Site icon Vistara News

Rakesh Jhunjhunwala | 5 ಸಾವಿರ ರೂ. ಹೂಡಿಕೆಯಿಂದ 45 ಸಾವಿರ ಕೋಟಿ ರೂ. ಸಂಪತ್ತಿನ ಒಡೆಯನಾಗಿದ್ದ ಜುಂಜುನ್‌ವಾಲಾ

rakesh junjunwala

ಷೇರು ಮಾರುಕಟ್ಟೆಯ ಸರದಾರ, ಭಾರತದ ವಾರೆನ್‌ ಬಫೆಟ್‌ ಎಂದೇ ಖ್ಯಾತರಾಗಿದ್ದ ರಾಕೇಶ್‌ ಜುಂಜುನ್‌ವಾಲಾ (Rakesh Jhunjhunwala) ಇನ್ನು ನೆನಪಷ್ಟೆ. ೬೨ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದ ಜುಂಜುನ್‌ವಾಲಾ ಅವರು ತಮ್ಮ ಸ್ವಪ್ರಯತ್ನದಿಂದಲೇ ಷೇರು ಮಾರುಕಟ್ಟೆಯಲ್ಲಿ ಪಳಗಿದವರು. ಉದ್ಯಮಿಯಾಗಿ ಕಾರ್ಪೊರೇಟ್‌ ವಲಯ ಬೆರಗಾಗುವಂತೆ ಬೆಳೆದವರು. ಆದಾಯ ತೆರಿಗೆ ಇಲಾಖೆಯ ಅಧಿಕಾರಿಯೊಬ್ಬರ ಮಗನಾಗಿದ್ದ ಜುಂಜುನ್‌ವಾಲಾ ಅವರು ಕೇವಲ ೫,೦೦೦ ರೂ. ಹೂಡಿಕೆಯಿಂದ ಷೇರು ವ್ಯವಹಾರವನ್ನು ಆರಂಭಿಸಿ, ಅಂತಿಮವಾಗಿ ಷೇರು ಪೇಟೆಯ ಸರದಾರರಾಗಿ 5.8 ಶತಕೋಟಿ ಡಾಲರ್‌ (ಸುಮಾರು ೪೫,೮೨೦ ಕೋಟಿ ರೂ.) ಸಂಪತ್ತಿಗೆ ಒಡೆಯರಾಗಿದ್ದರು. ಫೋರ್ಬ್ಸ್‌ ಪ್ರಕಾರ, ಭಾರತದ ೩೬ನೇ ಶ್ರೀಮಂತ ಬಿಲಿಯನೇರ್‌ ಜುಂಜುನ್‌ವಾಲಾ ಆಗಿದ್ದರು. ಇತ್ತೀಚೆಗೆ ಆಕಾಸ ಏರ್‌ಲೈನ್‌ ಸ್ಥಾಪನೆಗೆ ಹೂಡಿಕೆ ಮಾಡುವ ಮೂಲಕ ಅವರ ನಡೆ ಎಲ್ಲರನ್ನೂ ಬೆರಗಾಗಿಸಿತ್ತು.

ಹೂಡಿಕೆ, ಟ್ರೇಡಿಂಗ್‌ ಎರಡರಲ್ಲೂ ಸೈ:

ರಾಕೇಶ್‌ ಜುಂಜುನ್‌ವಾಲಾ

ರಾಕೇಶ್‌ ಜುಂಜುನ್‌ವಾಲಾ ಅವರು ಷೇರು ಜಗತ್ತಿನಲ್ಲಿ ಹೂಡಿಕೆ ಮತ್ತು ಟ್ರೇಡಿಂಗ್‌ ಎರಡರಲ್ಲೂ ಸಿದ್ಧಹಸ್ತರಾಗಿದ್ದರು. ಇಂಥ ಚಾಕಚಕ್ಯತೆ ಇರುವ ವಿರಳ ಹೂಡಿಕೆದಾರರಾಗಿದ್ದರು. ಅಗ್ಗದ ದರದ ವಿಮಾನಯಾನ ಸೇವೆ ನೀಡುವ ಆಕಾಸ ಏರ್‌ನ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದುದೇ ಅವರ ಕೊನೆಯ ಸಾರ್ವಜನಿಕ ಸಮಾರಂಭವಾಗಿತ್ತು. ಕಳೆದ ವರ್ಷದಿಂದ ಬಹುತೇಕ ವ್ಹೀಲ್‌ ಚೇರ್‌ನಲ್ಲಿಯೇ ಕಳೆದಿದ್ದರು. ಅನಾರೋಗ್ಯದ ಸಂದರ್ಭದಲ್ಲೂ ಧೃತಿಗೆಡದೆ ಆಕಾಸ ಏರ್‌ಲೈನ್‌ ಕಟ್ಟುವ ಸಾಹಸಕ್ಕೆ ಮುಂದಾಗಿದ್ದರು ರಾಕೇಶ್‌ ಜುಂಜುನ್‌ವಾಲಾ. ಭಾರತದ ಭವಿಷ್ಯದ ಆರ್ಥಿಕತೆಯ ಬಗ್ಗೆ ಉಜ್ವಲವಾದ ಆಶಾಭಾವ ಅವರಲ್ಲಿತ್ತು. ಜಗತ್ತಿನ ಮುಂದಿನ ಭವಿಷ್ಯ ಭಾರತದ್ದು ಎಂದೇ ಹೇಳುತ್ತಿದ್ದರು.

ಟಾಟಾ ಗ್ರೂಪ್‌ನಲ್ಲಿ ಹೂಡಿಕೆ ೧೧,೦೦೦ ಕೋಟಿ ರೂ.: ೨೦೧೫ರಲ್ಲಿ ಟಾಟಾ ಸಮೂಹದ ಟೈಟನ್‌ ಷೇರುಗಳಲ್ಲಿ ಜುಂಜುನ್‌ವಾಲಾ ಅವರು ಹೂಡಿಕೆ ಆರಂಭಿಸಿದ್ದರು. ಬಳಿಕ ಟಾಟಾ ಗ್ರೂಪ್‌ನ ಷೇರುಗಳಲ್ಲಿ ಅವರ ಹೂಡಿಕೆಯ ಮೌಲ್ಯ ೧೧,೦೦೦ ಕೋಟಿ ರೂ.ಗೆ ಏರಿತ್ತು. ಅವರು ೩೨ ಕಂಪನಿಗಳ ಷೇರುಗಳಲ್ಲಿ ಹೂಡಿಕೆ ಮಾಡಿದ್ದರು. ಸದಾ ವಾಸ್ತವ ದೃಷ್ಟಿಕೋನದಿಂದ ಚಿಂತಿಸಿ ಹೂಡಿಕೆ ಮಾಡಬೇಕು ಎನ್ನುತ್ತಿದ್ದರು. ಷೇರು ಮಾರುಕಟ್ಟೆಯಲ್ಲಿ ದಿನಬೆಳಗಾದರೆ ದುಡ್ಡು ಬಾಚಿಕೊಳ್ಳಬಹುದು ಎಂಬಿತ್ಯಾದಿ ಭ್ರಮೆಗಳನ್ನು ಹೊಂದಬಾರದು ಎಂದು ಕಿರಿಯರಿಗೆ ತಿಳಿಸುತ್ತಿದ್ದರು.

ಹೂಡಿಕೆ ಸಂಸ್ಥೆಯ ಹೆಸರು ರೇರ್‌ ಎಂಟರ್‌ಪ್ರೈಸಸ್: ರಾಕೇಶ್‌ ಜುಂಜುನ್‌ವಾಲಾ ಅವರು ಸ್ಟಾರ್‌ ಹೆಲ್ತ್‌ ಮತ್ತು ಆಪ್‌ಟೆಕ್‌ ಲಿಮಿಟೆಡ್‌ ಸೇರಿದಂತೆ ಹಲವು ಕಂಪನಿಗಳ ಪ್ರವರ್ತಕರೂ ಆಗಿದ್ದರು. ರಾಕೇಶ್‌ ಜುಂಜುನ್‌ವಾಲಾರ ಷೇರು ಇನ್ವೆಸ್ಟ್‌ಮೆಂಟ್‌ ಕಂಪನಿ ರೇರ್‌ ಎಂಟರ್‌ಪ್ರೈಸಸ್‌ (Rare Enterprises) ಹೆಸರಿನಲ್ಲಿ ಮೊದಲ ಎರಡು ಅಕ್ಷರ ಅವರ ಮತ್ತು ಪತ್ನಿ ರೇಖಾ ಹೆಸರಿನ ಮೊದಲಕ್ಷರವನ್ನು ಹೊಂದಿದೆ.

ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದ ಹೂಡಿಕೆದಾರ: ರಾಕೇಶ್‌ ಜುಂಜುನ್‌ವಾಲಾ ಅವರು ೧೯೬೯ರ ಜುಲೈ ೫ರಂದು ಈಗಿನ ತೆಲಂಗಾಣದ ರಾಜಧಾನಿ ಹೈದರಾಬಾದ್‌ನಲ್ಲಿ ಜನಿಸಿದರು. ತಂದೆ ಆದಾಯ ತೆರಿಗೆ ಇಲಾಖೆ ಅಧಿಕಾರಿಯಾಗಿದ್ದರು. ಹೀಗಾಗಿ ಷೇರು ಪೇಟೆ ಕುರಿತ ವಿದ್ಯಮಾನಗಳನ್ನು ಕಿರಿ ವಯಸ್ಸಿನಲ್ಲಿಯೇ ತಿಳಿದುಕೊಳ್ಳುತ್ತಿದ್ದರು. ರಾಕೇಶ್‌ ಓದಿದ್ದು, ಬೆಳೆದಿದ್ದು ಎಲ್ಲ ವಾಣಿಜ್ಯ ನಗರಿ ಮುಂಬಯಿನಲ್ಲಿ. ಕಾಲೇಜಿನಲ್ಲಿ ಇದ್ದಾಗಲೇ ಷೇರು ಹೂಡಿಕೆ ಬಗ್ಗೆ ಅಪಾರ ಆಸಕ್ತಿ ಅವರಿಗೆ ಉಂಟಾಗಿತ್ತು. ೧೯೮೫ರಲ್ಲಿ ಮುಂಬಯಿನ ಸಿಡೆನ್‌ಹ್ಯಾಮ್‌ ಕಾಲೇಜಿನಲ್ಲಿ ಪದವಿ ಮುಗಿಸಿ ಚಾರ್ಟರ್ಡ್‌ ಅಕೌಂಟೆಂಟ್‌ ಆದರು.

೨೫ನೇ ವಯಸ್ಸಿನಲ್ಲಿ 5,000 ರೂ.ಗಳೊಂದಿಗೆ ಷೇರು ಬಿಸಿನೆಸ್‌ ಆರಂಭ

ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ರಾಕೇಶ್‌ ಜುಂಜುನ್‌ವಾಲಾ

ರಾಕೇಶ್‌ ಜುಂಜುನ್‌ವಾಲಾ ಅವರು ೧೯೮೫ರಲ್ಲಿ ಕೇವಲ ೫,೦೦೦ ರೂ.ಗಳ ಹೂಡಿಕೆಯೊಂದಿಗೆ ಷೇರು ವ್ಯವಹಾರ ಆರಂಭಿಸಿದ್ದರು. ಆಗ ಅವರಿಗೆ ಕೇವಲ ೨೫ ವರ್ಷ ವಯಸ್ಸು. ೧೯೮೬ರಲ್ಲಿ ಜುಂಜುನ್‌ವಾಲಾ ಮೊದಲ ಲಾಭ ಗಳಿಸಿದರು. ಟಾಟಾ ಟೀ ಕಂಪನಿಯ ೫,೦೦೦ ಷೇರುಗಳನ್ನು ೪೩ ರೂ.ಗೆ ಖರೀದಿಸಿದ್ದರು. ಮೂರು ತಿಂಗಳಿನಲ್ಲಿ ಷೇರಿನ ಬೆಲೆ ೧೪೩ ರೂ.ಗೆ ಏರಿಕೆಯಾಗಿತ್ತು. ಇದರೊಂದಿಗೆ ಟಾಟಾ ಟೀ ಷೇರು ಮಾರಾಟ ಮಾಡಿ ಮೂರು ಪಟ್ಟು ಲಾಭ ಗಳಿಸಿದರು. ಮುಂಬರುವ ಕೆಲ ವರ್ಷಗಳಲ್ಲಿ ಹಲವು ಷೇರುಗಳನ್ನು ಹೀಗೆ ಮಾರಿ ಲಾಭ ಪಡೆದರು. ೧೯೮೬-೮೯ರಲ್ಲಿ ಹೀಗೆ ೨೦-೨೫ ಲಕ್ಷ ರೂ. ಗಳಿಸಿದ್ದರು. ಸೇಸಗೋವಾ ಕಂಪನಿಯ ಷೇರುಗಳನ್ನು ೨೮ ರೂ.ಗೆ ಖರೀದಿಸಿದ್ದರು. ಹೂಡಿಕೆಯನ್ನು ಹೆಚ್ಚಿಸಿದರು. ಷೇರು ದರ ೬೫ ರೂ.ಗೆ ಜಿಗಿಯಿತು.

ಟೈಟನ್‌ನಲ್ಲಿ 4,000 ಕೋಟಿ ರೂ. ಗಳಿಸಿದ್ದ ಜುಂಜುನ್‌ವಾಲಾ: ರಾಕೇಶ್‌ ಜುಂಜುನ್‌ವಾಲಾ ಅವರು ಟಾಟಾ ಸಮೂಹದ ಜ್ಯುವೆಲ್ಲರಿ ಹಾಗೂ ವಾಚುಗಳ ಉತ್ಪಾದಕ ಟೈಟನ್‌ನಲ್ಲಿ ಷೇರು ಹೂಡಿಕೆ ಮಾಡಿ ೪,೦೦೦ ಕೋಟಿ ರೂ.ಗೂ ಹೆಚ್ಚು ಆದಾಯ ಗಳಿಸಿದ್ದರು. ಅವರು ಟೈಟನ್‌ನಲ್ಲಿ ಹೂಡಿದ್ದ ಷೇರುಗಳ ಮೌಲ್ಯ ೨೦೨೧ರಲ್ಲಿ ೬೨% ಹೆಚ್ಚಳವಾಗಿತ್ತು. ಪ್ರತಿ ಷೇರಿನ ದರ ೧,೫೫೧ ರೂ.ಗಳಿಂದ ೨,೫೨೪ ರೂ.ಗೆ ಜಿಗಿದಿತ್ತು. ರಾಕೇಶ್‌ ಜುಂಜುನ್‌ವಾಲಾ ಮತ್ತು ಅವರ ಪತ್ನಿ ಇಬ್ಬರೂ ಸೇರಿ ಟೈಟನ್‌ನ ೪.೮೭ ಪರ್ಸೆಂಟ್‌ ಷೇರುಗಳನ್ನು ( ೪.೩೩ ಕೋಟಿ ಷೇರು) ಹೊಂದಿದ್ದಾರೆ.

ರಾಕೇಶ್‌ ಜುಂಜುನ್‌ವಾಲಾ ಅವರ ಪ್ರಮುಖ ಷೇರುಗಳು: ಟೈಟನ್‌ (೧೦,೪೦೧ ಕೋಟಿ ರೂ.), ಟಾಟಾ ಮೋಟಾರ್ಸ್‌ (೧,೭೧೫ ಕೋಟಿ ರೂ.), ಫೆಡರಲ್‌ ಬ್ಯಾಂಕ್‌ (೭೫೪ ಕೋಟಿ ರೂ.) ಜ್ಯುಬಿಲಿಯೆಂಟ್‌ ಇನ್‌ಕ್ರೆವಿಯಾ (೩೭೪ ಕೋಟಿ ರೂ.), ಕ್ರಿಸಿಲ್‌ (೧,೩೦೯ ಕೋಟಿ ರೂ.), ಕೆನರಾ ಬ್ಯಾಂಕ್‌ (೭೭೨ ಕೋಟಿ ರೂ.), ಸ್ಟಾರ್‌ ಹೆಲ್ತ್ (೫,೫೬೪ ಕೋಟಿ ರೂ.)‌, ಮೆಟ್ರೊ (೨,೨೮೩ ಕೋಟಿ ರೂ.), ಫೋರ್ಟಿಸ್‌ (೭೯೨ ಕೋಟಿ ರೂ.), ಐಎಚ್‌ಸಿಎಲ್‌ (೭೩೮ ಕೋಟಿ ರೂ.)

ಆಕಾಸ ಏರ್‌ಲೈನ್‌ ಸಾಹಸ

ಷೇರು ಪ್ರಪಂಚದ ಸರದಾರರಾಗಿದ್ದ ರಾಕೇಶ್‌ ಜುಂಜುನ್ ವಾಲಾ ಅಷ್ಟಕ್ಕೇ ಸೀಮಿತರಾಗಿರಲಿಲ್ಲ. ಹಲವಾರು ಕಂಪನಿಗಳ ಪ್ರವರ್ತಕರಾಗಿದ್ದರು. ಆಗಸ್ಟ್ ೭ರಂದು ಆರಂಭವಾದ ಆಕಾಸ ಏರ್‌ ಲೈನ್‌ನ ಸ್ಥಾಪಕರಾಗಿ ಏರ್‌ಲೈನ್‌ ಇಂಡಸ್ಟ್ರಿಗೂ ಅಚ್ಚರಿಯ ಪ್ರವೇಶ ಮಾಡಿ ಬಿಟ್ಟಿದ್ದರು. ಎರಡು ವರ್ಷಗಳ ಕೋವಿಡ್‌ ಹೊಡೆತದ ಬಳಿಕ ಈಗತಾನೆ ಚೇತರಿಸುತ್ತಿರುವ ಭಾರತೀಯ ಏರ್‌ಲೈನ್‌ ವಲಯದಲ್ಲಿ ರಾಕೇಶ್‌ ಜುಂಜುನ್‌ವಾಲಾ ಅವರ ಆಕಾಸ ಏರ್‌ ಹೊಸ ಸಂಚಲನವನ್ನೇ ಸೃಷ್ಟಿಸಿದೆ. ಆಗಸ್ಟ್‌ ೧೩ರಂದು ಬೆಂಗಳೂರು-ಕೊಚ್ಚಿ ನಡುವೆಯೂ ಆಕಾಸ ಏರ್‌ ಹಾರಾಟ ಆರಂಭವಾಗಿದೆ. ಈ ಹೊತ್ತಿನಲ್ಲಿ ರಾಕೇಶ್‌ ಜುಂಜುನ್‌ವಾಲಾ ಅವರ ಹಠಾತ್‌ ನಿರ್ಗಮನ, ಭಾರತದ ಕಾರ್ಪೊರೇಟ್‌ ವಲಯಕ್ಕೆ ದೊಡ್ಡ ಆಘಾತವನ್ನು ಉಂಟು ಮಾಡಿದೆ. ಆಕಾಸ ಏರ್‌ ಎಂಬ ಹೊಚ್ಚ ಹೊಸ ಏರ್‌ಲೈನ್‌ ಅನ್ನು ಕೊಡುಗೆಯಾಗಿ ಕೊಟ್ಟು ಮತ್ತೆ ಬಾರದ ಲೋಕಕ್ಕೆ ಪಯಣಿಸಿದ್ದಾರೆ ಭಾರತದ ವಾರೆನ್‌ ಬಫೆಟ್‌ ಜುಂಜುನ್‌ವಾಲಾ.

ಗಾಲಿ ಕುರ್ಚಿಯಲ್ಲಿ ನೃತ್ಯ ಮಾಡುವ ಜೀವನೋತ್ಸಾಹ

ರಾಕೇಶ್‌ ಜುಂಜುನ್‌ ವಾಲಾ ಅವರಿಗೆ ಹಲವಾರು ವರ್ಷಗಳಿಂದ ಮಧುಮೇಹದ ಸಮಸ್ಯೆ ಕಾಡುತ್ತಿತ್ತು. ಆದರೆ ಅವರ ಜೀವನೋತ್ಸಾಹ ಕೊನೆಯ ತನಕ ಎಂದಿಗೂ ಬತ್ತಿರಲಿಲ್ಲ. ಕಳೆದ ವರ್ಷ ಆಪ್ತರೊಡನೆ ಗಾಲಿ ಕುರ್ಚಿಯಲ್ಲಿ ಕುಳಿತುಕೊಂಡೇ ನೃತ್ಯ ಮಾಡಿದ್ದರು ರಾಕೇಶ್‌ ಜುಂಜುನ್‌ವಾಲಾ. ಅವರು ಕೇವಲ ಷೇರು ಹೂಡಿಕೆದಾರರಾಗಿರಲಿಲ್ಲ. ಭಾರತದ ಅಭಿವೃದ್ಧಿಯ ಬಗ್ಗೆ ನಿರಂತರ ಕಾಳಜಿಯನ್ನೂ ಹೊಂದಿದ್ದರು.

ರಾಕೇಶ್‌ ಜುಂಜುನ್‌ವಾಲಾ ಅವರ ಪ್ರಸಿದ್ಧ ನುಡಿಗಳು:

Exit mobile version