Site icon Vistara News

Small savings schemes : ಸುಕನ್ಯಾ ಸಮೃದ್ಧಿ ಸೇರಿ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರ 0.70% ತನಕ ಏರಿಕೆ

cash

ನವ ದೆಹಲಿ: ಕೇಂದ್ರ ಸರ್ಕಾರ ನಿರೀಕ್ಷೆಯಂತೆ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರವನ್ನು 2023ರ ಏಪ್ರಿಲ್-ಜೂನ್‌ ಅವಧಿಗೆ (small savings schemes) 0.70% ತನಕ ಏರಿಸಿದೆ. ಹಣಕಾಸು ಸಚಿವಾಲಯ ಶುಕ್ರವಾರ ಈ ಸಂಬಂಧ ಸುತ್ತೋಲೆ ಹೊರಡಿಸಿದೆ. ಹಿರಿಯ ನಾಗರಿಕರ ಉಳಿತಾಯ ಯೋಜನೆ, ಮಾಸಿಕ ಆದಾಯ ಉಳಿತಾಯ ಯೋಜನೆ, ನ್ಯಾಶನಲ್‌ ಸೇವಿಂಗ್ಸ್‌ ಸರ್ಟಿಫಿಕೇಟ್‌, ಕಿಸಾನ್‌ ವಿಕಾಸ ಪತ್ರ, ಅಂಚೆ ಇಲಾಖೆಯ ಟೈಮ್‌ ಡಿಪಾಸಿಟ್‌, ಸುಕನ್ಯಾ ಸಮೃದ್ಧಿ ಖಾತೆಯ ಬಡ್ಡಿ ದರವನ್ನು ಶೇ.8ಕ್ಕೆ ಏರಿಸಲಾಗಿದೆ. ಇದಕ್ಕೂ ಹಿಂದಿನ ತ್ರೈಮಾಸಿಕದಲ್ಲಿ ಇದರ ಬಡ್ಡಿ ದರ 7.6% ಆಗಿತ್ತು.

ಹೀಗಿದ್ದರೂ, ಸಾರ್ವಜನಿಕ ಭವಿಷ್ಯನಿಧಿ (Public provident fund-PPF) ಖಾತೆಯ ಬಡ್ಡಿ ದರವನ್ನು 7.1% ರ ಯಥಾಸ್ಥಿತಿಯಲ್ಲಿರಿಸಿದೆ. ಪರಿಷ್ಕೃತ ದರಗಳು 2023ರ ಏಪ್ರಿಲ್‌ 1ರಿಂದ ಜೂನ್‌ 30 ತನಕ ಅನ್ವಯವಾಗಲಿದೆ. ಪ್ರತಿ ಮೂರು ತಿಂಗಳಿಗೊಮ್ಮೆ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರಗಳು ಪರಿಷ್ಕರಣೆಯಾಗುತ್ತವೆ.

ಸಣ್ಣ ಉಳಿತಾಯ ಯೋಜನೆಗಳ ಪರಿಷ್ಕೃತ ಬಡ್ಡಿ ದರ ಇಂತಿವೆ. (ಅವಧಿ- 2023 ಏಪ್ರಿಲ್‌ 1ರಿಂದ ಜೂನ್‌ 30 ತನಕ)

ಸಣ್ಣ ಉಳಿತಾಯಪರಿಷ್ಕೃತ ಬಡ್ಡಿ ದರ
1 ವರ್ಷದ ಟೈಮ್‌ ಡಿಪಾಸಿಟ್6.8% (ತ್ರೈಮಾಸಿಕ)
‌2 ವರ್ಷದ ಟೈಮ್‌ ಡಿಪಾಸಿಟ್6.9% (ತ್ರೈಮಾಸಿಕ)
‌3 ವರ್ಷದ ಟೈಮ್‌ ಡಿಪಾಸಿಟ್7.0% (ತ್ರೈಮಾಸಿಕ)
‌5 ವರ್ಷದ ಟೈಮ್‌ ಡಿಪಾಸಿಟ್5.8% (ತ್ರೈಮಾಸಿಕ)
ಹಿರಿಯ ನಾಗರಿಕರ ಉಳಿತಾಯ ಯೋಜನೆ8.2% (ತ್ರೈಮಾಸಿಕ)
ಮಾಸಿಕ ಆದಾಯ ಖಾತೆ7.4% ( ಮಾಸಿಕ)
ರಾಷ್ಟ್ರೀಯ ಉಳಿತಾಯ ಪತ್ರ (NSE)7.7% (ವಾರ್ಷಿಕ)
ಸಾರ್ವಜನಿಕ ಭವಿಷ್ಯನಿಧಿ (PPF)7.1% (ವಾರ್ಷಿಕ)
ಕಿಸಾನ್‌ ವಿಕಾಸ ಪತ್ರ (KVP)7.5% (ವಾರ್ಷಿಕ)
ಸುಕನ್ಯಾ ಸಮೃದ್ಧಿ ಯೋಜನೆ8.0% (ವಾರ್ಷಿಕ)
5 ವರ್ಷಗಳ ರಿಕರಿಂಗ್‌ ಡಿಪಾಸಿಟ್7.5% (ತ್ರೈಮಾಸಿಕ)
ಅಂಚೆ ಇಲಾಖೆ ಸೇವಿಂಗ್ಸ್‌ ಅಕೌಂಟ್‌4% (ವಾರ್ಷಿಕ)

ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರಗಳನ್ನು ಸರ್ಕಾರವು ಸರಕಾರಿ ಸಾಲಪತ್ರಗಳಲ್ಲಿ ಸಿಗುವ ಆದಾಯದ ಆಧಾರದಲ್ಲಿ ನಿಗದಿಪಡಿಸುತ್ತದೆ. ಐದು ವರ್ಷ ಅವಧಿಯ ಸರ್ಕಾರಿ ಬಾಂಡ್‌ಗಳ ಆದಾಯ 0.30% ಏರಿಕೆಯಾಗಿದ್ದು, 10 ವರ್ಷ ಅವಧಿಯ ಬಾಂಡ್‌ ಆದಾಯ 0.20% ಏರಿಕೆಯಾಗಿದೆ. ಹೀಗಾಗಿ ಬಡ್ಡಿ ದರ ಏರಿಕೆಯನ್ನು ನಿರೀಕ್ಷಿಸಲಾಗಿತ್ತು.

ಕೆವೈಸಿ ನೀತಿ ಸಡಿಲ:

ಹಣಕಾಸು ಸಚಿವಾಲಯವು ಸಣ್ಣ ಉಳಿತಾಯ ಯೋಜನೆಗಳಲ್ಲಿನ (PPF Investment ) ಹೂಡಿಕೆ ಕುರಿತ ಕೆವೈಸಿ (KYC) ನಿಯಮಾವಳಿಗಳನ್ನು ಸಡಿಲಗೊಳಿಸಲು ಮುಂದಾಗಿದೆ. ಪ್ಯಾನ್‌ ಬದಲಿಗೆ ಆಧಾರ್‌ ಕಾರ್ಡ್‌ ಅನ್ನು ದಾಖಲೆಯಾಗಿಟ್ಟುಕೊಂಡು ಈ ಯೋಜನೆಗಳಲ್ಲಿ ಹೂಡಿಕೆ ಮಾಡಲು ಅವಕಾಶ ಕಲ್ಪಿಸಲು ಉದ್ದೇಶಿಸಲಾಗಿದೆ. ಇದರಿಂದ ಗ್ರಾಮೀಣ ಭಾಗದಲ್ಲೂ ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಹೆಚ್ಚುವ ನಿರೀಕ್ಷೆ ಇದೆ. (small savings schemes)

ಕೆವೈಸಿ ನಿಯಮ ಸಡಿಲಗೊಳಿಸುವ ಭಾಗವಾಗಿ ಮೂರು ಬದಲಾವಣೆಗಳನ್ನು ಮಾಡಲಾಗುತ್ತಿದೆ. ಮೊದಲನೆಯದಾಗಿ ಪ್ಯಾನ್‌ ಕಾರ್ಡ್‌ ಬದಲು ಆಧಾರ್‌ ಬಳಸಿಯೂ ಹೂಡಿಕೆಯನ್ನು ಮಾಡಬಹುದು. ಏಕೆಂದರೆ ಭಾರತದಲ್ಲಿ ಪ್ಯಾನ್‌ ಕಾರ್ಡ್‌ ಬಳಕೆದಾರರಿಗಿಂತ ಹೆಚ್ಚು ಆಧಾರ್‌ ಕಾರ್ಡ್‌ದಾರರು ಇದ್ದಾರೆ. ಈ ನೀತಿ ಸಡಿಲಗೊಳಿಸುವುದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಠೇವಣಿಗಳು ಲಭಿಸುವ ಸಾಧ್ಯತೆ ಇದೆ.

ಎರಡನೆಯದಾಗಿ ಯಾವುದೇ ವಿವಾದ ಇಲ್ಲದೆ ಮೃತಪಟ್ಟಿರುವ ಠೇವಣಿದಾರರ ಹಣವನ್ನು ಅವರ ಉತ್ತರಾಧಿಕಾರಿಗಳಿಗೆ ಸರಾಗವಾಗಿ ಹಸ್ತಾಂತರಿಸಲು ಪ್ರಕ್ರಿಯೆ ಸುಗಮವಾಗಲಿದೆ. ಮೂರನೆಯದಾಗಿ ನಾಮಿನೇಶನ್‌ ಪ್ರಕ್ರಿಯೆ ಸರಳವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೂಡಿಕೆಯ ಕೆವೈಸಿ ನಿಯಮಗಳನ್ನು ಸಡಿಲಗೊಳಿಸುವುದರಿಂದ ರಾಷ್ಟ್ರೀಯ ಸಣ್ಣ ಉಳಿತಾಯ ನಿಧಿಗೆ (National small savings fund) ಹೂಡಿಕೆಯ ಹರಿವು ಹೆಚ್ಚಲಿದೆ. ಸಾರ್ವಜನಿಕ ಭವಿಷ್ಯನಿಧಿ, ಸುಕನ್ಯಾಸಮೃದ್ಧಿ, ಎನ್‌ಎಸ್‌ಸಿ ಇತ್ಯಾದಿಗಳು ಸಣ್ಣ ಉಳಿತಾಯ ಯೋಜನೆಗಳಾಗಿವೆ.

Exit mobile version