ಜಾಮ್‌ನಗರ: ರಿಲಯನ್ಸ್ ಇಂಡಸ್ಟ್ರೀಸ್ (Reliance industries) ಹಾಗೂ ರಿಲಯನ್ಸ್ ಫೌಂಡೇಷನ್‌ನಿಂದ (Riliance Foundation) ಇತ್ತೀಚೆಗೆ ಅನಂತ್ ಅಂಬಾನಿ (Anant Ambani) ನೇತೃತ್ವದಲ್ಲಿ ಮಹತ್ತರವಾದ ಕಾರ್ಯಕ್ರಮವೊಂದನ್ನು ಘೋಷಣೆ ಮಾಡಲಾಗಿದೆ. ಈ ಕಾರ್ಯಕ್ರಮಕ್ಕೆ ವಂತಾರ (VANTARA- ಸ್ಟಾರ್ ಆಫ್ ದ ಫಾರೆಸ್ಟ್) ಎಂದು ಹೆಸರಿಡಲಾಗಿದೆ. ಈ ಉಪಕ್ರಮದ ಅಡಿಯಲ್ಲಿ ಮಾಡುವ ಕೆಲಸ ಏನೆಂದರೆ, ಭಾರತ ಹಾಗೂ ವಿದೇಶಗಳಲ್ಲಿ ಗಾಯಗೊಂಡ, ಆತಂಕಕ್ಕೆ ಗುರಿಯಾದ, ಸಮಸ್ಯೆಗೆ ಈಡಾದ ಪ್ರಾಣಿಗಳ ರಕ್ಷಣೆ, ಆರೈಕೆ, ಚಿಕಿತ್ಸೆ ಹಾಗೂ ಪುನರ್ವಸತಿ. ಗುಜರಾತ್‌ನ ಜಾಮ್ ನಗರದಲ್ಲಿನ ರಿಲಯನ್ಸ್ ರಿಫೈನರಿ ಸಮುಚ್ಚಯದ ಹಸಿರು ವಲಯ 3000 ಎಕರೆ ವ್ಯಾಪಿಸಿದೆ.
ಜಾಗತಿಕ ಮಟ್ಟದಲ್ಲಿಯೇ ಈ ರೀತಿ ಸಂರಕ್ಷಣೆಯ ಕ್ರಮಗಳನ್ನು ತೆಗೆದುಕೊಳ್ಳುವುದಕ್ಕೆ ಕೊಡುಗೆ ನೀಡುತ್ತಿರುವ ಪ್ರಮುಖ ಉಪಕ್ರಮ “ವಂತಾರ”ದಿಂದ ಆಗುತ್ತಿದೆ. ಪ್ರಾಣಿಗಳ ರಕ್ಷಣೆ ಹಾಗೂ ಸುರಕ್ಷತೆಯನ್ನು ದೃಷ್ಟಿಯಲ್ಲಿ ಇರಿಸಿಕೊಂಡು, ಈ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರಮುಖ ಪರಿಣತರ ಜತೆಗೂಡಿ 3000 ಎಕರೆ ಪ್ರದೇಶವನ್ನು ಅರಣ್ಯದ ರೀತಿಯ ವಾತಾವರಣವಾಗಿ ವಂತಾರ ಪರಿವರ್ತನೆ ಮಾಡಿದೆ. ಇದು ಸಹಜವಾಗಿ, ಶ್ರೀಮಂತ ಪರಿಸರದಲ್ಲಿ, ದಟ್ಟಾರಣ್ಯದಿಂದ ರಕ್ಷಣೆ ಮಾಡುವ ಪ್ರಾಣಿಗಳಿಗೆ ಆವಾಸ ಸ್ಥಾನವಾಗಿದೆ.
ಈ ವಂತಾರ ಉಪಕ್ರಮವು ಈ ರೀತಿಯಾಗಿ ಮಾಡುತ್ತಿರುವುದು ಭಾರತದಲ್ಲಿಯೇ ಮೊದಲನೆಯದು. ವಂತಾರ ಹುಟ್ಟಿನ ಪರಿಕಲ್ಪನೆ ಹಾಗೂ ಅನುಷ್ಠಾನ ಆಗುತ್ತಿರುವುದು ರಿಲಯನ್ಸ್ ಮಂಡಳಿ ಹಾಗೂ ರಿಲಯನ್ಸ್ ಫೌಂಡೇಷನ್ ನಿರ್ದೇಶಕರಾದ ಅನಂತ್ ಅಂಬಾನಿ ಅವರ ನಾಯಕತ್ವದಲ್ಲಿ. ಅಷ್ಟೇ ಅಲ್ಲ, ಜಾಮ್ ನಗರದಲ್ಲಿ ರಿಲಯನ್ಸ್ ನ ನವೀಕರಿಸವ ಇಂಧನ ವ್ಯವಹಾರವನ್ನು ಮುನ್ನಡೆಸುತ್ತಿರುವವರು ಸಹ ಅನಂತ್ ಅಂಬಾನಿಯವರೇ. ಈ ಮೂಲಕ 2035ರ ವೇಳೆಗೆ ನೆಟ್ ಕಾರ್ಬನ್ ಝೀರೋ ಕಂಪನಿಯಾಗಲು ರಿಲಯನ್ಸ್‌ನ ಮುನ್ನಡೆಸುವ ಜವಾಬ್ದಾರಿಯನ್ನು ಹೊತ್ತಿದ್ದಾರೆ.
ಈ ಬಗ್ಗೆ ಮಾತನಾಡಿದ ಅನಂತ್ ಅಂಬಾನಿ, “ನನಗೆ ಚಿಕ್ಕ ವಯಸ್ಸಿನಲ್ಲೇ ಶುರುವಾದ ಈ ಪ್ರೀತಿಯು ಈಗ ನಮ್ಮ ಅದ್ಭುತ ತಂಡ ಮತ್ತು ಬದ್ಧತೆಯೊಂದಿಗೆ ವಂತರಾ ರೂಪದಲ್ಲಿ ಸಾಕಾರ ಆಗಿದೆ. ಭಾರತದಲ್ಲಿ ಸ್ಥಳೀಯವಾಗಿ ಅಳಿವಿನಂಚಿನಲ್ಲಿರುವ ಪ್ರಭೇದಗಳನ್ನು ರಕ್ಷಿಸುವಲ್ಲಿ ನಾವು ಗಮನಹರಿಸಿದ್ದೇವೆ. ನಾವು ಪ್ರಮುಖ ಆವಾಸಸ್ಥಾನಗಳನ್ನು ಪುನಃಸ್ಥಾಪಿಸಲು ಮತ್ತು ಆ ಜೀವ ಪ್ರಭೇದಗಳಿಗೆ ಇರುವ ಆತಂಕವನ್ನು ನಿವಾರಿಸುವುದಕ್ಕೆ ಬಯಸುತ್ತೇವೆ. ನಮ್ಮ ಪ್ರಯತ್ನಗಳು ಭಾರತದಲ್ಲಿ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವುದಕ್ಕೆ ನಾವು ಸಂತೋಷಪಡುತ್ತೇವೆ. ಭಾರತದ ಮತ್ತು ವಿಶ್ವದ ಕೆಲವು ಉನ್ನತ ಪ್ರಾಣಿಶಾಸ್ತ್ರ ಮತ್ತು ವೈದ್ಯಕೀಯ ತಜ್ಞರು ನಮ್ಮ ಮಿಷನ್‌ಗೆ ಸೇರಿಕೊಂಡಿದ್ದಾರೆ ಮತ್ತು ಸರ್ಕಾರಿ ಸಂಸ್ಥೆಗಳು, ಸಂಶೋಧನೆ ಮತ್ತು ಶಿಕ್ಷಣ ಸಂಸ್ಥೆಗಳ ಸಕ್ರಿಯ ಸಹಯೋಗ ಮತ್ತು ಮಾರ್ಗದರ್ಶನವನ್ನು ಪಡೆಯುತ್ತಿರುವುದಕ್ಕೆ ನಮಗೆ ಸಂತೋಷವಾಗಿದೆ. ತರಬೇತಿ, ಸಾಮರ್ಥ್ಯ ನಿರ್ಮಾಣ ಮತ್ತು ಪ್ರಾಣಿಗಳ ಆರೈಕೆಯ ಮೂಲಸೌಕರ್ಯಗಳ ವಿಷಯದಲ್ಲಿ ಭಾರತದಲ್ಲಿನ ಎಲ್ಲ 150ಕ್ಕೂ ಹೆಚ್ಚು ಮೃಗಾಲಯಗಳನ್ನು ಸುಧಾರಿಸುವಲ್ಲಿ ಝೂ ಅಥಾರಿಟಿ ಆಫ್ ಇಂಡಿಯಾ ಮತ್ತು ಇತರ ಸಂಬಂಧಿತ ಸರ್ಕಾರಿ ಸಂಸ್ಥೆಗಳೊಂದಿಗೆ ಪಾಲುದಾರ ಆಗಲು ವಂತರಾ ಗುರಿ ಇರಿಸಿಕೊಂಡಿದೆ,” ಎಂದಿದ್ದಾರೆ.
ವಂತಾರವನ್ನು ಸ್ಥಾಪಿಸಲು ಅವರನ್ನು ಪ್ರೇರೇಪಿಸಿದ ತತ್ವದ ಬಗ್ಗೆ ವಿವರಿಸಿರುವ ಅನಂತ್ ಅಂಬಾನಿ, “ವಂತಾರ ಎಂಬುದು ಆಧುನಿಕ ವೈಜ್ಞಾನಿಕ ಮತ್ತು ತಾಂತ್ರಿಕ ವೃತ್ತಿಪರತೆಯ ಶ್ರೇಷ್ಠತೆಯೊಂದಿಗೆ ಸಹಾನುಭೂತಿಯ ಪ್ರಾಚೀನ ನೈತಿಕ ಮೌಲ್ಯದ ಸಂಯೋಜನೆಯಾಗಿದೆ. ನಾನು ಜೀವದ ಸೇವೆಯನ್ನು (ಪ್ರಾಣಿಗಳ ಆರೈಕೆ) ಭಗವಂತ ಮತ್ತು ಮಾನವೀಯತೆಯ ಸೇವೆಯಾಗಿ ನೋಡುತ್ತೇನೆ,” ಎಂದಿದ್ದಾರೆ.
ವಂತಾರದ ಮೂಲಕವಾಗಿ ಪ್ರಾಣಿಗಳ ಸಂರಕ್ಷಣೆಗೆ ಅತ್ಯುತ್ಕೃಷ್ಟ ದರ್ಜೆಯ ವ್ಯವಸ್ಥೆ, ಅವುಗಳ ಆರೈಕೆಗೆ ಅತ್ಯುತ್ತಮ ಪದ್ಧತಿ ಅಳವಡಿಸಲಾಗಿದೆ. ಹೆಲ್ತ್ ಕೇರ್, ಆಸ್ಪತ್ರೆ, ಸಂಶೋಧನೆ ಹಾಗೂ ಶೈಕ್ಷಣಿಕ ಕೇಂದ್ರ ಸಹ ಇದೆ. ಇನ್ನು ಇದೇ ಕಾರ್ಯಕ್ರಮದ ಅಡಿಯಲ್ಲಿ ಉನ್ನತ ಮಟ್ಟದ ಸಂಶೋಧನೆ ಸಂಯೋಜನೆಗೆ, ಪ್ರತಿಷ್ಠಿತ ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯಗಳು ಮತ್ತು ಇಂಟರ್ ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಷನ್ ಆಫ್ ನೇಚರ್ (IUCN) ಹಾಗೂ ವರ್ಲ್ಡ್ ವೈಲ್ಡ್ ಲೈಫ್ ಫಂಡ್ ಫಾರ್ ನೇಚರ್ (WWF) ಜತೆಗಿನ ಸಹಭಾಗಿತ್ವದ ಮೇಲೆ ವಂತಾರ ಗಮನ ಕೇಂದ್ರೀಕರಿಸಿದೆ.
ಕಳೆದ ಕೆಲವು ವರ್ಷಗಳಲ್ಲಿ ಈ ಕಾರ್ಯಕ್ರಮದ ಅಡಿಯಲ್ಲಿ ಇನ್ನೂರಕ್ಕೂ ಹೆಚ್ಚು ಆನೆಗಳು, ಸಾವಿರಾರು ಇತರ ಪ್ರಾಣಿಗಳು, ಸರೀಸೃಪಗಳು ಮತ್ತು ಹಕ್ಕಿಗಳನ್ನು ಅಸುರಕ್ಷಿತ ಸನ್ನಿವೇಶಗಳಿಂದ ರಕ್ಷಣೆ ಮಾಡಲಾಗಿದೆ. ಅಷ್ಟೇ ಅಲ್ಲ, ಘೇಂಡಾಮೃಗ, ಚಿರತೆ ಹಾಗೂ ಮೊಸಳೆಗಳಂಥ ಮುಖ್ಯ ಜೀವಿಗಳ ಪುನರ್ವಸತಿಗಾಗಿಯೂ ಉಪಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ವಂತಾರದ ಮೂಲಕ ಮೆಕ್ಸಿಕೋ, ವೆನಿಜುವೆಲಾ ಮುಂತಾದ ದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆಗಳನ್ನು ನಡೆಸಲಾಗಿದೆ. ಸೆಂಟ್ರಲ್ ಅಮೆರಿಕನ್ ಝೂ ಅಧಿಕಾರಿಗಳ ಮನವಿ ಮೇರೆಗೆ ಇತ್ತೀಚೆಗೆ ಹಲವು ದೊಡ್ಡ ಪ್ರಾಣಿಗಳನ್ನು ತರಲಾಗಿದೆ. ಇನ್ನು ಇಂಥ ಪ್ರಾಣಿಗಳ ಸಂರಕ್ಷಣೆ ಮತ್ತು ಪುನರ್ವಸತಿ ಕಾರ್ಯಗಳನ್ನು ಭಾರತ ಹಾಗೂ ಅಂತಾರಾಷ್ಟ್ರೀಯ ಕಠಿಣ ಕಾನೂನು ಮತ್ತು ನಿಯಮಾವಳಿಗಳ ವ್ಯಾಪ್ತಿಯಲ್ಲೇ ಮಾಡಲಾಗಿದೆ.
ಮೂರು ಸಾವಿರ ಎಕರೆ ಪ್ರದೇಶದಲ್ಲಿ ಇನ್ನೂರಕ್ಕೂ ಹೆಚ್ಚು ಆನೆಗಳ ಕಾಳಜಿಯನ್ನು ಹಗಲಿರುಳು ಮಾಡಲಾಗುತ್ತಿದೆ. ಐನೂರಕ್ಕೂ ಹೆಚ್ಚು ತಜ್ಞರು, ಪರಿಣತರು, ತರಬೇತಿ ಪಡೆದಂಥ ಸಿಬ್ಬಂದಿ ಇದಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಇಪ್ಪತ್ತೈದು ಸಾವಿರ ಚದರಡಿ ವ್ಯಾಪ್ತಿಯಲ್ಲಿ ಆನೆಗಳಿಗಾಗಿಯೇ ಆಸ್ಪತ್ರೆಯಿದೆ. ಜಗತ್ತಿನ ಅತಿ ದೊಡ್ಡ ಪ್ರಾಣಿಗಳ ಆಸ್ಪತ್ರೆಯಲ್ಲಿ ಇದೂ ಒಂದು ಎನಿಸಿಕೊಂಡಿದೆ. ಪೂರ್ಣ ಪ್ರಮಾಣದ ಫಾರ್ಮಸಿ, ಎಕ್ಸ್ ರೇ ಮಶೀನ್ ಗಳು, ಲೇಸರ್ ಮಶೀನ್, ಕಾಯಿಲೆ ಪತ್ತೆ ಹಚ್ಚುವ ಯಂತ್ರಗಳು, ಹೈಡ್ರಾಲಿಕ್ ಯಂತ್ರಗಳು, ಕ್ರೇನ್ ಗಳು, ಹೈಡ್ರಾಲಿಕ್ ಶಸ್ತ್ರಚಿಕಿತ್ಸೆ ಟೇಬಲ್ ಗಳು, ಹೈಪರ್ ಬೇರಿಕ್ ಆಮ್ಲಜನಕ ಚೇಂಬರ್ ಇತ್ಯಾದಿಗಳು ಆನೆಗಳಿಗಾಗಿಯೇ ಇವೆ. ಕಣ್ಣಿನ ಪೊರೆ ಹಾಗೂ ಎಂಡೋಸ್ಕೋಪಿಕ್ ಶಸ್ತ್ರಚಿಕಿತ್ಸೆಗಳನ್ನು ಇಲ್ಲಿ ಮಾಡಲಾಗಿದ್ದು, ವಿಶೇಷವಾಗಿ ಎಂಡೋಸ್ಕೋಪಿಕ್ ಸಲಕರಣೆ ಇರುವಂಥ ಮೊದಲ ಆಸ್ಪತ್ರೆ ಇದಾಗಿದೆ. ಅಗತ್ಯ ಇರುವ ಯಾವುದೇ ಶಸ್ತ್ರಚಿಕಿತ್ಸೆ ಇಲ್ಲಿ ಮಾಡಬಹುದಾಗಿದೆ.
ಈ ಕೇಂದ್ರದಲ್ಲಿ ಒಟ್ಟಾರೆ ಒಂದು ಲಕ್ಷ ಚದರಡಿಯ ಆಸ್ಪತ್ರೆ, ವೈದ್ಯಕೀಯ ಸಂಶೋಧನಾ ಕೇಂದ್ರ ಇದ್ದು, ಎರಡು ಸಾವಿರದ ನೂರಕ್ಕೂ ಹೆಚ್ಚು ಸಿಬ್ಬಂದಿ ಇದ್ದಾರೆ. ಐಸಿಯು, ಎಂಆರ್ಐ, ಸಿ ಟಿ ಸ್ಕ್ಯಾನ್, ಎಕ್ಸ್ ರೇ, ಅಲ್ಟ್ರಾ ಸೌಂಡ್, ಎಂಡೋಸ್ಕೋಪಿ ಹೀಗೆ ಅನೇಕ ವ್ಯವಸ್ಥೆ ಇದೆ. ಇಲ್ಲಿನ ರಕ್ಷಣೆ ಮತ್ತು ಪುನರ್ವಸತಿ ಕೇಂದ್ರದ ಮೂಲಕ ಭಾರತದಾದ್ಯಂತ ಇನ್ನೂರಕ್ಕೂ ಹೆಚ್ಚು ಚಿರತೆಯನ್ನು ರಕ್ಷಿಸಲಾಗಿದೆ. ಬಹಳ ಇಕ್ಕಟ್ಟಾದ ಹಾಗೂ ಭಾರೀ ಸಂಖ್ಯೆಯಲ್ಲಿದ್ದ ತಮಿಳುನಾಡಿನ ಸ್ಥಳವೊಂದರಿಂದ ಸಾವಿರ ಮೊಸಳೆಯನ್ನು ರಕ್ಷಿಸಲಾಗಿದೆ. ಆಫ್ರಿಕಾ, ಸ್ಲೋವಾಕಿಯಾ, ಮೆಕ್ಸಿಕೋ ಮತ್ತಿತರ ಸ್ಥಳಗಳಿಂದ ಅಪಾಯದಲ್ಲಿದ್ದ ಪ್ರಾಣಿಗಳ ಸಂರಕ್ಷಣೆ ಮಾಡಲಾಗಿದೆ.
ನಲವತ್ಮೂರು ಪ್ರಭೇದದ ಎರಡು ಸಾವಿರಕ್ಕೂ ಹೆಚ್ಚು ಪ್ರಾಣಿಗಳು ಇಲ್ಲಿನ ರಕ್ಷಣಾ ಮತ್ತು ಪುನರ್ವಸತಿ ಕೇಂದ್ರದ ನಿಗಾದಲ್ಲಿ ಇವೆ. ಭಾರತ ಹಾಗೂ ವಿದೇಶದಲ್ಲಿನ ಅಳಿವಿನಂಚಿನ ಏಳು ಜೀವ ಪ್ರಭೇದಗಳ ಸಂರಕ್ಷಣೆ ಜತೆಗೆ ಅವುಗಳ ಸಂತಾನಾಭಿವೃದ್ಧಿಯನ್ನು ಮಾಡಲಾಗುತ್ತಿದೆ. ವಂತಾರದ ಮೂಲಕ ಇನ್ನೂರು ಆನೆಗಳ ಸಂರಕ್ಷಿಸಲಾಗಿದೆ. ಜತೆಗೆ ಚಿರತೆಗಳು, ಹುಲಿಗಳು, ಸಿಂಹಗಳು ಮುಂತಾದವು, ಜಿಂಕೆ ಮೊದಲಾದ ಪ್ರಭೇದವು ಮುನ್ನೂರಕ್ಕೂ ಹೆಚ್ಚು, ಮೊಸಳೆಗಳು, ಹಾವುಗಳು ಥರದ್ದು ಸಾವಿರದ ಇನ್ನೂರಕ್ಕೂ ಹೆಚ್ಚು ಜೀವಿಗಳನ್ನು ರಕ್ಷಣೆ ಮಾಡಲಾಗಿದೆ.
ಇದನ್ನೂ ಓದಿ: Anant Ambani wedding: ʻಅನ್ನದಾನʼದೊಂದಿಗೆ ಶುರುವಾಯ್ತು ಅನಂತ್ ಅಂಬಾನಿ ಪ್ರಿ- ವೆಡ್ಡಿಂಗ್ ಸಂಭ್ರಮಾಚರಣೆ!