Site icon Vistara News

ಎಲಾನ್ ಮಸ್ಕ್‌ಗೆ ಮಾರಾಟಕ್ಕೆ ಸಂಬಂಧಿಸಿ ಷೇರುದಾರರ ಮತದಾನಕ್ಕೆ ಟ್ವಿಟರ್‌ ನಿರ್ಧಾರ

musk

ವಾಷಿಂಗ್ಟನ್: ಸಾಮಾಜಿಕ ಜಾಲತಾಣ ದಿಗ್ಗಜ ಟ್ವಿಟರ್‌, ಉದ್ಯಮಿ ಎಲಾನ್‌ ಮಸ್ಕ್‌ ಅವರಿಗೆ ಕಂಪನಿಯ ಮಾರಾಟಕ್ಕೆ ಸಂಬಂಧಿಸಿ ಷೇರುದಾರರ ಮತವನ್ನು ಆಗಸ್ಟ್‌ನಲ್ಲಿ ಪಡೆಯಲು ನಿರ್ಧರಿಸಿದೆ.

ಎಲಾನ್‌ ಮಸ್ಕ್‌ ಅವರ ಪರ ವಕೀಲರು ಇತ್ತೀಚೆಗೆ ಟ್ವಿಟರ್‌ ಗೆ ನೀಡಿದ ಎಚ್ಚರಿಕೆಯಲ್ಲಿ, ನಕಲಿ ಖಾತೆಗಳ ಬಗ್ಗೆ ಸಮಗ್ರ ವಿವರಗಳನ್ನು ಒದಗಿಸದಿದ್ದರೆ, ಡೀಲ್‌ನಿಂದ ಮಸ್ಕ್‌ ದೂರ ಉಳಿಯಲಿದ್ದಾರೆ ಎಂದಿದ್ದರು. ಆದರೆ ಎಲಾನ್‌ ಮಸ್ಕ್‌ ಅವರಿಗೆ ನಕಲಿ ಖಾತೆಗಳ ಕುರಿತ ಎಲ್ಲ ವಿವರಗಳನ್ನು ನೀಡುವುದಾಗಿ ಟ್ವಿಟರ್‌ ತಿಳಿಸಿದೆ.

ಟ್ವಿಟರ್‌ ತನ್ನ ಬಳಿ ಇರುವ ಡೇಟಾಗಳನ್ನು ಸೋಶಿಯಲ್‌ ಮೀಡಿಯಾ ಮಾನಿಟರಿಂಗ್‌ ಕಂಪನಿಗಳಿಗೆ ತನ್ನ ಲೈಸೆನ್ಸಿಂಗ್‌ ಬಿಸಿನೆಸ್‌ನ ಭಾಗವಾಗಿ ನೀಡುತ್ತದೆ. ಎಲಾನ್‌ ಮಸ್ಕ್‌ ಅವರಿಗೆ ಮಾಹಿತಿ ವಿನಿಮಯದ ಭಾಗವಾಗಿ ಉಚಿತವಾಗಿ ಕೊಡಲಿದೆ ಎಂದು ಟ್ವಿಟರ್‌ ಮೂಲಗಳು ತಿಳಿಸಿವೆ.

ಎಲಾನ್‌ ಮಸ್ಕ್‌ ಅವರಿಗೆ ಮಾಹಿತಿ ವಿನಿಮಯ ಮಾಡುವುದಾಗಿ ಟ್ವಿಟರ್‌ ಘೋಷಿಸಿದ ಬಳಿಕ ಅದರ ಷೇರುಗಳ ದರ ಬುಧವಾರ 3% ಏರಿಕೆಯಾಗಿದೆ. 44 ಶತಕೋಟಿ ಡಾಲರ್‌ಗೆ ( 3.38 ಲಕ್ಷ ಕೋಟಿ ರೂ.) ಮೆಗಾ ಡೀಲ್ ಅನ್ನು ಶತಾಯಗತಾಯ ಮುಕ್ತಾಯಗೊಳಿಸಲು ಟ್ವಿಟರ್‌ ಹವಣಿಸಿದೆ.

ಟ್ವಿಟರ್‌ನಲ್ಲಿರುವ ಎಲ್ಲ ಟ್ವೀಟ್‌ಗಳನ್ನು ಸೂಕ್ತ ಮಾನದಂಡಗಳ ಮೂಲಕ ವಿಶ್ಲೇಷಿಸಿ, ನಕಲಿ ಖಾತೆಗಳನ್ನು ಬೇರ್ಪಡಿಸಿ, ಲಭಿಸುವ ಎಲ್ಲ ಮಾಹಿತಿಗಳನ್ನು ಮಸ್ಕ್‌ ಅವರ ಜತೆ ವಿನಿಮಯ ಮಾಡಲಾಗುವುದು. ಆದರೆ ಬಳಕೆದಾರರ ನೆಲೆ ಕುರಿತ ಮಾಹಿತಿ ಗೌಪ್ಯ ಮಾಹಿತಿಯಾಗಿರಲಿದೆ. ಅದನ್ನು ಟ್ವಿಟರ್‌ ಇತರರಿಗೆ ಹಂಚಿಕೊಳ್ಳುವುದಿಲ್ಲ ಎಂದು ಕಂಪನಿಯ ಸಿಇಒ ಪರಾಗ್‌ ಅಗ್ರವಾಲ್‌ ಹೇಳಿದ್ದಾರೆ.

Exit mobile version