ನವದೆಹಲಿ: ದೈತ್ಯ ಟೆಕ್ ಕಂಪೆನಿ ವಿಪ್ರೋ (Wipro)ದ ಸಿಇಒ, ಎಂ.ಡಿ. ಥಿಯೆರ್ರಿ ಡೆಲಾಪೋರ್ಟೆ (Thierry Delaporte) ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಶ್ರೀನಿವಾಸ್ ಪಲ್ಲಿಯಾ (Srinivas Pallia) ಅವರು ಹೊಸ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. “ಥಿಯೆರ್ರಿ ಡೆಲಾಪೋರ್ಟೆ ಅವರು ರಾಜೀನಾಮೆ ನೀಡಿದ್ದಾರೆ. 2024ರ ಮೇ 31ರಂದು ಅವರನ್ನು ಕಂಪೆನಿಯ ಉದ್ಯೋಗದಿಂದ ಮುಕ್ತಗೊಳಿಸಲಾಗುವುದು” ಎಂದು ವಿಪ್ರೋ ಅಧ್ಯಕ್ಷ ರಿಷದ್ ಪ್ರೇಮ್ ಜಿ (Rishad Premji) ತಿಳಿಸಿದ್ದಾರೆ.
ಕಂಪನಿಯ ಅಮೇರಿಕಾಸ್ 1 ಪ್ರದೇಶದ ಸಿಇಒ ಶ್ರೀನಿ ಪಲ್ಲಿಯಾ ಎಂದೂ ಕರೆಯಲ್ಪಡುವ ಶ್ರೀನಿವಾಸ್ ಪಲ್ಲಿಯಾ ಅವರು ನಾಳೆಯಿಂದ (ಏಪ್ರಿಲ್ 7) ಹೊಸ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. 56 ವರ್ಷದ ಡೆಲಾಪೋರ್ಟೆ ಅವರನ್ನು 2020ರ ಜುಲೈಯಲ್ಲಿ ಕಂಪೆನಿಯ ಸಿಇಒ ಮತ್ತು ಎಂಡಿ ಆಗಿ ನೇಮಿಸಲಾಗಿತ್ತು. ಇದಕ್ಕೂ ಮೊದಲು, ಫ್ರೆಂಚ್ ಮೂಲದ ಟೆಕ್ ಬಾಸ್ ಕ್ಯಾಪ್ಜೆಮಿನಿಯಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಒಒ) ಆಗಿ ಕರ್ತವ್ಯ ನಿರ್ವಹಿಸಿದ್ದರು.
BREAKING: Wipro CEO Thierry Delaporte resigns, Srinivas Pallia succeeds him as CEO
— Chandra R. Srikanth (@chandrarsrikant) April 6, 2024
By @shaw_reshab
https://t.co/7c5oIBkLLy via @moneycontrolcom
ಕಳೆದ ಡಿಸೆಂಬರ್‌ನಲ್ಲಿ ಡೆಲಾಪೋರ್ಟೆ ಅವರು ವಾರ್ಷಿಕ 82 ಕೋಟಿ ರೂ.ಗಿಂತ ಹೆಚ್ಚಿನ ವೇತನ ಪ್ಯಾಕೇಜ್ ಹೊಂದಿದ್ದಾರೆ ಎಂದು ಕಂಪೆನಿ ಬಹಿರಂಗ ಪಡಿಸಿತ್ತು. ಈ ಮೂಲಕ ಅವರು ಭಾರತೀಯ ಐಟಿ ವಲಯದಲ್ಲಿ ಅತಿ ಹೆಚ್ಚು ಸಂಬಳ ಪಡೆಯುವ ಸಿಇಒ ಆಗಿ ಹೊರ ಹೊಮ್ಮಿದ್ದರು.
ಡೆಲಾಪೋರ್ಟೆ ಅವರು ಪ್ಯಾರಿಸ್‌ನ ಸೈನ್ಸಸ್ಪೋ (SciencesPo Paris) ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರ ಮತ್ತು ಹಣಕಾಸು ವಿಷಯದಲ್ಲಿ ಪದವಿ ಪಡೆದಿದ್ದಾರೆ. ಅಲ್ಲದೆ ಸೊರ್ಬೊನ್ ವಿಶ್ವವಿದ್ಯಾಲಯ (Sorbonne University)ದಿಂದ ಮಾಸ್ಟರ್ ಆಫ್ ಲಾಸ್ (Master of Laws) ಪದವಿ ಪಡೆದಿದ್ದಾರೆ. ಅವರು ಪ್ರಸ್ತುತ ಪ್ಯಾರಿಸ್‌ನಲ್ಲಿ ವಾಸಿಸುತ್ತಿದ್ದಾರೆ.
ರಾಯಿಟರ್ಸ್ ವರದಿಯ ಪ್ರಕಾರ, ವಿಪ್ರೋ ಕಳೆದ ತಿಂಗಳು ಆರು ಉದ್ಯೋಗಿಗಳನ್ನು ಹಿರಿಯ ಉಪಾಧ್ಯಕ್ಷ ಸ್ಥಾನಕ್ಕೆ ನೇಮಿಸಿತ್ತು ಮತ್ತು ಇತರ 25 ಉದ್ಯೋಗಿಗಳಿಗೆ ಉಪಾಧ್ಯಕ್ಷ ಸ್ಥಾನ ನೀಡಿ ಭಡ್ತಿ ಒದಗಿಸಿತ್ತು. ಹಣಕಾಸು ಮುಖ್ಯಸ್ಥ ಜತಿನ್ ದಲಾಲ್, ಚೀಫ್ ಗ್ರೋತ್ ಆಫೀಸರ್ ಸ್ಟೆಫನಿ ಟ್ರೌಟ್ಮನ್ ಮತ್ತು ಡಿಜಿಟಲ್ ಮತ್ತು ಕ್ಲೌಡ್ ಮುಖ್ಯಸ್ಥ ಭರತ್ ನಾರಾಯಣನ್ ಸೇರಿದಂತೆ ಅನೇಕ ಹಿರಿಯ ಕಾರ್ಯನಿರ್ವಾಹಕರು ಕಳೆದ ವರ್ಷದಲ್ಲಿ ವಿಪ್ರೋವನ್ನು ತೊರೆದಿದ್ದರು.
“ನಮ್ಮ ಕಂಪನಿ ಮತ್ತು ಉದ್ಯಮದ ಈ ನಿರ್ಣಾಯಕ ಕ್ಷಣದಲ್ಲಿ ವಿಪ್ರೋವನ್ನು ಮುನ್ನಡೆಸಲು ಶ್ರೀನಿವಾಸ್ ಪಲ್ಲಿಯಾ ಅವರು ಎಲ್ಲ ರೀತಿಯ ಅರ್ಹತೆ ಹೊಂದಿದ್ದಾರೆʼʼ ಎಂದು ರಿಷದ್ ಪ್ರೇಮ್ ಜಿ ಹೇಳಿದ್ದಾರೆ. ಜತೆಗೆ ಥಿಯೆರ್ರಿ ಡೆಲಾಪೋರ್ಟೆ ಅವರ ನಾಯಕತ್ವಕ್ಕೆ ಅವರು ಕೃತಜ್ಞತೆ ಸಲ್ಲಿಸಿದ್ದಾರೆ. “ಅವರು ಜಾರಿಗೆ ತಂದ ಬದಲಾವಣೆಗಳು ನಮ್ಮನ್ನು ಉತ್ತಮ ಸ್ಥಾನದಲ್ಲಿರಿಸಿದೆ. ಜತೆಗೆ ನಮ್ಮ ಒಟ್ಟಾರೆ ದಕ್ಷತೆಯನ್ನು ಸುಧಾರಿಸಿದ್ದೇವೆ. ಇದು ಶ್ರೀನಿವಾಸ್ ಅವರು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲು ಬಲವಾದ ಅಡಿಪಾಯವನ್ನು ಒದಗಿಸಿದೆʼʼ ಎಂದಿದ್ದಾರೆ.
ಯಾರು ಈ ಶ್ರೀನಿವಾಸ್ ಪಲ್ಲಿಯಾ?
ಶ್ರೀನಿವಾಸ್ ಮೂರು ದಶಕಗಳಿಂದ ವಿಪ್ರೋದಲ್ಲಿದ್ದಾರೆ ಮತ್ತು ಇತ್ತೀಚೆಗೆ ವಿಪ್ರೋದ ಅತಿದೊಡ್ಡ ಮತ್ತು ವೇಗವಾಗಿ ಬೆಳೆಯುತ್ತಿರುವ ಕಾರ್ಯತಂತ್ರದ ಮಾರುಕಟ್ಟೆಯಾದ ಅಮೇರಿಕಾಸ್ 1ರ ಸಿಇಒ ಆಗಿ ಅಧಿಕಾರ ಸ್ವೀಕರಿಸಿದ್ದರು. ಜತೆಗೆ ವಿಪ್ರೋ ಕಾರ್ಯನಿರ್ವಾಹಕ ಮಂಡಳಿಯ ಸದಸ್ಯರಾಗಿದ್ದಾರೆ.
ಇದನ್ನೂ ಓದಿ: Oldest Billionaire: ಎಲ್‌ಐಸಿಯಲ್ಲಿ ಏಜೆಂಟ್ ಈಗ ಭಾರತದ ಹಿರಿಯ ಬಿಲಿಯನೇರ್
ಬೆಂಗಳೂರಿನಲ್ಲಿ ಶಿಕ್ಷಣ
ವಿಶೇಷ ಎಂದರೆ ಶ್ರೀನಿವಾಸ್ ಅವರು ಬೆಂಗಳೂರಿನಲ್ಲಿ ಶಿಕ್ಷಣ ಪಡೆದಿದ್ದಾರೆ. ಎಂಜಿನಿಯರಿಂಗ್‌ನಲ್ಲಿ ಪದವಿ ಪೂರೈಸಿರುವ ಅವರು ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನಿಂದ ಮ್ಯಾನೇಜ್‌ಮೆಂಟ್ ಸ್ಟಡೀಸ್ ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ