Site icon Vistara News

ಅಮೆರಿಕಕ್ಕೆ ಆರ್ಥಿಕ ಹಿಂಜರಿತದ ಅಪಾಯ

ವಾಷಿಂಗ್ಟನ್:‌ ಅಮೆರಿಕದಲ್ಲಿ ಆರ್ಥಿಕ ಹಿಂಜರಿತ ಉಂಟಾಗುವ ಅಪಾಯ ಸಾಧ್ಯತೆ ಅತ್ಯಂತ ದಟ್ಟವಾಗಿದ್ದು, ಇದನ್ನು ಎದುರಿಸಲು ಕಂಪನಿಗಳು ಮತ್ತು ಗ್ರಾಹಕರು ಸಜ್ಜಾಗಬೇಕು ಎಂದು ಗೋಲ್ಡ್‌ಮನ್‌ ಸ್ಯಾಕ್ಸ್‌ನ ಹಿರಿಯ ಅಧ್ಯಕ್ಷ ಲ್ಯೋಡ್‌ ಬ್ಲಾಂಕ್‌ಫಿನ್‌ ಎಚ್ಚರಿಸಿದ್ದಾರೆ.

ಅಮೆರಿಕದ ಬಹುರಾಷ್ಟ್ರೀಯ ಹಣಕಾಸು ಸಂಸ್ಥೆ ಗೋಲ್ಡ್‌ಮನ್‌ ಸ್ಯಾಕ್ಸ್‌ ಅಧ್ಯಕ್ಷರು ಸಿಬಿಎಸ್‌ ವಾಹಿನಿಯ “ಫೇಸ್‌ ದಿ ನೇಶನ್‌ʼ ಕಾರ್ಯಕ್ರಮದಲ್ಲಿ ಭಾಗವಹಿಸಿ ಈ ಎಚ್ಚರಿಕೆಯ ಮಾತುಗಳನ್ನಾಡಿದ್ದಾರೆ.

ಹಿಂಜರಿತ ತಪ್ಪಿಸುವುದು ಕಷ್ಟ
ಅಮೆರಿಕಕ್ಕೆ ಸಂಭವನೀಯ ಆರ್ಥಿಕ ಹಿಂಜರಿತವನ್ನು ತಪ್ಪಿಸುವುದು ಬಲು ಕಷ್ಟಕರ. ಹಣದುಬ್ಬರವನ್ನು ಪ್ರಬಲ ಸಾಧನಗಳ ಮೂಲಕ ಹತ್ತಿಕ್ಕಿದರೆ ಮಾತ್ರ ಆರ್ಥಿಕ ಹಿಂಜರಿತವನ್ನು ತಪ್ಪಿಸಬಹುದು ಎಂದು ಲ್ಯೋಡ್‌ ಬ್ಲಾಂಕ್‌ ಫಿನ್‌ ತಿಳಿಸಿದ್ದಾರೆ.

ತೈಲ ದರ ಏರಿಕೆ ಎಫೆಕ್ಟ್
ಅಮೆರಿಕದಲ್ಲೂ ತೈಲ ದರಗಳು ಜಿಗಿದಿದ್ದು, ಬಳಕೆದಾರರ ಮೇಲೆ ಪ್ರತಿಕೂಲ ಪ್ರಭಾವ ಬೀರಿದೆ. ಅಲ್ಲಿನ ಗ್ರಾಹಕರ ವಿಶ್ವಾಸದ ಸೂಚ್ಯಂಕ 2011ರಿಂದೀಚೆಗಿನ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಕಳೆದ ಏಪ್ರಿಲ್‌ನಲ್ಲಿ ಶೇ.8.3ರಷ್ಟು ಬೆಲೆ ಏರಿಕೆ ಸಂಭವಿಸಿದ್ದು, ಬೈಡೆನ್‌ ಆಡಳಿತಕ್ಕೆ ಸವಾಲಾಗಿ ಪರಿಣಮಿಸಿದೆ.

ಜಿಡಿಪಿ ಬೆಳವಣಿಗೆ ಇಳಿಕೆ ನಿರೀಕ್ಷೆ
ಗೋಲ್ಡ್‌ಮನ್‌ ಸ್ಯಾಕ್ಸ್‌ ತಜ್ಞರ ಪ್ರಕಾರ ಅಮೆರಿಕದಲ್ಲಿ ಜಿಡಿಪಿ ಬೆಳವಣಿಗೆ ಈ ವರ್ಷ ಶೇ.2.4ಕ್ಕೆ ಇಳಿಯಲಿದೆ. ಕಳೆದ ವರ್ಷ ಶೇ.2.6 ಇತ್ತು. ಆರ್ಥಿಕ ಬೆಳವಣಿಗೆ ಮುಗ್ಗರಿಸುವುದರಿಂದ ನಿರುದ್ಯೋಗದ ಪ್ರಮಾಣ ಏರಿಕೆಯಾಗಲಿದೆ. ಚೀನಾದಲ್ಲಿ ಲಾಕ್‌ ಡೌನ್‌ ಸಡಿಲವಾದರೆ ಸರಕುಗಳ ಪೂರೈಕೆ ಸರಾಗವಾಗಿ ಹಣದುಬ್ಬರ ತಗ್ಗಬಹುದು ಎಂದೂ ತಿಳಿಸಿದೆ.
ಅಮೆರಿಕನ್ನರು ಜಾಗತೀಕರಣದ ಲಾಭವನ್ನು ಬಹುಕಾಲದಿಂದ ಪಡೆದಿದ್ದರು. ಕಡಿಮೆ ದರದಲ್ಲಿ ಸರಕು ಮತ್ತು ಸೇವೆಗಳನ್ನು ಗಳಿಸಿ ಬೆಲೆ ಏರಿಕೆಯನ್ನು ನಿಯಂತ್ರಿಸಿದ್ದರು. ಆದರೆ ಎಷ್ಟು ಕಾಲ ಗಡಿಯಾಚೆಗಿನ ಪೂರೈಕೆಯನ್ನು ಅವಲಂಬಿಸಬಹುದು? ಅದನ್ನು ಅಮೆರಿಕ ನಿಯಂತ್ರಿಸಲೂ ಸಾಧ್ಯ ಇಲ್ಲ ಎಂದು ಗೋಲ್ಡ್‌ ಮನ್‌ ಸ್ಯಾಕ್ಸ್‌ ಅಧ್ಯಕ್ಷರು ಹೇಳಿದ್ದಾರೆ.

ಆರ್ಥಿಕ ಹಿಂಜರಿತ ಎಂದರೇನು?
ಯಾವುದೇ ದೇಶದಲ್ಲಿ ಸತತ ಎರಡು ತ್ರೈಮಾಸಿಕಗಳ ಅವಧಿಯಲ್ಲಿ ಆರ್ಥಿಕ ಬೆಳವಣಿಗೆ ಅಥವಾ ಜಿಡಿಪಿ ಕುಸಿತಕ್ಕೀಡಾದರೆ ಅದನ್ನು ಆರ್ಥಿಕ ಹಿಂಜರಿತ ಎನ್ನುತ್ತಾರೆ. ಒಂದು ತ್ರೈಮಾಸಿಕದಲ್ಲಿ 3 ತಿಂಗಳು ಇರುತ್ತದೆ. ಆದ್ದರಿಂದ ಸತತ 6 ತಿಂಗಳುಗಳ ಕಾಲ ಆರ್ಥಿಕ ಬೆಳವಣಿಗೆ ಕುಸಿದರೆ ಅದು ಹಿಂಜರಿತವಾಗುತ್ತದೆ.

ಭಾರತ 2020-21ರಲ್ಲಿ ಇಂಥ ತಾಂತ್ರಿಕ ಆರ್ಥಿಕ ಹಿಂಜರಿತಕ್ಕೀಡಾಗಿತ್ತು. ಇದೀಗ ಅಮೆರಿಕದಲ್ಲಿ ಆರ್ಥಿಕ ಹಿಂಜರಿತದ ಅಪಾಯ ಕಾಣಿಸಿದೆ.
ಆರ್ಥಿಕ ಹಿಂಜರಿತದ ಅವಧಿಯಲ್ಲಿ ಭಾರಿ ನಿರುದ್ಯೋಗ, ವೇತನ ಕಡಿತ, ಬೆಳವಣಿಗೆಯ ಅವಕಾಶಗಳ ಕೊರತೆ ಇತ್ಯಾದಿ ಬಿಕ್ಕಟ್ಟು ಉಂಟಾಗುತ್ತದೆ. ಖಾಸಗಿ ಹೂಡಿಕೆ, ಉಳಿತಾಯಗಳ ಮೇಲೆ ಪ್ರತಿಕೂಲ ಪ್ರಭಾವ ಬೀರುತ್ತವೆ.

ಶ್ರೀಮಂತರಿಗೆ ತೆರಿಗೆ, ಬೈಡೆನ್‌ ಟ್ವೀಟ್‌

ಈ ನಡುವೆ ಅಮೆರಿಕ ಅಧ್ಯಕ್ಷ ಜೊ ಬೈಡೆನ್‌ ಅವರು ಆಗರ್ಭ ಶ್ರೀಮಂತರಿಗೆ ಹೆಚ್ಚಿನ ತೆರಿಗೆ ವಿಧಿಸುವ ಮೂಲಕ ಬೆಲೆ ಏರಿಕೆಯನ್ನು ತಗ್ಗಿಸಬಹುದು ಎಂದು ಟ್ವೀಟ್‌ ಮಾಡಿದ್ದಾರೆ. ಈ ಟ್ವೀಟ್‌ ಅಮೆರಿಕದ ಕಾರ್ಪೊರೇಟ್‌ ವಲಯದಲ್ಲಿ ಸಂಚಲನ ಮೂಡಿಸಿದ್ದು, ಅಮೆಜಾನ್‌ ಸ್ಥಾಪಕ ಜೆಫ್‌ ಬಿಜೋಸ್‌ ತೀವ್ರ ತರಾಟಗೆ ತೆಗೆದುಕೊಂಡಿದ್ದಾರೆ. ಇದು ಜನರನ್ನು ದಾರಿ ತಪ್ಪಿಸುವ ಟ್ವೀಟ್‌ ಎಂದು ಟೀಕಿಸಿದ್ದಾರೆ.

ಇದನ್ನೂ ಓದಿಷೇರುಪೇಟೆಯಲ್ಲಿ ಕರಗಿದ 11 ಲಕ್ಷ ಕೋಟಿ ಡಾಲರ್‌

Exit mobile version