Site icon Vistara News

Arecanut Price: ಅಡಿಕೆ ಧಾರಣೆಯಲ್ಲಿ ದಿಢೀರ್‌ ಕುಸಿತ; ಬೆಲೆ ಇಳಿಕೆಗೆ ಅಕ್ರಮ ಸಾಗಣೆ ಕಾರಣವೇ?

Sudden drop in arecanut price illegal transportation is reason for prices fall

ಭಾಸ್ಕರ್‌ ಆರ್. ಗೆಂಡ್ಲ, ಶಿರಸಿ

ಮಲೆನಾಡು ಸೇರಿದಂತೆ‌ ಕರವಾಳಿ ಭಾಗದಲ್ಲಿ ಅಡಿಕೆ ದರ (Arecanut Price) ಇಳಿಮುಖವಾಗಿದ್ದು, ರಾಜ್ಯದ 17 ಜಿಲ್ಲೆಯ ಅಡಿಕೆ ಬೆಳೆಗಾರರನ್ನು ಆತಂಕಕ್ಕೆ ತಳ್ಳಿದೆ. ಅಡಿಕೆ ತೋಟದಲ್ಲಿ 3 ಮತ್ತು 4ನೇ ಕೊಯ್ಲು ಕೂಡ ಮುಗಿಯುತ್ತಾ ಹಾಲಿ ವರ್ಷದ ಬೆಳೆ ಮುಗಿಯುತ್ತಾ ಬರುತ್ತಿದ್ದಂತೆ ಇತ್ತ ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಧಾರಣೆ ಇಳಿಯುತ್ತಿರುವುದು ಭವಿಷ್ಯದ ಮೇಲೆ ಕರಾಳತೆ ಮೂಡಿಸಿದೆ. ಇದಕ್ಕೆಲ್ಲ ಆಮದು ಪ್ರಕ್ರಿಯೆಗೆ ಸಂಬಂಧಿಸಿದ ಅಕ್ರಮವೇ ಇದಕ್ಕೆ ಕಾರಣವೆಂಬ ಅನುಮಾನ ಅಡಿಕೆ ಬೆಳೆಗಾರರಲ್ಲಿ‌ (Arecanut growers) ಮೂಡಿದೆ.

ಕಳೆದೊಂದು ತಿಂಗಳ ಹಿಂದೆ ಅಡಿಕೆ ದರದಲ್ಲಿ ಅಲ್ಪ ಸ್ವಲ್ಪ ಏರಿಳಿತ ಆಗುತ್ತಿದ್ದರೂ ಅದು ಹೆಚ್ಚಾಗಿ ಗಮನ ಸೆಳೆದಿರಲಿಲ್ಲ. ಆದರೆ, ಈ ವಾರ ಪ್ರತಿ ಕ್ವಿಂಟಾಲ್‌ಗೆ ಎರಡು ಸಾವಿರ ರೂಪಾಯಿಗಳಷ್ಟು ಕುಸಿತ ಆಗಿರುವುದು ಬೆಳೆಗಾರರನ್ನು ಯೋಚಿಸುವಂತೆ ಮಾಡಿದೆ. ಈಗಷ್ಟೇ ಅಡಿಕೆ ನಾಲ್ಕೈದು ಕೊಯ್ಲು ಹಂಗಾಮು ಮುಕ್ತಾಯಗೊಂಡಿದ್ದು, ಸಂಸ್ಕರಿಸಿದ ಕೆಂಪಡಕೆ ಮತ್ತು ಹಳೆಯ – ಹೊಸ ಚಾಲಿ ಅಡಿಕೆಯು ಮಾರುಕಟ್ಟೆಗೆ ಸಾಕಷ್ಟು ಬರುತ್ತಿದೆ. ಆದರೆ, ಈವರೆಗೆ ಉತ್ತಮವಾದ ಬೆಲೆ ದೊರೆಯುತ್ತಿದ್ದು ಈಗ ಇಳಿಕೆ ಆಗುತ್ತಿದೆ. ಮುಂದೇನು ಎಂಬುದು ಗೊತ್ತಾಗುತ್ತಿಲ್ಲ ಎಂಬುದಾಗಿ ವ್ಯಾಪಾರಸ್ಥ ಬೆಳೆಗಾರರು ಹೇಳುತ್ತಿದ್ದಾರೆ.

ದರಗಳ ಏರು-ಪೇರು

ಕಳೆ ನವೆಂಬರ್ ತಿಂಗಳಿನಲ್ಲಿ ಚಾಲಿ ಅಡಿಕೆ ದರ ಗರಿಷ್ಠ 42 ಸಾವಿರ ರೂ.ಗಳವರೆಗೆ ಲಭ್ಯವಾಗುತ್ತಿತ್ತು. ಆದರೆ, ಕ್ರಮೇಣ ಇಳಿಯುತ್ತಾ ಬಂದಿದ್ದು, ದರ ಈಗ ಗರಿಷ್ಠ 38 ಸಾವಿರ ರೂಪಾಯಿ ದಾಟುತ್ತಿಲ್ಲ. ಇನ್ನೊಂದೆಡೆ ಕೆಂಪಡಕೆ ದರ ಐವತ್ತು ಸಾವಿರ ರೂ. ದಾಟಬಹುದು ಎಂಬ ಅಡಿಕೆ ಬೆಳೆಗಾರರ ನಿರೀಕ್ಷೆ ಹುಸಿಯಾಗಿದೆ. ಕಳೆದ ಎರಡು ತಿಂಗಳ ಕಾಲ ಗರಿಷ್ಠ 48 ಸಾವಿರ ರೂ. ಆಸುಪಾಸು ದರ ಲಭ್ಯವಾಗುತ್ತಿದ್ದರೆ, ಈ ವಾರ ಮತ್ತೆ ಎರಡು ಸಾವಿರ ರೂ.ನಷ್ಟು ಇಳಿಕೆಯಾಗಿದೆ.

ಕ್ಯಾಂಪ್ಕೋ ದೂರು

ಕೇಂದ್ರ ಸರ್ಕಾರ ಅಡಿಕೆ ಆಮದು ದರವನ್ನು ನಿಗದಿ ಮಾಡಿದ ಮೇಲೆ ಅಧಿಕೃತ ಆಮದು ಪ್ರಮಾಣ ಕಡಿಮೆಯಾಗಿದೆ. ಇಡೀ ವರ್ಷದಲ್ಲಿ 30 ಸಾವಿರ ಟನ್ ಮಾತ್ರ ಅಧಿಕೃತ ಆಮದಾಗಿದೆ. ಆದರೆ, ಇದರ ಹಲವು ಪಟ್ಟು ಅನಧಿಕೃತವಾಗಿ ಬರುತ್ತಿದೆ. ತಮಿಳುನಾಡಿನ ಬಂದರುಗಳಿಗೆ ತೈಲ ಬ್ಯಾರೆಲ್‌ಗಳಲ್ಲಿ ಅಡಿಕೆ ತುಂಬಿಸಿ ಕಳುಹಿಸಲಾಗಿದೆ. ವಿದೇಶದಿಂದ ಕಾನೂನುಬಾಹಿರವಾಗಿ ಅಡಿಕೆ ಬರುವುದನ್ನು ನಿಲ್ಲಿಸಲು ಕ್ರಮ ಕೈಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಕ್ಯಾಂಪ್ಕೋ ಪತ್ರ ಬರೆದಿದೆ. ಈ ಮಧ್ಯೆ, ಅಂತಾರಾಜ್ಯ ಅಡಿಕೆ ವಹಿವಾಟು ಸಂಸ್ಥೆಯಾದ ಕ್ಯಾಂಪ್ಕೋ ಈ ದರ ಕುಸಿತ ಮತ್ತು ಅಕ್ರಮ ಆಮದು ಕುರಿತಂತೆ ಕೇಂದ್ರ ಸರ್ಕಾರದ ಮಟ್ಟದಲ್ಲಿ ದೂರು ದಾಖಲಿಸಿದೆ. ಇತ್ತೀಚಿನ ದಿನಗಳಲ್ಲಿ ವಿದೇಶಿ ಅಡಿಕೆ ಅಕ್ರಮವಾಗಿ ದೇಶದೊಳಕ್ಕೆ ಬರುತ್ತಿದ್ದು, ದೇಶಿ ಅಡಿಕೆಯ ಮಾರುಕಟ್ಟೆಗೆ ತೀವ್ರ ಹೊಡೆತ ನೀಡುತ್ತಿದೆ. ವಶಪಡಿಸಿಕೊಂಡ ಅಕ್ರಮ ಆಮದು ಅಡಿಕೆಯು ಕಡಿಮೆ ದರದಲ್ಲಿ ಹರಾಜು ಮೂಲಕ ಮಾರುಕಟ್ಟೆಗೆ ಬಿಡುಗಡೆ ಆಗುತ್ತಿದೆ ಎಂದು ಕ್ಯಾಂಪ್ಕೋ ಆಕ್ಷೇಪ ವ್ಯಕ್ತಪಡಿಸಿದೆ.

ಅಕ್ರಮ ಅಮದು ಅಡಿಕೆಯನ್ನು ಕಸ್ಟಮ್ಸ್ ಅಥವಾ ಸಂಬಂಧಪಟ್ಟ ಇತರ ಇಲಾಖೆಯ ಅಧಿಕಾರಿಗಳು ನಡೆಸುವ ಹರಾಜಿನಲ್ಲಿ ಕನಿಷ್ಠ ಆಮದು ಬೆಲೆಗಿಂತ ಕಡಿಮೆ ಬೆಲೆಯಲ್ಲಿ ವರ್ತಕರು ಖರೀದಿ ಮಾಡಿ ಮಾರುಕಟ್ಟೆಗೆ ಬಿಡುಗಡೆ ಮಾಡುವುದರಿಂದ ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸಿದೆ ಎಂಬುದು ಸಂಸ್ಥೆಯ ದೂರಾಗಿದೆ.

ಪ್ರಧಾನಿಗೂ ಪತ್ರ

ಇಂಡೋನೇಷ್ಯಾ, ಬರ್ಮಾ ಮುಂತಾದ ದೇಶಗಳಿಂದ ಆಮದು ಆಗುವ ಅಡಿಕೆಯ ಗುಣಮಟ್ಟ ಕಳಪೆ ಆಗಿರುತ್ತದೆ. ಅದು ಗುಣಮಟ್ಟ ನಿಯಂತ್ರಣ ಕಾಯ್ದೆ ನಿಗದಿಪಡಿಸಿದ ಮಾನದಂಡಗಳನ್ನು ಪೂರೈಸುವುದಿಲ್ಲ ಮತ್ತು ಉಪಯೋಗಕ್ಕೆ ಯೋಗ್ಯವಾಗಿರುವುದಿಲ್ಲ. ಹೀಗೆ ವಶಪಡಿಸಿಕೊಂಡ ಅಡಿಕೆಯ ಗುಣಮಟ್ಟದ ಪರೀಕ್ಷೆಯನ್ನು ಮಾನ್ಯತೆ ಪಡೆದ ಪ್ರಯೋಗಾಲಯದಲ್ಲಿ ಕಟ್ಟುನಿಟ್ಟಾಗಿ ನಡೆಸಬೇಕು ಎಂಬುದಾಗಿ ಪ್ರಧಾನಿಗೆ ಕ್ಯಾಂಪ್ಕೋ ಮನವಿ ಮಾಡಿತ್ತು. ಅಕ್ರಮ ಆಮದು ಅಡಿಕೆ ದೇಶಿ ಮಾರುಕಟ್ಟೆಗೆ ಕೆಟ್ಟ ಪರಿಣಾಮ ನೀಡುವುದರ ಬಗ್ಗೆ ಕ್ಯಾಂಪ್ಕೋ ಸಂಸ್ಥೆಯ ಮೂಲಕ ಪ್ರಧಾನ ಮಂತ್ರಿಯವರ ಗಮನ ಸೆಳೆಯುವ ಪ್ರಯತ್ನವನ್ನು ಮಾಡಲಾಗಿದೆ.

ಇದನ್ನೂ ಓದಿ: Blast in Bangalore : ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಭಾರಿ ಸ್ಫೋಟ; ಐವರು ಗಂಭೀರ

ಅಡಿಕೆ ಕಳ್ಳಸಾಗಾಟ ಅವ್ಯಾಹತ?

ವಿದೇಶದಿಂದ ಅಡಕೆ ಆಮದು ಪ್ರಕ್ರಿಯೆ ನಿಲ್ಲಿಸಬೇಕೆಂಬ ರೈತರ ಬಹುಕಾಲದ ಬೇಡಿಕೆ ಇನ್ನೂ ಈಡೇರಿಲ್ಲವಾದರೂ, ಕನಿಷ್ಠ ಆಮದು ಮಿತಿ ನಿಗದಿ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿತ್ತು. ಹೀಗಾಗಿ ಕಡಿಮೆ ದರದಲ್ಲಿ ಅಡಿಕೆ ಆಮದಾಗದಂತಹ ಸನ್ನಿವೇಶ ನಿರ್ಮಾಣವಾಗಿತ್ತು. ಆದರೆ, ಆಮದು ಪ್ರಮಾಣ ಹೆಚ್ಚಳ ಮತ್ತು ಕಳ್ಳ ಮಾರ್ಗದಲ್ಲಿ ಅಡಿಕೆ ಒಳ ನುಸುಳುತ್ತಿರುವುದರಿಂದ ದೇಸಿ ಅಡಿಕೆ ಮಾರುಕಟ್ಟೆ ಮೇಲೆ ಮಾರಕ ಹೊಡೆತ ಬೀಳುತ್ತಿದೆ ಎಂಬ ಅಭಿಪ್ರಾಯವಿದೆ.

Exit mobile version