ಭಾರತದ ಆಕಾಶದಲ್ಲಿ ಹೊಚ್ಚ ಹೊಸ ಏರ್‌ಲೈನ್ ಶೀಘ್ರದಲ್ಲಿಯೇ ತನ್ನ ಹಾರಾಟವನ್ನು ಆರಂಭಿಸಿ ಪ್ರಯಾಣಿಕರನ್ನು ಆಕರ್ಷಿಸಲು ಸಜ್ಜಾಗಿದೆ. ಅದರ ಹೆಸರೂ ಆಕಾಶ ಏರ್ ಎಂದೇ ಆಗಿರುವುದು ವಿಶೇಷ. ಇದೊಂದೇ ಅಲ್ಲ, ಇನ್ನೂ ಹತ್ತಾರು ಸ್ವಾರಸ್ಯಗಳೊಂದಿಗೆ ಈ ಪುಟ್ಟ ಏರ್‌ಲೈನ್ ಭಾರಿ ನಿರೀಕ್ಷೆಗಳನ್ನು ಹುಟ್ಟು ಹಾಕಿದೆ!
ಎಲ್ಲಕ್ಕಿಂತ ಮುಖ್ಯವಾಗಿ, ಇದು ಅತ್ಯಂತ ಅಗ್ಗದ ದರದಲ್ಲಿ ಎಲ್ಲ ಭಾರತೀಯರಿಗೂ ವಿಮಾನದಲ್ಲಿ ಹಾಯಾಗಿ ಪ್ರಯಾಣ ಮಾಡುವ ಭರವಸೆಯನ್ನು ಕೊಟ್ಟಿದೆ. ಹಾಗಾದರೆ ಆಕಾಶ ಏರ್ ವಿಮಾನಯಾನವನ್ನು ಕಡಿಮೆ ಖರ್ಚಿನಲ್ಲಿ ಹೇಗೆ ಒದಗಿಸಲಿದೆ? ಯಾರು ಈ ಜುಂಜುನ್ ವಾಲಾ? ದೇಶದ ವೈಮಾನಿಕ ಉದ್ದಿಮೆ ಎದುರಿಸುತ್ತಿರುವ ಸವಾಲುಗಳೇನು? ಏರ್ ಡೆಕ್ಕನ್, ಕಿಂಗ್‌ಫಿಷರ್, ಜೆಟ್ ಏರ್‌ವೇಸ್ ದಿವಾಳಿ ಆಗಿದ್ದೇಕೆ? ಈ ಎಲ್ಲ ಇಂಟರೆಸ್ಟಿಂಗ್ ಒಳನೋಟ ಇಲ್ಲಿದೆ!
ಏನಿದು ಆಕಾಶ ಏರ್?
ಭಾರತದ ವಾರೆನ್ ಬಫೆಟ್ ಎಂದೇ ಖ್ಯಾತಿ ಗಳಿಸಿರುವ ಪ್ರಸಿದ್ಧ ಷೇರು ಹೂಡಿಕೆದಾರ ರಾಕೇಶ್ ಜುಂಜುನ್‌ವಾಲಾ ಅವರ ಮಾಲಿಕತ್ವದ ಹೊಸ ಏರ್‌ಲೈನ್ ಆಕಾಶ ಏರ್. ಈ ಏರ್‌ಲೈನ್ ತನ್ನ ಮೊದಲ ಬೋಯಿಂಗ್ ೭೩೭ ಮ್ಯಾಕ್ಸ್ ವಿಮಾನವನ್ನು ಕಳೆದ ಜೂನ್ ೧೫ರಂದು ಸಂಭ್ರಮದಿಂದ ದಿಲ್ಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ವೀಕರಿಸಿದೆ. ಒಟ್ಟು ೭೨ ಬೋಯಿಂಗ್ ವಿಮಾನಗಳಿಗೆ ಕಂಪನಿ ಆರ್ಡರ್ ಮಾಡಿದೆ. ಎಸ್‌ಎನ್ ವಿ ಏವಿಯೇಶನ್ ಸಂಸ್ಥೆಯ ಬ್ರ್ಯಾಂಡ್ ಆಗಿ ಆಕಾಶ್ ಏರ್ ೨೦೨೧ರ ಡಿಸೆಂಬರ್‌ನಲ್ಲಿ ಅಸ್ತಿತ್ವಕ್ಕೆ ಬಂದಿದೆ. ಮುಂಬಯಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ. ಇದು ಅಗ್ಗದ ದರದಲ್ಲಿ ವಿಮಾನಯಾನ ಸೇವೆ ಒದಗಿಸುವ ಏರ್‌ಲೈನ್ (Low cost airline) ಆಗಿದೆ. ಎಸ್‌ಎನ್‌ವಿ ಏವಿಯೇಶನ್‌ನ ಸಿಇಒ ವಿನಯ್ ದುಬೆ ವೈಮಾನಿಕ ಕ್ಷೇತ್ರದಲ್ಲಿ ಸುದೀರ್ಘ ಅನುಭವ ಇರುವವರು. ಜೆಟ್ ಏರ್‌ವೇಸ್ ಮತ್ತು ಗೋ ಏರ್‌ನ ಸಿಇಒ ಆಗಿದ್ದವರು. ಅಮೆರಿಕನ್ ಏರ್‌ಲೈನ್ಸ್‌ನಲ್ಲೂ ದುಡಿದವರು. ಈ ವರ್ಷಾಂತ್ಯದ ವೇಳೆಗೆ ಆಕಾಶ ಏರ್ ತೆಕ್ಕೆಗೆ ೧೮ ವಿಮಾನಗಳು ಬಂದು ಸೇರುವ ನಿರೀಕ್ಷೆ ಇದೆ. ಹಾಗೂ ಇನ್ನು ೫ ವರ್ಷಗಳೊಳಗೆ ಏರ್‌ಲೈನ್ ೭೨ ವಿಮಾನಗಳನ್ನು ಹೊಂದಿರಲಿದೆ.
ಮೆಟ್ರೊ ನಗರಗಳಲ್ಲಿ ಮೊದಲ ಹಾರಾಟ
ಆಕಾಶ್ ಏರ್ ದೇಶದ ಮೆಟ್ರೊ ನಗರಗಳಲ್ಲಿ ಹಾರಾಟವನ್ನು ಆರಂಭಿಸಲಿದೆ. ಬಳಿಕ ಎರಡನೇ ಮತ್ತು ಮೂರನೇ ಸ್ತರದ ನಗರಗಳಿಗೆ ವಿಸ್ತರಣೆಯಾಗಲಿದೆ. ೨೦೨೧ರ ಅಕ್ಟೋಬರ್‌ನಲ್ಲಿ ಏರ್‌ಲೈನ್ ನಾಗರಿಕ ವಿಮಾನಯಾನ ಸಚಿವಾಲಯದಿಂದ ನಿರಾಕ್ಷೇಪಣಾ ಪ್ರಮಾಣ ಪತ್ರ ಪಡೆದಿದೆ. ಏರ್ ಆಪರೇಟರ್ಸ್ ಸರ್ಟಿಫಿಕೇಟ್ ಸಿಗಬೇಕಾಗಿದೆ. ಬಳಿಕ ಶೀಘ್ರದಲ್ಲೇ ವಿಮಾನ ಹಾರಾಟ ಆರಂಭಿಸಲಿದೆ. ಕೆಲ ವರದಿಗಳ ಪ್ರಕಾರ ಇದೇ ಜುಲೈ ಅಂತ್ಯಕ್ಕೆ ಆಕಾಶ ಏರ್ ವಿಮಾನ ಹಾರಾಟ ಆರಂಭವಾಗುವ ನಿರೀಕ್ಷೆ ಇದೆ. ಅಂದಹಾಗೆ ಆಕಾಶ ಏರ್‌ನ ಘೋಷಾ ವಾಕ್ಯ- It’s Your Sky ( ಇದು ನಿಮ್ಮ ಆಕಾಶ) ಎಂಬುದಾಗಿದೆ.
ಯಾರಿವರು ರಾಕೇಶ್ ಜುಂಜುನ್‌ವಾಲಾ?
ಈಗಾಗಲೇ ವಿವರಿಸಿದಂತೆ ಖ್ಯಾತ ಷೇರು ಹೂಡಿಕೆದಾರರಾಗಿರುವ ರಾಕೇಶ್ ಜುಂಜುನ್‌ವಾಲಾ (62) ಎಲ್ಲರೂ ಅಚ್ಚರಿಪಡುವಂಥ ಸಾಹಸಕ್ಕೆ ಕೈ ಹಾಕಿದ್ದಾರೆ. ಷೇರು ಪ್ರಪಂಚದಲ್ಲಿ ಸೋಲಿಲ್ಲದ ಸರದಾರರಂತೆ ಬೆಳೆದಿರುವ ರಾಕೇಶ್ ಜುಂಜುನ್‌ವಾಲಾ, ಇದೀಗ ವಿಮಾನಯಾನ ಕ್ಷೇತ್ರ ಸಂಕಷ್ಟದಲ್ಲಿರುವ ಸಂದರ್ಭದಲ್ಲಿಯೇ ಹೊಸ ಏರ್‌ಲೈನ್ ಸ್ಥಾಪಿಸಲು ಹೊರಟಿದ್ದಾರೆ.
ಜುಂಜುನ್‌ವಾಲಾ ಅವರು ಆಕಾಶ ಏರ್‌ನಲ್ಲಿ ೪೦% ಹೂಡಿಕೆಯನ್ನು ಮಾಡಿದ್ದಾರೆ. ಇದರ ಮೊತ್ತ ೩೫ ದಶಲಕ್ಷ ಡಾಲರ್ ( ಸುಮಾರು ೨೭೩ ಕೋಟಿ ರೂ.). ಕೋವಿಡ್-೧೯ ಬಿಕ್ಕಟ್ಟಿನಿಂದ ತೀವ್ರ ಹೊಡೆತಕ್ಕೀಡಾಗಿರುವ ಕ್ಷೇತ್ರಗಳಲ್ಲಿ ವಿಮಾನಯಾನವೂ ಒಂದು. ದೇಶಿ ಏರ್‌ಲೈನ್‌ಗಳು ಈಗಲೂ ಅನಿಶ್ಚಿತತೆಯಲ್ಲಿ ಇರುವಾಗಲೇ ರಾಕೇಶ್ ಜುಂಜುನ್‌ವಾಲಾ ಅವರ ಲೆಕ್ಕಾಚಾರ ಏನಿರಬಹುದು ಎಂಬ ಕುತೂಹಲ ಉಂಟಾಗಿದೆ.
೫,೦೦೦ ರೂ.ನಲ್ಲಿ ಷೇರು ವಹಿವಾಟು ಶುರು!
ರಾಕೇಶ್ ಜುಂಜುನ್‌ವಾಲಾ ೧೯೮೫ರಲ್ಲಿ ಕೇವಲ ೫,೦೦೦ ರೂ.ಗೆ ಷೇರು ಹೂಡಿಕೆ ಆರಂಭಿಸಿದ್ದರು. ಆಗ ಸೆನ್ಸೆಕ್ಸ್ ೧೫೦ ಅಂಕಗಳ ಮಟ್ಟದಲ್ಲಿತ್ತು. ಈಗ ತಮ್ಮ ೬೨ನೇ ವಯಸ್ಸಿನಲ್ಲಿ ೪೩,೦೦೦ ಕೋಟಿ ರೂ.ಗೂ ಹೆಚ್ಚು ಸಂಪತ್ತಿಗೆ ಒಡೆಯರಾಗಿದ್ದಾರೆ.
ವಿಮಾನಯಾನ ಉಜ್ವಲ ಎನ್ನುವ ಜುಂಜುನ್‌ವಾಲಾ
ಭಾರತದ ವಿಮಾನಯಾನ ಕ್ಷೇತ್ರಕ್ಕೆ ಉಜ್ವಲ ಭವಿಷ್ಯ ಇದೆ. ಆದರೆ ಎಲ್ಲರೂ ಅಗ್ಗದ ದರದಲ್ಲಿ ವಿಮಾನ ಹತ್ತುವಂತಾಗಬೇಕು. ಆಗ ಜನ ಬಂದೇ ಬರುತ್ತಾರೆ. ಜತೆಗೆ ಏರ್‌ಲೈನ್ ನಿರ್ವಹಣೆಯಲ್ಲಿ ದಕ್ಷತೆ ಹೆಚ್ಚಬೇಕು. ಆಗ ಉದ್ದಿಮೆಯ ಆದಾಯ ಮತ್ತು ಲಾಭ ಹೆಚ್ಚಲಿದೆ ಎನ್ನುತ್ತಾರೆ ಜುಂಜುನ್‌ವಾಲಾ.
ಮುಗ್ಗರಿಸಿವೆ ಏರ್‌ಲೈನ್‌ಗಳು
ಭಾರತದಲ್ಲಿ ಕೋವಿಡ್-೧೯ ಬಿಕ್ಕಟ್ಟಿಗೆ ಮುನ್ನವೇ ವೈಮಾನಿಕ ಕ್ಷೇತ್ರ ಸಮಸ್ಯೆಗೀಡಾಗಿತ್ತು. ಕಿಂಗ್ ಫಿಶರ್ ಏರ್‌ಲೈನ್ಸ್, ಜೆಟ್ ಏರ್‌ವೇಸ್ ಎರಡೂ ಪತನವಾಗಿತ್ತು. ಸಿಂಗಾಪುರ್ ಏರ್‌ಲೈನ್ಸ್ ಮತ್ತು ಟಾಟಾ ಗ್ರೂಪ್ ಸಹಯೋಗದ ವಿಸ್ತಾರಾ ಏರ್‌ಲೈನ್ ನಷ್ಟದಲ್ಲಿದೆ. ಇಂಡಿಗೊ ೨೦೨೨ರ ಜನವರಿ-ಮಾರ್ಚ್ ಅವಧಿಯಲ್ಲಿ ೧,೬೮೨ ಕೋಟಿ ರೂ. ನಷ್ಟ ದಾಖಲಿಸಿತ್ತು.
ಜುಂಜುನ್‌ವಾಲಾ ಕಾರ್ಯತಂತ್ರವೇನು?
ಅತ್ಯಂತ ಅಗ್ಗದ ದರದ ವಿಮಾನಯಾನ
ಕೋವಿಡ್-೧೯ ಬಿಕ್ಕಟ್ಟಿನ ಪರಿಣಾಮ ಕಳೆದ ಎರಡು ವರ್ಷಗಳಲ್ಲಿ ವೈಮಾನಿಕ ಉದ್ದಿಮೆ ಸಂಕಷ್ಟದಲ್ಲಿದೆ. ಅಮೆರಿಕದ ಬೋಯಿಂಗ್ ಮತ್ತು ಏರ್‌ಬಸ್‌ನಂಥ ವಿಮಾನ ಉತ್ಪಾದಕ ಕಂಪನಿಗಳೂ ಒತ್ತಡದಲ್ಲಿವೆ. ಹೀಗಿದ್ದರೂ, ಭಾರತದ ವೈಮಾನಿಕ ಮಾರುಕಟ್ಟೆಗೆ ಉಜ್ವಲ ಭವಿಷ್ಯವಿದೆ. ಬೇಡಿಕೆ ಇದೆ. ಆದರೆ ಕಡಿಮೆ ವೆಚ್ಚದಲ್ಲಿ ವಿಮಾನ ಸೇವೆ ಒದಗಿಸುವುದು ಮುಖ್ಯ. ಈ ನಿಟ್ಟಿನಲ್ಲಿ ಅತ್ಯಂತ ಅಗ್ಗದ ದರದಲ್ಲಿ ವಿಮಾನ ಹಾರಾಟ ಸೇವೆ ಒದಗಿಸಲು ಜುಂಜುನ್‌ವಾಲಾ ನಿರ್ಧರಿಸಿದ್ದಾರೆ. ಹೀಗಾಗಿ ಆಕಾಶ್ ಏರ್ ultra low cost airline ಆಗಿದೆ. ಸರಳವಾಗಿ ಹೇಳುವುದಾದರೆ ಇದನ್ನು ಏರ್‌ಲೈನ್ ವಲಯದ ಡಿಮಾರ್ಟ್ ಎನ್ನಬಹುದು. ಈ ಏರ್‌ಲೈನ್‌ನಲ್ಲಿ ಏರ್ ಟಿಕೆಟ್ ದರ low cost airline ಇಂಡಿಗೊ, ಸ್ಪೈಸ್ ಜೆಟ್‌ಗಿಂತಲೂ ಕಡಿಮೆಯಾಗಿರುತ್ತದೆ ಎನ್ನುತ್ತಾರೆ ತಜ್ಞರು. ವಿಮಾನಕ್ಕೆ ಹೂಡಿಕೆ, ನಿರ್ವಹಣೆ, ಪಾರ್ಕಿಂಗ್ ಖರ್ಚು ಎಲ್ಲದರಲ್ಲೂ ಮಿತವ್ಯಯ ಅಗತ್ಯವಾಗಿರುತ್ತದೆ.
ಡಿಸ್ಕೌಂಟ್ ದರದಲ್ಲಿ ವಿಮಾನ ಖರೀದಿ
ವಿಮಾನ ಉತ್ಪಾದಕ ಬೋಯಿಂಗ್‌ಗೆ ಕಳೆದ ಎರಡು ವರ್ಷಗಳಿಂದ ಕೋವಿಡ್ ಬಿಕ್ಕಟ್ಟಿನ ಪರಿಣಾಮ ಭಾರಿ ನಷ್ಟವಾಗಿದೆ. ಈಗತಾನೆ ಉದ್ದಿಮೆ ಚೇತರಿಕೆಯ ಹಂತದಲ್ಲಿದ್ದರೂ, ಕೋವಿಡ್ ಪೂರ್ವ ಮಟ್ಟಕ್ಕೆ ಮುಟ್ಟಿಲ್ಲ. ಹೀಗಾಗಿ ಇಂಥ ಸಂದರ್ಭದಲ್ಲಿ ವಿಮಾನಗಳನ್ನು ಖರೀದಿಸುವವರಿಗೆ ಹೆಚ್ಚು ಚೌಕಾಶಿ ಮಾಡಲು ಸಾಧ್ಯವಾಗುತ್ತದೆ. ವಿಮಾನವನ್ನು ೫೦% ಡಿಸ್ಕೌಂಟ್ ದರದಲ್ಲೂ ಕೊಳ್ಳಲು ಸಾಧ್ಯ. ಜುಂಜುನ್‌ವಾಲಾ ಅವರಿಗೂ ಇಂಥ ಅವಕಾಶ ಉಂಟಾಗಿದೆ. ಈಗಲೇ ಏರ್‌ಲೈನ್ ಸ್ಥಾಪಿಸಲು ಜುಂಜುನ್‌ವಾಲಾ ಹೊರಟಿರುವುದಕ್ಕೆ ಇದುವೇ ಪ್ರಮುಖ ಕಾರಣ ಎನ್ನುತ್ತಾರೆ ತಜ್ಞರು.
ಆಕಾಶ್ ಏರ್ ಖರೀದಿಸುತ್ತಿರುವ ವಿಮಾನ ಬೋಯಿಂಗ್‌ನ ೭೩೭ ಮ್ಯಾಕ್ಸ್ ಶ್ರೇಣಿಗೆ ಸೇರಿದೆ. ಬೋಯಿಂಗ್‌ನ ೭೩೭ ಮ್ಯಾಕ್ಸ್ ವಿಮಾನಗಳು ಎರಡು ಸಲ ಅಪಘಾತಕ್ಕೀಡಾದ ಬಳಿಕ ವಿಶ್ವದ ಹಲವಾರು ದೇಶಗಳು ೨೦೧೯ರಿಂದ ಎರಡು ವರ್ಷಗಳ ಕಾಲ ಸುರಕ್ಷತೆಯ ದೃಷ್ಟಿಯಿಂದ ನಿಷೇಧ ವಿಧಿಸಿದ್ದವು. ನಿಷೇಧ ಈಗ ತೆರವಾಗಿದ್ದರೂ, ಈ ವಿಮಾನಗಳ ಮಾರಾಟ ಬೋಯಿಂಗ್‌ಗೆ ಸವಾಲಿನಿಂದ ಕೂಡಿದೆ. ಇದೂ ಖರೀದಿದಾರರಿಗೆ ಚೌಕಾಶಿ ಮಾಡಲು ಅನುಕೂಲಕರ.
ಕಡಿಮೆ ದರದಲ್ಲಿ ಏರ್ ಟಿಕೆಟ್ ಕೊಡುವುದು ಹೇಗೆ?
ಏರ್‌ಲೈನ್ ನಡೆಸುವುದು ಎಂದರೆ ಅತ್ಯಂತ ರಿಸ್ಕಿ ಜಾಬ್. ಕ್ಯಾಪ್ಟನ್ ಗೋಪಿನಾಥ್, ವಿಜಯ್ ಮಲ್ಯ, ನರೇಶ್ ಗೋಯಲ್ ಮೊದಲಾದ ಉದ್ಯಮಿಗಳು ಏರ್‌ಲೈನ್ ಸ್ಥಾಪಿಸಿದರೂ, ವಿಫಲರಾದರು. ಕೇವಲ ಏರ್ ಟಿಕೆಟ್‌ಗಳನ್ನು ಕಡಿಮೆ ಬೆಲೆಗೆ ಕೊಡುವುದಾಗಲಿ, ಉತ್ತಮ ಸೇವೆಯನ್ನು ಕೊಡುವುದಾಗಲಿ ಏರ್‌ಲೈನ್ ಅನ್ನು ಗೆಲ್ಲಿಸುವುದಿಲ್ಲ. ಅದರ ಜತೆಗೆ ಬಿಸಿನೆಸ್ ಕಾರ್ಯತಂತ್ರ ಅತ್ಯುತ್ತಮವಾಗಿರಬೇಕು.
ಏರ್‌ಲೈನ್‌ಗಳು ದಿವಾಳಿಯಾಗಿದ್ದೇಕೆ?
ಭಾರತದಲ್ಲಿ ಈ ಹಿಂದೆ ಕಿಂಗ್‌ಫಿಷರ್, ಏರ್ ಡೆಕ್ಕನ್, ಜೆಟ್ ಏರ್‌ವೇಸ್ ಉದ್ದಿಮೆಯಲ್ಲಿ ವಿಫಲವಾಗಲು ಕೆಲವು ಪ್ರಮುಖ ಕಾರಣಗಳಿವೆ. ಮೊದಲನೆಯದಾಗಿ ವೈಮಾನಿಕ ಇಂಧನದ ಅಧಿಕ ದರದ ಹೊರೆಯನ್ನು ನಿಭಾಯಿಸಲು ಸಾಧ್ಯವಾಗದಿರುವುದು. ವಿಮಾನದ ನಿರ್ವಹಣೆಗೆ ತಗಲುವ ಒಟ್ಟು ವೆಚ್ಚದಲ್ಲಿ ೩೦-೪೦% ಪಾಲು ಇಂಧನ ವೆಚ್ಚವಾಗಿರುತ್ತದೆ. ಹೀಗಾಗಿ ತೈಲ ದರ ಏರಿಕೆಯಾದಂತೆಲ್ಲ ಏರ್‌ಲೈನ್‌ಗಳಿಗೆ ಕಷ್ಟ ಹೆಚ್ಚುತ್ತದೆ. ಉಳಿದಂತೆ ಬಿಸಿನೆಸ್ ಸ್ಟ್ರಾಟಜಿ, ಸರ್ಕಾರದ ವೈಮಾನಿಕ ನೀತಿ, ತೆರಿಗೆ, ಆರ್ಥಿಕ ಬೆಳವಣಿಗೆ ಕೂಡ ನಿರ್ಣಾಯಕವಾಗುತ್ತದೆ. ಕಿಂಗ್ ಫಿಶರ್ ಪ್ರಕರಣದಲ್ಲಿ ಬ್ಯಾಂಕ್‌ಗಳಿಂದ ಪಡೆದ ಸಾಲವನ್ನು ದುರ್ಬಳಕೆ ಮಾಡಿರುವುದು ಕೂಡ ಏರ್‌ಲೈನ್ ದಿವಾಳಿಯಾಗಲು ಕಾರಣವಾಗಿತ್ತು.
ಈಗಲೂ ಅಧಿಕ ಇಂಧನ ವೆಚ್ಚದ ಸವಾಲು ಏರ್‌ಲೈನ್‌ಗಳ ಮುಂದಿದೆ. ಎರಡನೆಯದಾಗಿ ಭಿನ್ನ ಬಿಸಿನೆಸ್ ಕಾರ್ಯತಂತ್ರದ ಕೊರತೆ ಇದೆ. ಅತ್ಯಂತ ಅಗ್ಗದ ದರದಲ್ಲಿ ವಿಮಾನ ಹಾರಾಟವನ್ನು ಕಲ್ಪಿಸುವುದು ಭಾರತದಂಥ ಅಭಿವೃದ್ಧಿಶೀಲ ರಾಷ್ಟ್ರದಲ್ಲಿ ನಿರ್ಣಾಯಕ. ಇದೂ ದೊಡ್ಡ ಸವಾಲೇ ಸರಿ. ಹೀಗಾಗಿ ಆಕಾಶ್ ಏರ್ ಭಾರಿ ಕುತೂಹಲ ಮೂಡಿಸಿದೆ.