ನವ ದೆಹಲಿ: ರೆಸ್ಟೊರೆಂಟ್, ಬಾರ್ ಮತ್ತು ಹೋಟೆಲ್‌ಗಳಲ್ಲಿ ಗ್ರಾಹಕರಿಂದ ಬಲವಂತವಾಗಿ ಸೇವಾ ಶುಲ್ಕ ವಸೂಲು ಮಾಡುವಂತಿಲ್ಲ ಎಂದು ಕೇಂದ್ರ ಗ್ರಾಹಕ ಹಿತರಕ್ಷಣಾ ಪ್ರಾಧಿಕಾರ (CCPA) ಹೇಳಿದೆ. ಸೇವಾ ಶುಲ್ಕ ಕೊಡುವುದು ಸಂಪೂರ್ಣವಾಗಿ ಗ್ರಾಹಕರ ವಿವೇಚನೆಗೆ ಬಿಟ್ಟ ಸಂಗತಿ ಎಂದು ಪ್ರಾಧಿಕಾರ ತಿಳಿಸಿದ್ದು, ಈ ಬಗ್ಗೆ ಮಾರ್ಗದರ್ಶಿಯನ್ನು ಬಿಡುಗಡೆಗೊಳಿಸಿದೆ.
ಒಂದು ವೇಳೆ ರೆಸ್ಟೊರೆಂಟ್ ಅಥವಾ ಹೋಟೆಲ್ ಸೇವಾ ಶುಲ್ಕವನ್ನು ವಿಧಿಸುತ್ತಿದ್ದರೆ, ಗ್ರಾಹಕ ಆಯೋಗದ ವೆಬ್ ಪೋರ್ಟಲ್ ಮೂಲಕ (E-dakhil) ಗ್ರಾಹಕರು ದೂರು ಸಲ್ಲಿಸಬಹುದು ಎಂದು ಸಿಸಿಪಿಎ ತಿಳಿಸಿದೆ.
ರೆಸ್ಟೊರೆಂಟ್‌ಗಳಲ್ಲಿ ಗ್ರಾಹಕರಿಂದ ಸೇವಾ ಶುಲ್ಕ ಸಂಗ್ರಹಿಸುವುದು ಅಕ್ರಮ ಪದ್ಧತಿಯಾಗಿದೆ. ಅಲ್ಲಿ ವಿತರಿಸುವ ಆಹಾರ ಮತ್ತು ಪಾನೀಯಗಳ ದರದಲ್ಲಿಯೇ ಸೇವೆಯ ವೆಚ್ಚವೂ ಸೇರಿಕೊಂಡಿರುತ್ತದೆ. ಆದ್ದರಿಂದ ಪ್ರತ್ಯೇಕವಾಗಿ ಗ್ರಾಹಕರಿಂದ ವಸೂಲು ಮಾಡುವಂತಿಲ್ಲ. ಇತರ ಯಾವುದೇ ನೆಪದಲ್ಲಿ ಸೇವಾ ಶುಲ್ಕ ಪಡೆಯುವಂತಿಲ್ಲ. ಇದು ಸಂಪೂರ್ಣ ಗ್ರಾಹಕರ ವಿವೇಚನೆ ಬಿಟ್ಟ ಸಂಗತಿ. ಹೀಗಾಗಿ ರೆಸ್ಟೊರೆಂಟ್‌ಗಳು ಸೇವಾ ಶುಲ್ಕ ವಿಧಿಸುವುದಿದ್ದರೆ ಮೊದಲು ಗ್ರಾಹಕರಿಗೆ ಇದು ಅವರ ಆಯ್ಕೆಗೆ ಬಿಟ್ಟ ವಿಚಾರ ಎಂಬುದನ್ನು ಸ್ಪಷ್ಟವಾಗಿ ತಿಳಿಸಬೇಕು. ಅದು ಬಿಟ್ಟು ತಾವಾಗಿಯೇ ವಿಧಿಸುವಂತಿಲ್ಲ ಎಂದು ವಿವರಿಸಿದೆ.
ಗ್ರಾಹಕರು ದೂರು ಕೊಡಬಹುದು
ಒಂದು ವೇಳೆ ರೆಸ್ಟೊರೆಂಟ್ ಮತ್ತು ಹೋಟೆಲ್‌ಗಳು ಸೇವಾ ಶುಲ್ಕ ವಿಧಿಸಿದರೆ ಗ್ರಾಹಕರು ರಾಷ್ಟ್ರೀಯ ಗ್ರಾಹಕ ಪ್ರಾಧಿಕಾರದ ಸಹಾಯವಾಣಿ ಸಂಖ್ಯೆ 1915 ಕ್ಕೆ ಕರೆ ಮಾಡಿ ದೂರು ದಾಖಲಿಸಬಹುದು. ಜಿಲ್ಲಾಧಿಕಾರಿಯವರ ಕಚೇರಿಗೂ ದೂರು ಸಲ್ಲಿಸಬಹುದು ಎಂದು ಸಿಸಿಪಿಎ ತಿಳಿಸಿದೆ.