ಮುಂಬೈ: ಭಾರತೀಯ ಷೇರು ಮಾರುಕಟ್ಟೆ (Stock Market) ಬುಧವಾರ (ಜುಲೈ 3) ಹೊಸ ಇತಿಹಾಸ ಬರೆದಿದೆ. ಇಂದು ವಹಿವಾಟು ಆರಂಭವಾದ ಕೂಡಲೇ ಸೆನ್ಸೆಕ್ಸ್ (Sensex) 570ಕ್ಕೂ ಅಧಿಕ ಅಂಕಗಳ ಜಿಗಿತವನ್ನು ಕಂಡು ಇದೇ ಮೊದಲ ಬಾರಿಗೆ 80 ಸಾವಿರ ಅಂಕಗಳ ಗಡಿ ದಾಟಿದೆ. ಜತೆಗೆ ನಿಫ್ಟಿ (Nifty) ಕೂಡ 24,291.75 ಅಂಕಗಳ ಹೊಸ ಶಿಖರ ಏರಿದೆ.
ಇಂದು ಸೆನ್ಸೆಕ್ಸ್ ಮೊದಲ ಬಾರಿಗೆ ಜೀವಮಾನದ ಗರಿಷ್ಠ ಪಾಯಿಂಟ್ 80,039 ಪಾಯಿಂಟ್‌ಗೆ ತಲುಪಿದರೆ, ನಿಫ್ಟಿ 169 ಪಾಯಿಂಟ್‌ಗಳ ಏರಿಕೆ ಕಂಡು 24,292ಕ್ಕೆ ತಲುಪಿದೆ. ಎಚ್‌ಡಿಎಫ್‌ಸಿ ಬ್ಯಾಂಕ್ ಸೆನ್ಸೆಕ್ಸ್‌ನಲ್ಲಿ ಗರಿಷ್ಠ ಲಾಭ ಗಳಿಸಿದ್ದು, 1,791.90 ರೂ.ಗೆ ತಲುಪಿದೆ. ಸೆನ್ಸೆಕ್ಸ್‌ನಲ್ಲಿ ಕೋಟಕ್ ಬ್ಯಾಂಕ್, ಬಜಾಜ್ ಫೈನಾನ್ಸ್, ಬಜಾಜ್ ಫಿನ್‌ಸರ್ವ್ ಮತ್ತು ಎಂ & ಎಂ ಲಾಭ ಗಳಿಸಿದರೆ, ಟೆಕ್ ಮಹೀಂದ್ರಾ, ಟಿಸಿಎಸ್, ಸನ್ ಫಾರ್ಮಾ, ಇನ್ಫೋಸಿಸ್ ಮತ್ತು ಭಾರ್ತಿ ಏರ್‌ಟೆಲ್ ನಷ್ಟ ಅನುಭವಿಸಿವೆ.
BSE Sensex touches the 80,000 mark for the first time, trading at all-time high pic.twitter.com/d1rCFgfwNh
— ANI (@ANI) July 3, 2024
ಎಚ್‌ಡಿಎಫ್‌ಸಿ ಬ್ಯಾಂಕ್‌ಗೆ 52 ವಾರಗಳ ಗರಿಷ್ಠ ಬೆಲೆ
ದೇಶದ ಅತಿದೊಡ್ಡ ಖಾಸಗಿ ಬ್ಯಾಂಕ್ ಆಗಿರುವ ಎಚ್‌ಡಿಎಫ್‌ಸಿ ಬ್ಯಾಂಕ್ ಸುಮಾರು 52 ವಾರಗಳ ಬಳಿಕ ಗರಿಷ್ಠ ಮಟ್ಟವನ್ನು ತಲುಪಿದೆ. ಎಚ್‌ಡಿಎಫ್‌ಸಿ ಬ್ಯಾಂಕ್ ಷೇರುಗಳು ಇಂದು 60ಕ್ಕೂ ಹೆಚ್ಚು ರೂ. ಅಥವಾ ಶೇ. 3ಕ್ಕೂ ಅಧಿಕ ಮಟ್ಟದಲ್ಲಿ ವಹಿವಾಟು ನಡೆಸುತ್ತಿವೆ. ʼʼಇಂದು ಮಾರುಕಟ್ಟೆ ಚಟುವಟಿಕೆಯ ಕೇಂದ್ರಬಿಂದು ಎಚ್‌ಡಿಎಫ್‌ಸಿ ಬ್ಯಾಂಕ್ ಆಗಿದ್ದು, ತನ್ನ ಮೇಲ್ಮುಖ ಚಲನೆಯನ್ನು ಮುಂದುವರಿಸಿದೆ. ಇದು ಇನ್ನೂ ಕೆಲವು ದಿನಗಳವರೆಗೆ ಮುಂದುವರಿಯುವ ಸಾಮರ್ಥ್ಯ ಹೊಂದಿದೆʼʼ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಯುಎಸ್ ಫೆಡರಲ್ ರಿಸರ್ವ್ ಅಧ್ಯಕ್ಷ ಜೆರೋಮ್ ಪೊವೆಲ್ ಅವರು ಹಣದುಬ್ಬರವನ್ನು ನಿಯಂತ್ರಿಸುವಲ್ಲಿ ಪ್ರಗತಿ ಸಾಧಿಸುದ್ದೇವೆ ಎಂದು ಹೇಳಿಕ ನೀಡಿದ ನಂತರ ಏಷ್ಯಾ-ಪೆಸಿಫಿಕ್ ಮಾರುಕಟ್ಟೆಗಳು ಬುಧವಾರ ಬೆಳಿಗ್ಗೆ ಧನಾತ್ಮಕ ಪ್ರದರ್ಶನ ತೋರಿದವು.
ಇದನ್ನೂ ಓದಿ: ITR Filing: ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ಮೊದಲು ಈ ಸಂಗತಿ ತಿಳಿದಿರಲೇಬೇಕು!
ಮಂಗಳವಾರ ವಹಿವಾಟು ಆರಂಭವಾದ ಕೆಲ ಹೊತ್ತಿನಲ್ಲಿ ಸೆನ್ಸೆಕ್ಸ್ ದಾಖಲೆಯ 79,653.21 ಅಂಕ ತಲುಪಿತ್ತು. ನಿಫ್ಟಿ (Nifty) ಕೂಡ ಹೊಸ ದಾಖಲೆ ಬರೆದಿದ್ದು 24,186.5 ಪಾಯಿಂಟ್ ಗಡಿ ಮುಟ್ಟಿತ್ತು. ಮಂಗಳವಾರ ಬೆಳಿಗ್ಗೆ ಎನ್ಎಸ್ಇ ನಿಫ್ಟಿ ಶೇ. 0.21ರಷ್ಟು ಏರಿಕೆ ಕಂಡು 24,186.5 ಪಾಯಿಂಟ್‌ಗೆ ತಲುಪಿದ್ದರೆ, ಬಿಎಸ್ಇ ಸೆನ್ಸೆಕ್ಸ್ ಶೇಕಡಾ 0.22ರಷ್ಟು ಹೆಚ್ಚಳ ದಾಖಲಿಸಿ 79,653.21 ಪಾಯಿಂಟ್ ಗಳಿಸಿತ್ತು. ಐಟಿ ಕಂಪನಿಗಳ ಲಾಭ ಮತ್ತು ಯುಎಸ್ ಫೆಡರಲ್ ಸೆಪ್ಟೆಂಬರ್‌ನಲ್ಲಿ ರಿಸರ್ವ್ ಬಡ್ಡಿದರ ಕಡಿತದ ಭರವಸೆ ನೀಡಿದ ಹಿನ್ನೆಲೆಯಲ್ಲಿ ಭಾರತೀಯ ಷೇರುಗಳು ಈ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿವೆ.
ಹಿಂದಿನ ಸೆಷನ್‌ನಲ್ಲಿ ಶೇ. 2ರಷ್ಟು ಏರಿಕೆ ಕಂಡಿದ್ದ ಐಟಿ ಷೇರುಗಳು ಮತ್ತೆ ಶೇ. 0.7ರಷ್ಟು ಹೆಚ್ಚಳ ದಾಖಲಿಸಿದ್ದವು. ಎಲ್ಲ 13 ಪ್ರಮುಖ ವಲಯಗಳು ಲಾಭವನ್ನು ಕಂಡವು. ಅದರಲ್ಲಿಯೂ ಸಣ್ಣ ಮತ್ತು ಮಧ್ಯಮ ಗಾತ್ರದ ಕಂಪನಿಗಳು ಕ್ರಮವಾಗಿ ಶೇ. 0.4 ಮತ್ತು ಶೇ. 0.2 ಹೆಚ್ಚಳ ಕಂಡವು.