Site icon Vistara News

Oil production : ಸೌದಿ, ಒಪೆಕ್‌ನಿಂದ ದಿಢೀರ್ ಉತ್ಪಾದನೆ ಕಡಿತ, ಕಚ್ಚಾ ತೈಲ ದರ 6% ಜಿಗಿತ, ಮತ್ತಷ್ಟು ಏರಿಕೆ ನಿರೀಕ್ಷೆ

Petrol Bunk

Petrol, diesel prices to be slashed by ₹3-5/litre around Diwali? what brokerage says?

ರಿಯಾದ್‌ : ಸೌದಿ ಅರೇಬಿಯಾ ಮತ್ತು ಇತರ ಒಪೆಕ್‌ ಪ್ಲಸ್‌ ತೈಲೋತ್ಪಾದಕರು ಸ್ವಯಂಪ್ರೇರಣೆಯಿಂದ ಉತ್ಪಾದನೆ ಕಡಿತವನ್ನು ಭಾನುವಾರ ಘೋಷಿಸಿವೆ. ( Oil production) ಇದರ ಪರಿಣಾಮ ಕಚ್ಚಾ ತೈಲದ ದರದಲ್ಲಿ ಬ್ಯಾರೆಲ್‌ಗೆ 10 ಡಾಲರ್‌ ಏರಿಕೆಯಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಸೌದಿ ಅರೇಬಿಯಾ ಮೇಯಿಂದ 2023 ಅಂತ್ಯದ ತನಕ ದಿನದ ಉತ್ಪಾದನೆಯಲ್ಲಿ 500,000 ಬ್ಯಾರೆಲ್‌ (barrels) ಕಡಿತ ಮಾಡುವುದಾಗಿ ಘೋಷಿಸಿದೆ. ಉತ್ಪಾದನೆ ಕಡಿತ ಘೋಷಣೆಯ ಬೆನ್ನಲ್ಲೇ ಬ್ರೆಂಟ್‌ ಕಚ್ಚಾ ತೈಲ ದರದಲ್ಲಿ ಬ್ಯಾರೆಲ್‌ಗೆ 5 ಡಾಲರ್‌ ದರ ಏರಿಕೆಯಾಗಿದೆ. ಅಂದರೆ 85 ಡಾಲರ್‌ ಗಡಿ ಮುಟ್ಟಿದೆ. ವೆಸ್ಟ್‌ ಟೆಕ್ಸಾಸ್‌ ಇಂಟರ್‌ ಮೀಡಿಯೇಟ್‌ ಕಾಂಟ್ರ್ಯಾಕ್ಟ್‌ ದರ 80 ಡಾಲರ್‌ಗೆ ಏರಿದೆ.

ರಷ್ಯಾದ ಉಪ ಪ್ರಧಾನಿ ಕೂಡ 2023ರ ಅಂತ್ಯದ ತನಕ ತೈಲೋತ್ಪಾದನೆಯನ್ನು ಕಡಿತಗೊಳಿಸಲಾಗುವುದು ಎಂದು ತಿಳಿಸಿದ್ದಾರೆ. ರಷ್ಯಾ ಕೂಡ ದಿನಕ್ಕೆ 500,000 ಬ್ಯಾರಲ್‌ ಲೆಕ್ಕದಲ್ಲಿ ಉತ್ಪಾದನೆ ತಗ್ಗಿಸಲು ನಿರ್ಧರಿಸಿದೆ. ಯುಎಇ, ಕುವೈತ್‌, ಇರಾಕ್‌, ಒಮಾನ್‌, ಅಲ್ಜೀರಿಯಾ ಕೂಡ ಇದೇ ಅವಧಿಯಲ್ಲಿ ಉತ್ಪಾದನೆ ಕಡಿತಗೊಳಿಸುವುದಾಗಿ ತಿಳಿಸಿವೆ.

ಯುಎಇ ದಿನದ ಉತ್ಪಾದನೆಯಲ್ಲಿ 144,000 ಬ್ಯಾರೆಲ್‌, ಕುವೈತ್‌ 128,000 ಬ್ಯಾರೆಲ್‌, ಇರಾಕ್‌ 211,000 ಬ್ಯಾರೆಲ್‌, ಒಮಾನ್‌ 40,000 ಬ್ಯಾರೆಲ್‌, ಅಲ್ಜೀರಿಯಾ 48,000 ಬ್ಯಾರೆಲ್ ಕಡಿತಗೊಳಿಸುವುದಾಗಿ ತಿಳಿಸಿದೆ.‌ ಮಾರುಕಟ್ಟೆಯಲ್ಲಿ ತೈಲ ದರವನ್ನು ಸ್ಥಿರವಾಗಿಸಲು ಈ ಕ್ರಮ ಅನಿವಾರ್ಯ ಎಂದು ಸೌದಿ ಅರೇಬಿಯಾ ಹೇಳಿದೆ. ರಾಯ್ಟರ್ಸ್‌ ಪ್ರಕಾರ ಒಟ್ಟಾರೆಯಾಗಿ ದಿನದ ಸರಾಸರಿ ಉತ್ಪಾದನೆಯಲ್ಲಿ 36.6 ಲಕ್ಷ ಬ್ಯಾರೆಲ್‌ ಕಡಿತವಾಗಲಿದೆ. ಅಂದರೆ ಜಾಗತಿಕ ಬೇಡಿಕೆಯ 3.7%ರಷ್ಟು. ಅಮೆರಿಕವು ತೈಲ ದರ ಇಳಿಸಲು ಉತ್ಪಾದನೆಯನ್ನು ಹೆಚ್ಚಿಸುವಂತೆ ಒತ್ತಾಯಿಸಿದೆ.

ತೈಲ ದರದಲ್ಲಿ 10 ಡಾಲರ್‌ ಏರಿಕೆ ಸಾಧ್ಯತೆ:

ಇದೀಗ ಹೊಸತಾಗಿ ಉತ್ಪಾದನೆ ಕಡಿತದ ನಿರ್ಧಾರದಿಂದ ದರದಲ್ಲಿ 10 ಡಾಲರ್‌ ಏರಿಕೆಯಾಗುವ ಸಾಧ್ಯತೆ ಇದೆ. ಬ್ರೆಂಟ್‌ ಕಚ್ಚಾ ತೈಲ ದರದಲ್ಲಿ ಈಗಾಗಲೇ 5 ಡಾಲರ್‌ ಜಿಗಿದು 85 ಡಾಲರ್‌ಗೆ ವೃದ್ಧಿಸಿದೆ. ತೈಲ ದರದ ಏರಿಕೆಯಿಂದ ಹಣದುಬ್ಬರ ಹೆಚ್ಚುತ್ತದೆ. ಇದು ಅನೇಕ ದೇಶಗಳನ್ನು ಆರ್ಥಿಕ ಬಿಕ್ಕಟ್ಟಿಗೆ ನೂಕುತ್ತದೆ. ಜನ ಜೀವನದ ವೆಚ್ಚವನ್ನು ಗಣನೀಯ ಏರಿಸುತ್ತದೆ. ಒಪೆಕ್‌ ವಿಶ್ವದ ತೈಲೋತ್ಪಾದನೆಯಲ್ಲಿ 40% ಪಾಲನ್ನು ಒಳಗೊಂಡಿದೆ. ಒಪೆಕ್‌ ಪ್ಲಸ್‌ನ ಸಭೆಗೆ ಒಂದು ದಿನ ಮುಂಚಿತವಾಗಿ ಈ ನಿರ್ಧಾರವನ್ನು ಉತ್ಪಾದಕರು ಕೈಗೊಂಡಿದ್ದಾರೆ. ಈ ಬೆಳವಣಿಗೆಯಿಂದ ಅಮೆರಿಕ ಮತ್ತು ಸೌದಿ ಅರೇಬಿಯಾ ಹಾಗೂ ಒಪೆಕ್‌ ಜತೆ ಭಿನ್ನಮತ ಹೆಚ್ಚಿಸುವ ನಿರೀಕ್ಷೆ ಇದೆ.

ಕಳೆದ ವರ್ಷ ರಷ್ಯಾ-ಉಕ್ರೇನ್‌ ಸಂಘರ್ಷದ ಬಳಿಕ ಕಚ್ಚಾ ತೈಲ ದರ ಸ್ಫೋಟವಾಗಿತ್ತು. ಒಂದು ಹಂತದಲ್ಲಿ ಪ್ರತಿ ಬ್ಯಾರೆಲ್‌ ದರ 130 ಡಾಲರ್‌ಗೆ ಜಿಗಿದಿತ್ತು.

ಚೀನಾ ಮತ್ತು ಅಮೆರಿಕದ ಬಳಿಕ ಅತಿ ಹಚ್ಚು ತೈಲ ಆಮದು ಮಾಡುವ ದೇಶವಾಗಿ ಭಾರತ ಹೊರಹೊಮ್ಮಿದೆ. ಕಳೆದ ಫೆಬ್ರವರಿಯಲ್ಲಿ ಭಾರತವು ರಷ್ಯಾದಿಂದ ದಿನಕ್ಕೆ ದಾಖಲೆಯ 16 ಲಕ್ಷ ಬ್ಯಾರೆಲ್‌ನಷ್ಟು ಕಚ್ಚಾ ತೈಲವನ್ನು ತರಿಸಿಕೊಂಡಿತ್ತು. ಇದೀಗ ಭಾರತಕ್ಕೆ ಅತಿ ಹೆಚ್ಚು ತೈಲ ಸರಬರಾಜು ಮಾಡುವ ದೇಶವಾಗಿ ರಷ್ಯಾ ನಿಂತಿದೆ. ರಷ್ಯಾದಿಂದ ಡಿಸ್ಕೌಂಟ್‌ ದರದಲ್ಲಿ ಆಮದು ಮಾಡಿಕೊಳ್ಳುವ ತೈಲದಲ್ಲಿ ಮೂರನೇ ಒಂದಕ್ಕೂ ಹೆಚ್ಚು ಪಾಲನ್ನು ಪೆಟ್ರೋಲ್-ಡೀಸೆಲ್‌ ಆಗಿ ಸಂಸ್ಕರಿಸಿ ಮತ್ತೆ ರಫ್ತು ಮಾಡಲಾಗುತ್ತಿದೆ.

Exit mobile version