Site icon Vistara News

ವಿಸ್ತಾರ Money Guide : Finfluencers : ಯಾರಿವರು ಸುಲಭವಾಗಿ ಕೋಟಿ ಗಳಿಸಲು ದಾರಿ ತೋರುವವರು?

Finance advisor

#image_title

ಮೂರೇ ವರ್ಷದಲ್ಲಿ ಕೋಟಿ ದುಡ್ಡು ಮಾಡುವುದು ಹೇಗೆ? ಮೂವತ್ತನೇ ವಯಸ್ಸಿಗೇ ಹತ್ತು ಕೋಟಿ ದುಡ್ಡು ಗಳಿಸಿ ಮಿಲಿಯನೇರ್‌ ಆಗುವುದು ಹೇಗೆ? ಯಾವ ಷೇರಿನಲ್ಲಿ ಹೂಡಿದರೆ ಎಷ್ಟು ಗಳಿಸಬಹುದು? ನಿಮ್ಮ ಕ್ರೆಡಿಟ್‌ ಕಾರ್ಡ್‌ ಮೂಲಕ ವರ್ಷಕ್ಕೆ ಲಕ್ಷಗಟ್ಟಲೆ ಸಂಪಾದಿಸುವುದು ಹೇಗೆ? ದೀಪಾವಳಿಗೆ ನಿಫ್ಟಿ 22,000ಕ್ಕೆ ಏರಬಹುದೇ? ಇಂಥ ಅತ್ಯಂತ ಆಕರ್ಷಕ ಟೈಟಲ್‌ಗಳನ್ನು ಹೊತ್ತ ವಿಡಿಯೊಗಳನ್ನು, ರೀಲ್ಸ್‌ಗಳನ್ನು ಯೂಟ್ಯೂಬ್‌ನಲ್ಲಿ, ಇತರ ಜಾಲತಾಣಗಳಲ್ಲಿ ನೀವು ನೂರೆಂಟು ನೋಡಿರಬಹುದು. ಕುತೂಹಲದಿಂದ ಇಂಥ ಸುಲಭವಾಗಿ ದುಡ್ಡು ಮಾಡುವ ದಾರಿ ತೋರುವವರ ಮಾತುಗಳನ್ನು ಕೇಳಿರಬಹುದು. ಅದರಲ್ಲೂ ಕೋವಿಡ್‌ ಬಿಕ್ಕಟ್ಟಿನ ಬಳಿಕ ಜಾಲತಾಣಗಳಲ್ಲಿ ಹಣ ಸಂಪಾದನೆಗೆ ಮಾರ್ಗೋಪಾಯಗಳನ್ನು ಉಚಿತವಾಗಿ ಹೇಳಿ ಕೊಡುವವರ ಸಂಖ್ಯೆ ಕ್ರಮೇಣವಾಗಿ ಹೆಚ್ಚುತ್ತಿದೆ. (ವಿಸ್ತಾರ Money Guide: Finfluencers) ಇವರನ್ನು ಫಿನ್‌ಫ್ಲುಯೆನ್ಸರ್‌ ಅಥವಾ ಫೈನಾನ್ಷಿಯಲ್‌ ಇನ್‌ಫ್ಲುಯೆನ್ಸರ್ ಎನ್ನುತ್ತಾರೆ. ಇವರಿಗೆ ಲಕ್ಷಾಂತರ ಫಾಲೋವರ್ಸ್‌ ಕೂಡ ಇರುತ್ತಾರೆ. ಅವರು ಆಸಕ್ತಿಯಿಂದ ಇವರ ಮಾತುಗಳನ್ನು ಕೇಳುತ್ತಾರೆ. ಅವರು ಹೇಳಿದಂತೆ ನಡೆದುಕೊಳ್ಳುತ್ತಾರೆ. ‌ಷೇರು, ಮ್ಯೂಚುವಲ್‌ ಫಂಡ್‌, ಬಾಂಡ್‌ ಹೂಡಿಕೆ, ಸಾಲ, ಹಣಕಾಸು ಯೋಜನೆ ಬಗ್ಗೆ ಇವರು ಸಲಹೆಗಳನ್ನು ನೀಡುತ್ತಾರೆ. ಅದು ಉಚಿತ ಅಥವಾ ಶುಲ್ಕ ಸಹಿತ ಇರಬಹುದು. ಇದರ ಪರಿಣಾಮವೇನು?

ಕುತೂಹಲಕಾರಿ ಬೆಳವಣಿಗೆಯೊಂದರಲ್ಲಿ ಷೇರು ಮಾರುಕಟ್ಟೆ ನಿಯಂತ್ರಕ ಸೆಬಿ ಇಂಥ ಫಿನ್‌ಫ್ಲುಯೆನ್ಸರ್‌ಗಳ ಮೇಲೆ ನಿಗಾ ವಹಿಸಲು ಇತ್ತೀಚೆಗೆ ಮುಂದಾಗಿದೆ. ಹಾಗಂತ ಇದಕ್ಕೋಸ್ಕರ ಎಲ್ಲ ಫಿನ್‌ಫ್ಲುಯೆನ್ಸರ್‌ಗಳನ್ನೂ ವಿಲನ್‌ಗಳೆಂದು ಒಂದೇ ತಕ್ಕಡಿಗೆ ಹಾಕಬೇಕಾಗಿಲ್ಲ. ಇಲ್ಲೂ ಜನರನ್ನು ವೈಯಕ್ತಿಕ ಹಣಕಾಸು ವಿಷಯಗಳಲ್ಲಿ ಯಾವ ಶಾಲೆ-ಕಾಲೇಜು-ಬಿ-ಸ್ಕೂಲ್‌ಗಳಲ್ಲಿ, ಯುನಿವರ್ಸಿಟಿಗಳ ಅಂಗಳದಲ್ಲಿ ಯಾರೂ ಹೇಳಿ ಕೊಡದಿದ್ದ ಸಂಗತಿಗಳನ್ನು ಸುಲಲಿತವಾಗಿ ಹೇಳಿಕೊಡುವವರು ಇದ್ದಾರೆ. ಹಣಕಾಸು ಜಗತ್ತಿನಲ್ಲಿ ಹೇಗೆ ಮುನ್ನೆಚ್ಚರ ವಹಿಸಬೇಕು ಎಂದು ಸಕಾಲಕ್ಕೆ ತಿಳಿವಳಿಕೆ ಕೊಡುವವರು ಇದ್ದಾರೆ.

ಫಿನ್‌ ಫ್ಲುಯೆನ್ಸರ್‌ ವಿರುದ್ಧ ಸೆಬಿ ಕ್ರಮ ಏನು? ಪಿ. ಸುಂದರ್‌ ಕೇಸ್‌ನಲ್ಲಿ ಆಗಿದ್ದೇನು? : ಚೆನ್ನೈ ಮೂಲದ ಪಿ. ಸುಂದರ್‌ ಎಂಬ ಫಿನ್‌ಫ್ಲುಯೆನ್ಸರ್‌ ಕಳೆದ ಕೆಲ ವರ್ಷಗಳಿಂದ ಷೇರು ಮಾರುಕಟ್ಟೆ ಹೂಡಿಕೆ ಬಗ್ಗೆ ಜನತೆಗೆ ಸಲಹೆಗಳನ್ನು ಯೂಟ್ಯೂಬ್‌, ವೆಬ್‌ಸೈಟ್‌ ಮೂಲಕ ನೀಡಿ ಜನಪ್ರಿಯರಾಗಿದ್ದಾರೆ. ಲಕ್ಷಾಂತರ ಮಂದಿ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. ಬೆಂಗಳೂರು, ಚೆನ್ನೈ ಸೇರಿದಂತೆ ನಾನಾ ನಗರಗಳಲ್ಲಿ ಷೇರು ಹೂಡಿಕೆ ಕುರಿತ ಸೆಮಿನಾರ್‌ಗಳನ್ನೂ ನಡೆಸುತ್ತಾರೆ. ‌ ಆದರೆ ಪಿ.ಆರ್‌ ಸುಂದರ್‌ ವಿರುದ್ಧ ಸೆಬಿ ಇತ್ತೀಚೆಗೆ ಕ್ರಮ ಜರುಗಿಸಿತ್ತು. ಏಕೆಂದರೆ ಸೆಬಿಯಲ್ಲಿ ನೋಂದಣಿಯಾಗದೆಯೇ ಪಿ. ಸುಂದರ್‌ ಅವರು ಷೇರು ಮಾರುಕಟ್ಟೆಯಲ್ಲಿನ ಹೂಡಿಕೆಗೆ ಸಲಹೆ ನೀಡುತ್ತಾರೆ. ಇದರಲ್ಲಿ ಅಕ್ರಮ ನಡೆದಿದೆ ಎಂದು ಸೆಬಿಗೆ ದೂರು ದಾಖಲಾಗಿತ್ತು. ತನಿಖೆ ನಡೆಸಿದ ಸೆಬಿಯ ಜತೆಗೆ ಸಂಧಾನ ನಡೆಸಿದ ಪಿ. ಸುಂದರ್‌, 6 ಕೋಟಿ ರೂ. ದಂಡವನ್ನು ಸಲ್ಲಿಸಿ ಪ್ರಕರಣವನ್ನು ಇತ್ಯರ್ಥಗೊಳಿಸಿದರು. ಅಂದರೆ ಅವರು ಕೆಲ ವರ್ಷಗಳಲ್ಲಿ ತಮ್ಮ ಸಲಹೆಗಳಿಗೆ ಪಡೆದಿದ್ದ ಶುಲ್ಕವನ್ನು ಬಡ್ಡಿ ಸಹಿತ ಸೆಬಿಗೆ ದಂಡದ ರೂಪದಲ್ಲಿ ಕಟ್ಟಿದ್ದರು. ಪ್ರಕರಣ ಇತ್ಯರ್ಥವಾದ ಬಳಿಕ ಪಿ. ಸುಂದರ್‌ ಅವರು ಕೆಳಕಂಡಂತೆ ಟ್ವೀಟ್‌ ಮಾಡಿದ್ದರು. ನಿಮ್ಮನ್ನು ನಂಬುವ ಜನರಿಗೆ ವಿವರಣೆ ನೀಡಬೇಕಾದ ಅಗತ್ಯ ಇಲ್ಲ. ನಿಮ್ಮನ್ನು ನಂಬದವರಿಗೆ ಎಷ್ಟು ವಿವರಣೆ ನೀಡಿದರೂ ಪ್ರಯೋಜನವಾಗದು. ಹೀಗಾಗಿ ಮೌನವಾಗಿ ಕೆಲ ಕಾಲ ಇದ್ದು ಬಿಡುವುದೇ ಉತ್ತಮ ಪ್ರತಿಕ್ರಿಯೆ ಎಂದು ಟ್ವೀಟ್‌ ಮಾಡಿದ್ದರು ಪಿ.ಆರ್‌ ಸುಂದರ್. ಅಂದ ಹಾಗೆ ಪಿ.ಆರ್‌ ಸುಂದರ್‌ ಈಗ ಏನು ಮಾಡುತ್ತಿದ್ದಾರೆ ಎನ್ನುತ್ತೀರಾ? ತಮ್ಮ ಯೂಟ್ಯೂಬ್‌ ಚಾನೆಲ್‌ ಮೂಲಕ ಷೇರು ಮಾರುಕಟ್ಟೆಯ ಆಗು ಹೋಗುಗಳನ್ನು ವಿವರಿಸುತ್ತಾರೆ. ಕಾರ್ಯಾಗಾರಗಳನ್ನು ನಡೆಸುತ್ತಾರೆ. ಲಕ್ಷಾಂತರ ಮಂದಿ ಈಗಲೂ ಅವರ ವಿಡಿಯೊಗಳನ್ನು ವೀಕ್ಷಿಸುತ್ತಾರೆ. ಪ್ರತಿಕ್ರಿಯಿಸುತ್ತಾರೆ.

ಷೇರು ಮಾರುಕಟ್ಟೆಯಲ್ಲಿ ಯಾರು ದುಡ್ಡು ಮಾಡುತ್ತಾರೆ? ಕೆಲವರು ಅತೀವ ವ್ಯಾಮೋಹದಿಂದ ಷೇರು ಮಾರುಕಟ್ಟೆಗೆ ಬರುತ್ತಾರೆ. ಕೆಲವೊಮ್ಮೆ ನಮ್ಮ ಸಲಹೆಗಳನ್ನು ಕೆಲವರು ದಿಕ್ಕು ತಪ್ಪಿಸುವಂತೆ ತಿರುಚುತ್ತಾರೆ. ಆದರೆ ನಾವು ಷೇರು ಮಾರುಕಟ್ಟೆಯ ರಿಯಲಿಟಿಯನ್ನು ತೋರಿಸಲು ಬಯಸುತ್ತೇವೆ. ಅದು ಹೊರತುಪಡಿಸಿ ನಾವು ಹೂಡಿಕೆದಾರರಿಗೆ ನಿರುತ್ತೇಜನ ಮಾಡುವುದಿಲ್ಲ ಎನ್ನುತ್ತಾರೆ ಪಿ ಆರ್‌ ಸುಂದರ್.

ಯಾರಿವರು ವೈಯಕ್ತಿಕ ಹಣಕಾಸು ಸಲಹೆಗಾರರು? ಜನರಿಗೆ ಅವರ ವೈಯಕ್ತಿಕ ಹಣಕಾಸು ಸ್ಥಿತಿಗತಿಗಳ ಸುಧಾರಣೆ ಬಗ್ಗೆ ಅಗತ್ಯವಾದ ಸಲಹೆಗಳನ್ನು ನೀಡುವವರೇ ವೈಯಕ್ತಿಕ ಹಣಕಾಸು ಸಲಹೆಗಾರರು. ಷೇರು, ಮ್ಯೂಚುವಲ್‌ ಫಂಡ್‌, ಬಾಂಡ್‌, ಚಿನ್ನ, ರಿಯಾಲ್ಟಿ ಹೂಡಿಕೆ, ಸಾಲಗಳು, ತೆರಿಗೆ, ಪಿಂಚಣಿ, ವಿಮೆ ಇತ್ಯಾದಿ ವಿಷಯಗಳಿಗೆ ಸಂಬಂಧಿಸಿ ಅವರು ಸೂಕ್ತ ಸಲಹೆಗಳನ್ನು ನೀಡುತ್ತಾರೆ. ವ್ಯಕ್ತಿಯ ಅಗತ್ಯ ಮತ್ತು ಆರ್ಥಿಕ ಪರಿಸ್ಥಿತಿ ಗಮನಿಸಿ ಸೂಕ್ತವಾದ ಸಲಹೆಗಳನ್ನು ಕೊಡಬಹುದು. ಪದವೀಧರರು, ಹಣಕಾಸು, ಕಾನೂನು, ಎಂಬಿಎ, ಸಿಎ, ಎಕನಾಮಿಕ್ಸ್‌ ಕುರಿತ ಪದವಿ ಪಡೆದವರು ಹಣಕಾಸು ಸಲಹೆಗಳನ್ನು ನೀಡಬಹುದು. ಆದರೆ ಷೇರು, ಬಾಂಡ್‌, ವಿಮೆ ಪಾಲಿಸಿಗಳ ಬಗ್ಗೆ ಸಲಹೆ ನೀಡಲು ಸೆಬಿ ಅಥವಾ ಸಂಬಂಧಿಸಿದ ಮಾರುಕಟ್ಟೆ ನಿಯಂತ್ರಕ ಸಂಸ್ಥೆಗಳ ಲೈಸೆನ್ಸ್‌ ಅಗತ್ಯ. ಪರ್ಸನಲ್‌ ಫೈನಾನ್ಸಿಯಲ್‌ ಅಡ್ವೈಸರ್ಸ್‌ ( Personal financial advisors) ಎಂದರೆ ಕೇವಲ ಶ್ರೀಮಂತರಿಗೆ ಮಾತ್ರವಲ್ಲ, ಎಲ್ಲರೂ ಅವರ ಸಲಹೆಗಳನ್ನು ಪಡೆಯಬಹುದು.

ಹಣಕಾಸು ಸಲಹೆಗಾರರು ಹೇಗೆ ದುಡ್ಡು ಗಳಿಸುತ್ತಾರೆ?

ಭಾರತದಲ್ಲಿ ಎಲ್ಲರೂ ಹೂಡಿಕೆಯ ಸಲಹೆಗಳನ್ನು ಕೊಟ್ಟು ಜನರಿಂದ ಶುಲ್ಕ ಸಂಗ್ರಹಿಸುವಂತಿಲ್ಲ. ಸೆಬಿಯ ಜತೆ Registered Investment Adviser ಆಗಿ ನೋಂದಣಿಯಾದವರು ಹೂಡಿಕೆಯ ಸಲಹೆ ಕೊಟ್ಟು ಶುಲ್ಕ ಪಡೆಯಬಹುದು. ಸೆಬಿಯು ಇನ್ವೆಸ್ಟ್‌ಮೆಂಟ್‌ ಅಡ್ವೈಸರ್‌ ಎಷ್ಟು ಶುಲ್ಕ ಪಡೆಯಬಹುದು ಎಂದು ನಿಗದಿಪಡಿಸಿಲ್ಲ. ಅದು ಅಡ್ವೈಸರ್‌ ಮತ್ತು ಗ್ರಾಹಕರ ವಿವೇಚನೆಗೆ ಬಿಟ್ಟ ವಿಷಯ. ಸೆಬಿಯ ಮಾನ್ಯತೆ ಪಡೆದ NISM (National Institute of Securities Markets) ಸಂಸ್ಥೆಯಿಂದ Charteres wealth manager certification ಪಡೆದೂ ಹಣಕಾಸು ಸಲಹೆಗಳನ್ನು ಕೊಡಬಹುದು ಹಾಗೂ ಶುಲ್ಕ ಸಂಗ್ರಹಿಸಬಹುದು.

ಯಾರಿಗೆ ವಿನಾಯಿತಿ ಇದೆ?

ಕೆಳಕಂಡ ಸಂಸ್ಥೆಗಳಲ್ಲಿ ನೋಂದಣಿ ಆದವರು ಸೆಬಿಯಲ್ಲಿ ಹೂಡಿಕೆ ಸಲಹೆಗಾರರಾಗಿ ಪ್ರತ್ಯೇಕ ಲೈಸೆನ್ಸ್‌ ಪಡೆಯಬೇಕಿಲ್ಲ. (registed investment advisor)

IRDAI ಸಂಸ್ಥೆಯಿಂದ ಪಿಂಚಣಿ ಸಲಹೆಗಾರರಾಗಿ ಪರವಾನಗಿ ಪಡೆದವರು. IRDAI ಸಂಸ್ಥೆಯಿಂದ ವಿಮೆ ಬ್ರೋಕರ್‌ ಆದವರು. AMFI ಸಂಸ್ಥೆಯಿಂದ ಮ್ಯೂಚುವಲ್‌ ಫಂಡ್‌ ವಿತರಣೆಗೆ ಲೈಸೆನ್ಸ್‌ ಗಳಿಸಿದವರು, Cost and works accounts of India , Institute of company secretaries of India , Institute of the chartered accountants of India ಸಂಸ್ಥೆಯ ಸದಸ್ಯರು.

ಪ್ರಶ್ನೋತ್ತರ:

ಭಾರತದಲ್ಲಿ ನೋಂದಾಯಿತ ಹೂಡಿಕೆ ಸಲಹೆಗಾರರು Rigisterd Investment Advisor (RIA) ಯಾವ ಸಂಸ್ಥೆಯ ವ್ಯಾಪ್ತಿಗೆ ಬರುತ್ತಾರೆ? ಸೆಕ್ಯುರಿಟೀಸ್‌ ಆಂಡ್‌ ಎಕ್ಸ್‌ಚೇಂಜ್‌ ಬೋರ್ಡ್‌ ಆಫ್‌ ಇಂಡಿಯಾ ವ್ಯಾಪ್ತಿಗೆ ಬರುತ್ತಾರೆ.

ಸೆಬಿ ವ್ಯಾಪ್ತಿಯಲ್ಲಿ ನೋಂದಾಯಿತ ಹೂಡಿಕೆ ಸಲಹೆಗಾರರಾಗಲು (RIA) ಹಣಕಾಸು ಅರ್ಹತೆ ಏನು? ಸೆಬಿಯ ಅಡಿಯಲ್ಲಿ RIA ಆಗಲು ವ್ಯಕ್ತಿಯ ನಿವ್ವಳ ಸಂಪತ್ತು 5 ಲಕ್ಷ ರೂ. ಇರಬೇಕು.

ಸೆಬಿಯ ಅಡಿ ನೋಂದಾಯಿತ ಹೂಡಿಕೆ ಸಲಹೆಗಾರರಾಗಲು ಅರ್ಜಿ ಸಲ್ಲಿಸುವುದು ಎಲ್ಲಿ? ಸೆಬಿಯ (SEBI) ಪ್ರಧಾನ ಕಚೇರಿ ಅಥವಾ ಪ್ರಾದೇಶಿಕ ಕಚೇರಿಯಲ್ಲಿ ಅರ್ಜಿ ಸಲ್ಲಿಸಬಹುದು. www.sebi.gov.in ವೆಬ್‌ ಸೈಟ್‌ ವೀಕ್ಷಿಸಿ.

ಜನತೆ ಏನು ಮಾಡಬಹುದು? ಹಣಕಾಸು ಸಲಹೆಗಾರರನ್ನು ಆಯ್ಕೆ ಮಾಡಿಕೊಳ್ಳುವುದರಿಂದ ಹಲವು ಪ್ರಯೋಜನಗಳು ಇವೆ. ಹೀಗಾಗಿಯೇ ಇವತ್ತು ಲಕ್ಷಾಂತರ ಜನರು ಅವರ ಮಾತುಗಳನ್ನು ಕೇಳುತ್ತಾರೆ. ಆದರೆ ದಾರಿ ತಪ್ಪಿಸುವ, ಸರಿಯಾದ ತಿಳುವಳಿಕೆ ಇಲ್ಲದವರೂ ಹಣಕಾಸು ಸಲಹೆಗಾರರ ಪೋಸು ಕೊಟ್ಟು ವಂಚಿಸುವ ಅಪಾಯವೂ ಇದೆ. ಆದ್ದರಿಂದ ಹಣಕಾಸು ಸಲಹೆಗಾರರ ವಿಶ್ವಾಸಾರ್ಹತೆ, ಅನುಭವ ಪರಿಶೀಲಿಸಿ. ಶುಲ್ಕ ಎಷ್ಟಿದೆ ಎಂಬುದನ್ನು ಗಮನಿಸಿ. ಸಲಹೆ ಪಡೆದು ಅಂತಿಮ ನಿರ್ಧಾರವನ್ನು ನೀವೇ ತೆಗೆದುಕೊಳ್ಳಿ.

ಇದನ್ನೂ ಓದಿ:ವಿಸ್ತಾರ Money Guide : ಪ್ರೀಮಿಯಂ ಕಟ್ಟಿದ ಮೇಲೆ ವಿಮೆ ಪಾಲಿಸಿ ಬೇಡವೆಂದರೆ ನಿಮ್ಮ ಹಣ ವಾಪಸ್

Exit mobile version