ಗೌತಮ್ ಅದಾನಿ ಗ್ರೂಪ್ ಕಂಪನಿಯ ಮೇಲಿನ ವಂಚನೆ ಆರೋಪ ಹಾಗೂ ಅದರಿಂದ ಮಾರುಕಟ್ಟೆಯಲ್ಲಿ ಆಗಿರುವ ಶೇರುಗಳ (Share Market) ಭಾರಿ ಏರುಪೇರು ಹಿನ್ನೆಲೆಯಲ್ಲಿ ವಿಚಾರಣೆ ನಡೆಸಲು ತಜ್ಞರ ಸಮಿತಿಯೊಂದನ್ನು ರಚಿಸಲು ಸುಪ್ರೀಂ ಕೋರ್ಟ್ ಸಲಹೆ ನೀಡಿದೆ. ಈ ಕುರಿತು ಸಲ್ಲಿಸಲಾಗಿರುವ ಅರ್ಜಿಯೊಂದರ ವಿಚಾರಣೆ ವೇಳೆ ನ್ಯಾಯಾಲಯ, ಈ ಬಗ್ಗೆ ಸರ್ಕಾರವೇ ಸೂಕ್ತ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಹೇಳಿದೆ. ಈ ವಿಚಾರದಲ್ಲಿ ದೇಶದ ಕೋಟ್ಯಂತರ ಹೂಡಿಕೆದಾರರ ಹಿತ ರಕ್ಷಣೆ ಮುಖ್ಯ, ಅದಕ್ಕಾಗಿ ಕೂಡಲೇ ಕಾರ್ಯಪ್ರವೃತ್ತವಾಗುವಂತೆ, ವಂಚನೆಯ ಆರೋಪಗಳ ಪರಾಮರ್ಶೆಗೆ ನ್ಯಾಯಮೂರ್ತಿ ಒಳಗೊಂಡ ತಜ್ಞರ ಸಮಿತಿ ರಚಿಸುವಂತೆ ಸುಪ್ರೀಂ ಕೋರ್ಟ್ ಸಲಹೆ ನೀಡಿದೆ.
ಬಂದರುಗಳಿಂದ ಹಿಡಿದು ಇಂಧನ ವಲಯದವರೆಗೂ ಹಲವಾರು ಸಂಸ್ಥೆಗಳನ್ನು ಹೊಂದಿರುವ ಅದಾನಿ ಗ್ರೂಪ್ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಗೌತಮ್ ಅದಾನಿ ಒಡೆತನದಲ್ಲಿದೆ. ಕಳೆದ ಏಳೆಂಟು ವರ್ಷಗಳಲ್ಲಿ ಗೌತಮ್ ಅದಾನಿ ಅವರ ಶ್ರೀಮಂತಿಕೆ ಹಾಗೂ ಶೇರು ಮಾರುಕಟ್ಟೆಯಲ್ಲಿ ಅದರ ಸ್ಥಾನಮಾನ ಉಲ್ಕೆಯಂತೆ ಮೇಲೇರಿದೆ. ಆದರೆ ಕಳೆದ ವಾರ ಅಮೆರಿಕ ಮೂಲದ ಶಾರ್ಟ್ ಸೆಲ್ಲರ್ ಹಿಂಡೆನ್‌ಬರ್ಗ್ ಸಂಶ್ಥೆ ನೀಡಿದ ವರದಿಯಿಂದಾಗಿ ಅದಾನಿ ನಾಯಕತ್ವದ ಏಳು ಕಂಪನಿಗಳ ಷೇರುಗಳು 100 ಶತಕೋಟಿ ಡಾಲರ್‌ಗಿಂತ ಹೆಚ್ಚಿನ ಮಾರುಕಟ್ಟೆ ಮೌಲ್ಯವನ್ನು ಕಳೆದುಕೊಂಡಿವೆ. ಶೆಲ್ ಕಂಪನಿಗಳ ಮೂಲಕ ತೆರಿಗೆ ವಂಚನೆ, ಶೇರು ದರಗಳ ಅನುಚಿತ ಏರುಪೇರುಗಳನ್ನು ಅದಾನಿ ಗ್ರೂಪ್ ಮಾಡಿದೆ ಎಂದೂ ಹಿಂಡನ್‌ಬರ್ಗ್ ಆರೋಪಿಸಿತ್ತು. ಆದರೆ ಅದಾನಿಯವರು ಈ ಆರೋಪಗಳನ್ನು ನಿರಾಕರಿಸಿದ್ದು, ಇದು ದುರುದ್ದೇಶಪೂರಿತ ದಾಳಿ ಎಂದಿದ್ದರು. ಕಳೆದ ವಾರ ಅದಾನಿ ಎಂಟರ್‌ಪ್ರೈಸಸ್ ತನ್ನ ದ್ವಿತೀಯ ಷೇರು ಆಫರ್‌ಗಳನ್ನೂ ಹಿಂದೆಗೆದುಕೊಂಡಿದೆ.
ಈ ಎಲ್ಲ ಬೆಳವಣಿಗೆಗಳನ್ನೂ ಎಲ್ಲರೂ ಗಮನಿಸುತ್ತಿದ್ದಾರೆ. ಅದಾನಿ ವಿಶ್ವದ ಟಾಪ್ ಟೆನ್ ಪಟ್ಟಿಯಿಂದ ಹೊರಬಿದ್ದಿದ್ದಾರೆ ಹಾಗೂ ಮಾರುಕಟ್ಟೆಯಲ್ಲಿ ಅವರ ಕಂಪನಿ ಶೇರು ದರಗಳು ಕುಸಿದಿರುವುದು ಖಚಿತ. ಪ್ರತಿಪಕ್ಷಗಳೂ ಈ ವಿಚಾರವನ್ನು ಲೋಕಸಭೆ- ರಾಜ್ಯಸಭೆಯಲ್ಲಿ ಎತ್ತಿ ಸರ್ಕಾರವನ್ನು ಕಟುವಾಗಿ ಟೀಕಿಸುತ್ತಲೇ ಇವೆ. ಸರ್ಕಾರದಿಂದ ಇದಕ್ಕೆ ಉತ್ತರವನ್ನು ಯಾಕೆ ನಿರೀಕ್ಷಿಸಲಾಗುತ್ತಿದೆಯೆಂದರೆ, ಎಲ್‌ಐಸಿ- ಎಸ್‌ಬಿಐ ಸೇರಿದಂತೆ ಹತ್ತು ಹಲವಾರು ಸಂಸ್ಥೆಗಳಲ್ಲಿರುವ ಸಾರ್ವಜನಿಕ ಹಣವನ್ನು ಅದಾನಿ ಗ್ರೂಪ್‌ನಲ್ಲಿ ಹೂಡಲಾಗಿದೆ. ಎಲ್‌ಐಸಿಯು 35,917 ಕೋಟಿ ರೂ.ಗಳನ್ನು ಅದಾನಿ ಸಮೂಹದ ಕಂಪನಿಗಳ ಷೇರು, ಬಾಂಡ್‌ಗಳಲ್ಲಿ ಹೂಡಿಕೆ ಮಾಡಿದೆ. ಇನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ಅದಾನಿ ಗುಂಪಿಗೆ 27,000 ಕೋಟಿ ರೂ.ಗಳನ್ನು ನೀಡಿದೆ. ಇವೆರಡೂ ಆಯಾ ಕಂಪನಿಗಳ ಒಟ್ಟು ಸಾಮರ್ಥ್ಯದ ಶೇ.1ಕ್ಕಿಂತಲೂ ಕಡಿಮೆ, ಹೀಗಾಗಿ ಆತಂಕಕ್ಕೆ ಕಾರಣವಿಲ್ಲ ಎಂದು ಹೇಳಲಾಗಿದೆಯಾದರೂ, ಸಾರ್ವಜನಿಕ ಹಣದಲ್ಲಿ ಒಂದೊಂದು ಪೈಸೆಯೂ ಮುಖ್ಯವೇ ಆಗಿರುತ್ತದೆ.
ಷೇರು ಮಾರುಕಟ್ಟೆಯ ವಹಿವಾಟಿನ ಪ್ರಾಮಾಣಿಕತೆಯ ಮೇಲೆ ನಿಗಾ ಇಡಲು ಭಾರತೀಯ ಸೆಕ್ಯುರಿಟೀಸ್ ಮತ್ತು ವಿನಿಮಯ ಮಂಡಳಿ (SEBI) ಎಂಬ ಸಂಸ್ಥೆ ಇದೆ. ಇದು ಹಿಂಡನ್‌ಬರ್ಗ್ ವರದಿಯಿಂದ ಆಗಿರುವ ನಷ್ಟದ ಬಗ್ಗೆ ತನ್ನದೇ ಆದ ತನಿಖೆ ನಡೆಸುತ್ತಿದೆ. ಆದರೂ ಈಗಿನ ಸನ್ನಿವೇಶದಲ್ಲಿ ಹೂಡಿಕೆದಾರರಲ್ಲಿ ವಿಶ್ವಾಸ ಮೂಡಿಸಲು ವಿಶ್ವಾಸಾರ್ಹ ಸಮಿತಿಯೊಂದನ್ನು ಸುಪ್ರೀಂ ಕೋರ್ಟ್ ಹೇಳಿದಂತೆ ನೇಮಿಸುವುದು ಸೂಕ್ತ. ಯಾಕೆಂದರೆ ಇಲ್ಲಿ ಷೇರುದಾರರಿಗೆ ಆಗಿರುವ ನಷ್ಟವೇನೂ ಸಣ್ಣದಲ್ಲ. ಭಾರತದ ಅರ್ಥ ವ್ಯವಸ್ಥೆ ಅದಾನಿ ಪ್ರಕರಣದಿಂದ ಅಲುಗಾಡುಂತಾಗಬಾರದು. ದೇಶದ ಒಟ್ಟಾರೆ ಆರ್ಥಿಕತೆ ಮೇಲೆ ಇದು ಪರಿಣಾಮ ಬೀರದಂತೆ ಎಚ್ಚರ ವಹಿಸಬೇಕಿದೆ. ಯಾವುದೋ ಒಂದು ಭಾರಿ ಕಂಪನಿಯ ಬಗ್ಗೆ ಅಪಪ್ರಚಾರ ಶುರುಮಾಡಿದರೆ ಅದರ ಷೇರು ಮೌಲ್ಯಗಳು ಕುಸಿಯತೊಡಗುತ್ತವೆ. ಇಂದು ಯಾವುದೇ ಒಂದು ದೇಶವನ್ನು ಮೊಣಕಾಲೂರುವಂತೆ ಮಾಡಬೇಕಿದ್ದರೆ ಅಲ್ಲಿನ ಷೇರು ಮಾರುಕಟ್ಟೆಯನ್ನು ಅಸ್ತವ್ಯಸ್ತಗೊಳಿಸಿದರೆ ಸಾಕಾಗುತ್ತದೆ. ಜತೆಗೆ ಅದಾನಿ ಗುಂಪಿನ ಆಸ್ತಿ ಮೌಲ್ಯ, ಆದಾಯ, ಷೇರು ಬೆಲೆಗಳು ಸಕಾರಣವಾಗಿದೆಯೇ ಎಂದು ಪರಿಶೀಲಿಸುವುದರಲ್ಲಿ ತಪ್ಪಿಲ್ಲ.
ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ರಾಜ್ಯದ ಪ್ರವಾಸಿ ತಾಣಗಳಲ್ಲಿ ರೋಪ್ ವೇ ಕನಸು ನನಸಾಗಲಿ, ಆದರೆ ಪರಿಸರಕ್ಕೆ ಧಕ್ಕೆಯಾಗದಿರಲಿ
ಹಿಂದೆ ಕೆಲವು ಸಂಸ್ಥೆಗಳು ತಮ್ಮ ಆದಾಯಪ್ರಮಾಣದಲ್ಲಿ ಭಾರಿ ಏರುಪೇರು ತೋರಿಸಿ, ಬಳಿಕ ಸತ್ಯ ಹೊರಬಿದ್ದಾಗ ಮಾರುಕಟ್ಟೆ ಕುಸಿದು ಪಾತಾಳ ಕಂಡ ಕಹಿ ಅನುಭವ ನಮಗೆ ಇದ್ದೇ ಇದೆ. ಹೀಗಾಗಿ ಒಂದು ಸಂಸ್ಥೆ ದಿಡೀರನೆ ಸಂಪತ್ತಿನ ತುತ್ತ ತುದಿಯನ್ನು ಮುಟ್ಟುವುದು ಅನುಮಾನಕ್ಕೆ ಆಸ್ಪದ ನೀಡಿದರೆ ಅಸಹಜವೇನೂ ಇಲ್ಲ. ಅದಾನಿ ಪ್ರಕರಣದಲ್ಲಿ ತೆರಿಗೆದಾರರಾದ ನಮ್ಮ ಹಣ ಕೂಡ ನಷ್ಟ ಕಂಡಿದೆ. ಹೀಗಾಗಿ ದೇಶದ ಎಲ್ಲ ಸಾರ್ವಜನಿಕರ ಹಿತದೃಷ್ಟಿಯಿಂದ ಈ ಬಗ್ಗೆ ಸರ್ಕಾರ ಹೆಚ್ಚಿನ ಗಮನ ಹರಿಸಿ, ತನಿಖೆ ನಡೆಸಬೇಕಿದೆ. ಹೀಗಾಗಿ ಸರ್ಕಾರ ಪರಿಶೀಲನಾ ಸಮಿತಿ ಶೀಘ್ರ ವಿಚಾರಣೆ ನಡೆಸಿ ಅದಾನಿ ವಿರುದ್ಧದ ಸತ್ಯಾಸತ್ಯತೆ ಪರಿಶೀಲಿಸಿ ಆದಷ್ಟು ಬೇಗ ವರದಿ ನೀಡುವಂತಾಗಬೇಕು. ಈ ಮೂಲಕ ಷೇರು ಪೇಟೆ ಮತ್ತಷ್ಟು ವಿಶ್ವಾಸಾರ್ಹತೆಯೊಂದಿಗೆ ಚೇತರಿಸಿಕೊಳ್ಳುವಂತಾಗಬೇಕು.