ನವ ದೆಹಲಿ: ಕಳೆದ ಮಾರ್ಚ್‌ನಲ್ಲಿ ಯುನಿಫೈಡ್ ಪೇಮೆಂಟ್ ಇಂಟರ್‌ಫೇಸ್ (Unified Payment Interface -UPI) ಮೂಲಕ ಹೊಸ ದಾಖಲೆಯ 14 ಲಕ್ಷ ಕೋಟಿ ರೂ. ಮೌಲ್ಯದ ಹಣಕಾಸು ವರ್ಗಾವಣೆಗಳು ನಡೆದಿವೆ. ದಾಖಲೆಯ 865 ಕೋಟಿ ಸಂಖ್ಯೆಯ ವರ್ಗಾವಣೆಗಳು ನಡೆದಿವೆ.
2023ರ ಫೆಬ್ರವರಿಯಲ್ಲಿ 12.35 ಕೋಟಿ ರೂ. ವರ್ಗಾವಣೆಗಳು ನಡೆದಿತ್ತು. ಇದಕಕೆ ಹೋಲಿಸಿದರೆ 13% ಏರಿಕೆಯಾಗಿದೆ. ಫೆಬ್ರವರಿಯಲ್ಲಿ 728 ಕೋಟಿ ವರ್ಗಾವಣೆಗಳು ನಡೆದು 18% ಹೆಚ್ಚಳ ದಾಖಲಿಸಿತ್ತು.
2022-23ರ ಸಾಲಿನ ಕೊನೆಯ ತಿಂಗಳು ಯುಪಿಐ ವರ್ಗಾವಣೆಗಳು ಹೊಸ ದಾಖಲೆಯೊಂದಿಗೆ ಮುಕ್ತಾಯವಾಗಿರುವುದು ಡಿಜಿಟಲೀಕರಣದ ಜನಪ್ರಿಯತೆಯನ್ನು ಬಿಂಬಿಸಿದೆ ಎಂದಯ ಎನ್‌ಪಿಸಿಐನ ಸಿಒಒ ದಿಲೀಪ್ ಅಸ್ಬೆ ಹೇಳಿದ್ದಾರೆ. ಎನ್ ಪಿಸಿಐ ಪ್ರಕಾರ 2023ರ ಮಾರ್ಚ್‌ನಲ್ಲಿ 49.7 ಕೋಟಿ ಐಎಂಪಿಎಸ್ ವರ್ಗಾವಣೆಗಳು ನಡೆದಿವೆ.ಇದರ ಮೌಲ್ಯ 5.5 ಲಕ್ಷ ಕೋಟಿ ರೂ.ಗಳಾಗಿದೆ.
ಯುಪಿಐ ಪೇಮೆಂಟ್ಸ್ ಇಂಟರ್‌ಫೇಸ್ (UPI) ಎನ್ನುವುದು ನ್ಯಾಶನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಅಭಿವೃದ್ಧಿಪಡಿಸಿರುವ ಪೇಮೆಂಟ್ ಸಿಸ್ಟಮ್ ಆಗಿದ್ದು, 2016ರ ಏಪ್ರಿಲ್ 11ರಂದು ಆರಂಭವಾಯಿತು. 6 ವರ್ಷಗಳ ಹಿಂದೆ ಶುರುವಾದ ಯುಪಿಐ ಅನ್ನು ಮೊಬೈಲ್‌ಗಳಲ್ಲಿ ಎರಡು ಬ್ಯಾಂಕ್ ಖಾತೆಗಳ ನಡುವೆ ಹಣ ವರ್ಗಾವಣೆಗೆ ಬಳಸಬಹುದು. ಫೋನ್ ಪೇ, ಗೂಗಲ್ ಪೇ, ಪೇಟಿಂ, ಭೀಮ್ ಆಪ್ ಇತ್ಯಾದಿಗಳು ಯುಪಿಐ ತಂತ್ರಜ್ಞಾನವನ್ನು ಆಧರಿಸಿ ಸೇವೆ ನೀಡುತ್ತವೆ.
ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (UPI) ಪ್ಲಾಟ್‌ಫಾರ್ಮ್‌ನಲ್ಲಿ ಮುಂದಿನ ಮೂರು ವರ್ಷದಲ್ಲಿ ದಿನಕ್ಕೆ ಸರಾಸರಿ 100 ಕೋಟಿ ವರ್ಗಾವಣೆಗಳು (daily transactions) ನಡೆಯಲಿವೆ ಎಂದು ನ್ಯಾಶನಲ್ ಪೇಮೆಂಟ್ಸ್ ಕಾರ್ಪೊರೇಶನ್ ಆಫ್ ಇಂಡಿಯಾ (NPCI) ಸಂಸ್ಥೆಯ ವ್ಯವಸ್ಥಾಪಕ ಕಾರ್ಯಕಾರಿ ನಿರ್ದೇಶಕ ಮತ್ತು ಸಿಇಒ ದಿಲೀಪ್ ಅಸ್ಬೆ ತಿಳಿಸಿದ್ದಾರೆ.
ಯುಪಿಐ ಪೇಮೆಂಟ್ ವ್ಯವಸ್ಥೆಯ ಸಾಧ್ಯತೆಗಳು ಅಪಾರವಾಗಿದೆ. ಭಾರತದಂಥ ದೇಶದಲ್ಲಿ ಇದಕ್ಕೆ ಭವಿಷ್ಯ ಉಜ್ವಲವಾಗಿದೆ ಎಂದು ಅವರು ಹೇಳಿದರು. 2025ರ ವೇಳೆಗೆ ದಿನಕ್ಕೆ ಸರಾಸರಿ 100 ಕೋಟಿ ಯುಪಿಐ ವರ್ಗಾವಣೆಗಳು ನಡೆದರೆ ಅಚ್ಚರಿ ಇಲ್ಲ. ಖಂಡಿತವಾಗಿಯೂ ಸಾಧ್ಯವಿದೆ ಎಂದರು.
ಕಳೆದ 12 ತಿಂಗಳುಗಳಲ್ಲಿ ನಿತ್ಯ ಸರಾಸರಿ 36 ಕೋಟಿ ಯುಪಿಐ ವರ್ಗಾವಣೆಗಳು ನಡೆದಿವೆ ಎಂದು ಆರ್‌ಬಿಐನ ಇತ್ತೀಚಿನ ಅಂಕಿ ಅಂಶಗಳು ತಿಳಿಸಿವೆ.