Site icon Vistara News

UPI transactions : ಯುಪಿಐ ಬಳಕೆ ಗ್ರಾಹಕರಿಗೆ ಸಂಪೂರ್ಣ ಉಚಿತ ಎಂದ ಎನ್‌ಪಿಸಿಐ, ಹಾಗಾದರೆ 1.1% ಶುಲ್ಕ ಯಾರಿಗೆ?

UPI

UPI

ನವ ದೆಹಲಿ: ಬ್ಯಾಂಕ್‌ ಖಾತೆಗೆ ಲಿಂಕ್‌ ಹೊಂದಿರುವ ಯುಪಿಐ ಬಳಕೆಗೆ (UPI transactions) ಸಂಬಂಧಿಸಿ ಗ್ರಾಹಕರು ಮತ್ತು ವ್ಯಾಪಾರಿಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ. ಇದು ಉಚಿತ ಎಂದು ನ್ಯಾಶನಲ್‌ ಪೇಮೆಂಟ್ಸ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ (NPCI) ಬುಧವಾರ ಸ್ಪಷ್ಟೀಕರಣ ನೀಡಿದೆ. ಇದರದೊಂದಿಗೆ ಯುಪಿಐ ಮೂಲಕ ಹಣ ಪಾವತಿಗೆ ಶುಲ್ಕ ( Interchange fee ) ವಿಧಿಸಲಾಗುತ್ತದೆ ಎಂಬ ವದಂತಿಗಳಿಗೆ ತೆರೆ ಎಳೆದಿದೆ.

ಸಾಮಾನ್ಯವಾಗಿ ಪೇಟಿಎಂ, ಗೂಗಲ್‌ ಪೇ, ಫೋನ್‌ ಪೇ ಇತ್ಯಾದಿ ಯುಪಿಐ‌ ಆಧರಿತ ಆ್ಯಪ್‌ ಮೂಲಕ ನಡೆಯುವ ಹಣಕಾಸು ವರ್ಗಾವಣೆಗಳು ಬ್ಯಾಂಕ್‌ ಖಾತೆಗೆ ಲಿಂಕ್‌ ಹೊಂದಿರುತ್ತವೆ. 99.9% ವರ್ಗಾವಣೆಗಳು ಇಂಥದ್ದೇ ಆಗಿರುತ್ತವೆ. ಹಾಗೂ ಇವುಗಳು ಗ್ರಾಹಕರು ಮತ್ತು ವ್ಯಾಪಾರಿಗಳಿಗೆ ಸಂಪೂರ್ಣ ಉಚಿತವಾಗಿರುತ್ತದೆ ಎಂದು ಎನ್‌ಪಿಸಿಐ ತಿಳಿಸಿದೆ.

ಪ್ರಿ-ಪೇಯ್ಡ್‌ ಪೇಮೆಂಟ್‌ ಇನ್‌ಸ್ಟ್ರುಮೆಂಟ್‌ಗಳಿಗೆ ಮಾತ್ರ ಶುಲ್ಕ:

ಇತ್ತೀಚೆಗೆ ಪ್ರೀಪೇಯ್ಡ್‌ ಪೇಮೆಂಟ್‌ ಇನ್‌ಸ್ಟ್ರುಮೆಂಟ್ಸ್‌ಗಳಿಗೆ (PPI Wallets) ಯುಪಿಐ ಇಕೊಸಿಸ್ಟಮ್‌ ಭಾಗವಾಗಲು ಅನುಮತಿ ನೀಡಲಾಗಿದೆ. ಹೀಗಾಗಿ ಪಿಪಿಐ ಮರ್ಚೆಂಟ್‌ ಹಣಕಾಸು ವರ್ಗಾವಣೆಗೆ ಮಾತ್ರ ಇಂಟರ್‌ಚೇಂಜ್‌ ಶುಲ್ಕ ವಿಧಿಸಲು ಅವಕಾಶ ಇದೆ. ಇಲ್ಲೂ ಗ್ರಾಹಕರಿಗೆ ಮತ್ತು ವ್ಯಾಪಾರಿಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ ಎಂದು ಎನ್‌ಪಿಸಿಐ ತಿಳಿಸಿದೆ. ಹಾಗಾದರೆ ಯಾರು ಶುಲ್ಕ ಕೊಡಬೇಕು?

1.1 % ಶುಲ್ಕ ಪಾವತಿಸುವವರು ಯಾರು?

ಗಿಫ್ಟ್‌ ವೋಚರ್‌, ವ್ಯಾಲೆಟ್‌ ಇತ್ಯಾದಿ ಪ್ರೀಪೇಯ್ಡ್‌ ಪೇಮೆಂಟ್‌ ಇನ್‌ಸ್ಟ್ರುಮೆಂಟ್‌ಗಳ ಮೂಲಕ 2,000 ರೂ.ಗಿಂತ ಹೆಚ್ಚಿನ ಯುಪಿಐ ವರ್ಗಾವಣೆಗಳಿಗೆ ಸಂಬಂಧಿಸಿ ಗ್ರಾಹಕರು ಅಥವಾ ವ್ಯಾಪಾರಿಗಳಿಗೆ 1.1% ಶುಲ್ಕ ಅನ್ವಯವಾಗುವುದಿಲ್ಲ. ಬದಲಿಗೆ ಈ ಗಿಫ್ಟ್‌ ವೋಚರ್‌, ವ್ಯಾಲೆಟ್‌ ನೀಡುವ ಪೇಟಿಎಂ, ಓಲಾ ಫೈನಾನ್ಷಿಯಲ್‌ ಸರ್ವೀಸ್‌ ಮೊದಲಾದ ಕಂಪನಿಗಳು ಅಥವಾ ಸಂಸ್ಥೆಗಳು ಈ 1.1% ಶುಲ್ಕವನ್ನು ಪಾವತಿಸಬೇಕಾಗುತ್ತದೆ.

ವಿವಾದ ಸೃಷ್ಟಿಯಾಗಿದ್ದೇಕೆ?

ಗಿಫ್ಟ್ ಕಾರ್ಡ್‌, ವ್ಯಾಲೆಟ್‌ ಮತ್ತಿತರ ಪ್ರಿಪೇಯ್ಡ್‌ ಇನ್‌ಸ್ಟ್ರುಮೆಂಟ್‌ಗಳಲ್ಲಿ (Prepaid payment instruments transactions) 2000 ರೂ.ಗಿಂತ ಹೆಚ್ಚಿನ ಮೊತ್ತದ ಯುಪಿಐ ವರ್ಗಾವಣೆಗಳಿಗೆ 2023ರ ಏಪ್ರಿಲ್‌ 1ರಿಂದ 1.1% ಇಂಟರ್‌ಚೇಂಜ್‌ ಶುಲ್ಕ ಅನ್ವಯವಾಗುತ್ತದೆ ಎಂದು ವರದಿಯಾಗಿತ್ತು. ಆದರೆ ಈ ಶುಲ್ಕ ಯಾರಿಗೆ ಅನ್ವಯವಾಗುತ್ತದೆ ಎಂಬುದರ ಬಗ್ಗೆ ಗೊಂದಲ ಉಂಟಾಗಿತ್ತು. ಪ್ರತಿ ತಿಂಗಳೂ ಸರಾಸರಿ 800 ಕೋಟಿಗೂ ಹೆಚ್ಚು ಹಣಕಾಸು ವರ್ಗಾವಣೆಗಳು ಯುಪಿಐ ಮೂಲಕ ನಡೆಯುತ್ತಿರುವುದರಿಂದ ಗ್ರಾಹಕರಲ್ಲಿ ಗೊಂದಲ ಉಂಟಾಗಿತ್ತು. ಇದೀಗ ಎನ್‌ಪಿಸಿಐ ಗೊಂದಲಕ್ಕೆ ತೆರೆ ಎಳೆದಿದೆ. ಎನ್‌ಪಿಸಿಐ 2008ರಲ್ಲಿ ಸ್ಥಾಪನೆಯಾಗಿದ್ದು, ರಿಟೇಲ್‌ ಪೇಮೆಂಟ್‌ ಮತ್ತು ಸೆಟ್ಲ್‌ಮೆಂಟ್‌ ವ್ಯವಸ್ಥೆಗಳ ಒಕ್ಕೂಟ ವ್ಯವಸ್ಥೆಯಾಗಿದೆ. ಭಾರತದ ಡಿಜಿಟಲೀಕರಣದಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ.

Exit mobile version