್ಸೆಕ್ಸ್‌ ಈ ದಾಖಲೆಯ 80,000 ಅಂಕಗಳ ಗಡಿ ಮುಟ್ಟುವ ಸಲುವಾಗಿ, ಜಾಗತಿಕ ಬಾಂಡ್‌ ಸೂಚ್ಯಂಕಗಳಲ್ಲಿ (Global bond indices) ಭಾರತದ ಬಾಂಡ್‌ ಕೂಡ ಸ್ಥಾನ ಗಳಿಸಬೇಕು. ಆದರೆ ಜಾಗತಿಕ ಬಾಂಡ್‌ ಸೂಚ್ಯಂಕಗಳಲ್ಲಿ ಭಾರತ ಸರ್ಕಾರದ ಬಾಂಡ್‌ಗಳು ಯಾವಾಗ ಸೇರ್ಪಡೆಯಾಗಲಿದೆ ಎಂಬುದು ಸ್ಪಷ್ಟವಾಗಿಲ್ಲ. ಮೋರ್ಗಾನ್‌ ಸ್ಟಾನ್ಲಿಯ ಈ ಹಿಂದಿನ ಅಂದಾಜಿನ ಪ್ರಕಾರ 2022ರ ಆರಂಭದಲ್ಲೇ ಆಗಬೇಕಿತ್ತು. ರಾಯ್ಟರ್ಸ್‌ ಪ್ರಕಾರ ಬಾಂಡ್‌ ಸೆಟ್ಲ್‌ಮೆಂಟ್‌ ನಿಯಮಗಳು, ತೆರಿಗೆ ವ್ಯವಸ್ಥೆ ಇತ್ಯರ್ಥವಾಗಬೇಕಿದೆ. ಹೀಗಾಗಿ ವಿಳಂಬವಾಗಿದೆ.

ಒಂದು ವೇಳೆ ಜಾಗತಿಕ ಬಾಂಡ್‌ ಇಂಡೆಕ್ಸ್‌ಗಳಲ್ಲಿ ಭಾರತದ ಬಾಂಡ್‌ ಸೇರ್ಪಡೆಯಾದರೆ, ಒಂದೇ ವರ್ಷದಲ್ಲಿ 20 ಶತಕೋಟಿ ಡಾಲರ್‌ (1.62 ಲಕ್ಷ ಕೋಟಿ ರೂ.) ಹೂಡಿಕೆಯ ಒಳಹರಿವು ಸಿಗಬಹುದು. ಇದು ಷೇರು ಸೂಚ್ಯಂಕದ ದಾಖಲೆ ಜಿಗಿತಕ್ಕೆ ಕಾರಣವಾಗಲಿದೆ ಎಂದು ಮೋರ್ಗಾನ್‌ ಸ್ಟಾನ್ಲಿ ತಿಳಿಸಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಎಫೆಕ್ಟ್:

ಪ್ರಧಾನಿ ನರೇಂದ್ರ ಮೋದಿ ಅವರು 2014 ರ ಮೇ 26ರಂದು ಅಧಿಕಾರ ವಹಿಸಿಕೊಂಡ ಬಳಿಕ ಕಳೆದ 8 ವರ್ಷಗಳಲ್ಲಿ ಷೇರು ಮಾರುಕಟ್ಟೆ ಬಂಡವಾಳ ಮೌಲ್ಯ ಮುಂಬಯಿ ಷೇರು ಮಾರುಕಟ್ಟೆ ಬಿಎಸ್‌ಇನಲ್ಲಿ ನೋಂದಾಯಿತ ಷೇರುಗಳ ಮಾರುಕಟ್ಟೆ ಬಂಡವಾಳ ಮೌಲ್ಯ 3 ಪಟ್ಟು ಹೆಚ್ಚಳ ಆಗಿದೆ. 1,450 ಷೇರುಗಳ ಮೌಲ್ಯ ಇಮ್ಮಡಿಗೂ ಹೆಚ್ಚು ವೃದ್ಧಿಸಿದೆ. ಮೋದಿ ಸರಕಾರ ತೆಗೆದುಕೊಂಡಿರುವ ಹಲವಾರು ಆರ್ಥಿಕ ಸುಧಾರಣೆಯ ಕ್ರಮಗಳು ಷೇರು ಮಾರುಕಟ್ಟೆಯ ಮೇಲೆ ಸಕಾರಾತ್ಮಕ ಪ್ರಭಾವ ಬೀರಿವೆ. ನೋಟು ಅಮಾನ್ಯತೆ, ಜಿಎಸ್‌ಟಿ, ಅಫರ್ಡಬಲ್‌ ಹೌಸಿಂಗ್‌, ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳು, ಗತಿ ಶಕ್ತಿ ಯೋಜನೆ, ಮೇಕಿಂಗ್‌ ಇಂಡಿಯಾ, ಡಿಜಿಟಲ್‌ ಇಂಡಿಯಾ ಇತ್ಯಾದಿ ಯೋಜನೆಗಳು ಷೇರು ಹೂಡಿಕೆದಾರರನ್ನು ಉತ್ತೇಜಿಸಿವೆ. ಮೋದಿ ನಾಯಕತ್ವದ ಭಾಜಪ ಚುನಾವಣೆಗಳಲ್ಲಿ ಗೆದ್ದಾಗ ಷೇರು ಪೇಟೆ ಚೇತರಿಸಿದೆ.

ಮೋದಿ ಸರಕಾರದ ಆರ್ಥಿಕ ಸುಧಾಣಾ ಕ್ರಮಗಳು, ಮಾರುಕಟ್ಟೆಯ ಅಚ್ಚುಕಟ್ಟಾದ ನಿಯಂತ್ರಕ ವ್ಯವಸ್ಥೆ ಸಕಾರಾತ್ಮಕ ಪ್ರಭಾವ ಬೀರಿದೆ. ಕಾರ್ಪೊರೇಟ್‌ ಕಂಪನಿಗಳ ಆದಾಯ ವೃದ್ಧಿಗೆ ಸಹಕರಿಸಿದೆ. ಇದು ಅವುಗಳ ಷೇರುಗಳು ಲಾಭ ಗಳಿಸಲೂ ಕಾರಣವಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.

ಬಿಎಸ್ಇ ಮಾರುಕಟ್ಟೆ ಬಂಡವಾಳ ಮೌಲ್ಯ 8 ವರ್ಷಗಳ ಹಿಂದೆ 85.20 ಲಕ್ಷ ಕೋಟಿ ರೂ.ಗಳಾಗಿತ್ತು. ಈಗ 253.79 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. 2.98 ಪಟ್ಟು ವೃದ್ಧಿಸಿದೆ. ಈ ಅವಧಿಯಲ್ಲಿ 220 ಕಂಪನಿಗಳು ಷೇರು ಮಾರುಕಟ್ಟೆಯಲ್ಲಿ ಐಪಿಒ ಮೂಲಕ 3.2 ಲಕ್ಷ ಕೋಟಿ ರೂ.ಗೂ ಹೆಚ್ಚು ಬಂಡವಾಳವನ್ನು ಪಡೆದಿವೆ.

1,450 ಷೇರುಗಳಲ್ಲಿ ಹೂಡಿಕೆದಾರರ ಲಾಭ ಡಬಲ್‌

ಅಂಕಿ ಅಂಶಗಳ ಪ್ರಕಾರ ಬಿಎಸ್‌ಇಯಲ್ಲಿ ನೋಂದಣಿಯಾಗಿರುವ 1,450 ಷೇರುಗಳಲ್ಲಿ ಹೂಡಿಕೆದಾರರಿಗೆ ಲಾಭ ಇಮ್ಮಡಿಯಾಗಿದೆ.

ಬಜಾಜ್‌ ಫೈನಾನ್ಸ್‌ ಮೌಲ್ಯ 34 ಪಟ್ಟು ಹೆಚ್ಚಳ

ಮಿಡ್‌ ಕ್ಯಾಪ್‌ ಮೌಲ್ಯದ ಕಂಪನಿಗಳ ಪೈಕಿ ಬಜಾಜ್‌ ಫೈನಾನ್ಸ್‌ನ ಮಾರುಕಟ್ಟೆ ಮೌಲ್ಯ ಕಳೆದ 8 ವರ್ಷಗಳಲ್ಲಿ 3,309 ಪರ್ಸೆಂಟ್‌ ಹೆಚ್ಚಳವಾಗಿದೆ. ಅಂದರೆ 10,135 ಕೋಟಿ ರೂ.ಗಳಿಂದ 3,45,548 ಕೋಟಿ ರೂ.ಗೆ ವೃದ್ಧಿಸಿದೆ. ಬಜಾಜ್‌ ಫಿನ್‌ ಸರ್ವ್‌ನ ಮಾರುಕಟ್ಟೆ ಬಂಡವಾಳ ಮೌಲ್ಯ 14 ಪಟ್ಟು ಹೆಚ್ಚಳವಾಗಿದೆ. 14,171 ಕೋಟಿ ರೂ.ಗಳಿಂದ 1,97,468 ಕೋಟಿ ರೂ.ಗೆ ಏರಿಕೆಯಾಗಿದೆ.

ಮೈಂಡ್‌ ಟ್ರೀ (7.34 ಪಟ್ಟು), ಬ್ರಿಟಾನಿಯಾ ಇಂಡಸ್ಟ್ರೀಸ್‌ ( 7.71ಪಟ್ಟು), ಪೇಜ್‌ ಇಂಡಸ್ಟ್ರೀಸ್‌ (7.34 ಪಟ್ಟು), ಬರ್ಜರ್‌ ಪೇಂಟ್ಸ್‌ ( 7.24ಪಟ್ಟು), ಬಾಲಕೃಷ್ಣ ಇಂಡಸ್ಟ್ರೀಸ್‌ (7.22 ಪಟ್ಟು), ಟಾಟಾ ಕನ್‌ಸ್ಯೂಮರ್‌ ಪ್ರಾಡಕ್ಟ್ಸ್‌ (6.87 ಪಟ್ಟು) ಮಾರುಕಟ್ಟೆ ಬಂಡವಾಳ ಮೌಲ್ಯವನ್ನು ವೃದ್ಧಿಸಿವೆ.

ಟೈಟನ್‌, ಅದಾನಿ ಪವರ್‌ ಮೌಲ್ಯ 5 ಪಟ್ಟು ಏರಿಕೆ

ಟೈಟನ್‌ ಇಂಡಸ್ಟ್ರೀಸ್‌, ಅದಾನಿ ಪವರ್‌, ಹ್ಯಾವೆಲ್ಸ್‌ ಇಂಡಿಯಾ, ಪಿಡಿಲೈಟ್‌ ಇಂಡಸ್ಟ್ರೀಸ್‌, ಮುತ್ತೂಟ್‌ ಫೈನಾನ್ಸ್‌, ಇನ್ಫೋ ಎಡ್ಜ್‌, ಏಷ್ಯನ್‌ ಪೇಂಟ್ಸ್‌, ಎಂಪಸಿಸ್‌, ಟಿವಿಎಸ್‌ ಮೋಟಾರ್‌, ಕೋಟಕ್‌ ಮಹೀಂದ್ರಾ ಬ್ಯಾಂಕ್‌, ವೋಲ್ಟಾಸ್‌ ಕಂಪನಿಯ ಷೇರುಗಳ ಮಾರುಕಟ್ಟೆ ಬಂಡವಾಳ ಮೌಲ್ಯವು ಕಳೆದ 8 ವರ್ಷಗಳಲ್ಲಿ 5 ಪಟ್ಟು ಹೆಚ್ಚಳವಾಗಿದೆ.‌

ಸಾಕಷ್ಟು ಅಧ್ಯಯನ ನಡೆಸಿ ಷೇರು ಹೂಡಿಕೆ ಸೂಕ್ತ

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದರಲ್ಲಿ ರಿಸ್ಕ್‌ ಕೂಡ ಇದೆ. ಏಕೆಂದರೆ ಇಲ್ಲಿ ಮಾರುಕಟ್ಟೆಯ ಏರಿಳಿತಗಳು ಹೂಡಿಕೆಯ ಮೇಲೆ ಪ್ರಭಾವ ಬೀರುತ್ತವೆ. ಷೇರು ಹೂಡಿಕೆಯಲ್ಲಿ ಲಾಭ-ನಷ್ಟ ಎರಡೂ ಆಗುತ್ತಿರುತ್ತವೆ. ಸರಿಯಾಗಿ ಅರಿತು ಹೂಡಿಕೆ ಮಾಡಿದರೆ ರಿಸ್ಕ್‌ಗಳನ್ನು ಎದುರಿಸಿ ಉತ್ತಮ ಆದಾಯ ಪಡೆಯಲೂ ಸಾಧ್ಯ.

ಆರ್ಥಿಕ ತಜ್ಞರಾದ ರಂಗಸ್ವಾಮಿ ಮೂಕನಹಳ್ಳಿ ಅವರು ತಮ್ಮ ಷೇರು ಸಾಮ್ರಾಜ್ಯ ಕಲಿತವನೇ ಅಧಿಪತಿ ಎಂಬ ಕೃತಿಯಲ್ಲಿ, ಎಲ್ಲರೂ ಒಂದಷ್ಟಾದರೂ ಷೇರು ಮಾರುಕಟ್ಟೆಯ ಜ್ಞಾನವನ್ನು ಗಳಿಸುವುದು ಅಗತ್ಯ ಎನ್ನುತ್ತಾರೆ.

ದಿನದಿಂದ ದಿನಕ್ಕೆ ಬ್ಯಾಂಕಿನ ಬಡ್ಡಿ ದರಗಳು ದಕ್ಷಿಣದ ಕಡೆಗೆ ಮುಖ ಮಾಡಿವೆ. ಆದರೆ ಷೇರು ಮಾರುಕಟ್ಟೆ ಕೂಡ ಕಡಿಮೆ ಅಪಾಯವೇನಲ್ಲ. ಹೀಗಾಗಿ ಹೆಚ್ಚೆಚ್ಚು ಕಲಿಕೆ ಮತ್ತು ಗ್ರಹಿಕೆಯಿಂದ ಷೇರು ಮಾರುಕಟ್ಟೆ ಕುರಿತ ಸಂಶಯ, ಭಯವನ್ನು ಹೋಗಲಾಡಿಸಬಹುದು. ದೂರದಿಂದ ನಿಂತು ನೋಡುವ ಜನ ಸಾಮಾನ್ಯರಿಗೆ ಷೇರು ಮಾರುಕಟ್ಟೆ ಅಚ್ಚರಿಯ ಆಗರ. ಸದ್ದಿಲ್ಲದೆ ಹಣ ಗಳಿಸುವವರ ಕಂಡು ಹುಬ್ಬೇರಿಸುತ್ತಾರೆ. ಇನ್ನೇನು ಧುಮುಕಬೇಕು ಎನ್ನುವಾಗ ಷೇರಿನಲ್ಲಿ ದುಡ್ಡು ಕಳೆದುಕೊಂಡವರ ಕಥೆಗಳೂ ಕೇಳಬಹುದು. ಆದ್ದರಿಂದ ಅಧ್ಯಯನ ಮುಖ್ಯ ಎನ್ನುತ್ತಾರೆ ಅವರು.

ಭಾರತದ ಷೇರು ಮಾರುಕಟ್ಟೆಯಲ್ಲಿ ಇದುವರೆಗೂ ವಿದೇಶಿ ಸಾಂಸ್ಥಿಕ ಹೂಡಿಕೆದಾರರ ಆಟವೇ ಪ್ರಧಾನವಾಗಿತ್ತು. ಆದರೆ ಕಳೆದ ಕೆಲ ವರ್ಷಗಳಿಂದ ಪರಿಸ್ಥಿತಿ ವೇಗವಾಗಿ ಬದಲಾಗುತ್ತಿದೆ. ಭಾರತೀಯ ಜನ ಸಾಮಾನ್ಯರು, ಮಧ್ಯಮ ವರ್ಗ ಮತ್ತು ಮೇಲ್ಮಧ್ಯಮ ವರ್ಗದ ಜನತೆ ಕೂಡ ಧಾರಾಳವಾಗಿ ಷೇರುಗಳಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಗೃಹಿಣಿಯರು, ವಿದ್ಯಾರ್ಥಿಗಳು ಕೂಡ ಷೇರುಗಳಲ್ಲಿ ಹೂಡುತ್ತಿರುವುದನ್ನು ಹೆಮ್ಮೆಯಿಂದ ಹೇಳುತ್ತಾರೆ. ಪತ್ರಿಕೆ, ಟಿ.ವಿ, ಡಿಜಿಟಲ್‌ ವೆಬ್‌ ಪೋರ್ಟಲ್‌, ಯೂಟ್ಯೂಬ್‌ಗಳಲ್ಲೂ ಷೇರು ಹೂಡಿಕೆ ಕುರಿತ ತಿಳುವಳಿಕೆಯನ್ನು ಪಡೆಯಬಹುದು.

Exit mobile version