ಭಾರತೀಯ ರೈಲ್ವೆ ದಕ್ಷಿಣ ಭಾರತದ ಮೊಟ್ಟ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ನವೆಂಬರ್ 12ರಿಂದ ಆರಂಭಿಸಿದೆ. ಚೆನ್ನೈ-ಬೆಂಗಳೂರು-ಮೈಸೂರು ನಡುವೆ ಸಂಚರಿಸುತ್ತಿರುವ ಸೆಮಿ ಹೈಸ್ಪೀಡ್ ರೈಲು ಗಂಟೆಗೆ 180 ಕಿ.ಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ. (ವಿಸ್ತಾರ Explainer | Vande Bharat Express ) ಹೀಗಿದ್ದರೂ, ಸದ್ಯಕ್ಕೆ ಸರಾಸರಿ ಗಂಟೆಗೆ 75-77 ಕಿ.ಮೀ ವೇಗದಲ್ಲಿ ಮಾತ್ರ ಸಂಚರಿಸುತ್ತದೆ. ಇದಕ್ಕೆ ಕಾರಣ ಹಳಿಯ ಪರಿಸ್ಥಿತಿ.
ದೇಶದಲ್ಲಿನ ಐದು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಸರಾಸರಿ ವೇಗವನ್ನು (ಗಂಟೆಗೆ 130 ಕಿ.ಮೀ) ಹೋಲಿಸಿದರೆ, ಚೆನ್ನೈ-ಮೈಸೂರು ವಂದೇ ಭಾರತ್ ಎಕ್ಸ್‌ಪ್ರೆಸ್ ಮಂದಗತಿಯಲ್ಲಿ ಚಲಿಸುತ್ತದೆ. ಈ ಹಿನ್ನೆಲೆಯಲ್ಲಿ ಮುಂದಿನ ಆರು ತಿಂಗಳಿನಲ್ಲಿ ಚೆನ್ನೈ-ಮೈಸೂರು ವಂದೇ ಭಾರತ್ ಎಕ್ಸ್‌ಪ್ರೆಸ್ ವೇಗವನ್ನು ಹೆಚ್ಚಿಸಲು ರೈಲ್ವೆ ಇಲಾಖೆ ಯೋಜಿಸಿದೆ.
ನವ ದೆಹಲಿ-ವಾರಾಣಸಿ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಟಾಪ್ ಸರಾಸರಿ ವೇಗ ಗಂಟೆಗೆ 95 ಕಿ.ಮೀ ಆಗಿದೆ. ಮುಂಬಯಿ ಸೆಂಟ್ರಲ್-ಗಾಂಧಿನಗರದ್ದು ಗಂಟೆಗೆ 84 ಕಿ.ಮೀ, ನವ ದೆಹಲಿ-ಶ್ರೀಮಾತಾ ವೈಷ್ಣೋ ದೇವಿ ಕಾತ್ರಾ ವಂದೇ ಭಾರತ್ ಎಕ್ಸ್‌ಪ್ರೆಸ್‌ನದ್ದು 82 ಕಿ.ಮೀ ಮತ್ತು ನವ ದೆಹಲಿ- ಅಂಬ್ ಅದೌರಾ ವಂದೇ ಭಾರತ್ ಎಕ್ಸ್‌ಪ್ರೆಸ್‌ನದ್ದು ಸರಾಸರಿ 79 ಕಿ.ಮೀ ವೇಗವಾಗಿದೆ.
ವಂದೇ ಭಾರತ್ ಎಕ್ಸ್‌ಪ್ರೆಸ್ ವೇಗ ಹೆಚ್ಚಿಸಲು ಸಿದ್ಧತೆ ಶುರು
ಚೆನ್ನೈ-ಬೆಂಗಳೂರು ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಗರಿಷ್ಠ 110 ಕಿ.ಮೀ ವೇಗದಲ್ಲಿ ಸಂಚರಿಸಲು ಅನುಮತಿ ನೀಡಲಾಗಿದೆ. ಇದನ್ನು 130 ಕಿ.ಮೀಗೆ ಹೆಚ್ಚಿಸಲು ಕಾಮಗಾರಿ ನಡೆಯುತ್ತಿದೆ. ಚೆನ್ನೈ-ಅರಕೋಣಮ್ ಸೆಕ್ಷನ್‌ನಲ್ಲಿ ಈಗಾಗಲೇ ಕೆಲಸವನ್ನು ಪೂರ್ಣಗೊಳಿಸಲಾಗಿದೆ. ಭಾರತೀಯ ರೈಲ್ವೆಯ ದಕ್ಷಿಣ ರೈಲ್ವೆ ವಲಯವು ಈ ಸಂಬಂಧ ಕಾರ್ಯಪ್ರವೃತ್ತವಾಗಿದೆ. ಅರಕೋಣಮ್ -ಜೋಲಾರ್‌ಪೇಟೈ -ಬೆಂಗಳೂರು ಸೆಕ್ಷನ್‌ನಲ್ಲಿ ಗಂಟೆಗೆ ೧೩೦ ಕಿ.ಮೀ ವೇಗ ಹೆಚ್ಚಿಸಲು ಕಾಮಗಾರಿ ನಡೆಯುತ್ತಿದೆ. 2023ರ ಏಪ್ರಿಲ್ ವೇಳೆಗೆ ಕಾಮಗಾರಿ ಮುಕ್ತಾಯವಾಗುವ ಸಾಧ್ಯತೆ ಇದೆ. ಈ ಕೆಲಸ ಪೂರ್ಣವಾದ ಬಳಿಕ ರೈಲಿನ ಸರಾಸರಿ ವೇಗ ವೃದ್ಧಿಸಲಿದೆ. ಪ್ರಯಾಣಿಕರ ಸಮಯ ಉಳಿತಾಯವಾಗಲಿದೆ ಎಂದು ದಕ್ಷಿಣ ರೈಲ್ವೆ ವಲಯ ತಿಳಿಸಿದೆ. ಕೇವಲ ವಂದೇ ಭಾರತ್ ಮಾತ್ರವಲ್ಲದೆ, ಇತರ ರೈಲುಗಳ ವೇಗ ಹೆಚ್ಚಿಸಲೂ ಹಾದಿ ಸುಗಮವಾಗಲಿದೆ.
ಪ್ರಯಾಣಿಕರ ಸಂಖ್ಯೆ ಹೆಚ್ಚಳ ನಿರೀಕ್ಷೆ
ರೈಲ್ವೆ ಪ್ರಕಾರ ವಂದೇ ಭಾರತ್ ಸೇವೆಯಿಂದ ರೈಲ್ವೆಯನ್ನು ಬಳಸುವ ಪ್ರಯಾಣಿಕರ ಸಂಖ್ಯೆ ವೃದ್ಧಿಸಲಿದೆ. ಮುಖ್ಯವಾಗಿ ನಗರಗಳ ನಡುವೆ ನಿಯಮಿತವಾಗಿ ಪ್ರಯಾಣ ಉದ್ಯಮಿಗಳು, ವರ್ತಕರ ಓಡಾಟ ಕೂಡ ರೈಲ್ವೆಯಲ್ಲಿ ವೃದ್ಧಿಸಲಿದೆ. ಚೆನ್ನೈ-ಬೆಂಗಳೂರು-ಮೈಸೂರು ಕಾರಿಡಾರ್ ವ್ಯಾಪ್ತಿಯಲ್ಲಿ ಈ ಬದಲಾವಣೆ ಹೆಚ್ಚಾಗಿ ಗಮನಿಸಬಹುದು. ವಂದೇ ಭಾರತ್ ರೈಲು, ಚೆನ್ನೈ-ಬೆಂಗಳೂರು (336 ಕಿ.ಮೀ) ನಡುವೆ 4 ಗಂಟೆ ಮತ್ತು 30 ನಿಮಿಷದಲ್ಲಿ ಸಂಚರಿಸಲಿದೆ. ಚೆನ್ನೈ-ಮೈಸೂರು ನಡುವೆ ೬ ಗಂಟೆ ಮತ್ತು 40 ನಿಮಿಷಕ್ಕೆ ಸಂಚರಿಸಲಿದೆ. ಶತಾಬ್ದಿ ಎಕ್ಸ್‌ಪ್ರೆಸ್ ರೈಲಿಗಿಂತಲೂ ಹೆಚ್ಚಿನ ವೇಗ ಸಿಗಲಿದೆ. ಶತಾಬ್ದಿ ಎಕ್ಸ್‌ಪ್ರೆಸ್, ಚೆನ್ನೈ-ಬೆಂಗಳೂರು ನಡುವೆ ೪ ಗಂಟೆ 45 ನಿಮಿಷದಲ್ಲಿ ಸಂಚರಿಸುತ್ತದೆ. ಚೆನ್ನೈ-ಮೈಸೂರು ನಡುವೆ 7 ಗಂಟೆ ಸಮಯವನ್ನು ತೆಗೆದುಕೊಳ್ಳುತ್ತದೆ.
ಚೆನ್ನೈ-ಮೈಸೂರಿಗೆ 1,200 ರೂ, ಮೈಸೂರು-ಚೆನ್ನೈಗೆ 1,365 ರೂ. ಈ ವ್ಯತ್ಯಾಸ ಏಕೆ?
ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಟಿಕೆಟ್ ದರವು, (chair car fare) ಚೆನ್ನೈನಿಂದ ಮೈಸೂರಿಗೆ 1,200 ರೂ.ಗಳಾಗಿದೆ. ಆದರೆ ಮೈಸೂರಿನಿಂದ ಚೆನ್ನೈಗೆ 1,365 ರೂ.ಗಳಾಗಿದೆ. ಇದಕ್ಕೆ ಕಾರಣವೇನು? ರೈಲು ಬೆಳಗ್ಗೆ 5.50ಕ್ಕೆ ಚೆನ್ನೈನಿಂದ ಮೈಸೂರಿನತ್ತ ಹೊರಡುತ್ತದೆ. ಬೆಳಗ್ಗೆ ಪ್ರಯಾಣಿಕರಿಗೆ ಉಪಾಹಾರ ಸಿಗುತ್ತದೆ. ರೈಲು ಮೈಸೂರಿಗೆ ಮಧ್ಯಾಹ್ನ 12.20ಕ್ಕೆ ತಲಪುತ್ತದೆ. ಹಾಗೂ ಮೈಸೂರಿನಿಂದ ಮಧ್ಯಾಹ್ನ 1.05 ಕ್ಕೆ ಹೊರಡುತ್ತದೆ. ಹೀಗೆ ಮಧ್ಯಾಹ್ನ ಮೈಸೂರಿನಿಂದ ಚೆನ್ನೈಗೆ ಹಿಂತಿರುಗುವಾಗ ಭೋಜನ ವ್ಯವಸ್ಥೆ ಇದೆ. ಹೀಗಾಗಿ ಮೈಸೂರಿನಿಂದ ಚೆನ್ನೈಗೆ ದರ ಹೆಚ್ಚು.
ಈ ಸೆಮಿ ಹೈಸ್ಪೀಡ್ ರೈಲುಗಳನ್ನು ಮೇಕ್ ಇನ್ ಇಂಡಿಯಾ ಅಡಿಯಲ್ಲಿ ಚೆನ್ನೈನ ರೈಲ್ವೆ ಬೋಗಿ ಕಾರ್ಖಾನೆಯಲ್ಲಿ ತಯಾರಿಸಲಾಗುತ್ತಿದೆ. ಪ್ರಯಾಣಿಕರಿಗೆ ಉತ್ತಮ ಗುಣಮಟ್ಟದ ಸೇವೆ ಇಲ್ಲಿ ಸಿಗುತ್ತದೆ. ಅತ್ಯಾಧುನಿಕ ಸುರಕ್ಷತಾ ತಂತ್ರಜ್ಞಾನವನ್ನು ಇದು ಒಳಗೊಂಡಿದೆ. ಕವಚ್ ಎಂಬ Train collision avoidance system ಅನ್ನು ಹೊಂದಿದೆ.
ವಂದೇ ಭಾರತ್ ರೈಲಿನ ವಿಶೇಷಗಳೇನು?
ವಂದೇ ಭಾರತ್ ರೈಲಿನಲ್ಲಿ ಸ್ವಯಂಚಾಲಿತ ಬಾಗಿಲುಗಳಿರುತ್ತವೆ. ಮನರಂಜನೆಯ ಉದ್ದೇಶಕ್ಕೆ ಹಾಟ್ ಸ್ಪಾಟ್ ವೈ-ಫೈ ಸೌಲಭ್ಯ ಸಿಗುತ್ತದೆ. ಸೀಟುಗಳು ಸುಖಾಸೀನ ಕಲ್ಪಿಸುತ್ತವೆ. ಎಲ್ಲ ಶೌಚಾಲಯಗಳು ಬಯೊ-ವಾಕ್ಯೂಮ್ ಮಾದರಿಯದ್ದಾಗಿದೆ. ಅಡುಗೆ ಕೋಣೆಯೂ ಇದ್ದು, ಬಿಸಿ ಊಟ, ಬಿಸಿ ಮತ್ತು ತಣ್ಣೀರು ವಿತರಣೆಯ ಸೌಲಭ್ಯವಿದೆ. ಪ್ರತಿ ಬೋಗಿಯಲ್ಲೂ ವೈ-ಫೈ ಕಂಟೆಂಟ್ ಸಿಗುತ್ತದೆ. ಪ್ರತಿ ಕೋಚ್‌ನಲ್ಲೂ 32 ಇಂಚಿನ ಸ್ಕ್ರೀನ್ ಇರುತ್ತದೆ. ವೀಕ್ಷಕರಿಗೆ ನ್ಯೂಸ್ ಹಾಗೂ ಇನ್ಫೋಟೈನ್‌ಮೆಂಟ್ ದೊರೆಯುತ್ತದೆ. ವಿಕಲಚೇತನರಿಗೆ ಸೀಟ್ ಹ್ಯಾಂಡಲ್, ಬ್ರೈಲ್ ಲಿಪಿಯಲ್ಲಿ ಸೀಟಿನ ಸಂಖ್ಯೆ, 180 ಡಿಗ್ರಿ ಸುತ್ತುವ ಆಸನಗಳು ಎಕ್ಸಿಕ್ಯುಟಿವ್ ಬೋಗಿಗಳಲ್ಲಿ ಲಭ್ಯ. ವಂದೇ ಭಾರತ್ ಎಕ್ಸ್‌ಪ್ರೆಸ್ 392 ಟನ್ ಭಾರವಿದೆ. 16 ಬೋಗಿಗಳನ್ನು ಒಳಗೊಂಡಿದೆ. ಒಟ್ಟು ಸೀಟುಗಳ ಸಾಮರ್ಥ್ಯ 1128 ಆಗಿದೆ.
ಇದನ್ನೂ ಓದಿ: Modi in Bengaluru | ದಕ್ಷಿಣ ಭಾರತದ ಮೊದಲ ವಂದೇ ಭಾರತ್ ರೈಲಿಗೆ ಮೋದಿ ಚಾಲನೆ, ಭಾರಿ ಸಂಭ್ರಮ