Site icon Vistara News

ವಿಸ್ತಾರ Explainer : ಆಯಿಲ್‌ ಇಲ್ಲದಿದ್ರೂ ಇಸ್ರೇಲ್‌, ಶ್ರೀಮಂತ ದೇಶವಾಗಿದ್ದು ಹೇಗೆ?

Israel flag

ತಲಾ ಆದಾಯವನ್ನು ಹೋಲಿಸಿದರೆ ಏಷ್ಯಾದ ಶ್ರೀಮಂತ ದೇಶಗಳು ಯಾವುದು ಎಂದರೆ ತೈಲ ಸಂಪದ್ಭರಿತ ಸೌದಿ ಅರೇಬಿಯಾ, ಕತಾರ್‌, ಯುಎಇ ಅಥವಾ ಸಿಂಗಾಪುರ ನೆನಪಾಗಬಹುದು. ಆದರೆ ನಿಮಗೆ ಅಚ್ಚರಿ ಆದೀತು, ಏಷ್ಯಾದಲ್ಲಿರುವ 48 ದೇಶಗಳಲ್ಲಿ ಇಸ್ರೇಲ್‌ (Israel) ಮೂರನೇ ಸ್ಥಾನದಲ್ಲಿದೆ. ತಲಾ ಆದಾಯದ ದೃಷ್ಟಿಯಿಂದ ಸಿಂಗಾಪುರ, ಕತಾರ್‌ ಬಳಿಕ (ವಿಸ್ತಾರ Explainer) ಇಸ್ರೇಲ್‌ ಏಷ್ಯಾದಲ್ಲೇ ಮೂರನೇ ಶ್ರೀಮಂತ ದೇಶವಾಗಿದೆ. ಒಂದು ಹನಿ ಕಚ್ಚಾ ತೈಲವೂ ಸಿಗದ ಇಸ್ರೇಲ್‌, ತಲಾ ಆದಾಯದಲ್ಲಿ ಸೌದಿ ಅರೇಬಿಯಾಕ್ಕಿಂತ ಎರಡು ಪಟ್ಟು ಹೆಚ್ಚಳ ದಾಖಲಿಸಿದೆ.

ತಲಾ ಆದಾಯದಲ್ಲಿ ಯುರೋಪಿನ ಬಹುತೇಕ ದೇಶಗಳನ್ನು ಇಸ್ರೇಲ್‌ ಮೀರಿಸಿದೆ. ಇಸ್ರೇಲ್‌ ಈಗ 58,273 ಡಾಲರ್‌ ( 47 ಲಕ್ಷ ರೂ.) ತಲಾ ಆದಾಯವನ್ನು ಹೊಂದಿದ್ದರೆ, ಬ್ರಿಟನ್‌ (46,370 ಡಾಲರ್‌-38 ಲಕ್ಷ ರೂ ), ಜರ್ಮನಿ 53,800 ಡಾಲರ್‌ (44 ಲಕ್ಷ ರೂ.), ಫ್ರಾನ್ಸ್‌ 45,190 ಡಾಲರ್‌, ಸೌದಿ ಅರೇಬಿಯಾ 29,920 ಡಾಲರ್‌ ಹೊಂದಿದ್ದು, ಇಸ್ರೇಲಿಗಿಂತ ಹಿಂದುಳಿದಿವೆ. ತೈಲ ಸೇರಿದಂತೆ ಯಾವುದೇ ಪ್ರಮುಖ ನೈಸರ್ಗಿಕ ಸಂಪನ್ಮೂಲ ಇರದಿದ್ದರೂ, ಬಹುತೇಕ ಬಂಜರು ಭೂಮಿಯನ್ನೇ ಬಳುವಳಿಯಾಗಿ ಪಡೆದಿದ್ದರೂ, ಇಸ್ರೇಲ್‌ ಈ ರೀತಿ ಬದಲಾಗಿದ್ದು ಹೇಗೆ?

ಇಸ್ರೇಲ್‌ ಸಣ್ಣ ಗಾತ್ರದ ರಾಷ್ಟ್ರ. 1948ರಲ್ಲಿ ಸ್ವತಂತ್ರವಾದಾಗ ಕೇವಲ 8 ಲಕ್ಷ ಇದ್ದ ಜನಸಂಖ್ಯೆ ಈಗ 80 ಲಕ್ಷ ಚಿಲ್ಲರೆಯಷ್ಟೇ. ನಮ್ಮ ಬೆಂಗಳೂರಿನಲ್ಲೂ 1.20 ಕೋಟಿ ಜನರಿದ್ದಾರೆ. ಭೌಗೋಳಿಕವಾಗಿ ಈಜಿಪ್ತ್‌, ಜೋರ್ಡಾನ್‌, ಲೆಬೆನಾನ್‌, ಸಿರಿಯಾ, ಪ್ಯಾಲೆಸ್ತೀನ್‌ ಜತೆ ಗಡಿಯನ್ನು ಹಂಚಿಕೊಂಡಿದೆ. ಇರಾನ್‌, ಇರಾಕ್‌, ಕುವೈತ್‌, ಲೆಬೆನಾನ್‌, ಸೌದಿ ಅರೇಬಿಯಾ, ಸಿರಿಯಾ ಮತ್ತು ಯೆಮೆನ್‌ ಇಸ್ರೇಲನ್ನು ಒಂದು ದೇಶವೆಂದು ಒಪ್ಪಿಕೊಂಡಿಲ್ಲ. 1948ರಲ್ಲಿ ಸ್ವಾತಂತ್ರ್ಯ ಘೋಷಿಸಿದ ಬಳಿಕ ಇಸ್ರೇಲ್‌ ತನ್ನ ನೆರೆಹೊರೆಯ ಅರಬ್‌ ರಾಷ್ಟ್ರಗಳ ಜತೆಗೆ ಎಂಟು ಬಾರಿ ಯುದ್ಧ ನಡೆಸಿ ಗೆದ್ದಿದೆ. ಇಂಥ ಇಕ್ಕಟ್ಟಿನ ನಡುವೆಯೂ ಇಸ್ರೇಲ್‌, ಫೀನಿಕ್ಸ್‌ ಪಕ್ಷಿಯಂತೆ ಬೂದಿಯಿಂದ ಎದ್ದಿದೆ. ಇಸ್ರೇಲ್‌ ಸಣ್ಣ ದೇಶ ಇರಬಹುದು. ಆದರೆ ಜಗತ್ತಿನ ಇತರ ದೇಶಗಳು ಕಲಿಯಬೇಕಾದ ಮಹತ್ವದ ಸಂಗತಿಯೊಂದು ಇದೆ. ಅದು ಏನೆಂದರೆ, ಇಸ್ರೇಲ್‌ ಸಂಶೋಧನೆ ಮತ್ತು ಅಭಿವೃದ್ಧಿಯ ಮೂಲಕ ತನ್ನ ಜನರ ಪ್ರತಿಭೆ, ಸಾಮರ್ಥ್ಯದ ಮೇಲೆಯೇ ಮಾಡಿರುವ ಅಗಾಧ ಹೂಡಿಕೆ.

ಜಗತ್ತಿನ ಸ್ಟಾರ್ಟಪ್‌ ಕ್ಯಾಪಿಟಲ್‌ ಇಸ್ರೇಲ್

ಇವತ್ತು ಇಸ್ರೇಲ್‌ ಸಂಶೋಧನೆಯಲ್ಲಿ ಮುಂಚೂಣಿಯಲ್ಲಿದೆ. ಸ್ಟಾರ್ಟಪ್‌ ವಲಯದಲ್ಲಿ ಅನೂಹ್ಯ ಪ್ರಗತಿಯನ್ನು ದಾಖಲಿಸಿದೆ. ವಿಶ್ವ ದರ್ಜೆಯ ಯೂನಿವರ್ಸಿಟಿಗಳು ಇಲ್ಲಿವೆ. ಉದ್ಯಮಶೀಲತೆಯ ಸಂಸ್ಕೃತಿ, ಸೃಜನಶೀಲತೆಗೆ ಇಸ್ರೇಲ್‌ ಹೆಸರುವಾಸಿಯಾಗಿದೆ. ಸಾಂದ್ರತೆಯ (density) ಆಧಾರದಲ್ಲಿ ಜಗತ್ತಿನ ಯಾವುದೇ ದೇಶಕ್ಕಿಂತ ಹೆಚ್ಚು ಸಂಖ್ಯೆಯಲ್ಲಿ ಸ್ಟಾರ್ಟಪ್‌ಗಳು ಇಸ್ರೇಲಿನಲ್ಲಿವೆ. 6,000 ಕ್ಕೂ ಹೆಚ್ಚು ಸ್ಟಾರ್ಟಪ್‌ಗಳು ಅಲ್ಲಿವೆ. ವೆಂಚರ್‌ ಕ್ಯಾಪಿಟಲಿಸ್ಟ್‌ಗಳು, ಏಂಜೆಲ್‌ ಇನ್ವೆಸ್ಟರ್ಸ್‌, ಸರ್ಕಾರಿ ಯೋಜನೆಗಳು ಇಸ್ರೇಲಿನಲ್ಲಿ ಸಾಮಾನ್ಯ. ಇಸ್ರೇಲಿನ ಸ್ಟಾರ್ಟಪ್‌ಗಳು ಜಗದ್ವಿಖ್ಯಾತಿಯಾಗಿವೆ. 1997-2017ರ 20 ವರ್ಷಗಳಲ್ಲಿ 16,000 ಹೈಟೆಕ್‌ ಕಂಪನಿಗಳು ಇಸ್ರೇಲಿನಲ್ಲಿ ಸ್ಥಾಪನೆಯಾಗಿವೆ. ಅದರಲ್ಲಿ 8000 ಈಗಲೂ ಸಕ್ರಿಯವಾಗಿವೆ. 505 ಸೈಬರ್‌ ಸೆಕ್ಯುರಿಟಿ ಕಂಪನಿಗಳಿವೆ. 1487 ಲೈಫ್‌ ಸೈನ್ಸ್‌ ಕಂಪನಿಗಳು ಇವೆ. ಮೈಕ್ರೊಸಾಫ್ಟ್‌, ಸಿಸ್ಕೊ, ಐಬಿಎಂ, ಎಚ್‌ಪಿ, ಕ್ಯಾನನ್‌ ಮೊದಲಾದ ದಿಗ್ಗಜ ಕಂಪನಿಗಳು ಇಸ್ರೇಲಿನಲ್ಲಿ ಲಕ್ಷಾಂತರ ಡಾಲರ್‌ ಬಂಡವಾಳ ಹೂಡಿಕೆ ಮಾಡಿವೆ.

ವೇಜ್‌, ಮೊಬಿಲೈ, ಚೆಕ್‌ ಪಾಯಿಂಟ್‌ ಸಾಫ್ಟ್‌ವೇರ್‌ ಟೆಕ್ನಾಲಜೀಸ್‌ ಅವುಗಳಲ್ಲಿ ಮುಂಚೂಣಿಯಲ್ಲಿವೆ. ನ್ಯಾವಿಗೇಶನ್‌ ಅಪ್ಲಿಕೇಶನ್‌ ಆಗಿರುವ ವೇಜ್‌, ಅನ್ನು ಗೂಗಲ್‌ 1.1 ಶತಕೋಟಿ ಡಾಲರ್‌ ಕೊಟ್ಟು 2013ರಲ್ಲಿ ಖರೀದಿಸಿತ್ತು. ಮೊಬಿಲೈ ಟೆಕ್ನಾಲಜಿ ಸ್ಟಾರ್ಟಪ್‌ ಸ್ವಯಂಚಾಲಿತ ಡ್ರೈವಿಂಗ್‌ ಟೆಕ್ನಾಲಜಿಯನ್ನು ಅಭಿವೃದ್ಧಿಪಡಿಸಿದ್ದು, ಇಂಟೆಲ್‌ ಟೆಕ್ನಾಲಜಿಯು 2017ರಲ್ಲಿ 15.3 ಶತಕೋಟಿ ಡಾಲರ್‌ಗೆ ಖರೀದಿಸಿದೆ. ಸೈಬರ್‌ ಸೆಕ್ಯುರಿಟಿ ಕಂಪನಿಯಾದ ಚೆಕ್‌ ಪಾಯಿಂಟ್‌ ಸಾಫ್ಟ್‌ವೇರ್‌ ಟೆಕ್ನಾಲಜೀಸ್‌ ಜಾಗತಿಕ ಮಟ್ಟದ ಸಂಸ್ಥೆಯಾಗಿದೆ. ಜೆರುಸಲೇಂನ ಹೀಬ್ರೂ ಯೂನಿವರ್ಸಿಟಿ, ಟೆಕ್ನಿಯಾನ್‌ ಇಸ್ರೇಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ವಿಶ್ವದ ಅತ್ಯುತ್ತಮ ವಿಶ್ವವಿದ್ಯಾಲಯಗಳಲ್ಲಿ ಸೇರಿವೆ. ಬಯೊಟೆಕ್ನಾಲಜಿ, ಕಂಪ್ಯೂಟ್‌ ಸೈನ್ಸ್‌, ಪರಿಸರ ಸಂಶೋಧನೆಯಲ್ಲಿ ಹೆಸರು ಗಳಿಸಿವೆ. ಹೀಬ್ರೂ ಯೂನಿವರ್ಸಿಟಿಯಲ್ಲಿ 8 ಮಂದಿ ನೊಬೆಲ್‌ ಪ್ರಶಸ್ತಿ ಗಳಿಸಿದ್ದಾರೆ. ಕ್ಯಾನ್ಸರ್‌, ಜೆನೆಟಿಕ್ಸ್‌, ನ್ಯೂರೊ ಸೈನ್ಸ್‌ ವಿಭಾಗದಲ್ಲಿ ಆಳವಾದ ಸಂಶೋಧನೆಯನ್ನಿ ನಡೆಸಿದೆ. ಟೆಕ್ನಿಯಾನ್ ಯುನಿವರ್ಸಿಟಿ ನ್ಯಾನೊ ಟೆಕ್ನಾಲಜಿ, ಮೆಟೀರಿಯಲ್‌ ಸೈನ್ಸ್‌, ರೊಬಾಟಿಕ್ಸ್‌ನಲ್ಲಿ ಮುಂದುವರಿದಿದೆ. ಈ ವಿಶ್ವ ವಿದ್ಯಾಲಯಗಳು ಸಂಶೋಧನೆ ಮತ್ತು ಅಭಿವೃದ್ಧಿಗೆ ಭದ್ರ ಬುನಾದಿಯನ್ನು ಹಾಕಿ ಕೊಟ್ಟಿದೆ. ಜಗತ್ತಿನಾದ್ಯಂತ ಪ್ರತಿಭಾವಂತರನ್ನು ಆಕರ್ಷಿಸುತ್ತಿದೆ.

ಇಸ್ರೇಲ್‌ಗೆ ಜಗತ್ತಿನ ನಾನಾ ಕಡೆಗಳಿಂದ 32 ಲಕ್ಷಕ್ಕೂ ಹೆಚ್ಚು ವಲಸಿಗರು ಆಗಮಿಸಿದ್ದಾರೆ. 90 ಭಿನ್ನ ಭಾಷೆಗಳನ್ನು ಆಡುವವರು ಇಲ್ಲಿದ್ದಾರೆ. ಹಲವಾರು ಸಮಸ್ಯೆಗಳಿಗೆ ಮುಕ್ತ ಪರಿಹಾರ ಕಂಡುಕೊಳ್ಳಲು ಇದು ಕೂಡ ಸಹಕರಿಸಿದೆ.

ಜಿಡಿಪಿಯ 4% ಸಂಶೋಧನೆ ಮತ್ತು ಅಭಿವೃದ್ಧಿಗೆ ಮೀಸಲು:

ಇಸ್ರೇಲ್‌ ಶ್ರೀಮಂತ ರಾಷ್ಟ್ರವಾಗುವಲ್ಲಿ ಅಲ್ಲಿನ ಸರ್ಕಾರದ್ದೂ ಮಹತ್ವದ ಪಾತ್ರ ಇದೆ. ಇಸ್ರೇಲಿನ ಜಿಡಿಪಿಯ 4% ಮೊತ್ತವನ್ನು ಸಂಶೋಧನೆ ಮತ್ತು ಅಭಿವೃದ್ಧಿಗೆ ಖರ್ಚು ಮಾಡಲಾಗುತ್ತಿದೆ. ಇದು ಜಗತ್ತಿನಲ್ಲೇ ದಾಖಲೆಗಳಲ್ಲೊಂದು. ವೈದ್ಯಕೀಯ, ಕೃಷಿ, ರಕ್ಷಣಾ ಕ್ಷೇತ್ರದಲ್ಲಿ ಇಸ್ರೇಲ್‌ ಮುಂದುವರಿಯಲು ಇದು ಕಾರಣವಾಗಿದೆ. ರಕ್ಷಣಾ ಕ್ಷೇತ್ರದಲ್ಲಿ ಮಿಲಿಟರಿ ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಇಸ್ರೇಲ್‌ ಜಾಗತಿಕ ನಾಯಕವಾಗಿದೆ. ಜಗತ್ತಿನಲ್ಲೇ ಅತ್ಯಂತ ಸುಧಾರಿತ ಶಸ್ತ್ರಾಸ್ತ್ರಗಳು ಇಸ್ರೇಲಿನ ಬಳಿ ಇದೆ. ದ್ರೋನ್‌, ಕ್ಷಿಪಣಿ, ಸೈಬರ್‌ ಡಿಫೆನ್ಸ್‌ಗೆ ಇಸ್ರೇಲಿ ಡಿಫೆನ್ಸ್‌ ಫೋರ್ಸ್‌ ಹೆಸರಾಗಿದೆ. ಇಸ್ರೇಲಿ ಕಂಪನಿಗಳಾದ ಎಲ್ಬಿಟ್‌ ಸಿಸ್ಟಮ್‌ , ರಫೆಯಲ್‌ ಕಂಪನಿ ಗ್ಲೋಬಲ್‌ ಲೀಡರ್‌ ಎನ್ನಿಸಿವೆ.

ಕೃಷಿ ತಂತ್ರಜ್ಞಾನ, ಹನಿ ನೀರಾವರಿ ತಂತ್ರಜ್ಞಾನದಲ್ಲಿ ಇಸ್ರೇಲ್‌ ಜಗತ್ತಿನಲ್ಲೇ ಮುಂಚೂಣಿಯಲ್ಲಿದೆ. ಬೆಳೆಗಳ ಫಸಲನ್ನು ಇದು ಹೆಚ್ಚಿಸಿದೆ. ರೈತರಿಗೆ ಕಡಿಮೆ ವೆಚ್ಚದಲ್ಲಿ ಹೆಚ್ಚು ದಕ್ಷತೆಯಿಂದ ಬೆಳೆಗಳನ್ನು ಬೆಳೆಯಲು ಇದರಿಂದ ಸಾಧ್ಯವಾಗಿದೆ. ಇಸ್ರೇಲಿನ ನಟಾಫಿಮ್‌, ಐಡಿಇ ಟೆಕ್ನಾಲಜೀಸ್‌ ನೀರಿನ ನಿರ್ವಹಣೆಗೆ ನವೀನ ತಂತ್ರಜ್ಞಾನ ಅಭಿವೃದ್ಧಿಪಡಿಸಿವೆ. ಐಡಿಇ ಟೆಕ್ನಾಲಜೀಸ್‌ ಸಮುದ್ರದ ಉಪ್ಪು ನೀರನ್ನು ಸಿಹಿ ನೀರಾಗಿ ಪರಿವರ್ತಿಸುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ. ಆರ್ಟಿಫಿಶಿಯಲ್‌ ಟೆಕ್ನಾಲಜಿಯನ್ನೂ ಕೃಷಿಗೆ ಬಳಸಿದೆ.

ಇಸ್ರೇಲಿನ ಮುಖ್ಯ ವಿಜ್ಞಾನಿಯವರ ಕಚೇರಿಯು ಆರ್ಥಿಕ ಇಲಾಖೆಯ ಅಡಿಯಲ್ಲಿದೆ. ಹಾಗೂ ಸ್ಟಾರ್ಟಪ್‌ಗಳಿಗೆ ಫಂಡ್‌ ನೀಡುತ್ತದೆ. ಇಸ್ರೇಲ್‌ ಇನ್ನೊವೇಶನ್‌ ಅಥಾರಿಟಿಯು ಕೂಡ ಸಂಶೋಧನೆಗೆ ನೆರವು ನೀಡುತ್ತದೆ. ಸಂಶೋಧನೆ ಮತ್ತು ಅಭಿವೃದ್ಧಿಗೆ ನೆರವುನೀಡಲು ಪ್ರತ್ಯೇಕ ಕಾನೂನು ಅಲ್ಲಿದೆ. ಈ ಕಾನೂನು ಸಂಶೋಧನೆಯಲ್ಲಿ ತೊಡಗಿಸುವ ಕಂಪನಿಗಳಿಗೆ ತೆರಿಗೆ ಅನುಕೂಲ ಕೊಡುತ್ತದೆ. ಹೀಗಾಗಿ ಅನೇಕ ಎಂಎನ್‌ಸಿಗಳು ಇಲ್ಲಿಗೆ ಬಂದಿವೆ. ಗೂಗಲ್‌, ಮೈಕ್ರೊಸಾಫ್ಟ್‌, ಐಬಿಎಂ ಇಲ್ಲಿ ಆರ್‌ &ಡಿ ಘಟಕಗಳನ್ನು ತೆರೆದಿವೆ.

ಎಂಭತ್ತರ ದಶಕದಲ್ಲಿ ಇಸ್ರೇಲ್‌ ಆರ್ಥಿಕತೆಯ ಮಹಾ ಪತನ:

ಹಿರಿಯ ಪತ್ರಕರ್ತ ಶೇಖರ್‌ ಗುಪ್ತಾ ಇಸ್ರೇಲ್‌ ಅಭಿವೃದ್ಧಿಯ ರಹಸ್ಯದ ಬಗ್ಗೆ ಹೀಗೆನ್ನುತ್ತಾರೆ- ಇಸ್ರೇಲ್‌ 1985 ತನಕ ಬಡ ದೇಶವಾಗಿತ್ತು. ಜಿಂಬಾಬ್ವೆ, ವೆನಿಜುವೆಲಾ ಮಾದರಿಯಲ್ಲಿ ಭಾರಿ ಹಣದುಬ್ಬರಕ್ಕೀಡಾಗಿತ್ತು. ಆರ್ಥಿಕತೆ ವಿಫಲವಾಗಿತ್ತು. ಬಳಿಕ 1985-86ರಲ್ಲಿ ಇಸ್ರೇಲಿನ ರಾಜಕೀಯ ಬದಲಾಯಿತು. ಆರ್ಥಿಕತೆ ಕೂಡ ಬದಲಾವಣೆಯ ಹಾದಿಗೆ ತೆರೆಯಿತು. 1985ರಲ್ಲಿ ಹಣದುಬ್ಬರ 445% ಮಟ್ಟದಲ್ಲಿತ್ತು. ಅಮೆರಿಕ ಅಧ್ಯಕ್ಷ ರೊನಾಲ್ಡ್‌ ರೇಗನ್‌ ಮಾರ್ಗದರ್ಶನದಲ್ಲಿ ಇಸ್ರೇಲ್‌ 1985ರಲ್ಲಿ ಆರ್ಥಿಕ ಸ್ಥಿರತೆಯ ನೀತಿಯನ್ನು ಜಾರಿಗೊಳಿಸಿತು. ಪ್ರತಿ ವರ್ಷ 3 ಶತಕೋಟಿ ಡಾಲರ್‌ ನೆರವನ್ನು ಅಮೆರಿಕ ನೀಡಿತು. 1985ರಲ್ಲಿ 450% ಇದ್ದ ಹಣದುಬ್ಬರ 1986ರಲ್ಲಿ 20%ಕ್ಕೆ ಇಳಿಯಿತು. ಬಳಿಕ ಇಲ್ಲಿಯವರೆಗೆ ಹಣದುಬ್ಬರ ಒಂದಂಕಿಂಗಿಂತ ಕೆಳಕ್ಕಿಳಿದಿದೆ. ಇದು ಹೇಗಾಯಿತು?

ಇಸ್ರೇಲ್‌ ಸರ್ಕಾರ ಮೊದಲನೆಯದಾಗಿ ಸಮಾಜ ಕಲ್ಯಾಣ ಯೋಜನೆಗೆ ಹಣ ಖರ್ಚು ಮಾಡುವುದನ್ನು ಕಡಿತಗೊಳಿಸಿದರು. ಅದರ ಬದಲಿಗೆ ಸಂಶೋಧನೆ ಮತ್ತು ಅಭಿವೃದ್ಧಿಗೆ, ಮೂಲಸೌಕರ್ಯ ವೃದ್ಧಿಗೆ ಬಳಸಿದರು. ಇದರ ಪರಿಣಾಮ 1986ರಲ್ಲಿ ಇದ್ದ 8,000 ಡಾಲರ್‌ ತಲಾ ಆದಾಯ ಈಗ 58,000 ಡಾಲರ್‌ಗೆ ಏರಿಕೆಯಾಗಿದೆ. 1996ರಲ್ಲಿ ಇಸ್ರೇಲ್‌ ಸಂಶೋಧನೆ ಮತ್ತು ಅಭಿವೃದ್ಧಿಗೆ ಜಿಡಿಪಿಯ 2.6% ಹಣವನ್ನು ಬಳಸಿದ್ದರು. ಆಗ ಚೀನಾಕ್ಕೆ ಹೋಲಿಸಿದರೆ, ಚೀನಾಕ್ಕಿಂತ 5 ಪಟ್ಟು ಹೆಚ್ಚು. ಚೀನೀಯರಿಗಿಂತಲೂ ದೂರದೃಷ್ಟಿಯಿಂದ ಆರ್‌ &ಡಿಗೆ ಆಗಲೇ ಹಣವನ್ನು ಬಳಸಿದ್ದರು. ಇದರ ಪರಿಣಾಮ ಹೈಟೆಕ್‌ ರಫ್ತಿನಲ್ಲಿ ಇಸ್ರೇಲ್‌ ಮುಂಚೂಣಿಯಲ್ಲಿದೆ. ಏರೊಸ್ಪೇಸ್‌, ಎಲೆಕ್ಟ್ರಿಕಲ್‌ ಮೆಶಿನರಿ, ಕಂಪ್ಯೂಟರ್‌, ಫಾರ್ಮಾಸ್ಯುಟಿಕಲ್ಸ್‌, ಸೈಂಟಿಫಿಕ್‌ ಇನ್‌ಸ್ಟ್ರುಮೆಂಟ್ಸ್‌ಗಳಾಗಿವೆ. ಜಗತ್ತಿನ ಸೈಬರ್‌ ಸೆಕ್ಯುರಿಟಿ ರಫ್ತಿನ ಮೂರನೇ ಒಂದರಷ್ಟನ್ನು ಇಸ್ರೇಲ್‌ ತನ್ನದಾಗಿಸಿದೆ.

ಭಾರತ ಗಮನಿಸಬೇಕಾದ್ದೇನು? ಭಾರತ ತನ್ನಲ್ಲಿ ಕಚ್ಚಾ ತೈಲ , ಚಿನ್ನದಂಥ ನೈಸರ್ಗಿಕ ಸಂಪನ್ಮೂಲ ಇಲ್ಲ ಎಂದು ಕೊರಗಬೇಕಿಲ್ಲ. ಈಗಾಗಲೇ ಸೇವೆ, ಐಟಿ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರುವ ಭಾರತ, ತನ್ನ ಭಾರಿ ಜನಸಂಪನ್ಮೂಲದ ಮೇಲೆಯೇ ಹೂಡಿಕೆ ಮಾಡಬೇಕಾಗಿದೆ. ಇದುವೇ ಭಾರತದ ಅತಿ ದೊಡ್ಡ ಆಸ್ತಿ. ಇದರ ಸದ್ಬಳಕೆಯಿಂದ ಭಾರತ ಜ್ಞಾನಾಧಾರಿತ ಎಕಾನಮಿ ಆಗಬಹುದು. ಭಾರತವೂ ಅನೇಕ ಹೈಟೆಕ್‌ ಉತ್ಪನ್ನಗಳನ್ನು ರಫ್ತು ಮಾಡಬಹುದು. ತೈಲ, ಬಂಗಾರ ಹೊರತುಪಡಿಸಿದ ನೈಸರ್ಗಿಕ ಸಂಪನ್ಮೂಲಗಳನ್ನು ಭಾರತ ಬಳಸಿಕೊಳ್ಳಬಹುದು ಎನ್ನುತ್ತಾರೆ ತಜ್ಞರು.

ಇದನ್ನೂ ಓದಿ: Vande Bharth Express : ಇನ್ನು ಮುಂದೆ ಕೇಸರಿ ಬಣ್ಣದಲ್ಲಿ ಕಂಗೊಳಿಸಲಿದೆ ವಂದೇ ಭಾರತ್​ ರೈಲು

ಇನ್ನು ಕೆಲವರ ಪ್ರಕಾರ ಯೆಹೂದ್ಯರ ಸಂಸ್ಕೃತಿಯಲ್ಲಿಯೇ ಕಲಿಕೆ ಮತ್ತು ಸಂಶೋಧನೆಯ ಪ್ರವೃತ್ತಿ ಇದೆ. ಚಿಕ್ಕಂದಿನಲ್ಲಿಯೇ ಮಕ್ಕಳ ಓದಿಗೆ ಎಲ್ಲಿಲ್ಲದ ಮಹತ್ವ ನೀಡುತ್ತಾರೆ. ಚರ್ಚೆ ಮತ್ತು ಸಂವಾದ ಅಲ್ಲಿ ಮುಕ್ತವಾಗಿ ನಡೆಯುತ್ತದೆ. ಭಾರತದಲ್ಲಿ ಸಮಾಜ ಕಲ್ಯಾಣ ಯೋಜನೆಗೆ ವೆಚ್ಚ ಮಾಡುವುದು ಎಷ್ಟು ಅನಿವಾರ್ಯವೋ, ಅಷ್ಟೇ ಆದ್ಯತೆಯನ್ನು ಶಿಕ್ಷಣ, ಅಭಿವೃದ್ಧಿ ಮತ್ತು ಸಂಶೋಧನೆಗೆ ನೀಡಬೇಕಾಗಿದೆ. ದುರದೃಷ್ಟವಶಾತ್‌ ಅಧಿಕಾರ ಗಳಿಕೆಯ ಸಲುವಾಗಿ ನಾನಾ ರಾಜ್ಯಗಳಲ್ಲಿ ಜನಪ್ರಿಯ ಸಮಾಜ ಕಲ್ಯಾಣ ಯೋಜನೆಗಳ ಘೋಷಣೆಗೆ ರಾಜಕೀಯ ಪಕ್ಷಗಳು ಮುಗಿ ಬಿದ್ದಿರುವುದನ್ನು ನಾವು ಗಮನಿಸಬಹುದು. ಆದ್ದರಿಂದ ಭಾರತೀಯರು ಇಸ್ರೇಲಿನ ಇತಿಹಾಸದಿಂದ ಸಂಶೋಧನೆ ಮತ್ತು ಅಭಿವೃದ್ಧಿಗೆ ಒತ್ತು ನೀಡಬೇಕಾದ ಪಾಠವನ್ನು ಯೋಚಿಸಬೇಕಾಗಿದೆ ಎನ್ನುತ್ತಾರೆ ತಜ್ಞರು.

Exit mobile version