Site icon Vistara News

ವಿಸ್ತಾರ Explainer| ನಿಮ್ಮ ಕ್ರಿಪ್ಟೊ ಆಸ್ತಿಯ ಮೇಲೆ 1% TDS ವಿಧಿಸಿದರೆ ಪರಿಣಾಮವೇನು?

crypto

ಆದಾಯ ತೆರಿಗೆಯ ನೂತನ ನಿಯಮಗಳ ಪ್ರಕಾರ ೨೦೨೨ರ ಜುಲೈ ೧ರಿಂದ ಕ್ರಿಪ್ಟೊ ಮತ್ತು ವರ್ಚುವಲ್‌ ಆಸ್ತಿಗಳ ವ್ಯವಹಾರಗಳಲ್ಲಿ ೧% ಟಿಡಿಎಸ್‌ (ಮೂಲದಲ್ಲಿಯೇ ತೆರಿಗೆ ಕಡಿತ) ಅನ್ವಯವಾಗಲಿದೆ. ಅಂದರೆ ನೀವು ಕ್ರಿಪ್ಟೊ ಆಸ್ತಿಯನ್ನು ಖರೀದಿಸುವಾಗ, ಮಾರಾಟಗಾರರಿಗೆ ನೀಡುವ ಮೌಲ್ಯ ೧೦,೦೦೦ ರೂ. ಮೀರಿದ್ದರೆ, ೧% ಟಿಡಿಎಸ್‌ ಅನ್ವಯವಾಗುತ್ತದೆ.

ಜುಲೈ ೧ರಂದು ಈ ನಿಯಮ ಜಾರಿಗೆ ಬಂದ ಬಳಿಕ ಮೊದಲ ೪ ದಿನಗಳಲ್ಲಿ ಕ್ರಿಪ್ಟೊ ವಿನಿಮಯಗಳು ೭೦% ಕುಸಿದಿದೆ. ಕಳೆದ ಏಪ್ರಿಲ್‌ನಿಂದ ಕ್ರಿಪ್ಟೊ ಆಸ್ತಿಗಳ ವ್ಯವಹಾರಗಳಲ್ಲಿ ಲಾಭಾಂಶದ ಮೇಲೆ ೩೦% ತೆರಿಗೆ ಜಾರಿಯಾದ ಬಳಿಕ ವಿನಿಮಯ ವಹಿವಾಟು ಕನಿಷ್ಠ ೩೦% ಇಳಿದಿತ್ತು. ಕ್ರಿಪ್ಟೊ ಮೇಲೆ ೨೮% ಜಿಎಸ್‌ಟಿ ವಿಧಿಸುವ ಬಗ್ಗೆಯೂ ಪರಿಶೀಲನೆ ನಡೆಯುತ್ತಿದೆ.

ಏನಿದು ಟಿಡಿಎಸ್?

ಬಿಟ್‌ ಕಾಯಿನ್‌, ಎಥೆರಿಯಮ್‌, ಟೆಥೆರ್‌, ಬಿಎನ್‌ಬಿ, ಡೋಜ್‌ ಕಾಯಿನ್ ಇತ್ಯಾದಿ ಬಿಟ್‌ ಕಾಯಿನ್‌ಗಳು ಬಳಕೆಯಲ್ಲಿವೆ. ಹೊಸ ನಿಯಮಗಳ ಪ್ರಕಾರ ಇವುಗಳನ್ನು ಖರೀದಿಸುವಾಗ ಮೊತ್ತ ೧೦,೦೦೦ ರೂ. ಮೀರಿದರೆ ೧% ಟಿಡಿಎಸ್‌ ಅನ್ವಯವಾಗುತ್ತದೆ. ಹೀಗಾಗಿ ಮಾರಾಟಗಾರರು ಮಾರಾಟ ದರಕ್ಕಿಂತ ೧% ಕಡಿಮೆ ಮೌಲ್ಯವನ್ನು ಪಡೆಯಬೇಕಾಗುತ್ತದೆ.

ಟಿಡಿಎಸ್‌ ಕಡಿತ ಹೇಗೆ?

ಮೊದಲನೆಯದಾಗಿ ಟಿಡಿಎಸ್‌ ಅನ್ನು ಆದಾಯ ತೆರಿಗೆ ಇಲಾಖೆಗೆ ರೂ.ಗಳಲ್ಲಿ ನೀಡಬೇಕು. ಡಾಲರ್‌ನಲ್ಲಿ ವಹಿವಾಟು ನಡೆದಿದ್ದರೆ ರೂಪಾಯಿಗೆ ಪರಿವರ್ತಿಸಬೇಕು. ಪರಿವರ್ತನೆ ಹಾಗೂ ದರದಲ್ಲಿ ಅಪವ್ಯಯವಾಗದಂತೆ ತಡೆಯಲು ಪ್ರಾಥಮಿಕ ಅಥವಾ ಕೋಟ್‌ ( Quote) ಹಂತದಲ್ಲಿ ಕ್ರಿಪ್ಟೊಗಳಿಂದ ಕ್ರಿಪ್ಟೊಗೆ ವರ್ಗಾವಣೆಗಳಲ್ಲಿ ಎರಡೂ ಕಡೆ ಟಿಡಿಎಸ್‌ ಕಡಿತ ಮಾಡಲಾಗುತ್ತದೆ.

ಕ್ರಿಪ್ಟೊ ವಿನಿಮಯ ಕೇಂದ್ರವಾದ ವಾಜಿರ್‌ ಎಕ್ಸ್‌ನಲ್ಲಿ 4 ವಿಧದ ಕ್ರಿಪ್ಟೊ ಕೋಟ್‌ ಅಸೆಟ್‌ ( Quote asset) ಇರುತ್ತದೆ. ಅವುಗಳೆಂದರೆ- INR, USDT, BTC ಮತ್ತು WRX. ಇತರ ಮಾರುಕಟ್ಟೆಗಳಲ್ಲಿ MATIC-BTC, ETH, BTC-ADA, BTC ಎಂಬುದು ಕೋಟ್‌ ಕ್ರಿಪ್ಟೊ ಅಸೆಟ್‌ ಆಗಿರುತ್ತದೆ. ಹೀಗಾಗಿ ಈ ವಿನಿಮಯ ಕೇಂದ್ರಗಳಲ್ಲಿ ಖರೀದಿದಾರ ಮತ್ತು ಮಾರಾಟಗಾರರಿಬ್ಬರಿಗೂ ಟಿಡಿಎಸ್‌ ಕಡಿತವಾಗುತ್ತದೆ.

ಟಿಡಿಎಸ್‌ ಕಡಿತದ ಉದಾಹರಣೆಗಳು

INR ಮಾರುಕಟ್ಟೆಯಲ್ಲಿ : ೧ ಬಿಟಿಸಿ (BTC) ೧೦೦ ರೂ.ಗೆ ಮಾರಾಟವಾಗುತ್ತಿದೆ. ಟಿಡಿಎಸ್‌ ಕಳೆದ ಬಳಿಕ ಬಿಟಿಸಿ ಮಾರಾಟಗಾರ ೯೯ ರೂ. ಗಳಿಸುತ್ತಾನೆ. ಬಿಟಿಸಿ ಖರೀದಿದಾರ ಟಿಡಿಎಸ್‌ ಇಲ್ಲದೆ ೧ ಬಿಟಿಸಿ ಗಳಿಸುತ್ತಾನೆ.

ಕ್ರಿಪ್ಟೊ-ಕ್ರಿಪ್ಟೊ ಮಾರುಕಟ್ಟೆ: ೧ ಬಿಟಿಸಿ ೧೦ ಇಟಿಎಚ್‌ಗೆ ಮಾರಾಟವಾಗುತ್ತದೆ. ಬಿಟಿಸಿ ಮಾರಾಟಗಾರ ೧೦ ಇಟಿಎಚ್‌ ಖರೀದಿಸುತ್ತಾನೆ. ಅದಕ್ಕಾಗಿ ೧.೦೧ ಬಿಟಿಸಿ ಕೊಡುತ್ತಾನೆ. ೧% ಟಿಡಿಎಸ್‌ ಇರುತ್ತದೆ. ಬಿಟಿಸಿ ಖರೀದಿದಾರ ೧% ಟಿಡಿಎಸ್‌ ಕಳೆದ ಬಳಿಕ ೦.೯೯ ಬಿಟಿಸಿ ಪಡೆಯುತ್ತಾನೆ.

ಹೊಸ ತೆರಿಗೆಯಿಂದ ಕ್ರಿಪ್ಟೊ ವಹಿವಾಟಿಗೆ ಹೊಡೆತ?

ಕ್ರಿಪ್ಟೊ ಹೂಡಿಕೆದಾರರು ೨೦೨೨-೨೩ರಿಂದ ಕ್ರಿಪ್ಟೊಗಳ ವ್ಯವಹಾರದಲ್ಲಿ ಗಳಿಸುವ ಲಾಭದ ಮೇಲೆ ೩೦% ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಇದಕ್ಕೂ ಮೊದಲು ಇಂಥ ನಿರ್ದಿಷ್ಟ ತೆರಿಗೆ ಇದ್ದಿರಲಿಲ್ಲ. ಜನ ಕ್ರಿಪ್ಟೊಗಳಿಂದ ಗಳಿಸಿದ ಲಾಭವನ್ನು ಕ್ಯಾಪಿಟಲ್‌ ಗೇನ್ಸ್‌ ಅಥವಾ ಬಿಸಿನೆಸ್‌ ಆದಾಯ ಎಂದು ತೋರಿಸಿ ತೆರಿಗೆ ಕಟ್ಟುತ್ತಿದ್ದರು. ಆದರೆ ೩೦% ತೆರಿಗೆ ಜಾರಿಯಾದ ಬಳಿಕ ಹೂಡಿಕೆದಾರರಿಗೆ ಕೆಲ ಅನಾನುಕೂಲ ಆದಂತಾಗಬಹುದು ಎನ್ನುತ್ತಾರೆ ತಜ್ಞರು. ಅದು ಏನೆಂದರೆ ಇಲ್ಲಿ ರಿಟೇಲ್‌ ಹೂಡಿಕೆದಾರರು ಕ್ರಿಪ್ಟೊ ವ್ಯವಹಾರದಲ್ಲಿ ಉಂಟಾಗುವ ನಷ್ಟವನ್ನು ತೆರಿಗೆ ವಿಚಾರದಲ್ಲಿ ಕ್ಲೇಮ್‌ ಮಾಡಲಾಗುವುದಿಲ್ಲ. ನಷ್ಟವಾಗಿದೆ ಎಂದು ತೆರಿಗೆ ಕಡಿತವನ್ನು ನಿರೀಕ್ಷಿಸಲು ಸಾಧ್ಯವಾಗುವುದಿಲ್ಲ.

ಇದನ್ನೂ ಓದಿ: ವಿಸ್ತಾರ Money Guide:‌ ವಾಹನ ವಿಮೆ ಪ್ರೀಮಿಯಂಗೆ ಇನ್ನು ನಿಮ್ಮ ಚಾಲನೆಯ ಶೈಲಿಯೇ ಆಧಾರ!

Exit mobile version