ಮುಂಬೈ: ಭಾರತೀಯ ಷೇರು ಮಾರುಕಟ್ಟೆ (Stock Market)ಯಲ್ಲಿ ಗೂಳಿಯ ಗುಟುರು ಸದ್ದು ಜೋರಾಗಿ ಕೇಳಿ ಬರುತ್ತಿದೆ. ಗುರುವಾರ (ಜುಲೈ 4) ಸೆನ್ಸೆಕ್ಸ್ (Sensex) ನೂತನ ದಾಖಲೆ ಬರೆದು 80 ಸಾವಿರ ಪಾಯಿಂಟ್ ದಾಟಿ ಸಾರ್ವಕಾಲಿಕ 80,323.30 ಗಡಿ ತಲುಪಿತ್ತು. ಹೀಗಾಗಿ ಈಗ ಸೆನ್ಸೆಕ್ಸ್ ಐತಿಹಾಸಿಕ 1 ಲಕ್ಷದ ಗಡಿಯನ್ನು ಯಾವಾಗ ಮುಟ್ಟಲಿದೆ ಎನ್ನುವ ಚರ್ಚೆ ಆರಂಭವಾಗಿದೆ.
ಬಿಎಸ್ಇ ಸೆನ್ಸೆಕ್ಸ್ 7 ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ 70,000ದಿಂದ 80,000ಕ್ಕೆ ಜಿಗಿದಿದೆ. ಅಂದರೆ ಸುಮಾರು 10 ಸಾವಿರ ಪಾಯಿಂಟ್ ವೃದ್ಧಿಸಿದೆ. ಜತೆಗೆ ಸೆನ್ಸೆಕ್ಸ್ ಕಳೆದ 45 ವರ್ಷಗಳಲ್ಲಿ ಶೇ. 15.9ರಷ್ಟು ಸಮಗ್ರ ವಾರ್ಷಿಕ ಅಭಿವೃದ್ಧಿ ಪ್ರಮಾಣ ಹೊಂದಿದೆ. ಹೀಗಾಗಿ 2025ರ ಡಿಸೆಂಬರ್ ವೇಳೆಗೆ 1 ಲಕ್ಷದ ಮೈಲಿಗಲ್ಲನ್ನು ತಲುಪಬಹುದು ಎಂದು ಅಂದಾಜಿಸಲಾಗಿದೆ.
”1980ರ ದಶಕದಲ್ಲಿ ಪ್ರಾರಂಭವಾದ ಸೆನ್ಸೆಕ್ಸ್‌ನ ಮೂಲ ಮೌಲ್ಯ 100 ಅನ್ನು ಪರಿಗಣಿಸಿ ಶೇ. 15.9ರ ಸಂಯೋಜಿತ ವಾರ್ಷಿಕ ಬೆಳವಣಿಗೆಯ ದರದಲ್ಲಿ ಲೆಕ್ಕ ಹಾಕುವುದಾದರೆ 45 ವರ್ಷಗಳಲ್ಲಿ 800 ಪಟ್ಟು ಹೆಚ್ಚಾಗಿದೆ. ಸೆನ್ಸೆಕ್ಸ್ ಇದೇ ರೀತಿ ವಾರ್ಷಿಕ ಶೇ. 15.9ರಷ್ಟು ಬೆಳವಣಿಗೆಯನ್ನು ಮುಂದುವರಿಸಿದರೆ, ಮುಂದಿನ ವರ್ಷದ ಡಿಸೆಂಬರ್ ವೇಳೆಗೆ ನಾವು 1 ಲಕ್ಷದ ಹೆಗ್ಗುರುತು ತಲುಪಲಿದ್ದೇವೆʼʼ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಸೆನ್ಸೆಕ್ಸ್ ಪ್ರತಿ 5 ವರ್ಷಕ್ಕೆ ದ್ವಿಗುಣ ಆಗುತ್ತ ಇರುವ ಲೆಕ್ಕಾಚಾರ ಪರಿಗಣಿಸಿದರೆ 2029ರ ವೇಳೆಗೆ ಸೂಚ್ಯಂಕ ಮತ್ತೊಂದು ಸಾರ್ವಕಾಲಿಕ ಮಟ್ಟವಾದ 1.50 ಲಕ್ಷ ಅಂಕಗಳನ್ನು ಮುಟ್ಟಲಿದೆ ಎಂದೂ ಅವರು ತಿಳಿಸಿದ್ದಾರೆ.
1996ರಿಂದ ಸೆನ್ಸೆಕ್ಸ್‌ನಲ್ಲಿ 6 ಬಾರಿ ಮಾತ್ರ ನಕಾರಾತ್ಮಕ ಪರಿಣಾಮ ಕಂಡು ಬಂದಿದೆ. ಅದರಲ್ಲಿಯೂ ಕಳೆದ 5 ವರ್ಷಗಳಲ್ಲಿ ಸುಮಾರು 40,000 ಅಂಕಗಳ ಮೂಲಕ ಮೌಲ್ಯವನ್ನು ದ್ವಿಗುಣಗೊಳಿಸಿದೆ. ದಲಾಲ್ ಸ್ಟ್ರೀಟ್‌ನ ಅನುಭವಿ ಮತ್ತು ಮೋತಿಲಾಲ್ ಓಸ್ವಾಲ್ ಫೈನಾನ್ಷಿಯಲ್ ಸರ್ವೀಸಸ್‌ನ ಸಹ-ಸಂಸ್ಥಾಪಕ ರಾಮ್‌ದೇವ್ ಅಗರ್ವಾಲ್ ಈ ಬಗ್ಗೆ ಮಾತನಾಡಿ, ”ಕಳೆದ ಮೂರು ದಶಕಗಳಲ್ಲಿ ಭಾರತದ ಕಾರ್ಪೊರೇಟ್ ವಲಯದ ಲಾಭವು ಸುಮಾರು ಶೇ. 17ರಷ್ಟು ಹೆಚ್ಚಾಗಿದೆ. ಇದೇ ಬೆಳವಣಿಗೆಯನ್ನು ಕಾಯ್ದುಕೊಂಡರೆ 2029ರ ಸುಮಾರಿಗೆ ಸೆನ್ಸೆಕ್ಸ್ ಮಟ್ಟವು 1,50,000 ಗಡಿ ತಲುಪಲಿದೆʼʼ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಮುಂದಿನ 10 ವರ್ಷಗಳಲ್ಲಿ ಸೂಚ್ಯಂಕವು ಇದೇ ವೇಗದಲ್ಲಿ ಏರಿಕೆಯಾಗಲಿದೆ ಎಂದು ಮಾರುಕಟ್ಟೆ ಹೂಡಿಕೆದಾರ ಮಾರ್ಕ್ ಮೊಬಿಯಸ್ ಅಭಿಪ್ರಾಯಪಟ್ಟಿದ್ದಾರೆ. “ನಾವು ಇನ್ನೂ ಮೇಲ್ಮುಖ ಹಾದಿಯಲ್ಲಿದ್ದೇವೆ. 1 ಲಕ್ಷ ಅಂಕದತ್ತ ಸಾಗುತ್ತಿದ್ದೇವೆ. ಶೀಘ್ರದಲ್ಲೇ ಈ ಮೈಲಿಗಲ್ಲು ದಾಟುತ್ತೇವೆʼʼ ಎಂದಿದ್ದಾರೆ.
ದಿನಾಂತ್ಯಕ್ಕೆ ಕುಸಿತ
ಸೆನ್ಸೆಕ್ಸ್ ಗುರುವಾರ ಆರಂಭದಲ್ಲಿ 80,323.30 ಅಂಕಗಳ ಐತಿಹಾಸಿಕ ಮಟ್ಟ ತಲುಪಿ, ಬಳಿಕ 79,986 ಅಂಕಕ್ಕೆ ದಿನದ ವಹಿವಾಟು ಅಂತ್ಯಗೊಳಿಸಿತ್ತು. ಇನ್ನೊಂದೆಡೆ ರಾಷ್ಟ್ರೀಯ ಷೇರು ಸೂಚ್ಯಂಕವಾದ ನಿಫ್ಟಿ ಸಾರ್ವಕಾಲಿಕ ದಾಖಲೆ ಮಟ್ಟವಾದ 24,286ಕ್ಕೆ ತಲುಪಿತ್ತು.
ಇದನ್ನೂ ಓದಿ: Stock Market: ಷೇರು ಮಾರುಕಟ್ಟೆಯಲ್ಲಿ ಮುಂದುವರಿದ ಗೂಳಿಯ ಅಬ್ಬರ; ಸಾರ್ವಕಾಲಿಕ ಎತ್ತರಕ್ಕೆ ಜಿಗಿದ ಸೆನ್ಸೆಕ್ಸ್