ನವ ದೆಹಲಿ: ಆನ್‌ಲೈನ್‌ನಲ್ಲಿ ಓಲಾ ಎಲೆಕ್ಟ್ರಿಕ್ ಸ್ಕೂಟರ್ (ಸ್ಕೂಟಿ) ಬುಕಿಂಗ್ ನೆಪದಲ್ಲಿ ಸಾವಿರಾರು ಮಂದಿಗೆ ವಂಚಿಸಿದ ಹಗರಣ ಬಯಲಾಗಿದೆ. ಈ ಸಂಬಂಧ 20 ಆರೋಪಿಗಳನ್ನು (Online scam ) ಬಂಧಿಸಲಾಗಿದೆ.
ಬೆಂಗಳೂರು, ಗುರ್‌ಗ್ರಾಮ್, ಪಟನಾ ಸೇರಿದಂತೆ ನಾನಾ ನಗರಗಳಲ್ಲಿ ಸಾವಿರಾರು ಮಂದಿಗೆ ಒಟ್ಟು ಕೋಟ್ಯಂತರ ರೂ.ಗಳನ್ನು ವಂಚಿಸಲಾಗಿದೆ ಎಂದು ದಿಲ್ಲಿಯ ಡಿಸಿಪಿ (ಉತ್ತರ) ದೇವೇಶ್ ಮಹ್ಲಾ ತಿಳಿಸಿದ್ದಾರೆ.
ದಿಲ್ಲಿ ಪೊಲೀಸರು ಈ ಖದೀಮರ ಜಾಲವನ್ನು ಭೇದಿಸಿದ್ದಾರೆ. ಅಕ್ಟೋಬರ್ 7ರಂದು ಸೈಬರ್ ಪೊಲೀಸ್ ಸ್ಟೇಶನ್‌ನಲ್ಲಿ ವಂಚನೆ ದೂರು ದಾಖಲಾಗಿತ್ತು.
ಬೆಂಗಳೂರಿನಲ್ಲೇ ವಂಚನೆಯ ವೆಬ್‌ಸೈಟ್: ಪೊಲೀಸರ ಪ್ರಕಾರ ಬೆಂಗಳೂರಿನಲ್ಲಿ ಇಬ್ಬರು ಓಲಾ ಸ್ಕೂಟಿಯ ನಕಲಿ ವೆಬ್‌ಸೈಟ್ ಅನ್ನು ರಚಿಸಿದ್ದರು. ಈ ವೆಬ್‌ಸೈಟ್‌ನಲ್ಲಿ ಓಲಾ ಸ್ಕೂಟರ್ ಅಥವಾ ಸ್ಕೂಟಿ ಖರೀದಿಸಲು ತಲಾಶೆ ನಡೆಸುವ ಗ್ರಾಹಕರಿಗೆ ವಂಚಕರು ಬಲೆ ಬೀಸುತ್ತಿದ್ದರು.
ಗ್ರಾಹಕರು ಈ ನಕಲಿ ವೆಬ್‌ಸೈಟ್‌ನಲ್ಲಿ ಅವರ ವಿವರಗಳನ್ನು ಅಪ್‌ಲೋಡ್ ಮಾಡಿದ ಬಳಿಕ, ಅವರ ಮೊಬೈಲ್ ಸಂಖ್ಯೆಯನ್ನು ತಂಡದ ಇತರ ಸದಸ್ಯರು ವಿನಿಮಯ ಮಾಡಿಕೊಳ್ಳುತ್ತಿದ್ದರು. ಬಿಹಾರ ಮತ್ತು ತೆಲಂಗಾಣದ ಗ್ಯಾಂಗಿನ ಇತರ ಸದಸ್ಯರು ಓಲಾ ಕಂಪನಿಯ ಪ್ರತಿನಿಧಿಗಳಂತೆ ಪೋಸು ಕೊಟ್ಟು ಸಂಪರ್ಕಿಸುತ್ತಿದ್ದರು. ಆರಂಭದಲ್ಲಿ ಓಲಾ ಸ್ಕೂಟರ್ ಅಥವಾ ಸ್ಕೂಟಿ ಬುಕ್ ಮಾಡಲು 499 ರೂ.ಗಳನ್ನು ವರ್ಗಾಯಿಸಲು ಸೂಚಿಸುತ್ತಿದ್ದರು. ಬಳಿಕ ಸಂತ್ರಸ್ತರಿಗೆ ವಿಮೆ ಮತ್ತು ಸಾಗಣೆ ಶುಲ್ಕವಾಗಿ 60,000 ರೂ.ಗಳಿಂದ 70,000 ರೂ. ವರ್ಗಾಯಿಸಲು ಸೂಚಿಸುತ್ತಿದ್ದರು.
ಹಗರಣ ಬಯಲಾಗಿದ್ದು ಹೇಗೆ?
ಪೊಲೀಸ್ ಠಾಣೆಗೆ ದೂರು ನೀಡಿದವರಲ್ಲೊಬ್ಬರು ಕಳೆದ ಸೆಪ್ಟೆಂಬರ್ 26ರಂದು ಓಲಾ ಸ್ಕೂಟಿ ಬುಕ್ ಮಾಡಲು ನಕಲಿ ವೆಬ್‌ಸೈಟ್ ಬಳಸಿದ್ದರು. ಆದರೆ ಅವರಿಗೆ ಹಣಕಾಸು ವ್ಯವಸ್ಥೆ ಮಾಡಿಕೊಳ್ಳಲು ಸಾಧ್ಯವಾಗಿರಲಿಲ್ಲ. 499 ರೂ. ಪಾವತಿಸಿದ್ದರು. ಬಳಿಕ ಪ್ರಕ್ರಿಯೆ ಶುರುವಾಗಿತ್ತು. ಮರು ದಿನವೇ 30,000 ರೂ. ಡೌನ್‌ಪೇಮೆಂಟ್ ನೀಡುವಂತೆ ಒಂದು ಲಿಂಕ್ ಅನ್ನು ವಂಚಕರು ಆನ್‌ಲೈನ್ ಮೂಲಕ ಕಳಿಸಿದ್ದರು. ಅದನ್ನೂ ದೂರುದಾರರು ನೀಡಿದ್ದರು. ಕೆಲ ದಿನಗಳ ಬಳಿಕ 72,000 ರೂ. ಸಾಲ ಮಂಜೂರಾಗಿದೆ ಎಂದೂ, ಉಳಿದ ಡೆಲಿವರಿ ಶುಲ್ಕವಾಗಿ 13,000 ರೂ. ಕಟ್ಟಬೇಕು ಎಂದೂ ಸೂಚಿಸಲಾಗಿತ್ತು. ಅದನ್ನೂ ದೂರುದಾರರು ಕಟ್ಟಿದ್ದರು. ಆದರೂ ಸ್ಕೂಟರ್ ಸಿಗದಿದ್ದಾಗ ಪೊಲೀಸ್ ಠಾಣೆ ಸಂಪರ್ಕಿಸಿದ್ದರು. ಸೈಬರ್ ಕ್ರೈಮ್ ಸೆಲ್ ಈ ಪ್ರಕರಣದ ಜಾಡು ಹಿಡಿದು ತನಿಖೆ ನಡೆಸಿ ಗ್ಯಾಂಗ್ ಅನ್ನು ಭೇದಿಸಿದೆ.