ವಾಷಿಂಗ್ಟನ್: ಸಾಮಾಜಿಕ ಜಾಲತಾಣ ದಿಗ್ಗಜ ಟ್ವಿಟರ್ (Twitter ) ಅನ್ನು ಉದ್ಯಮಿ ಎಲಾನ್ ಮಸ್ಕ್ ಅವರು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ. ಹಾಗೂ ಇದರ ಬೆನ್ನಲ್ಲೇ ಟ್ವಿಟರ್‌ನ ಭಾರತೀಯ ಮೂಲದ ಸಿಇಒ ಪರಾಗ್ ಅಗ್ರವಾಲ್, ಕಾನೂನು ಮತ್ತು ನೀತಿ ವಿಭಾಗದ ಮುಖ್ಯಸ್ಥೆ ವಿಜಯಾ ಗದ್ದೆ ಸೇರಿದಂತೆ ಪ್ರಮುಖರನ್ನು ವಜಾಗೊಳಿಸಿದ್ದಾರೆ. ಒಟ್ಟು 44 ಶತಕೋಟಿ ಡಾಲರ್ (ಅಂದಾಜು 3.60 ಲಕ್ಷ ಕೋಟಿ ರೂ.) ಮೌಲ್ಯದ ಮೆಗಾ ಡೀಲ್ ಇದಾಗಿದೆ.
ಇದರೊಂದಿಗೆ ಕಳೆದ ಆರು ತಿಂಗಳುಗಳಿಂದ ಟ್ವಿಟರ್ ಸ್ವಾಧೀನ ಕುರಿತ ಊಹಾಪೋಹಗಳಿಗೆ ತೆರೆ ಬಿದ್ದಂತಾಗಿದೆ. ಟ್ವಿಟರ್ ಅನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡ ಕೂಡಲೇ, ಕಂಪನಿಯ ನಾಯಕತ್ವದಲ್ಲಿ ಭಾರಿ ಬದಲಾವಣೆ ಮಾಡಿದ್ದಾರೆ. ಸಿಇಒ ಪರಾಗ್ ಅಗ್ರವಾಲ್, ಕಾನೂನು ವಿಭಾಗದ ಮುಖ್ಯಸ್ಥ ವಿಜಯ ಗದ್ದೆ, ಮುಖ್ಯ ಹಣಕಾಸು ಅಧಿಕಾರಿ ನೆಡ್ ಸೆಗಲ್ ಅವರನ್ನು ವಜಾಗೊಳಿಸಲಾಗಿದೆ.
ಎಲಾನ್ ಮಸ್ಕ್ ಅವರು ಈ ವಿದ್ಯಮಾನದ ಬೆನ್ನಲ್ಲೇ ಹಕ್ಕಿ ಮುಕ್ತವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ಟ್ವಿಟರ್‌ನ ಷೇರುದಾರರಿಗೆ ಪ್ರತಿ ಷೇರಿಗೆ 54.20 ಡಾಲರ್ ಸಿಗಲಿದೆ. ಟ್ವಿಟರ್ ಈಗ ಖಾಸಗಿ ಕಂಪನಿಯಾಗಿ ಕಾರ್ಯನಿರ್ವಹಿಸಲಿದೆ.
ಭಾರತೀಯ ಮೂಲದ ಪರಾಗ್ ಅಗ್ರವಾಲ್ ಕಳೆದ ನವೆಂಬರ್‌ನಲ್ಲಿ ಟ್ವಿಟರ್ ಸಿಇಒ ಆಗಿದ್ದರು. ಆಗ ಕಂಪನಿಯ ಸ್ಥಾಪಕ ಜಾಕ್ ಡೋರ್ಸೆ ದಿಢೀರ್ ರಾಜೀನಾಮೆ ಕೊಟ್ಟಿದ್ದರು.