Site icon Vistara News

Stock Market: ಭರ್ಜರಿಯಾಗಿಯೇ ಕಂಬ್ಯಾಕ್‌ ಮಾಡಿದ ಷೇರುಪೇಟೆ; ಸಾರ್ವಕಾಲಿಕ ಗರಿಷ್ಠ ಅಂಕಕ್ಕೆ ತಲುಪಿದ ಸೆನ್ಸೆಕ್ಸ್‌

Stock Market

ಮುಂಬೈ: ಕೇಂದ್ರ ಬಜೆಟ್‌ (Union Budget 2024) ಮಂಡಿಸಿದ ದಿನವಾದ ಜುಲೈ 23 ಸೇರಿ ನಂತರದ ದಿನಗಳಲ್ಲಿ ಸತತವಾಗಿ ಇಳಿಕೆ ಕಂಡಿದ್ದ ಷೇರು ಮಾರುಕಟ್ಟೆಯು (Stock Market) ಶುಕ್ರವಾರ (ಜುಲೈ 26) ಭಾರಿ ಸುಧಾರಣೆ ಕಂಡಿತ್ತು. ಈ ಬೆಳವಣಿಗೆ ಇಂದೂ ಮುಂದುವರಿದಿದ್ದು, ಸೋಮವಾರ (ಜುಲೈ 29) ಆರಂಭದಲ್ಲೇ ಬಿಎಸ್‌ಇ ಸೆನ್ಸೆಕ್ಸ್‌ (BSE Sensex) ಸಾರ್ವಕಾಲಿಕ ಗರಿಷ್ಠ 81,720.25 ಅಂಕಕ್ಕೆ ತಲುಪಿದೆ. ಎನ್‌ಎಸ್‌ಇ ನಿಫ್ಟಿ 50 (NSE Nifty50) ಕೂಡ ಏರಿಕೆ ಕಂಡು 24,980.45 ತಲುಪಿದ್ದು, ಇಂದು 25,000 ಅಂಕಗಳ ಮೈಲಿಗಲ್ಲು ದಾಟಲಿದೆ.

ಬಿಎಸ್ಇ ಸೆನ್ಸೆಕ್ಸ್ ಶೇ. 0.51 ಅಥವಾ 416.62 ಪಾಯಿಂಟ್ಸ್ ಏರಿಕೆ ಕಂಡು ಸಾರ್ವಕಾಲಿಕ ಗರಿಷ್ಠ 81,749.34 ಮಟ್ಟವನ್ನು ತಲುಪಿದರೆ, ನಿಫ್ಟಿ 50 ಶೇ. 0.58 ಅಥವಾ 145.6 ಪಾಯಿಂಟ್ ಏರಿಕೆ ಕಂಡು 24,980.45 ಮಟ್ಟ ಸ್ಪರ್ಶಿಸಿದೆ.

ನಿಫ್ಟಿ 50ರಲ್ಲಿ ಎನ್‌ಟಿಪಿಸಿ, ಬಿಪಿಸಿಎಲ್, ಐಸಿಐಸಿಐ ಬ್ಯಾಂಕ್, ಎಸ್‌ಬಿಐ ಮತ್ತು ಶ್ರೀರಾಮ್ ಫೈನಾನ್ಸ್ ಅತೀ ಹೆಚ್ಚು ಲಾಭ ಗಳಿಸಿದರೆ ಡಾ.ರೆಡ್ಡೀಸ್ ಲ್ಯಾಬೊರೇಟರೀಸ್, ಟೈಟಾನ್, ಸಿಪ್ಲಾ, ಟಾಟಾ ಕನ್ಸೂಮರ್ ಪ್ರಾಡಕ್ಟ್ಸ್ ಮತ್ತು ಎಸ್‌ಬಿಐ ಲೈಫ್ ಹೆಚ್ಚು ನಷ್ಟ ಅನುಭವಿಸಿದ ಷೇರುಗಳಾಗಿವೆ.

ಆರ್ಥಿಕ ತಜ್ಞ ಡಾ.ವಿ.ಕೆ.ವಿಜಯ ಕುಮಾರ್ ಈ ಬಗ್ಗೆ ಮಾತನಾಡಿ, “ಷೇರು ಮಾರುಕಟ್ಟೆಯ ಒಳಹರಿವು ಸಕಾರಾತ್ಮಕ ಸೂಚನೆಗಳ ಮೇಲೆ ದೃಢವಾಗಿದೆ. ಅಮೆರಿಕ ಆರ್ಥಿಕತೆಯ ಬಲ ವರ್ಧನೆಗೆ ಸಾಫ್ಟ್ ಲ್ಯಾಂಡಿಂಗ್ ನೆರವಾಗುವ ಸಾಧ್ಯತೆ ಇದೆ. ಜತೆಗೆ ಸೆಪ್ಟೆಂಬರ್‌ನಲ್ಲಿ ಫೆಡ್ ದರ ಕಡಿತದ ನಿರೀಕ್ಷೆ ಇದ್ದು ಇದು ಕೂಡ ಅನುಕೂಲ ವಾತಾವಣ ಸೃಷ್ಟಿಸಿದೆ. ಇದು ಈ ಷೇರು ಮಾರುಕಟ್ಟೆಗೆ ಜಾಗತಿಕ ಬೆಂಬಲವನ್ನು ಒದಗಿಸುತ್ತದೆ. ಬ್ರೆಂಟ್ ಕಚ್ಚಾ ತೈಲವು 81.2 ಡಾಲರ್‌ಗೆ ಇಳಿದಿರುವುದು ಕೂಡ ಅನುಕೂಲಕರವಾಗಿ ಪರಿಣಮಿಸಿದೆʼʼ ಎಂದಿದ್ದಾರೆ.

ಇದನ್ನೂ ಓದಿ: Mukesh Ambani: ಬಜೆಟ್ ದಿನ 9,200 ಕೋಟಿ ರೂ. ಕಳೆದುಕೊಂಡಿದ್ದ ಮುಕೇಶ್ ಅಂಬಾನಿ!

ಷೇರು ಮಾರುಕಟ್ಟೆಗೆ ಶುಭ ಶುಕ್ರವಾರ

ಸತತವಾಗಿ ಇಳಿಕೆ ಕಂಡಿದ್ದ ಷೇರು ಮಾರುಕಟ್ಟೆಯಲ್ಲಿ ಶುಕ್ರವಾರ (ಜುಲೈ 26) ಭಾರಿ ಸುಧಾರಣೆ ಕಂಡು ಬಂದಿತ್ತು. ಷೇರುಪೇಟೆಯಲ್ಲಿ ಶುಕ್ರವಾರ ಬಿಎಸ್‌ಇ ಸೆನ್ಸೆಕ್ಸ್‌ 1,292.92 ಪಾಯಿಂಟ್‌ಗಳ ಏರಿಕೆ ಕಂಡರೆ, ಎನ್‌ಎಸ್‌ಇ ನಿಫ್ಟಿಯು 428.75 ಅಂಕಗಳಷ್ಟು ಏರಿಕೆಯಾಗಿತ್ತು. ಇದರಿಂದಾಗಿ ಹೂಡಿಕೆದಾರರಿಗೆ ಒಂದೇ ದಿನ 7 ಲಕ್ಷ ಕೋಟಿ ರೂ. ಲಾಭವಾಗಿತ್ತು. ಬಿಎಸ್‌ಇ ಸೆನ್ಸೆಕ್ಸ್‌ 1,292.92 ಪಾಯಿಂಟ್‌ಗಳ ಏರಿಕೆಯೊಂದಿಗೆ 81,332.72 ಪಾಯಿಂಟ್‌ ತಲುಪಿದ್ದರೆ, ಎನ್‌ಎಸ್‌ಇ ನಿಫ್ಟಿಯು 428.75 ಪಾಯಿಂಟ್‌ಗಳ ಏರಿಕೆಯೊಂದಿಗೆ 24,834.85 ಪಾಯಿಂಟ್ಸ್‌ ತಲುಪಿತ್ತು. ಇದರಿಂದಾಗಿ ಕಳೆದ ನಾಲ್ಕು ದಿನಗಳಿಂದ ನಷ್ಟ ಅನುಭವಿಸಿದ್ದ ಹೂಡಿಕೆದಾರರು ಶುಕ್ರವಾರ ಲಾಭ ಗಳಿಸಿದ್ದರು.

ಭಾರ್ತಿ ಏರ್‌ಟೆಲ್‌ ಕಂಪನಿಯು ಅತಿ ಹೆಚ್ಚು ಲಾಭ ಗಳಿಸಿದ ಕಂಪನಿ ಎನಿಸಿಕೊಂಡಿತ್ತು. ಭಾರ್ತಿ ಏರ್‌ಟೆಲ್‌ ಲಾಭದ ಪ್ರಮಾಣವು ಶೇ. 4.51ರಷ್ಟು ಏರಿಕೆಯಾಗಿತ್ತು. ಇದರ ಜತೆಗೆ ಅದಾನಿ ಪೋರ್ಟ್ಸ್‌, ಸನ್‌ ಫಾರ್ಮಾ, ಟಾಟಾ ಸ್ಟೀಲ್‌, ಎಚ್‌ಸಿಎಲ್‌ ಟೆಕ್ನಾಲಜೀಸ್‌, ಇನ್ಫೋಸಿಸ್‌, ಜೆಎಸ್‌ಡಬ್ಲ್ಯೂ ಸ್ಟೀಲ್‌ ಹಾಗೂ ಮಹೀಂದ್ರಾ & ಮಹೀಂದ್ರಾ ಕಂಪನಿಗಳು ಲಾಭ ಗಳಿಸಿದ್ದವು.

Exit mobile version