ಜ್ಯೂರಿಚ್: ಸ್ವಿಜರ್ಲೆಂಡ್ ಮೂಲದ ಬ್ಯಾಂಕಿಂಗ್ ದಿಗ್ಗಜ ಕ್ರೆಡಿಟ್ ಸ್ವೀಸ್ (Credit Suisse Group) ತೀವ್ರ ಆರ್ಥಿಕ ನಿಕ್ಕಟ್ಟಿಗೆ ಸಿಲುಕಿದೆ. ಇದರ ಪರಿಣಾಮ ಈ ಬ್ಯಾಂಕಿನ ಷೇರು ದರ 31%ಕ್ಕೂ ಹೆಚ್ಚು ಕುಸಿತಕ್ಕೀಡಾಗಿದೆ. ಇದರೊಂದಿಗೆ ಅಮೆರಿಕದಲ್ಲಿ ಉಂಟಾಗಿರುವ ಬ್ಯಾಂಕಿಂಗ್ ಬಿಕ್ಕಟ್ಟು ಯುರೋಪಿಗೂ ಹರಡಿದಂತಾಗಿದೆ. ಕ್ರೆಡಿಟ್ ಸ್ವೀಸ್‌ನ ಬಾಂಡ್‌ಗಳ ದರ ಕೂಡ ಕುಸಿದಿದೆ. ಒಂದು ವೇಳೆ ಕ್ರೆಡಿಟ್ ಸ್ವೀಸ್ ದಿವಾಳಿಯಾದರೆ ಮತ್ತೊಂದು ಲೆಹ್ಮನ್ ಬ್ರದರ್ಸ್ (2008ರ ಜಾಗತಿಕ ಆರ್ಥಿಕ ಹಿಂಜರಿತಕ್ಕೆ ಕಾರಣವಾದ ಅಮೆರಿಕದ ಬ್ಯಾಂಕ್ ಪತನ) ಪ್ರಕರಣ ಆಗಬಹುದು ಎಂದು ನಿರೀಕ್ಷಿಸಲಾಗಿದೆ.
ಕ್ರೆಡಿಟ್ ಸ್ವೀಸ್‌ನಲ್ಲಿ ಆಗಿದ್ದೇನು?
ಕ್ರೆಡಿಟ್ ಸ್ವೀಸ್ ಬ್ಯಾಂಕ್‌ನಲ್ಲಿ ಅತಿ ಹೆಚ್ಚು ಷೇರುಗಳನ್ನು ಹೊಂದಿರುವ ಸೌದಿ ಅರೇಬಿಯಾದ ಸೌದಿ ನ್ಯಾಶನಲ್ ಬ್ಯಾಂಕ್ ( Saudi National Bank ) ನೀಡಿರುವ ಹೇಳಿಕೆ ಅನಾಹುತ ಸೃಷ್ಟಿಸಿದೆ. ಸೌದಿ ನ್ಯಾಶನಲ್ ಬ್ಯಾಂಕ್ ಅಧ್ಯಕ್ಷ ಅಮ್ಮಾರ್ ಎಐ ಖುಡೈರಿ ಅವರು, ಮುಂಬರುವ ದಿನಗಳಲ್ಲಿ ಕ್ರೆಡಿಟ್ ಸ್ವೀಸ್‌ಗೆ ಯಾವುದೇ ಫಂಡ್ ನೀಡುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದರು. ಈ ಹೇಳಿಕೆ ಷೇರು ಮಾರುಕಟ್ಟೆಯಲ್ಲಿ ಅಲ್ಲೋಲಕಲ್ಲೋಲಕ್ಕೆ ಕಾರಣವಾಗಿದೆ. ಬ್ಯಾಂಕಿನ ವಹಿವಾಟು ಸುಧಾರಿಸುತ್ತಿದೆ ಎಂದು ಕ್ರೆಡಿಟ್ ಸ್ವೀಸ್ ಸಿಇಒ ಉಲ್ ರಿಚ್ ಕೊಯೆರ್ನರ್ ಹೇಳಿದ ಬೆನ್ನಲ್ಲೇ ಸೌದಿ ನ್ಯಾಶನಲ್ ಬ್ಯಾಂಕ್ ಅಧ್ಯಕ್ಷರು ನಕಾರಾತ್ಮಕ ಹೇಳಿಕೆ ನೀಡಿದ್ದಾರೆ.
ಈ ನಡುವೆ ಸ್ವಿಸ್ ನ್ಯಾಶನಲ್ ಬ್ಯಾಂಕ್ (swiss national bank), 50 ಶತಕೋಟಿ ಡಾಲರ್ (41 ಲಕ್ಷ ಕೋಟಿ ರೂ.) ಸಾಲ ನೀಡುವುದಾಗಿ ಕ್ರೆಡಿಟ್ ಸ್ವೀಸ್‌ಗೆ ಭರವಸೆ ನೀಡಿದೆ. ಇದರಿಂದ ಬಿಕ್ಕಟ್ಟು ಉಪಶಮನಕ್ಕೆ ಸಹಕಾರಿಯಾಗುವ ನಿರೀಕ್ಷೆ ಇದೆ. ಕ್ರೆಡಿಟ್ ಸ್ವೀಸ್ ಬ್ಯಾಂಕ್ ಭಾರತದಲ್ಲಿ 20,700 ಕೋಟಿ ರೂ. ಆಸ್ತಿಯನ್ನು ಹೊಂದಿದೆ. ಆಸ್ತಿ ಎಂದರೆ ನಗದು, ಸಾಲ ಇತ್ಯಾದಿ ರೂಪದಲ್ಲಿರುವ ಹಣ. ಹೀಗಿದ್ದರೂ, ಕ್ರೆಡಿಟ್ ಸ್ವೀಸ್ ಬ್ಯಾಂಕ್ ಬಿಕ್ಕಟ್ಟಿನಿಂದ ಭಾರತೀಯ ಬ್ಯಾಂಕಿಂಗ್ ವ್ಯವಸ್ಥೆಗೆ ಯಾವುದೇ ಧಕ್ಕೆ ಇಲ್ಲ ಎಂದು ವಿಶ್ಲೇಷಕರು ತಿಳಿಸಿದ್ದಾರೆ.