ಸ್ಯಾನ್ ಫ್ರಾನ್ಸಿಸ್ಕೊ: ಸಾಮಾಜಿಕ ಜಾಲತಾಣ ದಿಗ್ಗಜ ಟ್ವಿಟರ್ ದಿವಾಳಿಯಾಗುವ ಸಾಧ್ಯತೆ ಇದೆ ಎಂದು ಕಂಪನಿಯ ಹೊಸ ( Twitter ) ಮಾಲೀಕ ಎಲಾನ್ ಮಸ್ಕ್ ಎಚ್ಚರಿಸಿದ್ದಾರೆ.
ಟ್ವಿಟರ್‌ನಲ್ಲಿ ಹಲವಾರು ಮಂದಿ ಹಿರಿಯ ಉದ್ಯೋಗಿಗಳು ರಾಜೀನಾಮೆ ನೀಡಿದ್ದಾರೆ. ಕಂಪನಿ ಪ್ರಸಕ್ತ ಸಾಲಿನಲ್ಲಿ ದಿನಕ್ಕೆ 40 ಲಕ್ಷ ಡಾಲರ್ (3280 ಕೋಟಿ ರೂ.) ನಷ್ಟಕ್ಕೀಡಾಗಬಹುದು. ಜಾಹೀರಾತುದಾರರು ದೂರ ಸರಿಯುತ್ತಿದ್ದಾರೆ ಎಂದು ಎಲಾನ್ ಮಸ್ಕ್ ತಿಳಿಸಿದ್ದಾರೆ.
ಟ್ವಿಟರ್ ಅನ್ನು 44 ಶತಕೋಟಿ ಡಾಲರ್‌ಗೆ (3.60 ಲಕ್ಷ ಕೋಟಿ ರೂ.) ಖರೀದಿಸಿದ ಎರಡೇ ವಾರಗಳಲ್ಲಿ ಎಲಾನ್ ಮಸ್ಕ್, ಟ್ವಿಟರ್ ದಿವಾಳಿಯಾಗುವ ಆತಂಕವನ್ನು ವ್ಯಕ್ತಪಡಿಸಿದ್ದಾರೆ. ಒಂದು ಕಡೆ ಹಿರಿಯ ಅಧಿಕಾರಿಗಳನ್ನು ಎಲಾನ್ ಮಸ್ಕ್ ಅವರೇ ವಜಾಗೊಳಿಸಿದ್ದಾರೆ. ಸಿಬ್ಬಂದಿ ಸಂಖ್ಯೆಯನ್ನು ಅರ್ಧಕ್ಕೆ ಕಡಿತಗೊಳಿಸುತ್ತಿದ್ದಾರೆ. ಮತ್ತೊಂದು ಕಡೆ ದಿವಾಳಿ ಆಗಬಹುದು ಎಂಬ ವಿಲಕ್ಷಣ ಎಚ್ಚರಿಕೆಯನ್ನು ಕೊಟ್ಟಿದ್ದಾರೆ.
ಹೀಗಿದ್ದರೂ ಟ್ವಿಟರ್‌ನಂಥ ದಿಗ್ಗಜ ಕಂಪನಿ ಸದ್ಯಕ್ಕೆ ದಿವಾಳಿಯಾಗುವ ಸಾಧ್ಯತೆ ಇಲ್ಲ. ಆದರೆ ಎಲಾನ್ ಮಸ್ಕ್ ಕಂಪನಿಯನ್ನು ನಡೆಸಿಕೊಂಡು ಹೋಗುತ್ತಿರುವ ರೀತಿ ಸಮರ್ಪಕವಾಗಿಲ್ಲ. ಉದ್ಯೋಗಿಗಳ ಜತೆ ಇಂಥ ನಡೆ ಸಮಂಜಸ ಅಲ್ಲ ಎನ್ನುತ್ತಾರೆ ಆರ್ಥಿಕ ತಜ್ಞ ರಂಗಸ್ವಾಮಿ ಮೂಕನಹಳ್ಳಿ.