ವಾಷಿಂಗ್ಟನ್: ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಅಮೆರಿಕ ಡಿಫಾಲ್ಟ್ ಆಗುವುದನ್ನು ತಪ್ಪಿಸಲು ಸಾಲದ ಮಿತಿಯನ್ನು ಹೆಚ್ಚಿಸಿದೆ. ಈ ಕುರಿತ ವಿಧೇಯಕವನ್ನು ಅಮೆರಿಕದ ಸಂಸತ್ತು ಅಂಗೀಕರಿಸಿದೆ. ಇದರ ಪರಿಣಾಮವಾಗಿ ಅಮೆರಿಕ ಸರ್ಕಾರದ ಎದುರಿದ್ದ 31.4 ಲಕ್ಷ ಕೋಟಿ ಡಾಲರ್ ಸಾಲದ ಮಿತಿ ತೆರವಾಗಿದೆ. ( 31.4 trillion debt ceiling) ಒಂದು ವೇಳೆ ಈ ಮಿತಿಯನ್ನು ವಿಸ್ತರಿಸದಿದ್ದರೆ, ತೆರವುಗೊಳಿಸದಿರುತ್ತಿದ್ದರೆ, ಇತಿಹಾಸದಲ್ಲೇ ಮೊದಲ ಬಾರಿಗೆ ಅಮೆರಿಕ ಸಾಲ ಮರು ಪಾವತಿಸಲು ವಿಫಲವಾಗಿ ಡಿಫಾಲ್ಟ್ ಆಗುವ ಸಾಧ್ಯತೆ ಉಂಟಾಗಿತ್ತು.
ಸೆನೆಟ್ 63-36 ಮತಗಳಿಂದ ಈ ಕುರಿತ ವಿಧೇಯಕವನ್ನು ಬುಧವಾರ ಅಂಗೀಕರಿಸಿತು. ಸಂಸತ್ತು ಸಾಲದ ಮಿತಿಯನ್ನು ಜೂನ್ 5ರೊಳಗೆ ವಿಸ್ತರಿಸದಿದ್ದರೆ ಸಾಲದ ಬಾಕಿ ತೀರಿಸಲು ಸಾಧ್ಯವಾಗದು ಎಂದು ಅಮೆರಿಕದ ಹಣಕಾಸು ಇಲಾಖೆ ಎಚ್ಚರಿಸಿತ್ತು. 2011ರಲ್ಲೂ ಅಮೆರಿಕ ಡಿಫಾಲ್ಟ್ ಆಗುವ ಸನ್ನಿವೇಶ ಎದುರಿಸಿತ್ತು.
ಅಮೆರಿಕದ ಸಾಲದ ಬಿಕ್ಕಟ್ಟು ಅಕ್ಷರಶಃ ಅದರ ನಿಯಂತ್ರಣ ತಪ್ಪಿತ್ತು. ಜಗತ್ತಿನ ದೊಡ್ಡಣ್ಣನಂತಿದ್ದ ಅಮೆರಿಕ 31 ಟ್ರಿಲಿಯನ್ ಡಾಲರ್ (ಅಂದಾಜು 2,542 ಲಕ್ಷ ಕೋಟಿ ರೂ.) ರಾಕೆಟ್‌ನಂತೆ ಸಾಲದ ಹೊರೆ ಏರುತ್ತಿದ್ದು, ಬೈಡೆನ್ ಸರ್ಕಾರಕ್ಕೆ ಭಾರಿ ತಲೆನೋವಾಗಿದೆ. 1990ಕ್ಕೆ ಹೋಲಿಸಿದರೆ ಅಮೆರಿಕದ ಸಾಲದ ಪ್ರಮಾಣ ಹತ್ತು ಪಟ್ಟು ಏರಿದೆ. 2000ಕ್ಕೆ ಹೋಲಿಸಿದರೆ 5 ಪಟ್ಟು ಹೆಚ್ಚಳವಾಗಿದೆ. ವರ್ಷಕ್ಕೆ 600 ಶತಕೋಟಿ ಡಾಲರ್ ಕೇವಲ ಬಡ್ಡಿಯಾಗಿ ಕಟ್ಟಬೇಕಾಗುತ್ತದೆ. ಸದ್ಯಕ್ಕೆ ಡಿಫಾಲ್ಟ್ ಹಾಗೂ ಭವಿಷ್ಯದಲ್ಲಿ ದಿವಾಳಿ ಆಗುವುದನ್ನು ತಪ್ಪಿಸಲು ಅಧ್ಯಕ್ಷ ಜೋ ಬೈಡೆನ್ ಶತಪ್ರಯತ್ನ ನಡೆಸಿದ್ದರು.
ಅಮೆರಿಕದಲ್ಲಿ ಆಗಿದ್ದೇನು?
ಹಣದುಬ್ಬರವನ್ನು ನಿಯಂತ್ರಿಸಲು ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿ ದರವನ್ನು ಏರಿಸಿತ್ತು. ಇದರ ಪರಿಣಾಮ ಸಾಲದ ಬೆಟ್ಟವೂ ಬೆಳೆದಿದೆ. ಹೊಸ ಸಾಲ ತೆಗೆಯಲು ಕಾನೂನಿನ ಅಡಚಣೆಗಳನ್ನು ನಿವಾರಿಸಬೇಕಾಗಿದೆ. ಈ ಕಸರತ್ತನ್ನು ಬೈಡೆನ್ ಸರ್ಕಾರ ನಡೆಸುತ್ತಿದೆ. ಆದರೆ ಇದರ ಪರಿಣಾಮಗಳು ಜಾಗತಿಕ ಆರ್ಥಿಕತೆಯ ಮೇಲೆ ಹೇಗೆ ಪ್ರಭಾವ ಬೀರಲಿದೆಯೇ ಎಂಬುದು ಕುತೂಹಲ ಮೂಡಿಸಿದೆ.
ಅಮೆರಿಕದ ಡಾಲರ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ರಿಸರ್ವ್ ಕರೆನ್ಸಿಯಾಗಿ ಪ್ರಾಬಲ್ಯ ಮೆರೆಯುತ್ತಿದೆ. ಆದರೆ ಈ ಪಟ್ಟವನ್ನು ಸಾಲದ ಬಿಕ್ಕಟ್ಟಿನ ಪರಿಣಾಮ ಬಿಟ್ಟುಕೊಡಲಿದೆಯೇ ಎಂಬ ಪ್ರಶ್ನೆ ಉಂಟಾಗಿದೆ. ಮುಖ್ಯವಾಗಿ ಅಮೆರಿಕದ ಆರ್ಥಿಕ ಬಿಕ್ಕಟ್ಟು ಭಾರತದ ಷೇರು ಮಾರುಕಟ್ಟೆ, ಹಣಕಾಸು ವ್ಯವಸ್ಥೆಯ ಮೇಲೆ ಯಾವ ರೀತಿ ಪರಿಣಾಮ ಬೀರಬಹುದು? ಅಮೆರಿಕ ಆರ್ಥಿಕ ಹಿಂಜರಿತಕ್ಕೆ ಸಿಲುಕಲಿದೆಯೇ ಎಂಬ ಆತಂಕವೂ ಸೃಷ್ಟಿಯಾಗಿದೆ.
ಸಾಲದ ಮಿತಿ ಹೆಚ್ಚಿಸಲು ಅಮೆರಿಕ ನಿರ್ಧಾರ:
ಅಮೆರಿಕ ಸರ್ಕಾರ ತೆಗೆದುಕೊಳ್ಳಬಹುದಾದ ಗರಿಷ್ಠ ಸಾಲದ ಮಿತಿಯನ್ನು ಡೆಟ್ ಸೈಲಿಂಗ್ ಲಿಮಿಟ್ (Debt ceiling limit) ಎನ್ನುತ್ತಾರೆ. ನಿಮ್ಮ ಕ್ರೆಡಿಟ್ ಕಾರ್ಡ್‌ನಲ್ಲಿ ಸಾಲ ಪಡೆಯಲು ಒಂದು ಮಿತಿ ಇರುತ್ತದೆಯಲ್ಲವೇ? ಅದೇ ರೀತಿ ಅಮೆರಿಕ ಸರ್ಕಾರಕ್ಕೂ ಇದೆ. ಒಂದು ವೇಳೆ ಕ್ರೆಡಿಟ್ ಕಾರ್ಡ್ ಮೂಲಕ ಹೆಚ್ಚಿನ ಸಾಲ ಪಡೆಯಲು ಏನು ಮಾಡಬಹುದು? ಕ್ರೆಡಿಟ್ ಲಿಮಿಟ್ ಅನ್ನು ಹೆಚ್ಚಿಸುವಂತೆ ಬ್ಯಾಂಕಿಗೆ ಮನವಿ ಮಾಡಬಹುದು, ಅಲ್ಲವೇ ಅದೇ ರೀತಿ ಅಮೆರಿಕ ಸರ್ಕಾರ ಇದೀಗ ತನ್ನ ಸಾಲದ ಮಿತಿಯನ್ನು ಹೆಚ್ಚಿಸಿ ಡಿಫಾಲ್ಟ್ ಅಥವಾ ಭವಿಷ್ಯದಲ್ಲಿ ದಿವಾಳಿಯಾಗುವುದನ್ನು ತಪ್ಪಿಸಿದೆ. ಇಲ್ಲಿಯವರೆಗೆ 31.40 ಟ್ರಿಲಿಯನ್ ಡಾಲರ್‌ನ ಮಿತಿ ಇದೆ. ಈಗಾಗಲೇ ಅಮೆರಿಕ 31.48 ಟ್ರಿಲಿಯನ್ ಡಾಲರ್ ಸಾಲವನ್ನು ಅಮೆರಿಕ ಹೊಂದಿದೆ. 2023ರ ಜನವರಿ 19ರಂದು ಅಮೆರಿಕ ಸರ್ಕಾರ ಸಾಲದ ಗರಿಷ್ಠ ಮಿತಿಯನ್ನು ಮುಟ್ಟಿತ್ತು. ಹೀಗಾಗಿ ಹೊಸ ಸಾಲ ಹುಟ್ಟುತ್ತಿಲ್ಲ. ಹೊಸ ಸಾಲ ಬೇಕಿದ್ದರೆ ಕ್ರೆಡಿಟ್ ಲಿಮಿಟ್ ಅನ್ನು 2023ರ ಜೂನ್ 5ರೊಳಗೆ ವಿಸ್ತರಿಸಲೇಬೇಕಿತ್ತು.
ಭಾರತದ ಷೇರು ಮಾರುಕಟ್ಟೆ ಮೇಲೆ ಪರಿಣಾಮ?
ಅಮೆರಿಕದಲ್ಲಿ ಆರ್ಥಿಕ ಬಿಕ್ಕಟ್ಟು ಬಗೆಹರಿಯದಿದ್ದರೆ ಭಾರತದ ಷೇರು ಮಾರುಕಟ್ಟೆ ಮೇಲೆ ನಕಾರಾತ್ಮಕ ಪ್ರಭಾವ ಬೀರಬಹುದು. ಅಮೆರಿಕದಲ್ಲಿ ಬಾಂಡ್‌ಗಳ ಬಡ್ಡಿ ದರ ಹೆಚ್ಚಿದರೆ ಹೂಡಿಕೆದಾರರು ಡಾಲರ್‌ನಲ್ಲಿ ಹೂಡಿಕೆಗೆ ಆಕರ್ಷಿತರಾಗುವ ಸಾಧ್ಯತೆ ಇದೆ. ಆಗ ಷೇರು ಮಾರುಕಟ್ಟೆಯಿಂದ ಹೂಡಿಕೆಯ ಹೊರ ಹರಿವು ಹೆಚ್ಚಬಹುದು. ಅಂದಹಾಗೆ ಅಮೆರಿಕ ಈ ರೀತಿ ಸಾಲದ ಮಿತಿಯನ್ನು ಹೆಚ್ಚಿಸುತ್ತಾ ಹೋಗುವುದು ಇದು ಹೊಸತಲ್ಲ. ಈ ಹಿಂದೆ 2013ರಲ್ಲಿಯೂ ವಿಸ್ತರಿಸಿತ್ತು. ಇತ್ತೀಚೆಗೆ ಅಂದರೆ 2021ರ ಡಿಸೆಂಬರ್‌ನಲ್ಲೂ ವಿಸ್ತರಿಸಲಾಗಿತ್ತು.
ಇದನ್ನೂ ಓದಿ: 9 Years of PM Modi : ಅಮೆರಿಕದ ಕಂಪನಿ ಮೋರ್ಗಾನ್ ಸ್ಟಾನ್ಲಿ ಮೋದಿ ಸರ್ಕಾರದ ಬಗ್ಗೆ ಏನು ಹೇಳಿದೆ? ಇಲ್ಲಿದೆ ಪಟ್ಟಿ