Site icon Vistara News

Stock Market: ಷೇರು ಮಾರುಕಟ್ಟೆಯಲ್ಲಿ ಮುಂದುವರಿದ ಗೂಳಿಯ ಅಬ್ಬರ; ಸಾರ್ವಕಾಲಿಕ ಎತ್ತರಕ್ಕೆ ಜಿಗಿದ ಸೆನ್ಸೆಕ್ಸ್

Stock Market

ಮುಂಬೈ: ಭಾರತೀಯ ಷೇರು ಮಾರುಕಟ್ಟೆ (Stock Market)ಯಲ್ಲಿ ಗೂಳಿ ಅಬ್ಬರ ಜೋರಾಗಿದೆ. ಗುರುವಾರ (ಜುಲೈ 4) ಕೂಡ ಸೆನ್ಸೆಕ್ಸ್ (Sensex) ಮತ್ತು ನಿಫ್ಟಿ (Nifty) ಜಿಗಿದು ನೂತನ ದಾಖಲೆ ಬರೆದಿದೆ. ಇಂದು ವಹಿವಾಟು ಆರಂಭವಾದ ಕೆಲ ಹೊತ್ತಿನಲ್ಲೇ ಸೆನ್ಸೆಕ್ಸ್‌ 336.51 ಅಂಕ ಅಥವಾ ಶೇ. 0.42 ಏರಿಕೆಯೊಂದಿಗೆ ಸಾರ್ವಕಾಲಿಕ 80,323.30 ಗಡಿ ತಲುಪಿದೆ. ಇನ್ನು ನಿಫ್ಟಿ 83.50 ಪಾಯಿಂಟ್‌ ಅಥವಾ ಶೇ. 0.34 ಹೆಚ್ಚಳದೊಂದಿಗೆ 24 ಸಾವಿರದ ಗಡಿ ದಾಟಿ 24,370ಕ್ಕೆ ಏರಿದೆ.

ಬುಧವಾರ ಸೆನ್ಸೆಕ್ಸ್ 570ಕ್ಕೂ ಅಧಿಕ ಅಂಕಗಳ ಜಿಗಿತವನ್ನು ಕಂಡು ಮೊದಲ ಬಾರಿಗೆ 80 ಸಾವಿರ ಅಂಕಗಳ ಗಡಿ ದಾಟಿತ್ತು. ಜತೆಗೆ ನಿಫ್ಟಿ ಕೂಡ 24,291.75 ಅಂಕಗಳ ಹೊಸ ಶಿಖರ ಏರಿತ್ತು. ಜಾಗತಿಕವಾಗಿ ಪೂರಕ ವಾತಾವರಣ ಕಂಡು ಬಂದಿರುವ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಈ ಸಂಚಲನ ಮೂಡಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಜೂನ್ 10ರ ನಂತರ ಇಲ್ಲಿಯವರೆಗೆ ಸೆನ್ಸೆಕ್ಸ್‌ನಲ್ಲಿ 3,000ಕ್ಕೂ ಹೆಚ್ಚು ಪಾಯಿಂಟ್‌ಗಳು ಏರಿವೆ. ವಿಶೇಷ ಎಂದರೆ 1980ರ ದಶಕದಲ್ಲಿ ಪ್ರಾರಂಭವಾದ ನಂತರ ಸೆನ್ಸೆಕ್ಸ್ ಮೊದಲ ಬಾರಿಗೆ 80,400ರ ಗಡಿಯನ್ನು ಸಮೀಪಿಸಿದೆ. ಭಾರತದಲ್ಲಿ ಮಾನ್ಸೂನ್ ಪ್ರಗತಿಯೂ ಹೂಡಿಕೆದಾರರ ವಿಶ್ವಾಸವನ್ನು ಹೆಚ್ಚಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಎಚ್‌ಸಿಎಲ್‌ ಟೆಕ್, ಐಸಿಐಸಿಐ ಬ್ಯಾಂಕ್, ಟಾಟಾ ಮೋಟಾರ್ಸ್, ಎಂ & ಎಂ, ಟಿಸಿಎಸ್, ಬಜಾಜ್ ಫೈನಾನ್ಸ್, ಟಾಟಾ ಸ್ಟೀಲ್ ಮತ್ತು ಟೆಕ್ ಎಂ ಮುಂತಾದ ಪ್ರಮುಖ ಲಾರ್ಜ್ ಕ್ಯಾಪ್ ಷೇರುಗಳಲ್ಲಿ ಶೇ. 1.35ರಷ್ಟು ಏರಿಕೆಯಾಗಿದೆ. ಜತೆಗೆ ಬಿಎಸ್ಇ ಮಿಡ್‌ಕ್ಯಾಪ್‌ ಮತ್ತು ಸ್ಮಾಲ್‌ಕ್ಯಾಪ್‌ ಸೆನ್ಸೆಕ್ಸ್ ಕ್ರಮವಾಗಿ ಶೇ. 0.36 ಮತ್ತು ಶೇ. 0.57ರಷ್ಟು ಏರಿಕೆ ದಾಖಲಿಸಿವೆ. ಇನ್ನು ಎಚ್‌ಡಿಎಫ್‌ಸಿ ಬ್ಯಾಂಕ್, ಸಿಪ್ಲಾ, ಡಾ.ರೆಡ್ಡೀಸ್, ಶ್ರೀರಾಮ್ ಫೈನಾನ್ಸ್ ಮತ್ತು ಅದಾನಿ ಎಂಟರ್‌ಟೈನ್‌ಮೆಂಟ್‌ ಹೆಚ್ಚು ನಷ್ಟ ಅನುಭವಿಸಿದ ಷೇರುಗಳಾಗಿವೆ.

ದೇಶೀಯ ಮಾರುಕಟ್ಟೆಯ ಜತೆಗೆ ಜಾಗತಿಕ ಮಾರುಕಟ್ಟೆಗಳೂ ಸಕಾರಾತ್ಮಕವಾಗಿ ಸ್ಪಂದಿಸಿವೆ. ಟೆಕ್ ಷೇರುಗಳ ಲಾಭದಿಂದ ವಾಲ್ ಸ್ಟ್ರೀಟ್ ದಾಖಲೆಯ ಗರಿಷ್ಠ ಮಟ್ಟದಲ್ಲಿ ಕೊನೆಗೊಂಡಿದೆ. ಎಸ್ & ಪಿ 500 ಶೇ. 0.51ರಷ್ಟು ಮತ್ತು ನಾಸ್ಡಾಕ್ ಕಾಂಪೊಸಿಟ್ ಶೇ. 0.88ರಷ್ಟು ಏರಿಕೆಯಾಗಿದೆ. ಇನ್ನು ಜಪಾನ್‌ನ ನಿಕೈ 225 ಶೇ. 0.27, ಕೊರಿಯಾದ ಕೋಸ್ಪಿ ಶೇ. 0.87 ಮತ್ತು ಏಷ್ಯಾ ಡೌ ಶೇ. 1ರಷ್ಟು ಏರಿಕೆ ದಾಖಲಿಸಿವೆ. ಹಾಂಗ್‌ಕಾಂಗ್‌ನ ಹಾಂಗ್ ಸೆಂಗ್ ಕೂಡಾ ಶೇ. 0.56ರಷ್ಟು ಹೆಚ್ಚಾಗಿದೆ.

ಇದನ್ನೂ ಓದಿ: Stock Market: ಮೊದಲ ಬಾರಿಗೆ 80,000 ಗಡಿ ದಾಟಿದ ಸೆನ್ಸೆಕ್ಸ್: 24,250 ಪಾಯಿಂಟ್‌ ತಲುಪಿದ ನಿಫ್ಟಿ

ಯುಎಸ್ ಫೆಡರಲ್ ರಿಸರ್ವ್ ಅಧ್ಯಕ್ಷ ಜೆರೋಮ್ ಪೊವೆಲ್ ಅವರು ಹಣದುಬ್ಬರವನ್ನು ನಿಯಂತ್ರಿಸುವಲ್ಲಿ ಪ್ರಗತಿ ಸಾಧಿಸುದ್ದೇವೆ ಎಂದು ಹೇಳಿಕ ನೀಡಿದ ನಂತರ ಮಾರುಕಟ್ಟೆಗಳು ಧನಾತ್ಮಕ ಪ್ರದರ್ಶನ ತೋರುತ್ತಿವೆ. ಮಂಗಳವಾರ ವಹಿವಾಟು ಆರಂಭವಾದ ಕೆಲ ಹೊತ್ತಿನಲ್ಲಿ ಸೆನ್ಸೆಕ್ಸ್‌ ದಾಖಲೆಯ 79,653.21 ಅಂಕ ತಲುಪಿತ್ತು. ನಿಫ್ಟಿ (Nifty) ಕೂಡ ಹೊಸ ದಾಖಲೆ ಬರೆದಿದ್ದು 24,186.5 ಪಾಯಿಂಟ್‌ ಗಡಿ ಮುಟ್ಟಿತ್ತು. ಮಂಗಳವಾರ ಬೆಳಿಗ್ಗೆ ಎನ್ಎಸ್ಇ ನಿಫ್ಟಿ ಶೇ. 0.21ರಷ್ಟು ಏರಿಕೆ ಕಂಡು 24,186.5 ಪಾಯಿಂಟ್‌ಗೆ ತಲುಪಿದ್ದರೆ, ಬಿಎಸ್ಇ ಸೆನ್ಸೆಕ್ಸ್ ಶೇಕಡಾ 0.22ರಷ್ಟು ಹೆಚ್ಚಳ ದಾಖಲಿಸಿ 79,653.21 ಪಾಯಿಂಟ್‌ ಗಳಿಸಿತ್ತು. 

Exit mobile version