Site icon Vistara News

ONDC | ಅಮೆಜಾನ್‌, ಫ್ಲಿಪ್‌ಕಾರ್ಟ್‌ಗೆ ಪರ್ಯಾಯವಾಗಿ ಶೀಘ್ರ ಬರಲಿದೆ ಕೇಂದ್ರ ಸರ್ಕಾರದ ಒಎನ್‌ಡಿಸಿ!

online

Ecommerce.

ಕೆ. ಗಿರಿಪ್ರಕಾಶ್‌, ಬೆಂಗಳೂರು

ಇ-ಕಾಮರ್ಸ್‌ ವಲಯದಲ್ಲಿ ಮನೆ ಮಾತಾಗಿರುವ ಎರಡೇ ಎರಡು ದಿಗ್ಗಜ ಕಂಪನಿಗಳೆಂದರೆ ಅಮೆಜಾನ್‌ ಮತ್ತು ಫ್ಲಿಪ್‌ಕಾರ್ಟ್.‌ ಇತರ ಹಲವಾರು ಇ-ಕಾಮರ್ಸ್‌ ಕಂಪನಿಗಳಿದ್ದರೂ, ಈ ಎರಡು ಬ್ರಾಂಡ್‌ಗಳು ಮಾರುಕಟ್ಟೆಯಲ್ಲಿ ಪಾರಮ್ಯ ಸಾಧಿಸಿವೆ. ಆದರೆ ಇದೀಗ ಈ ಎರಡು ದಿಗ್ಗಜಗಳಿಗೆ ಪೈಪೋಟಿ ನೀಡಲು ಬರುತ್ತಿದೆ (ONDC) ಕೇಂದ್ರ ಸರ್ಕಾರದ ಒಎನ್‌ಡಿಸಿ ಆನ್‌ಲೈನ್‌ ಶಾಪಿಂಗ್‌ ತಾಣ!

ಹೀಗಿದ್ದರೂ, ಒಎನ್‌ಡಿಸಿ ಮುಂದೆಯೂ ಕೆಲವು ಸವಾಲುಗಳು ಇವೆ. ಕಳೆದ ಏಪ್ರಿಲ್‌ನಲ್ಲಿ 5 ನಗರಗಳಲ್ಲಿ ಪ್ರಾಯೋಗಿಕವಾಗಿ ಒಎನ್‌ಡಿಸಿ ಜಾರಿಯಾಗಿದೆ. ಒಎನ್‌ಡಿಸಿ ಎಂದರೆ ಓಪನ್‌ ನೆಟ್‌ವರ್ಕ್‌ ಫಾರ್‌ ಡಿಜಿಟಲ್‌ ಕಾಮರ್ಸ್‌ (Open Network for Digital Commerce). ಇ-ಕಾಮರ್ಸ್‌ ತಂತ್ರಜ್ಞಾನ ಕ್ರಾಂತಿಯ ಲಾಭವನ್ನು ಎಲ್ಲ ಸಣ್ಣ ಉದ್ಯಮಿಗಳು, ವ್ಯಾಪಾರಿಗಳು, ಜನತೆಗೆ ಒದಗಿಸಲು ಒಎನ್‌ಡಿಸಿ ಸಹಕರಿಸಲಿದೆ. ಇ-ಕಾಮರ್ಸ್‌ ವೇದಿಕೆಯಾಗಿ ಹೊರಹೊಮ್ಮಲಿದೆ.

ಒಎನ್‌ಡಿಸಿಯು ಮುಕ್ತ ತಂತ್ರಾಂಶ ಶಿಷ್ಟಾಚಾರದ ಅಡಿಯಲ್ಲಿ ಇದು ಕಾರ್ಯನಿರ್ವಹಿಸಲಿದೆ. ಇದರಿಂದ ಸಣ್ಣ ಪುಟ್ಟ ವ್ಯಾಪಾರಸ್ಥರು, ಉದ್ಯಮಿಗಳಿಗೆ ಇ-ಕಾಮರ್ಸ್‌ ಸೌಲಭ್ಯ ಸಿಗುತ್ತದೆ. ಅವರಿಗೆ ಇ-ಕಾಮರ್ಸ್‌ ತಾಣವನ್ನು ಪ್ರವೇಶಿಸಲು ಇರುವ ತಾಂತ್ರಕ ಅಡಚಣೆಗಳು ದೂರವಾಗುತ್ತವೆ. ಗ್ರಾಹಕರಿಗೆ ಒಎನ್‌ಡಿಸಿಯಲ್ಲಿ ತಮ್ಮ ಆಯ್ಕೆಯ ಮಾರಾಟಗಾರರಿಂದ ಉತ್ಪನ್ನಗಳನ್ನು ಆನ್‌ಲೈನ್‌ ಶಾಪಿಂಗ್‌ ಮೂಲಕ ಖರೀದಿಸಬಹುದು.

ಜೆಎಂ ಫೈನಾನ್ಷಿಯಲ್ಸ್‌ ವರದಿಯು ಕೇಂದ್ರ ಸರ್ಕಾರದ ಈ ಉಪಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದೆ. ದೇಶದ ಮೂಲೆ ಮೂಲೆಗೂ ಡಿಜಿಟಲ್‌ ಕ್ರಾಂತಿಯನ್ನು ತಲುಪಿಸಲು ಸಹಾಯಕ ಎಂದಿದೆ. ರಿಟೇಲ್‌ ವಲಯದಲ್ಲಿ ಪ್ರಸ್ತುತ 5-7% ಡಿಜಿಟಲ್‌ ಸಾಂದ್ರತೆಯನ್ನು ಕಾಣಬಹುದು. ಇದು ಮುಂದಿನ ಐದು ವರ್ಷಗಳಲ್ಲಿ 20%ಕ್ಕೆ ಏರಿಕೆಯಾಗಬಹುದು ಎಂದು ಸಚಿನ್‌ ದೀಕ್ಷಿತ್‌, ಸ್ವಪ್ನಿಲ್‌ ಪುಟುಡ್ಕೆ, ಅಭಿಷೇಕ್‌ ಕುಮಾರ್‌, ಅಂಜು ಕೋಟೆವಾರ್‌ ಅವರು ಒಎನ್‌ಜಿಸಿ ಬಗ್ಗೆ ವಿಸ್ತಾರ ನ್ಯೂಸ್‌ ಜತೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಭಾರತದಲ್ಲಿ ಡಿಜಿಟಲ್‌ ಪೇಮೆಂಟ್‌ ವಲಯದಲ್ಲಿ ಕ್ರಾಂತಿಕಾರಕ ಬೆಳವಣಿಗೆಗಳು ಸಂಭವಿಸಿವೆ. ಯುಪಿಐ ಜನಪ್ರಿಯತೆಯೇ ಇದಕ್ಕೆ ಸಾಕ್ಷಿಯಾಗಿದೆ. ಯುಪಿಐ ಮಾದರಿಯಲ್ಲಿ ಒಎನ್‌ಡಿಸಿ ತನ್ನ ಜಾರಿಯಲ್ಲಿ ಸವಾಲುಗಳನ್ನು ಒಳಗೊಂಡಿದ್ದರೂ, ಭಾರಿ ಯಶಸ್ವಿಯಾಗುವ ನಿರೀಕ್ಷೆಯನ್ನೂ ಹೊಂದಿದೆ. ಒಂದು ವೇಳೆ ಒಎನ್‌ಡಿಸಿ ಯಶಸ್ವಿಯಾದರೆ, ಯುಪಿಐ ಸಾಫಲ್ಯದ ಜತೆಗೆ ಅದನ್ನು ಹೋಲಿಸಬಹುದಾಗಿದೆ.

ಯುಪಿಐ ಹೇಗೆ ವ್ಯಾಲೆಟ್‌ ಅಥವಾ ಬ್ಯಾಂಕ್‌ ಅಲ್ಲವೋ, ಅದೇ ರೀತಿ ಒಎನ್‌ಡಿಸಿ ಒಂದು ಪ್ಲಾಟ್ ಫಾರ್ಮ್‌ ಅಲ್ಲ.‌ ಯುಪಿಐ ಮಾದರಿಯಲ್ಲಿ ಒಎನ್‌ಡಿಸಿ ಅನುಕೂಲ ಒದಗಿಸಿಕೊಡಲಿದೆ. ಆರಂಭದಲ್ಲಿ ಮಾರಾಟಗಾರ ಹಾಗೂ ಗ್ರಾಹಕರಿಗೆ, ಒಎನ್‌ಡಿಸಿಯಲ್ಲಿ ಸಮೃದ್ಧ ಕ್ಯಾಟಲಾಗ್‌ ಅಭಾವದ ಪರಿಣಾಮ ಗೊಂದಲ ಆಗಲೂ ಬಹುದು. ಒಎನ್‌ಡಿಸಿ ಆರಂಭದಲ್ಲಿ ಖರೀದಿದಾರರಿಗಿಂತಲೂ, ಸ್ಥಳೀಯ ಮಾರಾಟಗಾರರಿಗೆ ಆದ್ಯತೆ ನೀಡಬಹುದು.

ಹೀಗಿದ್ದರೂ, ಸ್ಥಳೀಯ ಎಂಎಸ್‌ಎಂಇ ವಲಯದ ಮಳಿಗೆಗಳು ಇ-ಕಾಮರ್ಸ್‌ ಸೌಲಭ್ಯ ಪಡೆಯಲು ಅನುಕೂಲ ದೊರೆಯಲಿದೆ. ಮತ್ತೊಂದು ಕಡೆ ಗ್ರಾಹಕರಿಗೆ ಇನ್ಸೆಂಟಿವ್‌ ಅಥೌಆ ಡಿಸ್ಕೌಂಟ್‌ ರಹಿತ ವರ್ಗಾವಣೆಗಳನ್ನು ಮಾಡಬೇಕಾಗಿ ಬರಬಹುದು. ಪ್ರಸ್ತುತ ಪ್ಲಾಟ್‌ಫಾರ್ಮ್‌ ಕೇಂದ್ರಿತ ಇ-ಕಾಮರ್ಸ್‌ ತಾಣಗಳಲ್ಲಿ ಗ್ರಾಹಕರ ಶಾಪಿಂಗ್‌ ಅನುಭವವನ್ನು ಸಮೃದ್ಧಗೊಳಿಸಲು ನಾನಾ ಉಪಕ್ರಮಗಳನ್ನು ಕಾಣಬಹುದು. ಒಎನ್‌ಡಿಸಿ ಪ್ಲಾಟ್‌ಫಾರ್ಮ್‌ನಲ್ಲಿ ಪ್ರತಿಯೊಬ್ಬ ಭಾಗಿದಾರರಿಗೂ ಅವರದ್ದೇ ಜವಾಬ್ದಾರಿಗಳು ಇರುತ್ತವೆ ಎಂದೂ ಜೆಎಂ ಫೈನಾನ್ಸಿಯಲ್‌ ವರದಿ ತಿಳಿಸಿದೆ.

ಒಎನ್‌ಡಿಸಿ ಇ-ಕಾಮರ್ಸ್‌ ತಾಣದಲ್ಲಿ ಸ್ಥಳೀಯ ಕಿರು ಉದ್ದಿಮೆಗಳು, ವ್ಯಾಪಾರಿ ಮಳಿಗೆಗಳು, ವರ್ತಕರಿಗೆ ಭಾಗವಹಿಸಲು ವಿಫುಲ ಅವಕಾಶಗಳಿ ಇರುತ್ತವೆ. ಮಾರಾಟಗಾರರಿಗೆ ಡಿಜಿಟಲ್‌ ಸಾಕ್ಷರತೆ ಇರಬೇಕಾದ್ದು ಅವಶ್ಯಕ. ಡಿಜಿಟಲ್‌ ವಾಲ್ಯೂ ಸರಣಿಗಳ ಬಗ್ಗೆ ತಿಳಿದಿರಬೇಕು.

ಒಎನ್‌ಡಿಸಿ ಅರೆ-ನಿಯಂತ್ರಕ ವ್ಯವಸ್ಥೆಯಾಗಿ ಇರುವುದಿಲ್ಲ. ಇದು ಅಪ್ಪಟ ಮಾರುಕಟ್ಟೆ ಶಕ್ತಿಯನ್ನು ಆಧರಿಸಿ ಇರುತ್ತದೆ. ಹೀಗಾಗಿ ಅಗಾಧ ಪ್ರಮಾಣದ ಡೇಟಾಗಳ ಸಂರಕ್ಷಣೆಯು ಕೂಡ ಮಹತ್ವದ್ದಾಗಿರುತ್ತದೆ. ಭಾರಿ ಸಂಖ್ಯೆಯಲ್ಲಿನ ಮಾರಾಟಗಾರರು ಮತ್ತು ಖರೀದಿದಾರರ ವಿವರಗಳು ಮತ್ತು ಅವುಗಳ ನಿರ್ವಹಣೆ ಹೇಗಿರಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ. ಡೇಟಾ ಸ್ಟೋರೇಜ್‌ ಮತ್ತು ಪರಿವೀಕ್ಷಣೆಗೆ ಅವಕಾಶ ಸೀಮಿತವಾಗಿರಬಹುದು ಎಂದು ವರದಿ ತಿಳಿಸಿದೆ.

ಆದರೆ ಕೆಲವು ತಜ್ಞರ ಪ್ರಕಾರ ಗ್ರಾಹಕರ ಡೇಟಾವನ್ನು ಪಡೆಯಲು ಯಾರಿಗೂ ಅನುಮತಿ ಇರುವುದಿಲ್ಲ. ಅದು ಗೌಪ್ಯವೂ ಸೆನ್ಸಿಟಿವ್‌ ಕೂಡ ಆಗಿರುತ್ತದೆ. ಅವುಗಳ ಬಳಕೆಗೆ ಯಾರಿಗೂ ಅನುಮತಿ ಇರುವುದಿಲ್ಲ.

ಒಎನ್‌ಡಿಸಿ ದೀರ್ಘಾವಧಿಗೆ ಮುಂದುವರಿಯಬಹುದು. ಸರ್ಕಾರದ ಬೆಂಬಲವೂ ಇದಕ್ಕೆ ಸಿಗಬಹುದು. ಹೀಗಿದ್ದರೂ, ಇದಕ್ಕೆ ಪೂರ್ವಭಾವಿಯಾಗಿ ವ್ಯಾಪಕವಾದ ಸಿದ್ಧತೆಗಳೂ ಅಗತ್ಯ. ಆಗ ಒಎನ್‌ಡಿಸಿ ಅದ್ಭುತ ಯಶಸ್ಸು ಗಳಿಸಬಹುದು. ಕೇಂದ್ರ ಸರ್ಕಾರ ಒಎನ್‌ಡಿಸಿ ಜಾರಿಗೆ ಮುನ್ನ ಬಳಕೆದಾರರ ಅಹವಾಲುಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಲು ಸೂಕ್ತ ವ್ಯವಸ್ಥೆಯನ್ನು ಕೈಗೊಳ್ಳಬೇಕು ಎಂದು ಸಂಬಂಧಪಟ್ಟವರಿಗೆ ಸೂಚಿಸಿದೆ.

ಲೇಖಕರು ವಿಸ್ತಾರನ್ಯೂಸ್‌ನ ಬಿಸಿನೆಸ್‌ & ಎಕಾನಮಿ ವಿಭಾಗದ ಕನ್ಸಲ್ಟಿಂಗ್‌ ಎಡಿಟರ್‌.

Exit mobile version