ಶೀಘ್ರದಲ್ಲಿಯೇ ಎಲ್ಲರಿಗೂ ಏಕರೂಪದ ಆದಾಯ ತೆರಿಗೆ ರಿಟರ್ನ್ (ITR) ಜಾರಿಗೆ ತರಲು ಚಿಂತನೆ ನಡೆಸಿದೆ ಎಂದು ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (CBDT) ತಿಳಿಸಿದೆ. ಹಾಗಾದರೆ ಈ ಪ್ರಸ್ತಾಪದ ಉದ್ದೇಶ ಏನು? ಈಗ ಎಷ್ಟು ವಿಧದ ಐಟಿ ರಿಟರ್ನ್ ಅರ್ಜಿಗಳು ಚಾಲ್ತಿಯಲ್ಲಿವೆ? (ವಿಸ್ತಾರ Money Guide ) ವಿವರ ಇಲ್ಲಿದೆ.
ಏಕರೂಪದ ಐಟಿಆರ್ ಅರ್ಜಿಗೆ ಪ್ರಸ್ತಾಪ
ಟ್ರಸ್ಟ್‌ಗಳು ಮತ್ತು ಎನ್‌ಜಿಒಗಳು ಹೊರತುಪಡಿಸಿ ಉಳಿದೆಲ್ಲ ತೆರಿಗೆದಾರರು ನೂತನ ಐಟಿಆರ್ ಫಾರ್ಮ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅಂದರೆ ಐಟಿಆರ್-7 ಹೊರತುಪಡಿಸಿ, ಉಳಿದ ಅರ್ಜಿಗಳ ಬದಲಿಗೆ ಒಂದೇ ನಮೂನೆಯ ಅರ್ಜಿ ಸಿಗಲಿದೆ. ಉದ್ದೇಶಿತ ಏಕರೂಪದ ಐಟಿಆರ್ ಬಗ್ಗೆ ಸಿಬಿಡಿಟಿ ಸಂಬಂಧಿಸಿದ ಪಾಲುದಾರರಿಂದ ಅಭಿಪ್ರಾಯಗಳನ್ನು ಆಹ್ವಾನಿಸಿದೆ. ಡಿಸೆಂಬರ್ 15ರೊಳಗೆ ಅಭಿಪ್ರಾಯಗಳನ್ನು ಸಲ್ಲಿಸಲು ತಿಳಿಸಲಾಗಿದೆ.
7 ವಿಧದ ಐಟಿಆರ್ ಫಾರ್ಮ್‌ಗಳ ವಿವರ
ಪ್ರಸ್ತುತ 7 ವಿಧದ ಆದಾಯ ತೆರಿಗೆ ರಿಟರ್ನ್ (ಐಟಿಆರ್) ಅನ್ನು ನಾನಾ ವಿಧದ ತೆರಿಗೆದಾರರಿಗೆ ಅನ್ವಯಿಸಲಾಗಿದೆ. ಐಟಿಆರ್ ಫಾರ್ಮ್ 1 (ಸಹಜ್) ಮತ್ತು ಐಟಿಆರ್ ಫಾರ್ಮ್ 4 (ಸುಗಮ್) ಹೆಚ್ಚಿನ ಸಂಖ್ಯೆಯ ಸಣ್ಣ ಮತ್ತು ಮಧ್ಯಮ ತೆರಿಗೆದಾರರಿಗೆ ಅನ್ವಯವಾಗುತ್ತದೆ. ಸಹಜ್ ಅಡಿಯಲ್ಲಿ 50 ಲಕ್ಷ ರೂ. ತನಕ ವೇತನ, ಮನೆ ಬಾಡಿಗೆ, ಬಡ್ಡಿ, ಪ್ರಾಪರ್ಟಿಗಳಿಂದ ಆದಾಯ ಪಡೆಯುವವರು ಐಟಿಆರ್ ಸಲ್ಲಿಸಬಹುದು.
ಐಟಿಆರ್-4 ಅಡಿಯಲ್ಲಿ ಹಿಂದೂ ಅವಿಭಜಿತ ಕುಟುಂಬಗಳು, ಕಂಪನಿಗಳು ಮತ್ತು ಬಿಸಿನೆಸ್ ಮೂಲಕ 50 ಲಕ್ಷ ರೂ. ತನಕ ಒಟ್ಟು ಆದಾಯ ಇರುವವರು ಐಟಿ ರಿಟರ್ನ್ ಸಲ್ಲಿಸಬಹುದು.
ಐಟಿಆರ್-2 ಅಡಿಯಲ್ಲಿ ವಸತಿ ಆಸ್ತಿಗಳ ಮೂಲಕ ಆದಾಯ ಇರುವವರು ಐಟಿ ರಿಟರ್ನ್ ಸಲ್ಲಿಸಬಹುದು. ಐಟಿಆರ್-3 ಅಡಿಯಲ್ಲಿ ಬಿಸಿನೆಸ್, ವೃತ್ತಿಗಳ ಮೂಲಕ ಲಾಭ ಗಳಿಸುವವರು ಐಟಿ ರಿಟರ್ನ್ ಸಲ್ಲಿಸಬಹುದು. ಐಟಿಆರ್-5 ಮತ್ತು 6 ಎಲ್‌ಎಲ್‌ಪಿಗಳು ಮತ್ತು ಬಿಸಿನೆಸ್ ನಡೆಸುವವರಿಗೆ ಅನ್ವಯವಾಗುತ್ತದೆ. ಟ್ರಸ್ಟ್‌ಗಳಿಗೆ ಐಟಿಆರ್-7 ಅನ್ವಯವಾಗುತ್ತದೆ. ಸಿಬಿಡಿಟಿ ಪ್ರಕಾರ ಐಟಿಆರ್-1 ಮತ್ತು 4 ಮುಂದುವರಿಯಲಿದೆ. ಆದರೆ ವೈಯಕ್ತಿಕವಾಗಿ ಸಾಮಾನ್ಯ ಐಟಿಆರ್ ಫಾರ್ಮ್‌ನಲ್ಲಿ ರಿಟರ್ನ್ ಸಲ್ಲಿಸುವ ಆಯ್ಕೆ ಸಿಗಲಿದೆ.
ತೆರಿಗೆದಾರ ಸ್ನೇಹಿ ಐಟಿಆರ್ ಫಾರ್ಮ್
ನಾನಾ ಆದಾಯ ತೆರಿಗೆ ರಿಟರ್ನ್‌ಗಳನ್ನು ವಿಲೀನಗೊಳಿಸಲು ಉದ್ದೇಶಿಸಲಾಗಿದೆ. ಇದರಿಂದ ಐಟಿ ರಿಟರ್ನ್ ಸಲ್ಲಿಕೆಯ ಪ್ರಕ್ರಿಯೆ ಮತ್ತಷ್ಟು ತೆರಿಗೆದಾರ ಸ್ನೇಹಿಯಾಗಲಿದೆ. ಅಂತಾರಾಷ್ಟ್ರೀಯ ದರ್ಜೆಗೆ ಅನುಗುಣವಾಗಿ ಸುಧಾರಣೆಯಾಗಲಿದೆ ಎಂದು ಸಿಬಿಡಿಟಿ ತಿಳಿಸಿದೆ.
ಐಟಿಆರ್-1 (ಸಹಜ್) ಮತ್ತು ಐಟಿಆರ್-4 (ಸುಗಮ್) ಹಿಂತೆಗೆತವಾಗಲಿದೆಯೇ?
ಸಿಬಿಡಿಟಿ ಪ್ರಕಾರ, ಈಗಿನ ಐಟಿಆರ್-1 ಮತ್ತು ಐಟಿಆರ್- 4 ಮುಂದುವರಿಯಲಿದೆ. ಅದರ ಹಿಂತೆಗೆತ ಇರುವುದಿಲ್ಲ. ಈ ಎರಡೂ ಫಾರ್ಮ್‌ಗಳನ್ನು ಹೆಚ್ಚಿನ ತೆರಿಗೆದಾರರು ಬಳಸುತ್ತಾರೆ. ಹೊಸ ಏಕರೂಪದ ಐಟಿಆರ್ ಅರ್ಜಿಯು ಐಟಿಆರ್-1 ಮತ್ತು ಐಟಿಆರ್-4 ಬಳಸುವ ತೆರಿಗೆದಾರರಿಗೆ ಮತ್ತೊಂದು ಆಯ್ಕೆಯಾಗಿ ಇರಲಿದೆ.
ಐಟಿಆರ್-1 ಮತ್ತು ಐಟಿಆರ್-4 ಫಾರ್ಮ್‌ಗಳ ಜತೆಗೆ ಹೊಸ ಐಟಿಆರ್ ಫಾರ್ಮ್ ಸಿಗಲಿದೆ. ಆದರೆ ಐಟಿಆರ್-2, ಐಟಿಆರ್-೩, ಐಟಿಆರ್-5 ಮತ್ತು ಐಟಿಆರ್-6 ಅರ್ಜಿದಾರರಿಗೆ ಇವುಗಳು ಭವಿಷ್ಯದ ದಿನಗಳಲ್ಲಿ ಸಿಗುವುದಿಲ್ಲ.