Site icon Vistara News

Unilever Comapny: ಐಸ್‌ಕ್ರೀಮ್‌ ಉದ್ಯಮದಿಂದ ಹಿಂದೆ ಸರಿದ ಯೂನಿಲಿವರ್ ಕಂಪೆನಿ; 7,500 ಉದ್ಯೋಗ ಕಡಿತದ ಸೂಚನೆ

uniliver

uniliver

ನವದೆಹಲಿ: ಗ್ರಾಹಕರ ಅಚ್ಚುಮೆಚ್ಚಿನ, ಇಂಗ್ಲೆಂಡ್‌ ಮೂಲದ ಕಂಪೆನಿ ಯೂನಿಲಿವರ್ (Unilever Comapny) ಮಂಗಳವಾರ (ಮಾರ್ಚ್‌ 19) ಹೊಸದೊಂದು ತೀರ್ಮಾನ ಪ್ರಕಟಿಸಿದೆ. ಐಸ್‌ಕ್ರೀಮ್‌ ಬ್ರ್ಯಾಂಡ್‌ಗಳಾದ ಮ್ಯಾಗ್ನುಮ್ (Magnum) ಮತ್ತು ಬೆನ್ & ಜೆರ್ರಿ (Ben & Jerry’s)ಯಿಂದ ಬೇರ್ಪಡುವುದಾಗಿ ಘೋಷಿಸಿದೆ. ಜತೆಗೆ ವೆಚ್ಚ ತಗ್ಗಿಸುವ ಕ್ರಮಗಳನ್ನೂ ಪ್ರಕಟಿಸಿದ್ದು, ಜಗತ್ತಿನಾದ್ಯಂತ 7,500 ಉದ್ಯೋಗ ಕಡಿತಕ್ಕೆ ಮುಂದಾಗಿದೆ. ಇದರಿಂದ 3 ವರ್ಷಗಳಲ್ಲಿ ಕಂಪೆನಿಗೆ ಸುಮಾರು 800 ಮಿಲಿಯನ್‌ ಡಾಲರ್‌ (66,384,240,000 ರೂ.) ಉಳಿತಾಯವಾಗಲಿದೆ ಎಂದು ಅಂದಾಜಿಸಲಾಗಿದೆ. ಐಸ್‌ಕ್ರೀಮ್‌ ವಿಭಾಗವು 2023ರಲ್ಲಿ 8.6 ಬಿಲಿಯನ್ ಡಾಲರ್ (71,36,37,460 ರೂ.) ವ್ಯವಹಾರ ದಾಖಲಿಸಿದೆ.

ಕಾರಣವೇನು?

ಐಸ್‌ಕ್ರೀಮ್‌ ಉದ್ಯಮದಿಂದ ಹಿಂದೆ ಸರಿಯಲಿರುವ ಕಾರಣವನ್ನು ಯೂನಿಲಿವರ್‌ ಕಂಪೆನಿ ತಿಳಿಸಿದೆ. ಕಂಪೆನಿಯ ಪುನರ್‌ ರಚನೆಯ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಮುಖ್ಯವಾಗಿ ಕಂಪೆನಿ 4 ವಿಭಾಗಗಳ ಉತ್ಪನ್ನಗಳತ್ತ ಗಮನ ಹರಿಸಲು ನಿರ್ಧರಿಸಿದೆ. ಸೌಂದರ್ಯ ಮತ್ತು ಯೋಗಕ್ಷೇಮ, ವೈಯಕ್ತಿಕ ಆರೈಕೆ, ಮನೆ ಆರೈಕೆ ಮತ್ತು ಪೋಷಣೆಯ ವ್ಯವಹಾರಗಳತ್ತ ಗಮನ ಕೇಂದ್ರೀಕರಿಸಲಿದೆ. ಹೀಗಾಗಿ ಈತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ. ಯೂನಿಲಿವರ್‌ನ ಪ್ರತಿಸ್ಪರ್ಧಿ ನೆಸ್ಲೆ ಎಸ್ಎ ಈ ಹಿಂದೆ ಖಾಸಗಿ ಈಕ್ವಿಟಿ ಸಂಸ್ಥೆ ಪಿಎಐ ಪಾರ್ಟ್‌ನರ್ಸ್‌ (PAI Partners)ನೊಂದಿಗೆ ಜಂಟಿ ಉದ್ಯಮವನ್ನು ಸ್ಥಾಪಿಸುವ ಮೂಲಕ ತನ್ನ ಐಸ್‌ಕ್ರೀಮ್ ವ್ಯವಹಾರವನ್ನು ಬೇರ್ಪಡಿಸಿತ್ತು.

ಬೆನ್ & ಜೆರ್ರಿಯ ರಾಜಕೀಯ ನಿಲುವುಗಳಿಂದ ಹಲವು ಬಾರಿ ವಿವಾದ ಏರ್ಪಟ್ಟಿತ್ತು. ಇದೀಗ ಐಸ್‌ಕ್ರೀಮ್‌ ಉದ್ಯಮದಿಂದ ಬೇರ್ಪಡಿಸುವುದರಿಂದ ಯೂನಿಲಿವರ್‌ಗೆ ದೊಡ್ಡ ತಲೆನೋವು ಕಡಿಮೆಯಾದಂತಾಗುತ್ತದೆ ಎಂದು ವಿಶ್ಲೇಷಿಸಲಾಗುತ್ತದೆ. 2022ರ ಡಿಸೆಂಬರ್‌ನಲ್ಲಿ ಯೂನಿಲಿವರ್ ತನ್ನ ಉತ್ಪನ್ನಗಳನ್ನು ಇಸ್ರೇಲಿ ಆಕ್ರಮಿತ ವೆಸ್ಟ್ ಬ್ಯಾಂಕ್‌ನಲ್ಲಿ ಮಾರಾಟ ಮಾಡಲು ಆಕ್ಷೇಪ ವ್ಯಕ್ತಪಡಿಸಿತ್ತು. ನಂತರ ಬೆನ್ & ಜೆರ್ರಿಯ ನ್ಯಾಯಾಲಯದ ಮೆಟ್ಟಿಲೇರಿತ್ತು.

ವೆಚ್ಚ ಕಡಿತದ ಯೋಜನೆ

ಉದ್ಯೋಗ ಕಡಿತದ ಬಗ್ಗೆ ಸಮರ್ಥಿಸಿದ ಕಂಪೆನಿ ಮೂಲಗಳು, ಪ್ರಸ್ತಾವಿತ ವೆಚ್ಚ ಉಳಿತಾಯವು ಲಾಭವನ್ನು ಹೆಚ್ಚಿಸಲಿದೆ. ಇದರಿಂದ ಸಂಶೋಧನೆ, ಅಭಿವೃದ್ಧಿ ಮತ್ತು ಮಾರ್ಕೆಟಿಂಗ್‌ನಲ್ಲಿ ಮತ್ತಷ್ಟು ಹೂಡಿಕೆ ಮಾಡಲು ಸಾಧ್ಯವಾಗುತ್ತದೆ ಎಂದು ತಿಳಿಸಿವೆ. ಯೂನಿಲಿವರ್‌ನ ಆದಾಯವು 2023ರ ಕೊನೆಯ ತ್ರೈಮಾಸಿಕದಲ್ಲಿ ಶೇಕಡಾ 4.7 ರಷ್ಟು ಹೆಚ್ಚಾಗಿದೆ.

ಕೆಲವು ದಿನಗಳ ಹಿಂದೆಯಷ್ಟೇ ದೈತ್ಯ ಕಂಪೆನಿ ಇಂಟರ್‌ನ್ಯಾಷನಲ್‌ ಬ್ಯುಸಿನೆಸ್ ಮೆಷಿನ್ಸ್ ಕಾರ್ಪ್ (International Business Machines Corp) ಉದ್ಯೋಗ ಕಡಿತಕ್ಕೆ ಮುಂದಾಗಿತ್ತು. ಮಾರ್ಕೆಟಿಂಗ್ ಮತ್ತು ಸಂವಹನ ವಿಭಾಗದಲ್ಲಿ ಉದ್ಯೋಗ ಕಡಿತವಾಗಲಿದೆ ಎನ್ನಲಾಗಿದೆ. ಐಬಿಎಂ 3,900 ಜನರನ್ನು ಕೆಲಸದಿಂದ ತೆಗೆಯಲಿರುವುದಾಗಿ ಜನವರಿಯಲ್ಲಿ ಹೇಳಿತ್ತು. ಈ ಕಾರ್ಯದಿಂದ ಸಂಸ್ಥೆಗೆ 400 ಮಿಲಿಯನ್ ಡಾಲರ್ (33,12,92,00,000 ರೂ.) ಹಣ ಉಳಿತಾಯವಾಗಬಹುದು ಎನ್ನುವ ನಿರೀಕ್ಷೆ ಇದೆ. ಈ ಹಣವನ್ನು ಪುನಾರಚನೆ ಕಾರ್ಯಗಳಿಗೆ ಬಳಸಲಾಗುವುದು ಎಂದು ಅಂದು ಐಬಿಎಂನ ಚೀಫ್ ಫೈನಾನ್ಷಿಯಲ್ ಆಫೀಸರ್ ಜೇಮ್ಸ್ ಕೆವನಾಘ್ ತಿಳಿಸಿದ್ದರು.

ಇದನ್ನೂ ಓದಿ: Lays off: 200 ಉದ್ಯೋಗಿಗಳ ಹಬ್ಬದ ಖುಷಿ ಕಿತ್ತುಕೊಂಡ ಎಲ್‌&ಟಿ ಟೆಕ್ನಾಲಜಿ ಸರ್ವೀಸ್!

ಜತೆಗೆ ಪೇಟಿಎಂ ಮಾತೃಸಂಸ್ಥೆ ಒನ್ 97 ಕಮ್ಯುನಿಕೇಷನ್ಸ್ ವಾರ್ಷಿಕ ಕಾರ್ಯಕ್ಷಮತೆ ಪರಿಶೀಲನೆಯ ಭಾಗವಾಗಿ ತನ್ನ ಎಲ್ಲ ವಿಭಾಗಗಳಲ್ಲಿ ಉದ್ಯೋಗಿಗಳನ್ನು ಕಡಿತ ಮಾಡಲು ಸಜ್ಜಾಗಿದೆ ಎಂದು ಮೂಲಗಳು ತಿಳಿಸಿವೆ. ಉದ್ಯೋಗ ಕಳೆದುಕೊಳ್ಳಲಿರುವವರ ನಿಖರ ಸಂಖ್ಯೆಯನ್ನು ಕಂಪೆನಿ ಬಹಿರಂಗಪಡಿಸಲಾಗಿಲ್ಲವಾದರೂ ಎರಡು ವಾರಗಳಲ್ಲಿ ತಂಡದ ಗಾತ್ರವನ್ನು ಶೇ. 20ರವರೆಗೆ ಕಡಿಮೆ ಮಾಡಲು ಕೆಲವು ವಿಭಾಗಗಳಿಗೆ ಸೂಚಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version